Karnataka Reservoirs: ಕರ್ನಾಟಕದ ಜಲಾಶಯಗಳಿಗೆ ಭಾರೀ ನೀರು, ಹೊರ ಹರಿವು ಅಧಿಕ, ಕೆಆರ್ ಎಸ್‌ನಿಂದಲೂ ನೀರು ಹರಿಸಲು ಸಿದ್ದತೆ
Dam Levels ಭಾರೀ ಮಳೆಯಿಂದಾಗಿ ಕಾವೇರಿ ಸೀಮೆ, ಮಲೆನಾಡು, ಉತ್ತರ ಕರ್ನಾಟಕ ಭಾಗದ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮೂರು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಲಾಶಯಗಳ( Karnataka Reservoirs) ನೀರಿನ ಹರಿವಿನಲ್ಲಿ ಭಾರೀ ಏರಿಕೆ ಕಂಡಿದೆ. ಆಲಮಟ್ಟಿ( Almatti). ಕೃಷ್ಣರಾಜಸಾಗರ( KRS), ತುಂಗಭದ್ರಾ( Tunga bhadra), ಕಬಿನಿ( Kabini), ನಾರಾಯಣಪುರ( Naranayapura), ಹೇಮಾವತಿ( Hemavati), ಭದ್ರಾ* Bhadra), ಹಾರಂಗಿ( harangi) ಸೇರಿದಂತೆ ಬಹುತೇಕ ಜಲಾಶಯಗಳ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಬಿನಿ, ತುಂಗಾ, ಆಲಮಟ್ಟಿ ಸಹಿತ ಹಲವು ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಜಲವು ಭಾಗಗಳಲ್ಲಿ ಪ್ರವಾಹದ ಸನ್ನಿವೇಶವೂ ಮುಂದುವರೆದಿದೆ. ತುಂಗಾ, ಭದ್ರಾ, ಕೃಷ್ಣಾ, ಕಪಿಲಾ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿದೆ. ಇದರಿಂದಲೂ ನದಿ ಪಾತ್ರದ ಹಲವು ಕಡೆಗಳಲ್ಲಿ ಪ್ರವಾಹದ ಭೀತಿಯಿದೆ.
ಕೆಆರ್‌ಎಸ್‌ನಿಂದ ಹೊರ ಹರಿವು
ಕೊಡಗಿನಲ್ಲಿ ನಿರಂತರ ಮಳೆ ಹಾಗೂ ಹಾರಂಗಿ ಜಲಾಶಯದಿಂದಲೂ ನೀರು ಹೊರ ಬಿಡುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟವು 114 ಅಡಿ ತಲುಪಿದೆ. ತುಂಬಲು ಇನ್ನು ಹತ್ತು ಅಡಿ ನೀರು ಮಾತ್ರ ಬೇಕು. ಗುರುವಾರ ಮಧ್ಯಾಹ್ನದ ಹೊತ್ತಿಗೆ 36772 ಕ್ಯೂಸೆಕ್ ಒಳ ಹರಿವು ಇದೆ. 2448 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದಲ್ಲಿ 35.282 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಮೂರ್ನಾಲ್ಕು ದಿನ ಇದೇ ರೀತಿ ನೀರು ಬಂದರೆ ಮಟ್ಟದಲ್ಲಿ ಗಣನೀಯ ಏರಿಕೆ ಯಾಗಲಿದೆ. ಈ ಕಾರಣದಿಂದ ಹೊರ ಹರಿವು ಹೆಚ್ಚಿಸುವ ಸಾಧ್ಯತೆಯಿದೆ. ಇದಕ್ಕಾಗಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸುತ್ತಿದ್ದಾರೆ.
ತುಂಗಾ ನದಿಗೆ ಭಾರೀ ನೀರು
ಮಲೆನಾಡಿನ ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿಯು ವ್ಯಾಪಕ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಜಲಾಶಯಕ್ಕೂ ಸದ್ಯ 71484 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಗಾಜನೂರು ಜಲಾಶಯದಿಂದ ತುಂಗಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗದಲ್ಲಿ ತುಂಗಾ ನದಿ ನೀರು ಪ್ರವಾಹ ರೀತಿಯಲ್ಲಿಯೇ ಹರಿಯುತ್ತಿದೆ. ಜಲಾಶಯದ ನೀರಿನ ಮಟ್ಟವು ಗರಿಷ್ಠ : 588.24 ಮೀಟರ್ ಇದ್ದು, 3.24 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾ ಜಲಾಶಯದ ಹೊರಹರಿವು ಒಂದು ಲಕ್ಷ ಕ್ಯೂಸೆಕ್ಸ್ ದಾಟಿದರೇ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಗಜಾನನ ಗ್ಯಾರೇಜ್ ಬಳಿ ಹೆದ್ದಾರಿ ಮೇಲೆ ನೀರು ನುಗ್ಗುವ ಸಾಧ್ಯತೆ ಇದೆ. ಇತ್ತ ವಿದ್ಯಾನಗರದ ಭಾಗಗಳಲ್ಲಿಯು ಪ್ರವಾಹ ಸನ್ನಿವೇಶ ಉಂಟಾಗಬಹುದು.
ಕಬಿನಿ ಹೊರ ಅರಿವು ಅಧಿಕ
ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದಾಗಿ ಕಬಿನಿ ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಗುರುವಾರದಂದು ಜಲಾಶಯಕ್ಕೆ 42829 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 46783 ಕ್ಯೂಸೆಕ್ ಇದೆ. ಮಧ್ಯಾಹ್ನದ ಹೊತ್ತಿಗೆ ಇದನ್ನು 70,000ಕ್ಕೆ ಏರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 2281.76 ಅಡಿಯಷ್ಟಿದೆ. ಒಟ್ಟು 18.09 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಹೆಚ್ಚನ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿರುವುದರಿಂದ ಕಪಿಲಾ ನದಿ ತುಂಬಿ ನಂಜನಗೂಡು ಸಹಿತ ಹಲವು ಕಡೆ ಪ್ರವಾಹದ ಸನ್ನಿವೇಶ ಕಂಡು ಬಂದಿದೆ.
ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿಯೇ ನೀರು ಹರಿದು ಬರುತ್ತಿವುದರಿಂದ ನಾಲ್ಕೈದು ದಿನದಿಂದ ಅಷ್ಟೇ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತದೆ. ಈಗಾಗಲೇ ಜಲಾಶಯವೂ ತುಂಬಿರುವುದರಿಂದ ನಾಲೆಗೂ ನೀರು ಹರಿಸಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ ಮಟ್ಟವು ಗುರುವಾರದಂದು :518.11 ಮೀಟರ್ ಇದೆ. ಗರಿಷ್ಠ ಮಟ್ಟವು 519.60 ಮೀಟರ್ ನಷ್ಟಿದೆ. ಜಲಾಶಯದಲ್ಲಿ 99.317 ಟಿಎಂಸಿ ನೀರು ಸಂಗ್ರಹವಾಗಿದೆ ಜಲಾಶಯಕ್ಕೆ 72286 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 65480 ಕ್ಯೂಸೆಕ್ ನೀರನ್ನು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬಂದು ಅಲ್ಲಿಂದಲೂ ನಿಧಾನವಾಗಿ ಹೊರ ಹರಿವು ಏರಿಸಲಾಗುತ್ತಿದೆ.
ಹಾರಂಗಿ, ಹೇಮಾವತಿ ಜಲಾಶಯ
ಕೊಡಗಿನ ಹಾರಂಗಿ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ 10,700 ಕ್ಯೂಸೆಕ್ ಇದ್ದು. ಹೊರ ಹರಿವಿನ ಪ್ರಮಾಣವೂ 10 ಸಾವಿರ ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 2852.82 ಅಡಿ ಇದೆ. ಇಲ್ಲಿ 6.545 ಟಿಎಂಸಿ ನೀರು ಸಂಗ್ರಹವಾಗಿದ್ದು.ಜಲಾಶಯ ಶೇ. 77ರಷ್ಟು ಭರ್ತಿಯಾಗಿದೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ನೀರಿನ ಮಟ್ಟವು 2912.55 ಅಡಿಗೆ ತಲುಪಿದ್ದು ತುಂಬಲು ಇನ್ನು ಹತ್ತು ಅಡಿ ಮಾತ್ರ ಬೇಕು. ಜಲಾಶಯಕ್ಕೆ ಸದ್ಯ 30,547 ಕ್ಯೂಸೆಕ್ ನೀರು ಒಳಹರಿವು ಇದೆ. ಜಲಾಶಯದಲ್ಲಿ 28.660 ಟಿಸಿಎಂ ನೀರು ಅಂದರೆ ಶೇ.77.24 ರಷ್ಟು ಸಂಗ್ರಹವಾಗಿದೆ.