Karnataka Reservoirs: ಜಲಾಶಯಗಳಿಗೆ ಭಾರೀ ನೀರು, ತುಂಗಭದ್ರಾ, ಹೇಮಾವತಿ, ಕೆಆರ್‌ಎಸ್‌ನಿಂದ ಹೊರ ಹರಿವು ಹೆಚ್ಚಳ
Karnataka Rains ಕರ್ನಾಟಕದಲ್ಲಿ ಮಳೆ ಚುರುಕುಗೊಂಡು ಜಲಾಶಯಗಳಿಗೆ ಭಾರೀ ನೀರು ಹರಿಯುತ್ತಿದೆ. ತುಂಗಭದ್ರಾ, ಹೇಮಾವತಿ, ಕೆಆರ್‌ಎಸ್ ಜಲಾಶಯದಿಂದ ನೀರಿನ ಪ್ರಮಾಣವನ್ನು ಏರಿಕೆ ಮಾಡಲಾಗಿದೆ.

ಬೆಂಗಳೂರು: ಕರ್ನಾಟಕದ ಕೊಡಗು, ಮಲೆನಾಡು ಭಾಗದಲ್ಲಿ( Karnataka Rains) ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬುಧವಾರ ಸಂಜೆ ಹೊತ್ತಿಗೆ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅದರಲ್ಲೂ ತುಂಗಭದ್ರಾ ಜಲಾಶಯ( Thunga Bhadra Dam), ಹೇಮಾವತಿ ಜಲಾಶಯ( Hemavathi Dam) ಹಾಗೂ ಕೃಷ್ಣರಾಜಸಾಗರ ಜಲಾಶಯದಿಂದ( KRS Dam) ಹೊರ ಹರಿವಿನ ಪ್ರಮಾಣವನ್ನು ಏರಿಕೆ ಮಾಡಲಾಗಿದೆ. ಈಗಾಗಲೇ ಹೇಮಾವತಿ ಹಾಗೂ ಕೃಷ್ಣರಾಜ ಸಾಗರ ಜಲಾಶಯಗಳು ಬಹುತೇಕ ತುಂಬಿವೆ. ತುಂಗಭದ್ರಾ ಜಲಾಶಯವೂ ತುಂಬುವ ಹಂತಕ್ಕೆ ಬಂದಿದೆ. ಆಲಮಟ್ಟಿ, ಕಬಿನಿ, ಹಾರಂಗಿ, ನಾರಾಯಣಪುರ, ತುಂಗಾ ಜಲಾಶಯದಿಂದಲೂ ನೀರನ್ನು ಹರಿಸಲಾಗುತ್ತಿದೆ. ಭದ್ರಾ, ಸೂಪಾ, ಲಿಂಗನಮಕ್ಕಿ ಜಲಾಶಯಗಳಿಗೂ ಹೆಚ್ಚಿನ ನೀರು ಹರಿಯುತ್ತಿದ್ದು ತುಂಬುವ ಹಂತದಲ್ಲಿವೆ.
ತುಂಗಭದ್ರಾ ಜಲಾಶಯ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನಲ್ಲಿರುವ ತುಂಗಭದ್ರಾ ಜಲಾಶಯಕ್ಕೂ ಭಾರೀ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಹೊರ ಹರಿವನ್ನು ಏರಿಕೆ ಮಾಡಲಾಗಿದೆ. ಬುಧವಾರ ಸಂಜೆ ಹೊತ್ತಿಗೆ 10 ಗೇಟ್‌ಗಳ ಮೂಲಕ ಸುಮಾರು 25,000 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಈವರೆಗೂ ಮೂರು ಗೇಟ್ ಗಳಲ್ಲಿ ನೀರು ಹೊರಬಿಡಲಾಗುತ್ತಿತ್ತು. ನಿಧಾನವಾಗಿ ಹೊರಹರಿವಿನ ಪ್ರಮಾಣವನ್ನು ತುಂಗಭದ್ರಾ ಜಲಾಶಯದಿಂದ ಏರಿಕೆ ಮಾಡಲಾಗುತ್ತದೆ. ನೀರಿನ ಪ್ರಮಾಣ ಹೆಚ್ಚಿರುವುದರಿಂದ ಹಂಪಿ ಬಳಿಯಲ್ಲಿ ನೀರಿನ ಮಟ್ಟ ಏರಿಕೆ ಕಾಣಲಿದೆ.
ಲಿಂಗನಮಕ್ಕಿ ಜಲಾಶಯ
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ ಬುಧವಾರದಂದು ಭಾರೀ ನೀರು ಹರಿದು ಬರುತ್ತಿದೆ. ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಜಲಾಶಯದ ನೀರಿನ ಮಟ್ಟದಲ್ಲೂ ಗಣನೀಯ ಹೆಚ್ಚಳವಾಗಿದೆ. ಹಲವು ದಿನಗಳಿಂದ ಶರಾವತಿ ಜಲಾನಯನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ (LINGANAMAKKI DAM) 1800 ಅಡಿ ದಾಟಿದ್ದು ಜಲಾಶಯದ ಮಟ್ಟ 1801 ಅಡಿ ತಲುಪಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ನದಿಯ ಜಲಾಶಯವಾದ ಲಿಂಗನಮಕ್ಕಿಗೆ ಕಳೆದ ವರ್ಷ ಕಡಿಮೆ ನೀರು ಬಂದಿತ್ತು. ಈ ಬಾರಿ ಜುಲೈ ಕೊನೆಯ ವಾರದ ಹೊತ್ತಿಗೆ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. 1819 ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯ ತುಂಬಲು ಇನ್ನು 17 ಅಡಿ ಬರಬೇಕಾಗಿದೆ. ಲಿಂಗನಮಕ್ಕಿ 151.64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಈವರೆಗೆ 98.40 ಟಿಎಂಸಿ ನೀರು ಸಂಗ್ರಹವಾಗಿದೆ. ಶೇ.64.89 ರಷ್ಟು ನೀರು ತುಂಬಿದೆ.ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ ಶೇ.30.92 ರಷ್ಟು ಮಾತ್ರ ನೀರು ತುಂಬಿದ್ದು 24 ಜುಲೈ 2023ರ ತನಕ 46.88 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಬಾರಿ ಎಡು ಪಟ್ಟು ಅಧಿಕ ನೀರು ಸಂಗ್ರಹವಾಗಿದೆ. ಈ ಬಾರಿ ಶರಾವತಿ (SHARAVATHI RIVER) ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ಏರಿಕೆ ಕಂಡಿದೆ.
ತುಂಬಿದ ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಲ್ಲೂ ನೀರಿನ ಹೊರ ಹರಿವನ್ನು ಬುಧವಾರ ಸಂಜೆ ಏರಿಕೆ ಮಾಡಲಾಗಿದೆ. ಈಗಾಗಲೇ ಜಲಾಶಯ ತುಂಬಿದ್ದು, ಒಳ ಹರಿವು ಹೆಚ್ಚಾಗಿರುವುದರಿಂದ ಹೊರ ಹರಿವನ್ನು ಕಾವೇರಿ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಸದ್ಯ 30000 ಕ್ಯೂಸೆಕ್‌ನಿಂದ 50000 ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿದೆ. ಪ್ರವಾಹದ ವಾತಾವರಣ ಉಂಟಾಗುವುದರಿಂದ ಕಾವೇರಿ ನದಿ ತೀರದ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹೇಮಾವತಿ ಜಲಾಶಯ
ಚಿಕ್ಕಮಗಳೂರು, ಹಾಸನ ಭಾಗದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಅರಕಲಗೂಡು ತಾಲ್ಲೂಕು ಗೊರೂರಿನ ಹೇಮಾವತಿ ಆಣೆಕಟ್ಟಿಗೂ ಹೆಚ್ಚಿನ ನೀರು ಬರುತ್ತಿದೆ. ಇದರಿಂದ ಹೊರ ಹರಿವನ್ನು ಏರಿಸಲಾಗಿದೆ. ಹೇಮಾವತಿ ನದಿ ಮೂಲಕ ಹೆಚ್ಚಿನ ನೀರು ಕಾವೇರಿ ನದಿ ಸೇರಿ ಕೃಷ್ಣರಾಜಸಾಗರ ಜಲಾಶಯ ಸೇರಿಕೊಳ್ಳಲಿದೆ. ಜಲಾಶಯದಿಂದ ಬುಧವಾರ ಮಧ್ಯಾಹ್ನದ ಹೊತ್ತಿಗೆ 23,500 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿತ್ತು. ಈಗ ಈ ಪ್ರಮಾಣ 32,633 ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿದೆ.
ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು
ಬೆಳಗಾವಿ ಜಿಲ್ಲೆಯ ನದಿಗಳಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಕೃಷಣಾ ನದಿ ಮೂಲಕ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಬುಧವಾರ ಸಂಜೆಯಿಂದಲೇ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗುವುದು ಎನ್ನುವುದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ನಿಗಾ ವಹಿಸಲಾಗಿದೆ. ರಾಜಾಪುರದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿಯಿಂದ 1.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ ಪ್ರತಿದಿನ ಮೂರು ಟಿಎಂಸಿ ನೀರು ಸಂಗ್ರಹ ಆಗುತ್ತಿದೆ. ಇಂದು ಸಂಜೆಯಿಂದ ಘಟಪ್ರಭಾ ನದಿಯಿಂದ ನೀರು ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎನ್ನುವುದು ಡಿಸಿ ವಿವರಣೆ.
