Karnataka Reservoirs: ಕರ್ನಾಟಕದ ಜಲಾಶಯ ಮಟ್ಟ, ಆಲಮಟ್ಟಿ, ತುಂಗಭದ್ರಾಗೆ ಭಾರೀ ನೀರು, ತುಂಬಿದ ಕಬಿನಿ, ಕೆಆರ್‌ಎಸ್‌ನಲ್ಲೂ ಹೆಚ್ಚಳ
Dam Level Updates ಕರ್ನಾಟಕದ ಬಹುತೇಕ ಜಲಾಶಯಗಳಿಗೆ ನೀರು ಚೆನ್ನಾಗಿಯೇ ಹರಿದು ಬರುತ್ತಿದೆ. ಒಳ ಹರಿವಿನ ಪ್ರಮಾಣವೂ ಚೆನ್ನಾಗಿರುವುದರಿಂದ ಜಲಾಶಯಗಳು ಕೆಲವು ತುಂಬಿದ್ದು. ಇನ್ನುಷ್ಟು ತುಂಬುವ ಹಾದಿಯಲ್ಲಿವೆ.

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಹಾಗೂ ಕೇರಳದಲ್ಲೂ ಮುಂಗಾರು ಬಿರುಸುಗೊಂಡಿರುವುದರಿಂದ ಜಲಾಶಯಗಳಿಗೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಾವೇರಿ ತೀರದ ಕಬಿನಿ ಹಾಗೂ ಹಾರಂಗಿ ಜಲಾಶಯ ಬಹುತೇಕ ತುಂಬಿದ್ದು ಹೊರ ಹರಿವನ್ನೂ ಆರಂಭಿಸಲಾಗಿದೆ. ಕೃಷ್ಣರಾಜಸಾಗರ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗಿದ್ದರೂ ನೀರಿನ ಮಟ್ಟ ಉತ್ತಮವಾಗಿಯೇ ಇದೆ. ಉತ್ತರ ಕರ್ನಾಟಕದ ಆಲಮಟ್ಟಿಗೆ ಭಾರೀ ಪ್ರಮಾಣದಲ್ಲಿಯೇ ನೀರು ಹರಿದು ಬರುತ್ತಿದೆ. ಅದೇ ರೀತಿ ತುಂಗಭದ್ರಾ, ಭದ್ರಾ ಜಲಾಶಯಗಳ ನೀರಿನ ಪ್ರಮಾಣದಲ್ಲೂ ಏರಿಕೆ ಕಂಡು ಬಂದಿದೆ.
ಅರ್ಧ ತುಂಬಿದ ಕೆಆರ್‌ಎಸ್
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಿಧಾನವಾಗಿಯೇ ನೀರು ಜಲಾಶಯವನ್ನು ಕಾವೇರಿ ನದಿ ಮೂಲಕ ಸೇರುತ್ತಿದೆ. ಸದ್ಯ ಜಲಾಶಯದಲ್ಲಿ 103.40 ಅಡಿ ನೀರಿದೆ. ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣವು 6600 ಕ್ಯೂಸೆಕ್. ಜಲಾಶಯದ ಗರಿಷ್ಟ ಮಟ್ಟವು 124.80 ಅಡಿ ಇದೆ. ಸದ್ಯ 25.594 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 49.452 ಟಿಎಂಸಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಈಗಿನ ಲೆಕ್ಕಾಚಾರದ ಪ್ರಕಾರವೇ ಕೃಷ್ಣರಾಜಸಾಗರ ಜಲಾಶಯವು ಈವರೆಗೂ ಅರ್ಧದಷ್ಟು ತುಂಬಿದೆ. ಕಳೆದ ವರ್ಷದ ತುಂಬದ ಕೆಆರ್‌ಎಸ್ ಜಲಾಶಯಕ್ಕೆ ಈ ಬಾರಿ ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿಯೇ ಉತ್ತಮ ನೀರು ಹರಿದು ಬಂದಿದೆ. ಇದೇ ವಾತಾವರಣ ಮುಂದುವರೆದರೆ ಜಲಾಶಯ ಮಾಸಾಂತ್ಯ ಇಲ್ಲವೇ ಆಗಸ್ಟ್‌ನಲ್ಲಿ ತುಂಬಬಹುದು.
ಆಲಮಟ್ಟಿ ಮಟ್ಟದಲ್ಲೂ ಏರಿಕೆ
ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರು ಶಾಸ್ತ್ರಿ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಕೃಷ್ಣಾ ನದಿ ಮೂಲಕ ಹೆಚ್ಚಿನ ನೀರು ಬರುತ್ತಿದೆ. ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಆಲಮಟ್ಟಿಯ ಜಲಾಶಯಕ್ಕೆ 78668 ಕ್ಯೂಸೆಕ್ ನೀರು ಬರುತ್ತಿದೆ. ಇದು ಒಂದು ಲಕ್ಷ ಸಮೀಪಿಸುವ ಸೂಚನೆಗಳೂ ಇವೆ. ಜಲಾಶಯದ ನೀರಿನ ಮಟ್ಟವು 515.85 ಅಡಿಯಷ್ಟಿದೆ. ಗರಿಷ್ಟ ಮಟ್ಟವು 519.60 ಅಡಿ. ಸದ್ಯ 71.391 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಅಂದರೆ ಶೇ. 60ರಷ್ಟು ಜಲಾಶಯವು ತುಂಬಿದೆ. ನೀರಿನ ಒಳಹರಿವು ಹೆಚ್ಚಾಗಿ ಜಲಾಶಯ ತುಂಬಿದರೆ ಹೊರ ಬಿಡುವ ಕುರಿತು ತೀರ್ಮಾನಿಸಲಾಗುತ್ತದೆ ಎನ್ನುವುದು ಅಧಿಕಾರಿಗಳ ಹೇಳಿಕೆ.
ಕಬಿನಿ ಭರ್ತಿ
ಕೇರಳದಲ್ಲಿನ ಉತ್ತಮ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ಬಹುತೇಕ ಭರ್ತಿಯಾಗಿದೆ. ಜಲಾಶಯದಲ್ಲಿ ಮಂಗಳವಾರ ಬೆಳಿಗ್ಗೆ 2282.45 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಗರಿಷ್ಠ ಮಟ್ಟವು 2284 ಅಡಿ. ಸದ್ಯ ಜಲಾಶಯಕ್ಕೆ 6148 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2000 ಕ್ಯೂಸೆಕ್ ನೀರನ್ನು ಕಪಿಲಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 18.52 ಟಿಎಂಸಿ ನೀರು ಸಂಗ್ರಹವಾಗಿದೆ. ಪೂರ್ಣ ತುಂಬಲು ಇನ್ನೊಂದು ಟಿಎಂಸಿ ನೀರು ಮಾತ್ರ ಬೇಕು. ಆದರೆ ಸುರಕ್ಷತೆ ದೃಷ್ಟಿಯಿಂದ ಇಷ್ಟು ಪ್ರಮಾಣದಲ್ಲಿಯೇ ನೀರು ಉಳಿಸಿಕೊಂಡು ಹೊರ ಬಿಡಲಾಗುತ್ತದೆ. ಈಗಾಗಲೇ ಹೊರ ಬಿಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಕಬಿನಿ ನೀರಿನ ಪ್ರಮಾಣ ಹೆಚ್ಚಿದರೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.
ಕಳೆದ ವರ್ಷ ಜಲಾಶಯದಲ್ಲಿ ಇದೇ ವೇಳೆ 2266.40 ಅಡಿ ನೀರಿತ್ತು. ಆದರೆ ಈ ಬಾರಿ ಕಬಿನಿ ಜಲಾಶಯ ಜುಲೈ ಮೊದಲ ವಾರದಲ್ಲಿಯೇ ತುಂಬಿದೆ. ಕೇರಳದಲ್ಲಿ ಇನ್ನಷ್ಟು ಮಳೆ ನಿರೀಕ್ಷೆಯಿದ್ದು, ಜಲಾಶಯ ನಿರಂತರವಾಗಿ ತುಂಬಿಯೇ ಇರುವ ವಾತಾವರಣವಿದೆ.
ಕದ್ರಾ ಜಲಾಶಯದಿಂದ ನೀರು ಹೊರಕ್ಕೆ
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಕಾರವಾರ ಸಮೀಪ ಇರುವ ಕದ್ರಾ ಜಲಾಶಯವೂ ತುಂಬಿದೆ. ಈ ಕಾರಣದಿಂದ ನೀರನ್ನು ಈಗಾಗಲೇ ಹೊರ ಹರಿಸಲಾಗುತ್ತಿದೆ. ನಾಲ್ಕು ಗೇಟುಗಳ ಮೂಲಕ 10600 ಕ್ಯೂ. ಮತ್ತು ವಿದ್ಯುತ್ ಉತ್ಪಾದಿಸಿ 21000 ಕ್ಯೂ. ನೀರನ್ನು ಕಾಳಿನದಿಗೆ ಬಿಡಲಾಗಿದೆ. ಸದ್ಯ ಇಲ್ಲಿ 31000 ಹೊರಹರಿವು, 22000 ಒಳಹರಿವು ಇದೆ ಎನ್ನುವುದು ಅಧಿಕಾರಿಗಳ ಹೇಳಿಕೆ.
ಹಾರಂಗಿಯಿಂದಲೂ
ಕೊಡಗಿನಲ್ಲಿರುವ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೂ ಭಾರೀ ನೀರು ಬಂದಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಸೋಮವಾರ ಸಂಜೆಯಿಂದಲೇ ಹೊರ ಹರಿವನ್ನು ಹಾರಂಗಿ ಜಲಾಶಯದಿಂದ ಆರಂಭಿಸಲಾಗಿದೆ. ಈ ನೀರು ಕುಶಾಲನಗರ ಸಮೀಪದ ಕೂಡಿಗೆ ಬಳಿ ಕಾವೇರಿ ನದಿ ಸೇರಿಕೊಂಡು ಕೃಷ್ಣರಾಜ ಸಾಗರ ಜಲಾಶಯವನ್ನು ಸೇರಿಕೊಳ್ಳಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದಿಂದ 1೦೦೦ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ನೀರಿನ ಒಳಹರಿವು ನೋಡಿಕೊಂಡು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯೂ ಇದೆ.