ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೇರಳದಲ್ಲಿ ಭಾರೀ ಮಳೆ ಕಬಿನಿಗೆ ಹೆಚ್ಚಿದ ನೀರು, ಆಲಮಟ್ಟಿ, ಕೆಆರ್‌ ಎಸ್‌ಗೂ ಅಧಿಕ ಒಳ ಹರಿವು

Karnataka Reservoirs: ಕೇರಳದಲ್ಲಿ ಭಾರೀ ಮಳೆ ಕಬಿನಿಗೆ ಹೆಚ್ಚಿದ ನೀರು, ಆಲಮಟ್ಟಿ, ಕೆಆರ್‌ ಎಸ್‌ಗೂ ಅಧಿಕ ಒಳ ಹರಿವು

Dam levels ಕರ್ನಾಟಕ, ಕೇರಳದಲ್ಲಿ ಎಡಬಿಡದೇ ಸುರಿದಿರುವ ಮಳೆಯಿಂದ ಜಲಾಶಯಗಳಿಗೆ ನೀರಿನ ಒಳ ಹರಿವು ಅಧಿಕವಾಗಿದೆ.

ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೆ ನಿಧಾನಕ್ಕೆ ನೀರಿನ ಒಳ ಹರಿವು ಹೆಚ್ಚಿದೆ.
ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೆ ನಿಧಾನಕ್ಕೆ ನೀರಿನ ಒಳ ಹರಿವು ಹೆಚ್ಚಿದೆ.

ಬೆಂಗಳೂರು: ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕುಗೊಂಡಿದೆ. ಇದರಿಂದ ಮೂರು ರಾಜ್ಯಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಜಲಾಶಯಗಳಿಗೆ ಅಧಿಕ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಕೇರಳ ಮಳೆಯಿಂದ ಕಬಿನಿಗೆ 17 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೂ ನೀರಿನ ಪ್ರಮಾಣ ಹೆಚ್ಚಿದ್ದು 3856 ಕ್ಯುಸೆಕ್‌ಗೆ ಹೆಚ್ಚಳವಾಗಿದೆ. ಹಾರಂಗಿ, ಹೇಮಾವತಿ ಜಲಾಶಯದಲ್ಲೂ ನೀರು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಉತ್ತರ ಕರ್ನಾಟಕದ ಅತೀ ದೊಡ್ಡ ಜಲಾಶಯ ಆಲಮಟ್ಟಿಗೂ ನೀರು ಹರಿದು ಬರುತ್ತಿದೆ. ಸದ್ಯ 6 ಸಾವಿರಕ್ಕೂ ಅಧಿಕ ಒಳ ಹರಿವು ಇದೆ. ಮಲೆನಾಡು ಭಾಗದ ಜಲಾಶಯಗಳಾದ ತುಂಗ ಹಾಗೂ ಭದ್ರಾ ಕೂಡ ಜಲವೈಭವವನ್ನು ಕಾಣುತ್ತಿವೆ.

ಕಬಿನಿಗೆ ಅಧಿಕ

ಕರ್ನಾಟಕದ ಹತ್ತಕ್ಕೂ ಹೆಚ್ಚು ಪ್ರಮುಖ ಜಲಾಶಯಗಳಲ್ಲಿ ಮೈಸೂರು ಜಿಲ್ಲೆಯ ಕಬಿನಿ( Kabini Dam) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಅಧಿಕ. ಗುರುವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯಕ್ಕೆ 16977 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 115 ಕ್ಯುಸೆಕ್‌ ಒಳ ಹರಿವು ಮಾತ್ರ ಇತ್ತು. ಜಲಾಶಯದ ನೀರಿನ ಮಟ್ಟವೂ 2269.22 ಅಡಿಗೆ ತಲುಪಿದೆ. ಒಂದೇ ದಿನದಲ್ಲಿ ನಾಲ್ಕು ಅಡಿಯಷ್ಟು ನೀರು ಬಂದಿರುವುದು ವಿಶೇಷ. ಅದರಲ್ಲೂ ಕೇರಳದ ವಯನಾಡು ಭಾಗದಲ್ಲಿ( Kerala Rains) ಮೂರ್ನಾಲ್ಕು ದಿನದಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಬುಧವಾರವೂ ಮಳೆ ಪ್ರಮಾಣ ಅಧಿಕವಾಗಿತ್ತು. ಈ ಕಾರಣದಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇದೇ ರೀತಿ ಒಂದು ವಾರ ಮಳೆಯಾದರೆ ಜಲಾಶಯದ ನೀರಿನ ಪ್ರಮಾಣ ತುಂಬುವ ಹಂತಕ್ಕೂ ಬರಬಹುದು. ಜಲಾಶಯದ ಗರಿಷ್ಠ ಮಟ್ಟ2284 ಅಡಿ. ಸದ್ಯ ಜಲಾಶಯದಲ್ಲಿ 11.30 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು. ಒಳ ಹರಿವಿನ ಪ್ರಮಾಣವನ್ನೂ ಒಂದು ಸಾವಿರ ಕ್ಯುಸೆಕ್‌ನಷ್ಟೇ ಮುಂದುವರೆಸಲಾಗಿದೆ.

ಕೆಆರ್‌ಎಸ್‌ನಲ್ಲಿ ಕೊಂಚ ಹೆಚ್ಚಳ

ಕೊಡಗಿನಲ್ಲೂ ( Kodagu Rains) ಕೂಡ ಭಾರೀ ಮಳೆಯಾಗುತ್ತಿದೆ. ಬುಧವಾರ ಉತ್ತಮ ಮಳೆಯಾಗಿದ್ದರಿಂದ ಕಾವೇರಿ ನದಿ ಮೂಲಕ ಬರುವ ನೀರಿನ ಪ್ರಮಾಣ ಹೆಚ್ಚಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು. ನಿಧಾನವಾಗಿ ಕೆಆರ್‌ಎಸ್‌ ಜಲಾಶಯಕ್ಕೂ( KRS Dam) ಇದು ಸೇರುತ್ತಿದೆ. ಗುರುವಾರ ಬೆಳಿಗ್ಗೆ ಕೆಆರ್‌ಎಸ್‌ಗೆ 3856 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟ88.40 ಅಡಿ ತಲುಪಿದೆ. ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 15 ಟಿಎಂಸಿ ನೀರು ಮಾತ್ರ ಈವರೆಗೂ ಸಂಗ್ರಹವಾಗಿದೆ. ಇಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.

ಕೊಡಗಿನಲ್ಲಿ ಈಗಾಗಲೇ ಮಳೆ ಶುರುವಾಗಿದೆ. ಗುರುವಾರವೂ ಹಲವು ಭಾಗಗಳಲ್ಲಿ ಮಳೆ ಜೋರಾಗಿದೆ. ಅಲ್ಲದೇ ಕಾವೇರಿ ನದಿ ಪಾತ್ರದಲ್ಲೂ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ನೀರಿನ ಪ್ರಮಾಣ ನಿಧಾನವಾಗಿ ಇನ್ನಷ್ಟು ಏರಿಕೆ ಕಾಣಲಿದೆ ಎನ್ನುವುದು ಅಧಿಕಾರಿಗಳ ವಿವರಣೆ

ಹಾರಂಗಿ ಜಲಾಶಯಕ್ಕೂ( Harangi Dam) 1425 ಕ್ಯುಸೆಕ್‌ ನೀರು ಬರುತ್ತಿದ್ದರೆ, ಜಲಾಶಯದ ಮಟ್ಟ2832.65 ಅಡಿಯಷ್ಟಿದೆ. ಅದೇ ರೀತಿ ಹೇಮಾವತಿ ಜಲಾಶಯಕ್ಕೂ 4252 ಕ್ಯುಸೆಕ್‌ ನೀರು ಒಳಹರಿವು ಇದೆ. ಜಲಾಶಯದ ನೀರಿನ ಮಟ್ಟವು 2884.85 ಅಡಿಯಷ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಏಳು ಅಡಿಯಷ್ಟು ನೀರಿನ ಪ್ರಮಾಣ ಹೇಮಾವತಿಯಲ್ಲಿ( Hemavathi dam) ಈ ಬಾರಿ ಕಡಿಮೆಯಿದ್ದು, ಮಳೆಯಾದರೆ ಬೇಗನೇ ಭರ್ತಿಯಾಗಬಹುದು ಎನ್ನುವ ನಿರೀಕ್ಷೆಗಳಿವೆ.

ಆಲಮಟ್ಟಿ ಸ್ಥಿತಿ

ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ ಬಹದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ( Almatti Dam) ಗುರುವಾರ ಬೆಳಿಗ್ಗೆ 6,413 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 430 ಕ್ಯುಸೆಕ್‌ಗೆ ಇರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 510.67 ಮೀಟರ್‌ನಷ್ಟಿತ್ತು. ಜಲಾಶಯದ ಗರಿಷ್ಠ ಮಟ್ಟವು 519.60 ಮೀಟರ್‌. ಜಲಾಶಯದಲ್ಲಿ ಸದ್ಯ 33.284 ಟಿಎಂಸಿ ನೀರು ಸಂಗ್ರಹವಿದೆ. ಇಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಬಹುದು.

ತುಂಗಭದ್ರಾ ಜಲಾಶಯ

ವಿಜಯನಗರದ ತುಂಗಭದ್ರಾ ಜಲಾಶಯದಲ್ಲಿ(TungaBhadra dam) ಒಳ ಹರಿವಿನ ಪ್ರಮಾಣ 620 ಕ್ಯುಸೆಕ್‌ ಮಾತ್ರವಿದೆ. ಜಲಾಶಯದ ನೀರಿನ ಮಟ್ಟವೂ 1581.25 ಅಡಿಯಷ್ಟಿದೆ. ಸಂಗ್ರಹವಾಗಿರುವ ನೀರಿನ ಪ್ರಮಾಣ 5 ಟಿಎಂಸಿ ಮಾತ್ರ. ಇಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸಬಹುದು, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದರೂ ಅಲ್ಲಿನ ಜಲಾಶಯಗಳು ಭರ್ತಿಯಾಗದೇ ನೀರು ಹೊರ ಬಿಡುವುದು ಕಡಿಮೆಯಿದೆ. ಇದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಕಡಿಮೆಯಿದೆ.

ತುಂಬಿದ ತುಂಗಾ ಜಲಾಶಯ

ಶಿವಮೊಗ್ಗದ ಹೊರ ವಲಯ ಗಾಜನೂರಿನಲ್ಲಿರುವ ತುಂಗಾ ಜಲಾಶಯವೂ( Tunga Dam) ಬಹುತೇಕ ಭರ್ತಿಯಾಗಿದೆ. ಜಲಾಶಯಕ್ಕೆ 6766 ಕ್ಯುಸೆಕ್‌ ನೀರು ಬರುತ್ತಿದ್ದು, 5250 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 588.24 ಅಡಿಯಷ್ಟಿದ್ದು. ಗರಿಷ್ಠ ಪ್ರಮಾಣ ತಲುಪಿದೆ.