ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs:ಕೊಡಗು, ಕೇರಳದಲ್ಲಿ ಭಾರೀ ಮಳೆ ಕಬಿನಿ, ಕೆಆರ್‌ಎಸ್‌ಗೆ ಭಾರೀ ನೀರು, ಎಷ್ಟಿದೆ ಜಲಾಶಯ ಮಟ್ಟ

Karnataka Reservoirs:ಕೊಡಗು, ಕೇರಳದಲ್ಲಿ ಭಾರೀ ಮಳೆ ಕಬಿನಿ, ಕೆಆರ್‌ಎಸ್‌ಗೆ ಭಾರೀ ನೀರು, ಎಷ್ಟಿದೆ ಜಲಾಶಯ ಮಟ್ಟ

Rain updates ಕರ್ನಾಟಕ ಹಾಗೂ ಕೇರಳ ಭಾಗದಲ್ಲಿನ ಮಳೆಯಿಂದ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡಿದೆ.

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.

ಮೈಸೂರು: ಕೊಡಗು( Kodagu Rains) ಹಾಗೂ ಕೇರಳ( Kerala Rains) ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ( KRS Dam) ಹಾಗೂ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಗಳ( Kabini Dam) ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಒಂದೆರಡು ದಿನದಲ್ಲಿ ಸುಮಾರು ಹತ್ತು ಅಡಿಯಷ್ಟು ನೀರು ಎರಡೂ ಜಲಾಶಯಗಳಿಗೆ ಸಂಗ್ರಹವಾಗಿದೆ. ಇದೇ ರೀತಿಯಲ್ಲಿ ಮಳೆ ಸುರಿದರೆ ಕಬಿನಿ ಜಲಾಶಯ ಒಂದು ವಾರದೊಳಗೆ ತುಂಬುವ ಸೂಚನೆ ಇದೆ. ಕೆಆರ್‌ಎಸ್‌ ನೂರು ಅಡಿ ದಾಟಬಹುದು ಎಂದು ಅಂದಾಜು ಮಾಡಲಾಗಿದೆ. ಇದಲ್ಲದೇ ಕಾವೇರಿ ಕೊಳ್ಳದ ಕೊಡಗಿನ ಹಾರಂಗಿ ಜಲಾಶಯ ಹಾಗೂ ಹಾಸನದ ಹೇಮಾವತಿ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.

ಕೆಆರ್‌ಎಸ್‌ಗೆ ಹೆಚ್ಚಿನ ನೀರು

ಕೊಡಗಿನ ಭಾಗಮಂಡಲ ಸಹಿತ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಶನಿವಾರ ಬೆಳಿಗ್ಗೆ 18644 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ ಸುಮಾರು ಐದು ಸಾವಿರ ಕ್ಯುಸೆಕ್‌ನಷ್ಟು ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಅಂದರೆ ಸುಮಾರು ಆರೇಳು ಅಡಿ ನೀರು ಎರಡು ದಿನದಲ್ಲಿ ಸಂಗ್ರಹವಾಗಿದೆ. ನಿಧಾನವಾಗಿ ಹಿನ್ನೀರಿನ ಪ್ರಮಾಣದಲ್ಲೂ ಏರಿಕೆ ಕಂಡು ಬಂದು ಜಲ ಕಳೆ ಕಂಡು ಬರುತ್ತಿದೆ. ಜಲಾಶಯದ ನೀರಿನ ಮಟ್ಟವೂ 92.80 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಟ ಮಟ್ಟವು 124.80 ಅಡಿಯಷ್ಟಿದೆ. ಜಲಾಶಯದಲ್ಲಿ 17.676 ಟಿಎಂಸಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ನೀರನ್ನು ಕೆಆರ್‌ಎಸ್‌ ಜಲಾಶಯದಲ್ಲಿ ಸಂಗ್ರಹಿಸಬಹುದು.

ಕಳೆದ ಬಾರಿ ಕೆಆರ್‌ಎಸ್‌ ಜಲಾಶಯ ಪೂರ್ಣ ತುಂಬಲೇ ಇಲ್ಲ. ಹತ್ತು ಅಡಿ ಕಡಿಮೆ ಇದ್ದಾಗಲೇ ಮಳೆ ಪ್ರಮಾಣ ತಗ್ಗಿತ್ತು. ಇದರ ನಡುವೆ ಕಾವೇರಿ ಪ್ರಾಧಿಕಾರದ ಒಪ್ಪಂದದ ಪ್ರಕಾರ ತಮಿಳುನಾಡಿಗೂ ಕೆಲವು ದಿನ ನೀರು ಹರಿಸಲಾಗಿತ್ತು. ಈ ಬಾರಿ ಜೂನ್‌ನಲ್ಲಿಯೇ ಉತ್ತಮ ಮಳೆ ಬಂದು ಜುಲೈ ಮೊದಲ ವಾರದಲ್ಲಿಯೇ ನೂರು ಅಡಿ ತಲುಪುವ ಮುನ್ಸೂಚನೆ ಕಂಡು ಬಂದಿದೆ. ಜುಲೈ ಅಂತ್ಯ ಇಲ್ಲವೇ ಆಗಷ್ಟ್‌ ಹೊತ್ತಿಗೆ ಜಲಾಶಯ ತುಂಬುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುವುದು ಅಧಿಕಾರಿಗಳ ವಿವರಣೆ.

ಟ್ರೆಂಡಿಂಗ್​ ಸುದ್ದಿ

ಕಬಿನಿಗೂ ನೀರು

ಕೇರಳದಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ಕಬಿನಿ ಜಲಾಶಯಕ್ಕೂ ನೀರಿನ ಪ್ರಮಾಣ ಏರಿಕೆಯಾಗಿದೆ. ಆದರೆ ಒಂದು ದಿನದಲ್ಲಿ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಕಬಿನಿ ಜಲಾಶಯಕ್ಕೆ ಶನಿವಾರ 17873 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಶುಕ್ರವಾರ ಒಳ ಹರಿವಿನ ಪ್ರಮಾಣ 20113 ಕ್ಯುಸೆಕ್‌ನಷ್ಟಿತ್ತು. ಜಲಾಶಯದ ನೀರಿನ ಮಟ್ಟವು 2275.06 ಅಡಿಯಷ್ಟಿದೆ. ಕಬಿನಿಗೂ ಎರಡು ದಿನದಲ್ಲಿ ಆರು ಅಡಿ ನೀರು ಹರಿದು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಕ್ಕು ಸುಮಾರು 25 ಅಡಿ ನೀರು ಹೆಚ್ಚು ಈಗಾಗಲೇ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 2250.98 ಅಡಿಯಷ್ಟು ನೀರಿತ್ತು. ಒಳ ಹರಿವು ಇದೇ ದಿನ ಕಳೆದ ವರ್ಷ 1461 ಮಾತ್ರ ಇತ್ತು. ಇನ್ನು ನೀರಿನ ಪ್ರಮಾಣ ಏರಿಕೆಯಾಗಿರುವುದರಿಂದ ಕಬಿನಿ ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣವೂ ಏರಿಕೆ ಮಾಡಲಾಗಿದೆ. 2ಸಾವಿರ ಕ್ಯುಸೆಕ್‌ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ನೀರಿನ ಒಳಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವು ಹೆಚ್ಚಿಸುವ ಸಾಧ್ಯತೆಯಿದೆ.

ಕಬಿನಿ ಜಲಾಶಯ ಬಹಳ ವರ್ಷದ ನಂತರ ಮೊದಲ ಬಾರಿಗೆ ಜೂನ್‌ ಅಂತ್ಯದಲ್ಲಿಯೇ ಹೆಚ್ಚಿನ ಪ್ರಮಾಣ ನೀರು ಸಂಗ್ರಹಿಸಿಕೊಂಡಿದೆ. ಕೇರಳದಲ್ಲಿ ಸುರಿದ ಮಳೆಯ ಪರಿಣಾಮವಿದು. ಈಗ ಕೊಂಚ ಮಳ ತಗ್ಗಿದ್ದು ಇನ್ನೂ ಮೂರ್ನಾಲ್ಕು ದಿನ ಒಳ ಹರಿವು ಇರಲಿದೆ. ಇದರಿಂದ ಜಲಾಶಯದ ಮಟ್ಟ ಇನ್ನಷ್ಟು ಹೆಚ್ಚಲಿದೆ. ಮತ್ತೆ ಮಳೆ ಶುರುವಾಗುವ ಸೂಚನೆಯಿದೆ ಎನ್ನುವುದು ಅಧಿಕಾರಿಗಳ ನೀಡುವ ವಿವರಣೆ

ತುಂಗಭದ್ರಾ ಜಲಾಶಯ

ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಬರುತ್ತಿರುವ ಒಳ ಹರಿವು ಹೆಚ್ಚಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಜತೆಗೆ ತುಂಗಾ ಜಲಾಶಯ ತುಂಬಿ ನೀರು ಹೊರ ಹರಿಸುತ್ತಿರುವುದರಿಂದ ತುಂಗಭದ್ರಾಕ್ಕೆ ನೀರು ಬರುತ್ತಿದೆ. ಶನಿವಾರ ಒಳ ಹರಿವು 1880 ಕ್ಯುಸೆಕ್‌ ನಷ್ಟಿತ್ತು. ಜಲಾಶಯದ ನೀರಿನ ಮಟ್ಟವು 1581.56 ಅಡಿಯಷ್ಟಿದೆ. ಜಲಾಶುದ ಗರಿಷ್ಠ ಮಟ್ಟ 1633 ಅಡಿ. ಜಲಾಶಯದಲ್ಲಿ 5.278 ಟಿಎಂಸಿ ಮಾತ್ರ ಸಂಗ್ರಹವಾಗಿದೆ. ಜಲಾಶಯದಲ್ಲಿ 100.855 ಟಿಎಂಸಿ ನೀರು ಸಂಗ್ರಹಿಸಬಹುದು.