Karnataka Reservoirs: ತಳ ಕಂಡ ಜಲಾಶಯಗಳಿಗೆ ಪೂರ್ವ ಮುಂಗಾರಲ್ಲೇ ಜಲ ಕಳೆ,ಯಾವ ಜಲಾಶಯಕ್ಕೆ ಎಷ್ಟು ನೀರು ಬಂತು?
Dams Level ಕರ್ನಾಟಕ( Karnataka Rains, ಕೇರಳ( Kerala Rains) ಹಾಗೂ ತಮಿಳುನಾಡಿನಲ್ಲಿ ಮಳೆಯಾಗಿರುವುದರಿಂದ( Tamilnadu Rains) ಕರ್ನಾಟಕದ ಜಲಾಶಯಗಳಿಗೆ ನೀರು ಹರಿದು ಬಂದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಹದಿನೈದು ದಿನಗಳಿಂದ ಉತ್ತಮ ಮಳೆ ಬಹುತೇಕ ಎಲ್ಲಾ ಭಾಗಗಳಲ್ಲೂ ಆಗಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಭಾಗದಲ್ಲಂತೂ ಉತ್ತಮ ಮಳೆಯೇ ಆಗಿದೆ. ಕೊಡಗಿನಲ್ಲೂ ಮಳೆಯಾಗಿರುವುದು, ಕೇರಳದಲ್ಲಿ ಮಳೆ ಸುರಿದಿರುವ ಪರಿಣಾಮ ಕರ್ನಾಟಕದ ಕೆಲವು ಜಲಾಶಯಗಳ ಮೇಲೂ ಆಗಿದೆ. ಅಂದರೆ ಬೇಸಿಗೆಯಲ್ಲಿ ತೀವ್ರ ಕುಸಿತ ಕಂಡಿದ್ದ ಜಲಾಶಯಗಳಿಗೆ ನೀರು ಹರಿದು ಬಂದಿರುವುದರಿಂದ ಜನರಲ್ಲೂ ನೆಮ್ಮದಿ ಮೂಡಿದೆ.
ಕೊಡಗಿನಲ್ಲಂತೂ ಹತ್ತು ದಿನದಿಂದ ಎಡಬಿಡದೇ ಮಳೆ ಸುರಿದಿದೆ. ಎರಡು ಮೂರು ತಿಂಗಳಿನಿಂದ ಕೊಡಗಿನಲ್ಲೇ ಸಂಪೂರ್ಣ ಬತ್ತಿ ಹೋಗಿದ್ದ ಕಾವೇರಿ ನದಿಯಲ್ಲಿ ನೀರು ಕಂಡಿದೆ. ಹೆಚ್ಚಿನ ಮಳೆ ಆಗಿರುವುದರಿಂದ ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಲೇ ಇದೆ. ಕೆಆರ್‌ಎಸ್‌ಗೆ ಈಗಲೂ 2893 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಸತತ ಒಂದು ವಾರದಿಂದಲೂ ನೀರು ಹರಿಯುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಸೋಮವಾರ ಮಧ್ಯಾಹ್ನದ ಹೊತ್ತಿಗೆ 83.20 ಅಡಿಗೆ ನೀರಿನ ಮಟ್ಟ ತಲುಪಿದೆ. ಸುಮಾರು ಐದು ಅಡಿಯಷ್ಟು ನೀರು ಹರಿದಿದೆ.
ಕೊಡಗಿನ ಹಾರಂಗಿ ಜಲಾಶಯಕ್ಕೂ 236 ಕ್ಯೂಸೆಕ್ಸ್, ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ 769 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಕಬಿನಿಗೂ ನೀರು
ಕೇರಳದ ವಯನಾಡು ಭಾಗದಲ್ಲಿ ಮಳೆಯಾಗಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ನೀರು ಬರುತ್ತಿದೆ. ಸೋಮವಾರದಂದು 1034 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಬಿನಿ ಜಲಾಶಯ ಕೂಡ ಮಳೆ ಇಲ್ಲದೇ ಬೇಸಿಗೆಯಲ್ಲಿ ತಳ ಹಿಡಿದಿತ್ತು. ಈಗ ಜಲಾಶಯದ ನೀರಿನ ಮಟ್ಟ 2260.60 ಅಡಿಯಷ್ಟಿದೆ.
ಸುವರ್ಣಾ ವತಿಗೂ ಕಳೆ
ತಮಿಳುನಾಡು ಭಾಗದಲ್ಲಿ ಭಾರೀ ಮಳೆಯಾದ ಕಾರಣದಿಂದ ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೂ ನೀರು ಹರಿದು ಬಂದಿದೆ.
ತಮಿಳುನಾಡಿನ ತಾಳವಾಡಿ, ದಿಂಬಂ, ಬೇಡಗುಳಿ ಭಾಗದಲ್ಲಿ ಮಳೆಯಾಗಿದೆ. ಇದರಿಂದ ಸುವರ್ಣಾವತಿ ಜಲಾಶಯಕ್ಕೆ ಒಂದು ಅಡಿ, ಚಿಕ್ಕಹೊಳೆಗೆ ಒಂದೂವರೆ ಅಡಿಯಷ್ಟು ನೀರು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭದ್ರಗೂ ಬಲ
ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆ ಗಡಿಯಲ್ಲಿರುವ ಭದ್ರಾ ಜಲಾಶಯಲ್ಲೂ ನೀರು ಬಂದಿದೆ. ಸೋಮವಾರ ಜಲಾಶಯಕ್ಕೆ ಅತಿ ಹೆಚ್ಚು ಅಂದರೆ 2199 ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು. ಜಲಾಶಯ ಕಳೆದ ಬಾರಿ ತುಂಬಿರಲಿಲ್ಲ.
ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯಕ್ಕೆ 732 ಕ್ಯೂಸೆಕ್ಸ್ ನೀರು ಹರಿದು ಬರತೊಡಗಿದೆ. ವಾರಾಹಿಗೆ 134 ಕ್ಯೂಸೆಕ್ಸ್ ಹಾಗೂ ಉತ್ತರ ಕನ್ನಡದ ಸೂಪಾ ಜಲಾಶಯಕ್ಕೆ 177 ಕ್ಯೂಸೆಕ್ಸ್ ನೀರು ಬರುತ್ತಿದೆ.
ಉತ್ತರ ಕರ್ನಾಟಕದಲ್ಲಿ ಕಡಿಮೆ
ಉತ್ತರ ಕರ್ನಾಟಕದ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಶೂನ್ಯ. ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ 2249 ಕ್ಯೂಸೆಕ್ಸ್ ನೀರು ಬರುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)