Karnataka Reservoirs: ಮತ್ತೆ ತುಂಬಿದ ತುಂಗಭದ್ರಾ ಜಲಾಶಯ, ನೀರು ಹರಿಸಲು ಸಿದ್ದತೆ, ಆಲಮಟ್ಟಿ, ಕೆಆರ್‌ಎಸ್‌ನಲ್ಲಿ ಒಳ ಹರಿವು ಇಳಿಕೆ
Karnataka Dam Level ಕರ್ನಾಟಕದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳ ಒಳ ಹರಿವು ಚೆನ್ನಾಗಿದೆ. ತುಂಗಭದ್ರಾ ಜಲಾಶಯ ಎರಡನೇ ಬಾರಿಗೆ ಭರ್ತಿಯಾಗಿದೆ.
ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಕ್ರಸ್ಟ್ ಗೇಟ್ ಮುರಿದು ಬಹುಪಾಲು ನೀರು ಹರಿದು ಹೋಗಿ ಅರ್ಧದಷ್ಟು ಖಾಲಿಯಾಗಿದ್ದ ತುಂಗಭದ್ರಾ ಜಲಾಶಯ ಬಹುತೇಕ ತುಂಬವ ಹಂತಕ್ಕೆ ಬಂದಿದೆ. ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ನೀರನ್ನು ಹರಿಸಲು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಅಣಿಯಾಗಿದ್ದಾರೆ. ಈಗಾಗಲೇ ತುಂಗಭದ್ರಾ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಮಲೆನಾಡಿನ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದಿಂದ ತುಂಗಭದ್ರಾ ಜಲಾಶಯಕ್ಕೆ ಈಗಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಾವೇರಿ ಕಣಿವೆಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಮಂಡ್ಯದ ಕೃಷ್ಣರಾಜಸಾಗರ, ಮೈಸೂರಿನ ಕಬಿನಿ ಜಲಾಶಯಗಳಿಗೆ ಒಳ ಹರಿವು ಕೊಂಚ ಕಡಿಮೆಯಾಗಿದೆ. ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣದಲ್ಲಿ ಭಾರೀ ಬದಲಾವಣೆ ಏನೂ ಆಗಿಲ್ಲ.
ತುಂಗಭದ್ರಾ ಜಲಾಶಯ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಆಗಸ್ಟ್ ಎರಡನೇ ವಾರದಲ್ಲಿ ಮುರಿದು ಭಾರೀ ಪ್ರಮಾಣದಲ್ಲ ನೀರನ್ನು ತುಂಗಭದ್ರಾ ನದಿ ಮೂಲಕ ಹೊರ ಬಿಡಬೇಕಾಯಿತು. ನೀರು ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗಿದ್ದರಿಂದ ಏನಾಗುವುದೋ ಎನ್ನುವ ಆತಂಕ ಇತ್ತಾದರೂ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಿದ್ದು, ಅಣೆಕಟ್ಟೆ ಮತ್ತೊಮ್ಮೆ ತುಂಬುವ ಹಂತಕ್ಕೆ ಬಂದಿದೆ.
ತುಂಗಭದ್ರಾ ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ. ಸದ್ಯ ನೀರಿನ ಮಟ್ಟ 1,630.13 ಅಡಿ ನೀರು ಜಲಾಶಯದಲ್ಲಿದೆ. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 94.55 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ 30 ಸಾವಿರ ಕ್ಯೂಸೆಕ್ ದಾಟಿದೆ. ಜಲಾಶಯದ ಹಿತದೃಷ್ಟಿ ಹಾಗೂ ರೈತ ಬೆಳೆಗಳಿಗೆ ನೀರನ್ನು ಹರಿಸಲಾಗುತ್ತಿದೆ.
ಯಾವುದೇ ಕ್ಷಣದಲ್ಲಿ ಅಣೆಕಟ್ಟೆಯಿಂದ ನೀರನ್ನು ನದಿಗೆ ಹರಿಸುವ ಸಾಧ್ಯತೆಯಿದ್ದು, ನದಿ ತೀರದ ನಿವಾಸಿಗಳು ಎಚ್ಚರವಹಿಸಬೇಕು ಎಂದು ತುಂಗಭದ್ರಾ ಮಂಡಳಿ ಶನಿವಾರವೇ ಪ್ರಕಟಣೆ ಹೊರಡಿಸಿ ನದಿ ಪಾತ್ರದ ಗ್ರಾಮಗಳ ಜನರಿಗೆ ಸೂಚನೆ ನೀಡಿದೆ.
‘ತುಂಗಾ ಮತ್ತು ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವ ಪರಿಣಾಮ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಜಲವಿದ್ಯುದಾಗಾರದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಮೂಲಕ 5 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುವುದು. ಒಳಹರಿವಿನ ಪ್ರಮಾಣ ಹೆಚ್ಚಾದಲ್ಲಿ ನದಿಗೆ ನೀರು ಹರಿಸುವ ಪ್ರಮಾಣವೂ ಹೆಚ್ಚಬಹುದು. ಭಾನುವಾರ ನೀರಿನ ಹೊರಹರಿವಿನ ಪ್ರಮಾಣದಲ್ಲಿ ಏರಿಕೆಯಾಗಬಹುದು ಎನ್ನುವುದು ಅಧಿಕಾರಿಗಳ ವಿವರಣೆ.
ಕೆಆರ್‌ಎಸ್ ಜಲಾಶಯ
ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಚೆನ್ನಾಗಿದೆ. ಭಾನುವಾರ ಕೊಂಚ ಇಳಿಕೆಯಾಗಿದ್ದರೂ 15220 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಾಣವೂ 15027 ಕ್ಯೂಸೆಕ್ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 124.36 ಅಡಿ ಇದೆ. ಜಲಾಶಯದಲ್ಲಿ 48.838 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ ಹಾಗೂ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ.
ಹೇಮಾವತಿ ಜಲಾಶಯ
ಹಾಸನದ ಹೇಮಾವತಿ ಜಲಾಶಯಕ್ಕೆ ಭಾನುವಾರ 7339 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 6175 ಕ್ಯೂಸೆಕ್ ನೀರನ್ನು ನಾಲೆಗಳಿಗೂ ಸೇರಿ ಹರಿ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2921.85 ಅಡಿಯಿದೆ. ಜಲಾಶಯದಲ್ಲಿ ಸದ್ಯ 36.958 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ2922 ಅಡಿ. ಹಾಗೂ ಸಂಗ್ರಹ ಸಾಮರ್ಥ್ಯ 37.10 ಟಿಎಂಸಿ.
ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆ ಆಲಮಟ್ಟಿ ಜಲಾಶಯಕ್ಕೆ ಭಾನುವಾರವೂ ಭಾರೀ ಪ್ರಮಾಣದಲ್ಲಿಯೇ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ 1,72,739 ಕ್ಯುಸೆಕ್ ಒಳ ಬರುತ್ತಿದ್ದು. ಹೊರಹರಿವು 1,76,652 ಕ್ಯುಸೆಕ್ ಇದೆ. ಜಲಾಶಯದಲ್ಲಿ ಸದ್ಯ 519.25 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ519.60 ಮೀಟರ್. ಇಂದಿನ ಮಟ್ಟ519.25 ಮೀಟರ್. ಜಲಾಶಯದ ಗರಿಷ್ಠ ಟಿಎಂಸಿ ಸಂಗ್ರಹ ಪ್ರಮಾಣ 123.081. ಇಂದಿನ ಸಂಗ್ರಹ ಪ್ರಮಾಣ 117.038 ಟಿಎಂಸಿ.