Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ-reservoir levels today september 9 alamatti krs harangi bhadra tungabhadra kabini supa hemavati reservoirs levels kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ

Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ

Karnatka Dam Levels ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಕೆಲವು ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಸಾಮಾನ್ಯವಾಗಿದೆ. ಆಲಮಟ್ಟಿಗೆ ಮಾತ್ರ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಕೇರಳದಲ್ಲಿ ಮಳೆ ಕಡಿಮೆಯಾಗಿ ಒಳ ಹರಿವು ತಗ್ಗಿದೆ.
ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಕೇರಳದಲ್ಲಿ ಮಳೆ ಕಡಿಮೆಯಾಗಿ ಒಳ ಹರಿವು ತಗ್ಗಿದೆ.

ಬೆಂಗಳೂರು: ಮಹಾರಾಷ್ಟ್ರ ಭಾಗದ ಜತೆಗೆ ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಭರ್ತಿಯಾಗಿರುವ ಆಲಮಟ್ಟಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಕೃಷ್ಣಾ ನದಿ ಮೂಲಕ ಹೊರಬಿಡಲಾಗುತ್ತಿದೆ. ಇದರಿಂದ ಯಾದಗಿರಿ ಜಿಲ್ಲೆ ನಾರಾಯಣ ಪುರ ಜಲಾಶಯಕ್ಕೂ ಭಾರೀ ನೀರು ಹರಿದು ಹೋಗುತ್ತಿದ್ದು, ಅಲ್ಲಿಂದಲೂ ನೀರನ್ನು ಹರಿಸಲಾಗುತ್ತಿದೆ. ಕಾವೇರಿ ಕಣಿವೆ ಭಾಗದಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದ್ದರಿಂದ ಜಲಾಶಯಗಳ ಒಳಹರಿವಿನ ಪ್ರಮಾಣವೂ ತಗ್ಗಿದೆ. ಅದೇ ರೀತಿ ಮಲೆನಾಡಿನ ಜಲಾಶಯಗಳಲ್ಲೂ ಒಳ ಹರಿವು ಕಡಿಮೆಯಾಗಿದೆ. ಆದರೆ ಕರ್ನಾಟಕದ ಬಹುತೇಕ ಜಲಾಶಯಗಳು ಈಗಾಗಲೇ ತುಂಬಿದ್ದು ಬರುತ್ತಿರುವ ನೀರನ್ನು ಅಷ್ಟೇ ಪ್ರಮಾಣದಲ್ಲಿ ಹೊರಕ್ಕೆ ಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿಯೇ ಸೋಮವಾರ ನೀರು ಹರಿದು ಬರುತ್ತಿದೆ.ಬೆಳಗಾವಿ ಮಳೆ ಹಾಗೂ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ತೀರದಲ್ಲಿ ಮಳೆಯಾಗಿದ್ದರಿಂದ ಹೆಚ್ಚಿನ ನೀರು ಜಲಾಶಯ ಸೇರುತ್ತಿದೆ.

ಸೋಮವಾರ ಬೆಳಿಗ್ಗೆ ಜಲಾಶಯಕ್ಕೆ 93,744 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ನದಿ ಹಾಗೂ ನಾಲೆಗಳು, ಕುಡಿಯುವ ನೀರು ಸೇರಿ ಒಟ್ಟು 1,01,638 ಕ್ಯೂಸೆಕ್‌ ನೀರನ್ನು ಹೊರಕ್ಕೆ ಹರಿ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 519.48 ಮೀಟರ್‌ ತಲುಪಿದ್ದು, ಜಲಾಶಯದಲ್ಲಿ ಸದ್ಯ 120.924 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, 519.60 ಮೀಟರ್‌ ಗರಿಷ್ಠ ಮಟ್ಟ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೂ ಒಳಹರಿವು ಕಡಿಮೆಯಾಗಿದೆ. ಸೋಮವಾರದಂದು ಜಲಾಶಯಕ್ಕೆ 9118 ನೀರು ಹರಿದು ಬರುತ್ತಿದೆ. ಜಲಾಶಯದಿಂದ 9069 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 124.44 ಅಡಿ ಇದೆ. ಜಲಾಶಯದಲ್ಲಿ ಈಗ 48.950 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಹಾಗೂ ಸಂಗ್ರಹ ಸಾಮರ್ಥ್ಯ49.452 ಟಿಎಂಸಿ.

ತುಂಗಭದ್ರಾ ಜಲಾಶಯ

ಮಲೆನಾಡು ಭಾಗದಲ್ಲಿ ಮಳೆಯಾಗಿರುವುದರಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಉತ್ತಮ ನೀರು ಬರುತ್ತಿದೆ. ಸೋಮವಾರದಂದು ಜಲಾಶಯಕ್ಕೆ 34,970 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 24,150 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ ಒಂದು ತಿಂಗಳಿನಿಂದ ನಿರಂತರವಾಗಿ 20,000 ರಿಂದ 40,000 ಕ್ಯೂಸೆಕ್‌ ನೀರು ಹರಿದು ಬರುತ್ತಿರುವುದರಿಂದ ತಾಂತ್ರಿಕ ಕಾರಣದಿಂದ ಕಡಿಮೆಯಾಗಿದ್ದ ನೀರು ಈಗ ಮತ್ತೆ ಭರ್ತಿಯಾಗಿದೆ.

ಕಬಿನಿ ಜಲಾಶಯ

ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದೆ. ಬಹುತೇಕ ಹದಿನೈದು ದಿನಗಳಿಂದ ಹೆಚ್ಚಿನ ಮಳೆಯಾಗದೇ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿಲ್ಲ. ಸದ್ಯ ಜಲಾಶಯಕ್ಕೆ 3975 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 3,850 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದಲ್ಲಿ 2283.46 ಅಡಿ ಹಾಗೂ 19.16 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಹಾಗೂ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ.

mysore-dasara_Entry_Point