ಪುತ್ತೂರಿನ ಪರ್ಲಡ್ಕದಲ್ಲಿ ಕಾರು ಪಲ್ಟಿ, ಮೂವರ ದುರ್ಮರಣ, ಪುತ್ತೂರು ಕ್ಷೇತ್ರದ ಪ್ರಥಮ ಶಾಸಕ ದಿವಂಗತ ಸುಬ್ಬಯ್ಯ ನಾಯ್ಕ್ ಸಂಬಂಧಿಕರು
Road Accident: ಪುತ್ತೂರು ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಸಮೀಪ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಪಲ್ಟಿಯಾಗಿ ಮೂವರು ದುರ್ಮರಣಕ್ಕೀಡಾದರು. ಮೃತರು ಪುತ್ತೂರು ಕ್ಷೇತ್ರದ ಪ್ರಥಮ ಶಾಸಕ ದಿವಂಗತ ಸುಬ್ಬಯ್ಯ ನಾಯ್ಕ್ ಸಂಬಂಧಿಕರು ಎಂದು ತಿಳಿದುಬಂದಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೇಂದ್ರದ ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್‌ನಲ್ಲಿ ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶನಿವಾರ ಬೆಳಗ್ಗೆ ದುರಂತ ನಡೆದಿದ್ದು, ಸುಳ್ಯ ಜಟ್ಟಿಪಳ್ಳದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಸುಳ್ಯ ಜಟ್ಟಿಪಳ್ಳದ ಅಣ್ಣು ನಾಯ್ಕ್, ಅವರ ಮಗ ಚಿದಾನಂದ ನಾಯ್ಕ್, ಅವರ ಬಂಧು ರಮೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂಜೆ ಮುಗಿಸಿ ಬರುತ್ತಿದ್ದಾಗ ಅಪಘಾತ
ಪರ್ಲಡ್ಕ ಜಂಕ್ಷನ್‌ನಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಸಾವನ್ನಪ್ಪಿದವರು ಪುಣಚದಲ್ಲಿ ಶುಕ್ರವಾರ ರಾತ್ರಿ ನಡೆದ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ. ಸುಳ್ಯ ಜಟ್ಟಿಪಳ್ಳ ಕಾನತ್ತಿನ ನಿವಾಸಿಗಳಾದ ನಿವೃತ್ತ ಪೋಸ್ಟ್ ಮಾಸ್ಟರ್ ಅಣ್ಣು ನಾಯ್ಕ, ಅವರ ಪುತ್ರ ಪ್ರಾವಿಡೆಂಟ್ ಫಂಡ್ ಅಕೌಂಟ್ ಆಫೀಸರ್ ಚಿದಾನಂದ ಹಾಗೂ ಸಂಬಂಧಿಕ ರಮೇಶ್ ನಾಯ್ಕ ಸಾವನ್ನಪ್ಪಿದವರು. ಇವರ ಸಂಬಂಧಿಕರ ಒಂದು ಕಾರು ಮುಂದೆ ಸಾಗಿತ್ತು. ಮೂವರು ಇದ್ದ ಕಾರು ಹಿಂದೆ ಇತ್ತು. ಪರ್ಲಡ್ಕ ಬಳಿ ಬೈಪಾಸ್ ರಸ್ತೆಗೆ ತಿರುಗಿ ಸ್ವಲ್ಪ ಮುಂದೆ ಸಾಗಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡಿತು. ಅಲ್ಲಿ ಗ್ಯಾರೇಜೊಂದರ ಹಿಂಬದಿ ಇದ್ದ ಆಳವಾದ ಪ್ರದೇಶಕ್ಕೆ ಉರುಳಿಬಿತ್ತು. ತೀವ್ರ ಗಾಯಗೊಂಡ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪುತ್ತೂರು ಕ್ಷೇತ್ರದ ಪ್ರಥಮ ಶಾಸಕ ದಿವಂಗತ ಸುಬ್ಬಯ್ಯ ನಾಯ್ಕ್ ಸಂಬಂಧಿಕರು
ಇವರು ಅವಿಭಜಿತ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿದ್ದ ಸುಬ್ಬಯ್ಯ ನಾಯ್ಕ್ ಅವರ ಸಂಬಂಧಿಕರು ಎನ್ನಲಾಗಿದೆ. ಪುಣಚದಲ್ಲಿ ಶುಕ್ರವಾರ ರಾತ್ರಿ ನಡೆದ ಗೋಂದೋಳು ಪೂಜೆ (ತುಳುನಾಡಿನಲ್ಲಿ ಮರಾಠಿ ನಾಯ್ಕ್ ಸಮುದಾಯದವರು ನಡೆಸುವ ವಿಶೇಷ ಪೂಜೆ) ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)