ಮಹಾ ಕುಂಭಮೇಳಕ್ಕೆ ಹೋಗಿದ್ದ ಕರ್ನಾಟಕ ವಾಹನ ಮಧ್ಯಪ್ರದೇಶದಲ್ಲಿ ಅಪಘಾತ; ಬೆಳಗಾವಿಯ ನಾಲ್ವರು ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ಮಹಾ ಕುಂಭಮೇಳ ಪ್ರವಾಸಕ್ಕೆಂದು ಹೋಗಿದ್ದ ಬೆಳಗಾವಿಯವರ ವಾಹನ ಮಧ್ಯಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿ ನಾಲ್ವರು ಮೃತಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ವಷಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ಪ್ರವಾಸಕ್ಕೆಂದು ಹೋಗಿದ್ದ ಕರ್ನಾಟಕದ ವಾಹನವೊಂದು ಮಧ್ಯಪ್ರದೇಶದ ಇಂದೋರ್ ಬಳಿ ರಸ್ತೆ ಅಪಘಾತಕ್ಕೀಡಾಗಿ ನಾಲ್ವರು ಬೆಳಗಾವಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಇದಲ್ಲದೇ ಬೈಕ್‌ನಲ್ಲಿ ಹೊರಟಿದ್ದ ಇಬ್ಬರೂ ಇದೇ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ಧಾರೆ. ಗಾಯಗೊಂಡಿರುವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಇಂದೋರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ನಾಲ್ವರು ಮೃತಪಟ್ಟ ದುರ್ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದು ಬೆಳಗಾವಿಯವರೇ ನಾಲ್ವರು ಅಸುನೀಗಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಚಿಕಿತ್ಸೆ ಬಳಿಕ ಬೆಳಗಾವಿಗೆ ಕಳುಹಿಸಲು ಸ್ಥಳೀಯಾಡಳಿತ ಸಿದ್ದತೆ ಮಾಡಿಕೊಂಡಿದೆ. ನಾಲ್ವರ ಮೃತ ದೇಹಗಳನ್ನೂ ಬೆಳಗಾವಿಗೆ ಕಳುಹಿಸಲಾಗುತ್ತಿದೆ.
ಮಧ್ಯಪ್ರದೇಶ ರಾಜ್ಯದ ಇಂದೋರ್ ಸಮೀಪದ ಮಾನ್‌ಪುರದಲ್ಲಿ ಬೆಳಗಾವಿ ಮೂಲದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಟ್ರಾವಲರ್ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ನಲ್ಲಿದ್ದವರು ಇಬ್ಬರು ಮೃತಪಟ್ಟರೆ, ಟೆಂಪೋದಲ್ಲಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದರು. 15 ಮಂದಿ ಗಾಯಗೊಂಡಿದ್ದು ಚಿಕಿತ್ಸೆ ನಡೆದಿದೆ.
ಪ್ರಯಾಣಿಕರು ಕರ್ನಾಟಕದ ಬೆಳಗಾವಿಯಿಂದ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು. ಈ ವೇಳೆ ಬೈಕ್ ಸವಾರರು ಅಡ್ಡ ಬಂದಿದ್ದು ಅವರ ಮೇಲೂ ಡಿಕ್ಕಿ ಹೊಡೆದು ನಂತರ ಟ್ಯಾಂಕರ್‌ಗೂ ಟಿಟಿ ಡಿಕ್ಕಿ ಹೊಡೆದಿದೆ. ಬಹುತೇಕರು ನಿದ್ರೆಯಲ್ಲಿದ್ದುದರಿಂದ ಅಪಘಾತ ಆಗಿರುವುದು ತಿಳಿದಿಲ್ಲ.ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಇಂದೋರ್‌ನ ಎಂವೈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 15 ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅವರಲ್ಲಿ 65 ವರ್ಷದ ಸಾಗರ್ ಮತ್ತು 50 ವರ್ಷದ ನೀತು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮಗುವನ್ನು ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಇತರರು ಮುರಿತಗಳು ಮತ್ತು ಗಾಯಗಳಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಮಾನ್‌ಪುರ ಪೊಲೀಸ್ ಠಾಣೆಯ ಎಸ್‌ಐ ರವಿ ಮೃತ ಬೈಕ್ ಸವಾರರನ್ನು ಧರಂಪುರಿಯ ಹಿಮಾಂಶು ಮತ್ತು ಸೇಂಧ್ವಾ ನಿವಾಸಿ ಶುಭಂ ಎಂದು ಗುರುತಿಸಿದ್ದು, ಇಬ್ಬರೂ ಅಪಘಾತದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತುಕಾರಾಂ ಅವರ ಪತ್ನಿ ಸವಿತಾ (40) ಎಂದು ಗುರುತಿಸಲಾಗಿದೆ. ಸುಭಾಷ್ ರೆನ್ (35); ಶೀತಲ್ ರಾಮಚಂದ್ರ (27); ರಾಮಚಂದ್ರ ಅವರ ಪುತ್ರ ತೀರತ್ (48); ಅಮರ್ ಎಂಬವರ ಪತ್ನಿ ಶ್ರುತಿ (32); ಭಾವ್ ಸಿಂಗ್ (36); ಶ್ರೀಕಾಂತ್ ಅವರ ಪುತ್ರ ಶಿವಸಿಂಗ್ (31); ಫಕೀರಾ ಅವರ ಪತ್ನಿ ಬಬಿತಾ (56); ರಾಜು (63); ಕೃಷ್ಣ ಅವರ ಪತ್ನಿ ಮಾಳವ (60); ಶ್ರೀಕಾಂತ್ ಅವರ ಪತ್ನಿ ಸುನೀತಾ (50); ಪ್ರಶಾಂತ್ (52); ಶಂಕರ್ (60); ಲತಾ (62); ಮತ್ತು ಬಂಗಲ್ ವಾಡಿಯಪ್ಪ (55) ಗಾಯಗೊಂಡವರು.
ಮಹಾ ಕುಂಭಮೇಳ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ಬರುವಾಗ ಪ್ರಮುಖ ಧಾರ್ಮಿಕ ತಾಣಗಳನ್ನು ಈ ತಂಡ ವೀಕ್ಷಿಸುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಗೊತ್ತಾಗಿದೆ.
ವಿಷಯ ತಿಳಿದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮಧ್ಯಪ್ರದೇಶದ ಅಧಿಕಾರಿಗಳ ಜತೆ ಮಾತನಾಡಿದರು. ಬೆಳಗಾವಿ ಡಿಸಿ ಹಾಗೂ ಇತರೆ ಅಧಿಕಾರಿಗಳು ಕೂಡ ಸಂಪರ್ಕದಲ್ಲಿದ್ದಾರೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಾಯಾಳುಗಳ ಸಂಬಂಧಿಕರು ಕೂಡ ಆತಂಕಕ್ಕೆ ಒಳಗಾಗಿದ್ದರು. ಕೆಲವರು ಮಧ್ಯಪ್ರದೇಶಕ್ಕೆ ತಮ್ಮವರನ್ನು ಕರೆದೊಯ್ಯಲು ತೆರಳಿದ್ದಾರೆ ಎನ್ನಲಾಗಿದೆ.
ನೆರವಿಗೆ ಬಂದ ಸಚಿವೆ ಪುತ್ರ
ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಯ ನಾಲ್ವರು ಅಪಘಾತಕ್ಕೆ ಬಲಿಯಾಗಿರುವ ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸೂಚನೆ ಮೇರೆಗೆ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಗಣೇಶಪುರಕ್ಕೆ ಧಾವಿಸಿ ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಮೃತದೇಹಗಳನ್ನು ತರುವುದು ಸೇರಿದಂತೆ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವದಾಗಿ ಭರವಸೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸುಮಾರು 50 ಜನ ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಈ ಪೈಕಿ ಒಂದು ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಹಿಳೆಯರು ಸ್ಥಳದಲ್ಲೆ ಸಾವನ್ನಪ್ಪಿದ್ದು, 16 ಮಂದಿಗೆ ಗಾಯಗಳಾಗಿವೆ. ಸ್ಥಳೀಯರ ಮೂಲಕ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ವಿಷಯ ತಿಳಿಯಿತು. ಇದೀಗ ಸಚಿವರ ಸೂಚನೆಗೆ ಮೇರೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿರುವೆ ಎಂದು ಮೃಣಾಲ್ ಹೆಬ್ಬಾಳಕರ್ ಹೇಳಿದರು.
ಮಧ್ಯಪ್ರದೇಶದ ಇಂಧೋರ್ ಆಸ್ಪತ್ರೆಯಲ್ಲಿ ಮೃತದೇಹಗಳಿದ್ದು, ಬೆಳಗಾವಿಗೆ ಮೃತದೇಹಗಳನ್ನು ತರುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ನಮಗೆ ಆದೇಶ ಮಾಡಿದ್ದಾರೆ. ಕುಟುಂಬಸ್ಥರು, ಬೆಳಗಾವಿ ಜಿಲ್ಲಾಡಳಿತ ಹಾಗೂ ಇಂದೋರ್ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಮೃತ ದೇಹಗಳನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಒಂದು ಮೃತ ದೇಹವನ್ನು ಇಂದೋರ್‌ನಿಂದ ಬೆಳಗಾವಿಗೆ ತರಲು ಸುಮಾರು 95 ಸಾವಿರ ರೂಪಾಯಿ ಖರ್ಚಾಗಲಿದೆ. ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ನೆರವು ನೀಡಲಾಗುವುದು ಎಂದು ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಹೇಳಿದರು.
