6 ತಿಂಗಳು ವೆಬ್ ಸೀರೀಸ್ ನೋಡಿ ಬ್ಯಾಂಕ್ ದರೋಡೆಗೆ ಪ್ಲಾನ್: ಬ್ಯಾಂಕ್ ಮ್ಯಾನೇಜರ್‌ಗೆ ಬುದ್ಧಿ ಕಲಿಸಲು ಹೋಗಿ ತಾವೇ ಸಿಕ್ಕಿಬಿದ್ದ ಕಳ್ಳರು
6 ತಿಂಗಳು ವೆಬ್ ಸೀರೀಸ್ ನೋಡಿ ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿದ ಕಳ್ಳರು ಈಗ ಪೊಲೀಸರ ಪಾಲು. ನ್ಯಾಮತಿ ಶಾಖೆಯಿಂದ 13 ಕೋಟಿ ರೂಪಾಯಿ ಮೌಲ್ಯದ ಸುಮಾರು 17 ಕೆಜಿ ಚಿನ್ನದ ದರೋಡೆ ಮಾಡಿದ ಪ್ರಕರಣದ ಹಿಂದಿನ ಕಥೆ ಇಲ್ಲಿದೆ ಓದಿ.

ದಾವಣಗೆರೆ: ಅಕ್ಟೋಬರ್ 26, 2024 ರಂದು ದಾವಣಗೆರೆ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನ್ಯಾಮತಿ ಶಾಖೆಯಿಂದ 13 ಕೋಟಿ ರೂಪಾಯಿ ಮೌಲ್ಯದ ಸುಮಾರು 17 ಕೆಜಿ ಚಿನ್ನದ ದರೋಡೆ ಮಾಡಿದ ಪ್ರಕರಣ ನಡೆದಿತ್ತು. ಅದಾದ ಕೆಲ ತಿಂಗಳ ನಂತರ ಪೊಲೀಸರು ದರೋಡೆ ಮಾಡಿದ ಚಿನ್ನ ಮತ್ತು ದರೋಡೆಕೋರರನ್ನು ಒಟ್ಟಾಗಿ ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಮುಖ ಆರೋಪಿಗಳ ಹೆಸರಿನ ಪಟ್ಟಿಯನ್ನೂ ನೀಡಿದ್ದಾರೆ. ನ್ಯಾಮತಿ ಮೂಲದ 28 ವರ್ಷದ ಅಜಯ್‌ಕುಮಾರ್ ಮತ್ತು ಆತನ ನಾಲ್ವರು ಸಹಚರರನ್ನು ಈಗಾಗಲೇ ಬಂಧಿಸಿದ್ದಾರೆ.
ದರೋಡೆಯ ಉದ್ದೇಶವೇನು?
ದರೋಡೆಯ ಹಿಂದಿನ ಪ್ರಮುಖ ಉದ್ದೇಶ ಸಾಲ ನಿರಾಕರಣೆ . ಹೌದು, ನ್ಯಾಮತಿ ತಾಲೂಕಿನ ಸುರಹೋನ್ನಿ ಗ್ರಾಮದ ನಿವಾಸಿಗಳಾದ ವಿಜಯ್‌ಕುಮಾರ್ (ತಮಿಳುನಾಡಿನವರು), ಚಂದ್ರು, ಮಂಜುನಾಥ್ ಮತ್ತು ಅಭಿಷೇಕ್ ಬಂಧಿತ ಇತರರಾಗಿದ್ದಾರೆ. ತಮಿಳುನಾಡು ಮೂಲದ ಅಜಯ್‌ಕುಮಾರ್ ತಮ್ಮ ಬೇಕರಿ ವ್ಯವಹಾರಕ್ಕಾಗಿ ಎಸ್‌ಬಿಐನ ನ್ಯಾಮತಿ ಶಾಖೆಯಿಂದ ಸಾಲ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದೆ. ಈ ಕಾರಣಕ್ಕಾಗಿ ಅವರು ಬ್ಯಾಂಕ್‌ನಲ್ಲಿದ್ದ ಚಿನ್ನಾಭರಣ ಕಳುವು ಮಾಡಿದ್ದಾರೆ. ಕಳುವು ಮಾಡಿದ ಬಂಗಾರವನ್ನು ಬಾವಿಯಲ್ಲಿ ಬಚ್ಚಿಟ್ಟಿದ್ದರು
ಬ್ಯಾಂಕ್ ಅಧಿಕಾರಿಗಳಿಗೆ 60,000 ರೂ. ಲಂಚ ನೀಡಿದ್ದರೂ, ಅವರ ಸಾಲದ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಮಾಡಿದರೂ ಸಾಲ ಸಿಗುವುದಿಲ್ಲ ಎಂದಾಗ ಸಂಕಷ್ಟ ಎದುರಾಗಿ ಕಳುವು ಮಾಡಲು ಮುಂದಾಗಿದ್ದಾರೆ. ನಂತರ, ಅಜಯ್‌ಕುಮಾರ್ ಪರಮಾನಂದ್, ಅಭಿಷೇಕ್, ಚಂದ್ರು ಮತ್ತು ಮಂಜುನಾಥ್ ಎಲ್ಲರೂ ಒಟ್ಟಾಗಿ ಎಸ್‌ಬಿಐ ಶಾಖೆಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು. ಈ ತಂಡ ಕಳುವು ಮಾಡುವುದಕ್ಕಿಂತಲೂ ಮೊದಲು ಹಲವು ಉಪಾಯಗಳನ್ನು ಮಾಡಿದೆ.
ವೆಬ್ ಸರಣಿ ನೋಡಿ ಮಾಡಿದ ಭರ್ಜರಿ ಪ್ಲಾನ್
ಕ್ರೈಂ ಥ್ರಿಲ್ಲರ್ ವೆಬ್ ಸರಣಿಗಳನ್ನು ನೋಡಿದ್ದಾರಂತೆ. ಬರಿ ಸರಣಿಗಳನ್ನು ನೋಡುವು ಮಾತ್ರವಲ್ಲದೆ ಆ ಕುರಿತು ಅಧ್ಯಯನ ಮಾಡಿ ಸಾಕಷ್ಟು ವಿಡಿಯೋಗಳನ್ನು ವೀಕ್ಷಿಸಿ ಎಲ್ಲ ತಯಾರಿ ಮಾಡಿಕೊಂಡು ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅವರು ಅಕ್ಟೋಬರ್ 26, 2024 ರಂದು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ, ಅಕ್ಟೋಬರ್ 26 ಮತ್ತು 27 ರಂದು ರಜಾದಿನ ಇರುವ ಕಾರಣ ಉದ್ದೇಶಪೂರ್ವಕವಾಗಿ ಅದೇ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಮನಿ ಹೀಸ್ಟ್ ವೆಬ್ ಸರಣಿ ನೋಡಿ ಉಪಾಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಕ್ರಾಲಾ ಗ್ಯಾಂಗ್ ಬಂಧನ
ಉತ್ತರ ಪ್ರದೇಶದ ಕಕ್ರಾಲಾ ಗ್ಯಾಂಗ್ ಸದಸ್ಯರು 2014 ಮತ್ತು 2024 ರ ನಡುವೆ ಕರ್ನಾಟಕದಲ್ಲಿ ಹಲವಾರು ಆಸ್ತಿ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದರು. ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ 2022 ರ ನವೆಂಬರ್‌ನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಹೊಸಹಳ್ಳಿ ಶಾಖೆಯಿಂದ 15 ಕೆಜಿ ಚಿನ್ನ ದರೋಡೆ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ಬೇವೂರು ಶಾಖೆಯಿಂದ 4 ಕೆಜಿ ಚಿನ್ನ ದರೋಡೆ ಮಾಡಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 2024 ರಿಂದ ಫೆಬ್ರವರಿ 2024 ರವರೆಗೆ, ತನಿಖಾ ತಂಡಗಳು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ, ಮುಖ್ಯವಾಗಿ ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ಈ ಗ್ಯಾಂಗ್ ಸದಸ್ಯರನ್ನು ಬಂಧಿಸಲು ಪ್ರಯತ್ನಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಗಳ ಮಾಹಿತಿಯ ಆಧಾರದ ಮೇಲೆ, ಈ ತಿಂಗಳ ಆರಂಭದಲ್ಲಿ ಕಾಕ್ರಾಲಾ ಗ್ಯಾಂಗ್‌ನ ಐದು ಸದಸ್ಯರನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

