ದರೋಡೆ ಪ್ರಕರಣಗಳು ಕಡಿಮೆಯಾಗಿವೆ ನಿಜ! ಆದರೆ, ದೇವಾಲಯಗಳಲ್ಲಿ ನಡೆಯುತ್ತಿರುವ ಕಳವು ಮಾತ್ರ ಕಡಿಮೆಯಾಗಿಲ್ಲ, ವರ್ಷದಲ್ಲಿ 342 ಕೇಸ್
ದರೋಡೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದೇನೋ ನಿಜ! ಆದರೆ, ದೇವಾಲಯಗಳಲ್ಲಿ ನಡೆಯುತ್ತಿರುವ ಕಳವು ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ 342 ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ದೇವಸ್ಥಾನಗಳ ಹುಂಡಿಗೆ ಹಾಕುವ ಹಣ ದೇವರಿಗೆ ಕೊಡುವ ಕೊಡುಗೆ ಎಂದು ಭಾವಿಸಲಾಗುತ್ತದೆ. ಆ ಹಣವನ್ನು ಹಿಂಪಡೆಯುವ ಪದ್ದತಿ ಇರುವುದಿಲ್ಲ. ರಾಜ್ಯದಲ್ಲಿ ದರೋಡೆ ಪ್ರಕರಣಗಳು ಇಳಿಮುಖವಾಗಿದ್ದರೂ ದೇವಾಲಯಗಳಲ್ಲಿ ಹಗಲಿನಲ್ಲೇ ನಡೆಯುವ ದರೋಡೆ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ಹುಂಡಿ ಹಣವನ್ನು ಕದಿಯಬಾರದು ಎಂಬ ನೀತಿ ಕಳ್ಳರಿಗೆ ಅನ್ವಯವಲ್ಲ.!
ದರೋಡೆ ಪ್ರಕರಣ ಕಡಿಮೆಯಾಗಿವೆ ನಿಜ!
ಹೌದು, ಪೊಲೀಸ್ ಇಲಾಖೆಗಳ ಮಾಹಿತಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ದರೋಡೆ ಪ್ರಕರಣಗಳು ಶೇ. 73 ರಷ್ಟು ಕಡಿಮೆಯಾಗಿವೆ. ಸರಗಳ್ಳತನ ಪ್ರಕರಣಗಳು ಶೇ. 57ರಷ್ಟು ಕಡಿಮೆಯಾಗಿವೆ. ರಾತ್ರಿಯಲ್ಲಿ ನಡೆಯುವ ದರೋಡೆ ಪ್ರಕರಣಗಳೂ ಶೇ. 41 ರಷ್ಟು ಇಳಿಮುಖವಾಗಿವೆ. ಆದರೆ ಹಗಲಿನಲ್ಲಿ ನಡೆಯುವ ದರೋಡೆ ಪ್ರಕರಣಗಳು ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಳವಾಗಿವೆ. ರಾಜ್ಯಾದ್ಯಂತ ದೇವಾಲಯಗಳಲ್ಲಿ ನಡೆಯುವ ಕಳ್ಳತನಗಳು ವರದಿಯಾಗದ ದಿನವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ಕಡೆ ದೇವಸ್ಥಾನದಲ್ಲಿ ಕಳ್ಳತನ ನಡೆಯುತ್ತಲೇ ಇರುತ್ತದೆ.
ಆದರೆ, ದೇವಾಲಯಗಳಲ್ಲಿ ಕಳವು ಪ್ರಕರಣ ಮಾತ್ರ ಕಡಿಮೆಯಾಗಿಲ್ಲ
ಕರ್ನಾಟಕದಲ್ಲಿ 2024ರಲ್ಲಿ 342 ಕಳವು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಹಗಲಿನಲ್ಲಿ 23 ಪ್ರಕರಣ ದಾಖಲಾಗಿವೆ. 2023 ರಲ್ಲಿ 385 ರಾತ್ರಿ ಮತ್ತು 24 ಹಗಲಿನಲ್ಲಿ ನಡೆದ ಪ್ರಕರಣಗಳು ಸೇರಿ ಒಟ್ಟು 409 ಕಳ್ಳತನದ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷದಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡುವುದು ಕಡಿಮೆಯಾಗಿದೆ.
ನಗರ ಪ್ರದೇಶಗಳಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಸರ್ವೇ ಸಾಮಾನ್ಯ. ಏಕೆಂದರೆ ನಗರ ಪ್ರದೇಶಗಳಲ್ಲಿ ಭಕ್ತರು ನೋಟುಗಳನ್ನು ಹುಂಡಿಗೆ ಹಾಕಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕಾಯಿನ್ ಗಳನ್ನು ಮಾತ್ರ ಹಾಕುತ್ತಾರೆ. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಕಡಿಮೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಅನುಭವದ ಮಾತನ್ನು ಹೇಳುತ್ತಾರೆ.
ದೇವಾಲಯಗಳಲ್ಲಿ ಕಳ್ಳತನಕ್ಕೆ ಕಳ್ಳರು ಅನುಸರಿಸುವ ಮಾದರಿ
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಕಳ್ಳತನ ಮಾಡುವವರು ಒಂದೇ ಮಾದರಿಯನ್ನು ಅನುಸರಿಸುತ್ತಾರೆ. ದೇವಾಲಯಗಳಿಗೆ ಭಕ್ತರಂತೆ ಪ್ರವೇಶಿಸಿ ಎಲ್ಲೆಲ್ಲಿ ಸಿಸಿಟಿವಿಗಳಿವೆ ಮತ್ತು ಯಾವ ಸ್ಥಳದಲ್ಲಿ ಹುಂಡಿಯನ್ನಿಟ್ಟಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮತ್ತೆ ಸಂಜೆ ಆಗಮಿಸಿ ಅಲ್ಲಿನ ಭದ್ರತೆಯನ್ನು ಅವಲೋಕಿಸುತ್ತಾರೆ. ಯಾವ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇರುತ್ತದೆ ಎನ್ನುವುದನ್ನು ನೋಡಿಕೊಂಡು ಕಳ್ಳತನಕ್ಕಿಳಿಯುತ್ತಾರೆ. ಭಕ್ತರಿಗೆ ಅನುಕೂಲವಾಗಲಿ ಎಂದು ಸಾಮಾನ್ಯವಾಗಿ ಹುಂಡಿಗಳನ್ನು ಮುಕ್ತವಾದ ಸ್ಥಳಗಳಲ್ಲಿ ಇರಿಸಿರುತ್ತಾರೆ. ಈ ಹುಂಡಿಗಳಿಗೆ ಭದ್ರವಾದ ಬೀಗಗಳನ್ನು ಹಾಕಿರುವುದಿಲ್ಲ. ಹಾಗಾಗಿ ಸುಲಭವಾಗಿ ಒಡೆದು ಹುಂಡಿಗಳಲ್ಲಿರುವ ನಗದು ಮತ್ತು ಚಿನ್ನಾಭರಣಗಳನ್ನು ದೋಚುತ್ತಾರೆ.
ಫೆಬ್ರವರಿಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಕಣಿಯಾರ ಕಾಲನಿಯ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಬಾಲಕರನ್ನು ಬಂಧಿಸಲಾಗಿತ್ತು. ಇವರು ದೇವಸ್ಥಾನದ ಹೊರಗೆ ಇಟ್ಟಿದ್ದ ಹುಂಡಿಯನ್ನು ಕಳವು ಮಾಡಿದ್ದರು. ಈ ಪ್ರಕರಣವನ್ನು ಬೇದಿಸಲು ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಹುಂಡಿಯ ಜತೆಗೆ 2.39 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳು, 90 ಸಾವಿರ ರೂ. ಬೆಲೆ ಬಾಳುವ ಆಟೋರಿಕ್ಷಾವನ್ನೂ ಕದ್ದಿದ್ದರು. ಈ ಬಾಲಕರು ಸುಮಾರು ಎಂಟು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಮತ್ತೊಂದು ಹಗಲು ದರೋಡೆ ಪ್ರಕರಣದಲ್ಲಿ ಕಾರು ಚಾಲಕನೊಬ್ಬ ರೂ. 1.51 ಕೋಟಿ ರೂ. ಹಣವಿದ್ದ ಬ್ಯಾಗ್ ಅಪಹರಿಸಿದ್ದ. ಈ ಹಣದಲ್ಲಿ ಆತ ತೀರ್ಥಯಾತ್ರೆ ಕೈಗೊಂಡು 1 ಲಕ್ಷ ರೂ ಖರ್ಚು ಮಾಡಿದ್ದ. ಚಾರ್ಟೆಡ್ ಅಕೌಂಟೆಂಟ್ ಒಬ್ಬರು ಈ ಹಣವಿದ್ದ ಬ್ಯಾಗ್ ಅನ್ನು ಕಾರಿನಲ್ಲಿಡುವಂತೆ ಚಾಲಕನಿಗೆ ನೀಡಿದ್ದರು. ಆತ ಹಣದ ಬ್ಯಾಗ್ ಸಹಿತ ಪರಾರಿಯಾಗಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಅರೋಪಿಯನ್ನು ಬಂಧಿಸಿದ್ದರು. ಆತ ಒಂದಿಷ್ಟು ಹಣವನ್ನು ದೇವಾಲಯದ ಹುಂಡಿಗೆ ಅರ್ಪಿಸಿದ್ದ.
(ವರದಿ- ಎಚ್. ಮಾರುತಿ, ಬೆಂಗಳೂರು)