ಡಿ 9ರಿಂದ ಬೆಳಗಾವಿ ಅಧಿವೇಶನ; ಊಟ, ವಸತಿ, ಸಾರಿಗೆಗಾಗಿ ಕೋಟಿ ಕೋಟಿ ವೆಚ್ಚ, ಜಿಲ್ಲಾಡಳಿತ ಅಂದಾಜು ಪಟ್ಟಿ ನೋಡಿದರೆ ತಲೆ ತಿರುಗುತ್ತೆ!
ಡಿಸೆಂಬರ್ 9ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ 13 ಕೋಟಿ ರೂ ಅಂದಾಜುಪಟ್ಟಿಯನ್ನು ಜಿಲ್ಲಾಡಳಿತ ಸಲ್ಲಿಸಿದೆ. ಊಟ ವಸತಿ ಸಾರಿಗೆಗಾಗಿಯೇ ಬಹುತೇಕ ವೆಚ್ಚ ಖರ್ಚಾಗಲಿದೆ. (ವರದಿ-ಎಚ್ ಮಾರುತಿ)
ಬೆಂಗಳೂರು: ಪ್ರತಿ ವರ್ಷ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಡಿಸೆಂಬರ್ನಲ್ಲಿ 10 ದಿನಗಳ ಕಾಲ ನಡೆಯುತ್ತದೆ. ಈ ಅಧಿವೇಶನಕ್ಕಾಗಿ ಇಡೀ ವಿಧಾನಸೌಧ ಕುಂದಾನಗರಿ ಬೆಳಗಾವಿಗೆ ಶಿಫ್ಟ್ ಆಗುತ್ತದೆ. ಅಧಿವೇಶನ ನಡೆಸಲಿಕ್ಕಾಗಿಯೇ ಪ್ರತಿವರ್ಷ ಸರ್ಕಾರ 10-15 ಕೋಟಿ ರೂ.ವರೆಗೆ ವೆಚ್ಚ ಮಾಡುತ್ತದೆ. ಬಹುತೇಕ ದಿನವೊಂದಕ್ಕೆ ಅಂದಾಜು 1 ಕೋಟಿ ರೂ. ಮೀರಿ ಖರ್ಚು ಮಾಡುತ್ತದೆ. ಇದು ಜಿಲ್ಲಾಡಳಿತ ಮಾಡುವ ವೆಚ್ಚ ಮಾತ್ರ. ಸಚಿವರು ಶಾಸಕರ ಭತ್ಯೆ ಇತ್ಯಾದಿ ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ. ಇದು ಸದುಪಯೋಗ ಆಗಲಿದೆಯೇ ಎಂದು ಕೊನೆಯಲ್ಲಿ ನೋಡೋಣ.
ಡಿಸೆಂಬರ್ 9ರಿಂದ 20ರವರೆಗೆ ನಡೆಯುವ ಅಧಿವೇಶನಕ್ಕೆ 13.2 ಕೋಟಿ ರೂ ವೆಚ್ಚದ ಅಂದಾಜು ಪಟ್ಟಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಸಚಿವರು, ಶಾಸಕರು, ಅಧಿಕಾರಿಗಳ ವಸತಿ, ಊಟ ಎಲ್ಲವೂ ಸೇರಿರುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಸುವರ್ಣಸೌಧದ ಎದುರು ಪ್ರತಿದಿನ ಹತ್ತಾರು ಪ್ರತಿಭಟನೆಗಳು ನಡೆಯುತ್ತವೆ. ರೈತ, ದಲಿತ, ಅಂಗನವಾಡಿ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಬೇಡಿಕೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ ನಡೆಸುತ್ತಾರೆ.
ಬಾಡಿಗೆಗೆ 8.5 ಲಕ್ಷ ರೂಪಾಯಿ
ಈ ಪ್ರತಿಭಟನೆಗಳನ್ನು ನಡೆಸಲು ಸುವರ್ಣಸೌಧದ ಎದುರು ಇರುವ ಜಾಗವನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಇದಕ್ಕಾಗಿ ಜಿಲ್ಲಾಳಿತ ಸರ್ಕಾರ 8.5 ಲಕ್ಷ ರೂ ಭರಿಸುತ್ತದೆ. ಹತ್ತು ದಿನಗಳ ಅಧಿವೇಶನಕ್ಕೆ ಇಡೀ ಬೆಳಗಾವಿಯ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್, ಮತ್ತು ಅತಿಥಿ ಗೃಹಗಳನ್ನು ಬಾಡಿಗೆಗೆಗ ಪಡೆಯುತ್ತದೆ. ಸಮೀಪದ ಹುಬ್ಬಳ್ಳಿಯಲ್ಲಿರುವ ಹೋಟೆಲ್ ಗಳನ್ನೂ ಬಾಡಿಗೆಗ ಪಡೆಯಲಾಗುತ್ತದೆ. ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸಭಾಧ್ಯಕ್ಷರು ಮತ್ತು ಇತರ ಹಿರಿಯ ಅಧಿಕಾರಿಗಳು ಉಳಿದುಕೊಳ್ಳಲಿದ್ದಾರೆ.
ಪ್ರತಿದಿನ ಸಭಾಧ್ಯಕ್ಷರು ಸಭೆಗಳನ್ನು ನಡೆಸುತ್ತಲೇ ಇದ್ದಾರೆ. ಮುಖ್ಯಮಂತ್ರಿಗಳು ಉಳಿದುಕೊಳ್ಳುವ ಹೋಟೆಲ್ ನಲ್ಲಿಯೂ ಸಭೆಗಳು ನಡೆಯುತ್ತಲೇ ಇರುತ್ತವೆ. ಈ ಸಭೆಗಳು ಮತ್ತು ಸದನ ಸಮಿತಿಗಳ ಸಭೆಗಳಲ್ಲಿ ಸರಬರಾಜು ಮಾಡುವ ಊಟ ತಿಂಡಿಗೆ ಸಾಕಷ್ಟು ವೆಚ್ಚ ಮಾಡಲಾಗುತ್ತದೆ. ಸಿಬ್ಬಂದಿ ಮತ್ತು ಚಾಲಕರು ಮತ್ತು ಇತರ ಅಧಿಕಾರಿಗಳ ಊಟ ವಸತಿಗೆ 2.80 ಕೋಟಿ ರೂ ಅಂದಾಜುಪಟ್ಟಿ ಸಲ್ಲಿಸಿದೆ. ಗಣ್ಯರು ಉಳಿದುಕೊಳ್ಳುವ ಹೋಟೆಲ್ ಮತ್ತು ವಸತಿಗೃಹಗಳಲ್ಲಿ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು 44 ಲಕ್ಷ ರೂ. ವೆಚ್ಚ ಮಾಡಲಿದೆ.
ವಾಹನಗಳ ಇಂಧನಕ್ಕೆ 44 ಲಕ್ಷ
ವಾಹನಗಳ ಇಂಧನಕ್ಕೆ 44 ಲಕ್ಷ ರೂ ಖರ್ಚಾಗಲಿದೆ. ಅಧಿವೇಶನದ ಸಂದರ್ಭದಲ್ಲಿ ತುರ್ತು ಬಳಕೆಗಾಗಿ ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಲು 25 ಲಕ್ಷ ರೂ, ಚಾಲಕರ ವಸತಿಗಾಗಿ 20 ಲಕ್ಷ ರೂ, ಕಟ್ಟಡಗಳ ಅಲಂಕಾರಕ್ಕಾಗಿ 15 ಲಕ್ಷ ರೂ. ವೆಚ್ಚವಾಗಲಿದೆ. ಸ್ವಚ್ಚತೆ, ಬಿಸಿನೀರು, ಸ್ಟೇಷನರಿ ಮತ್ತಿತರ ವೆಚ್ಚಗಳಿಗಾಗಿ 25 ಲಕ್ಷ ರೂ ಬಳಕೆ ಮಾಡಲಿದೆ. ಸುವರ್ಣಸೌಧದ ಎದುರು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 15 ಲಕ್ಷ ರೂ, ಅಧಿವೇಶನದ ಮಾಹಿತಿ ಮತ್ತು ಗುರುತಿನ ಚೀಟಿಗಳ ಮುದ್ರಣಕ್ಕೆ 4 ಲಕ್ಷ ರೂ. ನಿಗದಿ ಮಾಡಲಾಗಿದೆ.
ಅಧಿವೇಶನಕ್ಕೆ ಇನ್ನೂ ಕೆಲವು ದಿನಗಳಿದ್ದು ವೆಚ್ಚವನ್ನು ಕಡಿಮೆ ಮಾಡಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಹಮ್ಮದ್ ರೋಶನ್ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕು ಮತ್ತು ಅಭಿವೃದ್ಧಿಯ ವೇಗ ಹೆಚ್ಚಿಸಬೇಕು ಎಂದು ಕಳೆದ 15 ವರ್ಷಗಳಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದಕಾಗಿ ಕೋಟಿ ಕೋಟಿ ರೂ ವೆಚ್ಚ ಮಾಡಿದೆ. ಆದರೆ ಉತ್ತರ ಕರ್ನಾಟಕ ಕುರಿತು ಚರ್ಚೆ ನಡೆದಿದ್ದು ಕಡಿಮೆಯೇ. ಇದಕ್ಕೆ ಎಲ್ಲ ಆಡಳಿತ ಮತ್ತು ಪ್ರತಿಪಕ್ಷಗಳೂ ಸಮಾನ ಹೊಣೆಯನ್ನು ಹೊರಬೇಕು. ಯಾವುದೇ ಪಕ್ಷದ ಸರ್ಕಾರವೂ ಅಧಿವೇಶನವೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.