ಕನ್ನಡ ಸುದ್ದಿ  /  Karnataka  /  Rss Is Reason For My Growth Hd Deve Gowda Is A Role Model Says Bs Yediyurappa

BS Yediyurappa on RSS: ಉನ್ನತ ಸ್ಥಾನಕ್ಕೇರಲು ಆರ್‌ಎಸ್‌ಎಸ್ ಕಾರಣ; ಹೆಚ್ ಡಿ ದೇವೇಗೌಡರೇ ಆದರ್ಶ: ಮಾಜಿ ಸಿಎಂ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ್ದು, ಪ್ರಧಾನಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಮಗೆ ಆದರ್ಶ ಎಂದಿದ್ದು, ಆರ್ ಎಸ್ಎಸ್ ಅನ್ನು ಸ್ಮರಿಸಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ವಿದಾಯದ ಭಾಷಣ ಬಳಿಕ ವಿಧಾನಸೌಧದ ಮುಂದೆ ಗೆಲುವಿನ ಕೈಬೀಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (PTI Photo)
ವಿಧಾನಸಭೆ ಕಲಾಪದಲ್ಲಿ ವಿದಾಯದ ಭಾಷಣ ಬಳಿಕ ವಿಧಾನಸೌಧದ ಮುಂದೆ ಗೆಲುವಿನ ಕೈಬೀಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (PTI Photo)

ಬೆಂಗಳೂರು: ಆರ್‌ಎಸ್‌ಎಸ್ ನಲ್ಲಿ ಸಿಕ್ಕಂತ ತರಬೇತಿ, ಅವಕಾಶಗಳಿಂದ ನಾನು ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ದೊಡ್ಡ ಸ್ಥಾನಕ್ಕೇರಲು ಸಾಧ್ಯವಾಯಿತು. ನಾನು ಇವತ್ತು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ, ನಿಲ್ಲಬೇಕಾದರೆ ರಾಷ್ಟ್ರೀಯ ಸ್ವಯಂ ಸೇವಾ ಸಂಘವೇ ಕಾರಣ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.

ವಿಧಾನಸಭೆಯ 15ನೇ ಅಧಿವೇಶನದಲ್ಲಿ ತಮ್ಮ ಕೊನೆಯ ಭಾಷಣ ಮಾಡಿದ ಅವರು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಶ್ಲಾಘಿಸಿದರು. ಹೆಚ್ ಡಿ ದೇವೇಗೌಡರು "ರೋಲ್ ಮಾಡೆಲ್" ಎಂದು ಕರೆದಿದ್ದಾರೆ. ಅಲ್ಲದೆ, ವಿಧಾನಸಭೆಯಲ್ಲಿ ಹೆಚ್ಚಿನ ಮಹಿಳಾ ಪ್ರಾತಿನಿಧ್ಯಕ್ಕಾಗಿ ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಹೆಚ್ಚು ಮಹಿಳೆಯರು ಚುನಾಯಿತರಾಗಿ ಈ ಸದನಕ್ಕೆ ಬರಬೇಕು. ಪುರುಷ ಸದಸ್ಯರು ಸಹ ಸಹಕರಿಸಬೇಕು ಮತ್ತು ಹೆಚ್ಚಿನ ಮಹಿಳಾ ಸದಸ್ಯರು ಆಯ್ಕೆಯಾಗಲು ಅವಕಾಶ ಮಾಡಿಕೊಡೇಬಕು. ಇದು ನನ್ನ ಮನವಿ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಜನತೆ ತಮ್ಮನ್ನು ನಿರಂತರವಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಈ ಭಾಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಅವರ ವಿಶ್ವಾಸಕ್ಕೆ ಪಾತ್ರರಾಗುವುದು ಪ್ರತಿಯೊಬ್ಬ ಶಾಸಕರ ಕರ್ತವ್ಯ ಎಂದರು. ಯಡಿಯೂರಪ್ಪ ಅವರು ಫೆಬ್ರವರಿ 22 ರಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದಾಗ ವಿಧಾನಸಭೆಯಲ್ಲಿ ಇದೇ ರೀತಿಯ ಭಾಷಣ ಮಾಡಿದ್ದರು, ಅದನ್ನು ಅವರು ತಮ್ಮ "ವಿದಾಯ ಭಾಷಣ" ಎಂದು ಕರೆದಿದ್ದರು.

ಯಡಿಯೂರಪ್ಪ ಅವರು ಕೆಲ ದಶಕಗಳಿಂದ ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ. ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ 79 ವರ್ಷದ ಹಿರಿಯ ನಾಯಕ, ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಪಕ್ಷವನ್ನು ಕಟ್ಟಲು ಮತ್ತು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.

ಫೆಬ್ರವರಿ 22 ರಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ ಮತ್ತು ನನ್ನ ಬಗ್ಗೆ ತೋರುತ್ತಿರುವ ಗೌರವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷಕ್ಕೆ ನನ್ನ ಸಹಾಯ ಸದಾ ಇರುತ್ತದೆ ಎಂದಿದ್ದರು.

ಇದು ನನ್ನ ಕೊನೆಯ ಭಾಷಣವಾಗಿರಬಹುದು ಎಂದ ಅವರು, ಒಂದು ರೀತಿಯಲ್ಲಿ, ಇದು ನನ್ನ ವಿದಾಯ ಭಾಷಣವಾಗಿದೆ. ಏಕೆಂದರೆ ನಾನು ಮತ್ತೊಮ್ಮೆ ವಿಧಾನಸಭೆಗೆ ಬರುವುದಿಲ್ಲ ಎಂದು ಹೇಳಿದ್ದರು.

ಕರ್ನಾಟಕದಲ್ಲಿ ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರಲು ಯೋಚಿಸುತ್ತಿದ್ದಾರೆ. ಅವರು ಪಕ್ಷದ ಗೆಲುವಿಗೆ ಶ್ರಮಿಸುವ ವಿಶ್ವಾಸವಿದ್ದರೆ, ನಾವು ಅವರನ್ನು ಆಹ್ವಾನಿಸುತ್ತೇವೆ. ಒಟ್ಟಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಅಂತಲೂ ತಿಳಿಸಿದ್ದರು. ಕರ್ನಾಟಕ ವಿಧಾನಸಭೆಯ 15ನೇ ವಿಧಾನಸಭೆ ಅಧಿವೇಶನವು ಶುಕ್ರವಾರ ಕೊನೆಗೊಂಡಿತು. ರಾಜ್ಯದಲ್ಲಿ ಮೇ ತಿಂಗಳೊಳಗೆ ಚುನಾವಣೆ ನಡೆಯಲಿದೆ.

IPL_Entry_Point