Mysore News: ಮೈಸೂರಿನಲ್ಲಿ ಇಂದಿನಿಂದ ಎರಡು ದಿನ ಬಣ್ಣ ಬಣ್ಣದ ಗೆಡ್ಡೆ ಮೇಳ; ಅಸ್ಸಾಂ, ಕೇರಳ, ಕರ್ನಾಟಕದ ಗೆಣಸಿನ ಬಗೆಬಗೆಯ ಅಡುಗೆ ಸವಿಯ ಬನ್ನಿ
ಮೈಸೂರಿನಲ್ಲಿ ಈ ವಾರಾಂತ್ಯ ಬಣ್ಣ ಬಣ್ಣದ ಗೆಡ್ಡೆ ಗೆಣಸು ಸವಿಯಬೇಕೇ. ಅವುಗಳ ಅಡುಗೆ ರುಚಿಯನ್ನು ನೋಡಬೇಕೇ. ಹಾಗಿದ್ದರೆ ಸಹಜ ಸಮೃದ್ದ ಆಯೋಜಿಸಿರುವ ಮೇಳಕ್ಕೆ ಬನ್ನಿ

ಮೈಸೂರು: ಸಹಜ ಸಮೃದ್ದ ಸಂಸ್ಥೆ ನಮ್ಮಲ್ಲಿ ಸಿಗುವ ರುಚಿಕರ ಹಾಗೂ ಆರೋಗ್ಯಕರ ಗೆಣಸುಗಳ ಬಳಕೆ, ಅದರ ಮಹತ್ವ ಹಾಗೂ ವಿಶೇಷವನ್ನು ತಿಳಿಸಿಕೊಡುವ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಿಯಮಿತವಾಗಿ ಆಯೋಜಿಸುತ್ತಾ ಬರುತ್ತಿದೆ. ಎರಡು ವಾರದ ಹಿಂದೆ ಹುಬ್ಬಳ್ಳಿಯಲ್ಲಿ ಗೆಡ್ಡೆ ಗೆಣಸು ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಮೈಸೂರಿನಲ್ಲೂ ಇಂತಹದ್ದೇ ಮೇಳವನ್ನು ಆಯೋಜಿಸಿದೆ. ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ 2025ರ ಫೆಬ್ರವರಿ 8 ಹಾಗೂ 9ರ ವಾರಾಂತ್ಯದಂದು ಈ ಮೇಳ ರೂಪಿಸಲಾಗಿದೆ. ಸಹಜ ಸಮೃದ್ದದಿಂದ ಮೈಸೂರಿನಲ್ಲಿ ಹಲವು ಬಾರಿ ವಿಭಿನ್ನ ಮೇಳಗಳನ್ನು ಆಯೋಜಿಸಲಾಗಿದ್ದರೂ ಈ ಬಾರಿ ಬಗೆಬಗೆಯ ಬಣ್ಣದ ಗೆಡ್ಡೆಗಳನ್ನು ನೋಡಬಹುದು. ಅಷ್ಟೇ ಅಲ್ಲದೇ ಗೆಡ್ಡೆ ಗೆಣಸುಗಳ ಅಡುಗೆಗಳನ್ನೂ ಸವಿಯಲು ಅವಕಾಶವಿದೆ.
ಮೇಳದಲ್ಲಿ ಬಣ್ಣ ಬಣ್ಣದ ಗೆಡ್ಡೆಗಳು
ಶನಿವಾರ ಮೈಸೂರಿನಲ್ಲಿ ಆರಂಭವಾಗಲಿರುವ ' ಗೆಡ್ಡೆ ಗೆಣಸು ಮೇಳ' ಸಂಪೂರ್ಣ ಕಲರ್ ಪುಲ್ ಆಗಿರಲಿದೆ. ಏಕೆಂದರೆ ಈಶಾನ್ಯ ಭಾಗದ ರಾಜ್ಯವಾದ ಅಸ್ಸಾಂನಿಂದ ಮೇಳಕ್ಕಾಗೇ ನೀಲಿ ನವಿಲುಕೋಲ್ , ಬಣ್ಣ ಬಣ್ಣದ ಕ್ಯಾರೆಟ್ ಬರಲಿವೆ. ಬೆಳುವಲ ತೋಟದ ಹೂ ಕೋಸು, ಹೆಗ್ಗಡದೇವನ ಕೋಟೆ ಹುಲಿಕಾಡು ರೈತಕಂಪನಿಯ ಬೀಟ್ ರೂಟ್, ಹಾವೇರಿಯ ನಾಗರಾಜುರವರು ಬೆಳೆದ ಹಳದಿ, ಕೆಂಪು ಸಿಹಿ ಗೆಣಸು ಕೂಡ ಈ ಬಾರಿಗೆ ಗೆಡ್ಡೆ ಗೆಣಸು ಮೇಳದ ವಿಶೇಷ ಆಕರ್ಷಣೆಯಾಗಲಿವೆ.
ಬಳ್ಳಿ ಆಲೂಗೆಡ್ಡೆ ಮಾರುಕಟ್ಟೆಗೆ ತರಲು ಇದು ಸಕಾಲ
ಆನೇಕಲ್ಲಿನ ಮಾಯಸಂದ್ರದ ಕಾಂತರಾಜು, ನಾಲ್ಕು ವರ್ಷಗಳ ಹಿಂದೆ ಹೊಲದ ಸುತ್ತಲಿನ ತಂತಿ ಬೇಲಿಗೆ 'ಬಳ್ಳಿ ಆಲೂಗೆಡ್ಡೆ' ನೆಟ್ಟಿದ್ದರು. ಪ್ರತಿವರ್ಷ ಮುಂಗಾರಿಗೆ ತಾನಾಗೇ ಹುಟ್ಟಿ, ಸಂಕ್ರಾಂತಿಗೆ ಒಣಗಿ ಹೋಗುವ ಬಳ್ಳಿ ಆಲೂಗೆಡ್ಡೆ ಪ್ರತಿವರ್ಷ ಏನಿಲ್ಲೆಂದರೂ ಎರಡರಿಂದ ಮೂರು ಕ್ಚಿಂಟಾಲ್ ಗೆಡ್ಡೆಗಳನ್ನು ಕೊಡುತ್ತದೆ. ಕೆಜಿಗೆ ರೂ.50 ಬೆಲೆ ಹಿಡಿದರೂ ರೂ.15000 ಗಳಿಕೆಯಾಗುತ್ತದೆ; ಅದೂ ಯಾವುದೇ ಖರ್ಚಿಲ್ಲದೆ.
ವಾತಾವರಣ ಬದಲಾವಣೆ, ಕೃಷಿ ಕಾರ್ಮಿಕರ ಕೊರತೆ, ಮಾರುಕಟ್ಟೆ ಜಂಜಾಟಗಳಿಂದ ಸೋತಿರುವ ರೈತರು ಪರ್ಯಾಯ ಆಹಾರ ಬೆಳೆಗಳನ್ನು ಕಂಡುಕೊಳ್ಳುವ ಸನ್ನಿವೇಶವಂತೂ ಎಲ್ಲೆಡೆ ಇದೆ.
ಬಳ್ಳಿ ಆಲೂಗೆಡ್ಡೆ ಇಂಥ ಪರ್ಯಾಯ ಬೆಳೆಯಾಗಬಲ್ಲದು. ಸಪ್ಪೆ ರುಚಿಯ, ಕೊಂಚ ಅಂಟು ಇರುವ ಬಳ್ಳಿ ಆಲೂಗೆಡ್ಡೆಯಿಂದ ಹತ್ತಾರು ಖಾದ್ಯಗಳನ್ನು ಮಾಡಬಹುದು. ಮೊಣಕಾಲಿನ ನೋವಿಗೆ ರಾಮಬಾಣವಾದ ಇದು ಔಷಧಿಗುಣದಿಂದಲೂ ಸಮೃದ್ಧ ಎನ್ನುವುದು ಈಗಾಗಲೇ ಬಳಸಿರುವ ಹಲವರ ಅನುಭವದ ಮಾತು.
ಎರಡು ದಿನಗಳ ಮೈಸೂರಿನ ಗೆಡ್ಡೆ ಗೆಣಸು ಮೇಳಕ್ಕೆ ಬಂದು ,ಬಳ್ಳಿ ಆಲೂಗೆಡ್ಡೆ ಕೊಂಡು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಶುರು ಮಾಡಿ. ಒಂದೆರೆಡು ವರ್ಷ ಕಷ್ಟ ಬಿದ್ದರೆ ಮಾರುಕಟ್ಟೆ ಹಿಡಿಯುವುದು ಕಷ್ಟವಲ್ಲ. ಈ ಕುರಿತು ಬೆಳೆಗಾರರ ಅನುಭವವನ್ನು ಆಲಿಸಿದರೆ ಹಲವರಿಗೆ ಉಪಯೋಗಕಾರಿಯೂ ಆಗಬಹುದು ಎಂದು ಸಹಜ ಸಮೃದ್ದದ ಜಿ.ಕೃಷ್ಣಪ್ರಸಾದ್ ಹೇಳುತ್ತಾರೆ.
́ಶಾಜಿ ಎಂಬ ಗೆಡ್ಡೆ ಗೆಣಸು ಹುಚ್ಚಿನ ಮನುಷ್ಯ
ಕೇರಳದ ವಯನಾಡಿನ ಶಾಜಿ ಗೆಡ್ಡೆ ಗೆಣಸು ಬೆಳೆಯುವಲ್ಲಿ ಹೆಸರುವಾಸಿ. ಅವರ ಅದೇಗೆ ಗೆಡ್ಡೆ ಗೆಣಸಿನ ಹುಚ್ಚು ಹಿಡಿಯಿತೋ ಗೊತ್ತಿಲ್ಲ. ಪ್ರತಿ ಬಾರಿ ಸಿಕ್ಕಾಗಲೂ ಹೊಸ ಗೆಡ್ಡೆಗಳ ತೋರಿಸುತ್ತಾರೆ. ಗೆಡ್ಡೆ ಗೆಣಸು ಹುಡುಕಿ ಅಂಡಮಾನ್, ಈಶಾನ್ಯ ರಾಜ್ಯ, ಹಿಮಾಲಯವನ್ನೆಲ್ಲಾ ಸುತ್ತಿ ಬಂದಿದ್ದಾರೆ. ಇವರ ಸಂಗ್ರಹದಲ್ಲಿ 250 ಗೆಡ್ಡೆ ಗೆಣಸುಗಳ ಸಂಗ್ರಹವಿದೆ.
ಗೆಡ್ಡೆ ಗೆಣಸಿನ ಸಂರಕ್ಷಣೆಯನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿರುವ ಶಾಜಿ, ದುಡ್ಡಿಗೆ ಆಸೆ ಪಟ್ಟವರಲ್ಲ. ಯಾರೇ ಕರೆದರೂ, ತಮ್ಮ ಗೆಡ್ಡೆ ಗೆಣಸಿನ ಸಂಗ್ರಹ ಹೊತ್ತು ಬರುತ್ತಾರೆ; ತಿಳುವಳಿಕೆ ನೀಡುತ್ತಾರೆ.ಆಸಕ್ತರಿಗೆ ಕೆಲವು ಗೆಡ್ಡೆ ಗೆಣಸುಗಳ ನೀಡುತ್ತಾರೆ. ಶಾಜಿ, ಮೈಸೂರಿನ 'ಗೆಡ್ಡೆ ಗೆಣಸು ಮೇಳ' ಕ್ಕೆ ಪ್ರತಿ ವರ್ಷ ಬರುತ್ತಾರೆ. ಈ ಬಾರಿ ಹೊಸ ಬಗೆಯ ಗೆಡ್ಡೆ ಗೆಣಸುಗಳ ಜೊತೆ ಮೈಸೂರಿಗೆ ಆಗಮಿಸಿದ್ದಾರೆ.
ಬರುವ ಶನಿವಾರ ಮತ್ತು ಭಾನುವಾರ ಮೈಸೂರಿನ ನಂಜರಾಜ ಬಹದ್ದೂರು ಛತ್ತದಲ್ಲಿ ನಡೆಯುವ ' ಗೆಡ್ಡೆ ಗೆಣಸು ಮೇಳ ( ಫೆ.8 ಮತ್ತು 9) ಕ್ಕೆ ಬರಲು ಮರೆಯದಿರಿ. ಬರಗಾಲದಲ್ಲಿ ಕೈ ಹಿಡಿಯುವ ' ಗೆಡ್ಡೆ ಗೆಣಸುಗಳ' ಬಗ್ಗೆ ನಿಮ್ಮ ನೆರೆಹೊರೆಯ ರೈತರಿಗೆ ಹೇಳಿ. ಮೈಸೂರು ಮೇಳಕ್ಕೆ ಕಳಿಸಿ ಎನ್ನುವುದು ಆಯೋಜಕರ ಮನವಿ.
