Dwarakish Politics: ರಾಜಕೀಯಕ್ಕೂ ಕೈ ಹಾಕಿದ್ದ ದ್ವಾರಕೀಶ್‌, ಹುಣಸೂರಿನಲ್ಲಿ ಕನ್ನಡ ನಾಡು ಪಾರ್ಟಿಯಿಂದ ಸೋತಿದ್ದರು !
ಕನ್ನಡ ಸುದ್ದಿ  /  ಕರ್ನಾಟಕ  /  Dwarakish Politics: ರಾಜಕೀಯಕ್ಕೂ ಕೈ ಹಾಕಿದ್ದ ದ್ವಾರಕೀಶ್‌, ಹುಣಸೂರಿನಲ್ಲಿ ಕನ್ನಡ ನಾಡು ಪಾರ್ಟಿಯಿಂದ ಸೋತಿದ್ದರು !

Dwarakish Politics: ರಾಜಕೀಯಕ್ಕೂ ಕೈ ಹಾಕಿದ್ದ ದ್ವಾರಕೀಶ್‌, ಹುಣಸೂರಿನಲ್ಲಿ ಕನ್ನಡ ನಾಡು ಪಾರ್ಟಿಯಿಂದ ಸೋತಿದ್ದರು !

Hunsur Politics ದ್ವಾರಕೀಶ್‌ ಚಿತ್ರರಂಗದ ನಡುವೆ ರಾಜಕೀಯವನ್ನೂ ಪ್ರವೇಶಿಸಿದ್ದರು. ಅವರು ಸ್ಪರ್ಧಿಸಿದ್ದು ಯಾವ ಪಕ್ಷದಿಂದ, ಎಲ್ಲಿ ಎನ್ನುವ ವಿವರ ಇಲ್ಲಿದೆ.

ಕನ್ನಡದ ಕುಳ್ಳನಿಗೆ ಒಲಿಯಲಿಲ್ಲ ರಾಜಕೀಯ.
ಕನ್ನಡದ ಕುಳ್ಳನಿಗೆ ಒಲಿಯಲಿಲ್ಲ ರಾಜಕೀಯ.

ಮೈಸೂರು: ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಬಿ.ಎಸ್‌.ದ್ವಾರಕೀಶ್‌ ರಾಜಕೀಯವನ್ನೂ ಪ್ರವೇಶಿಸಿದ್ದರು. ಆದರೆ ಅವರಿಗೆ ರಾಜಕೀಯದಲ್ಲಿ ಯಶಸ್ಸು ಸಿಗಲಿಲ್ಲ. ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಹಲವಾರು ಸಿನೆಮಾ ನಟರಂತೆ ದ್ವಾರಕೀಶ್‌ ಅವರಿಗೂ ರಾಜಕೀಯ ನಂಟು ಇತ್ತು. ಚುನಾಯಿತ ಪ್ರತಿನಿಧಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ಹಂಬಲವೂ ಇತ್ತು. ಇದೇ ಕಾರಣದಿಂದ ಅವರು ಎರಡು ದಶಕದ ಹಿಂದೆ ಚುನಾವಣೆ ಕಣಕ್ಕೆ ಧುಮುಕಿದ್ದರೂ ಅನುಭವದ ಕೊರತೆಯಿಂದ ಸೋಲನುಭವಿಸಬೇಕಾಯಿತು.

ಅದು 2004. ಆಗ ವಿಧಾನಸಭೆ ಚುನಾವಣೆ ವರ್ಷ. ತಮಗೆ ಬಿಜೆಪಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಉದ್ಯಮಿ ಹಾಗೂ ವಿಆರ್‌ ಎಲ್‌ ಮಾಲೀಕ ವಿಜಯಸಂಕೇಶ್ವರ ಆ ಪಕ್ಷ ತೊರೆದಿದ್ದರು. ಸಂಸದರಾಗಿದ್ದ ಅವರನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕೇಂದ್ರದಲ್ಲಿ ಸಚಿವ ಸ್ಥಾನ ಕೊಡಲಿಲ್ಲ ಎನ್ನುವ ಬೇಸರ ಬೇರೆ ಇತ್ತು. ಈ ವೇಳೆ ಸಂಕೇಶ್ವರ ಅವರು ಹೊಸ ಪಕ್ಷ ಹುಟ್ಟು ಹಾಕುವ ಸಾಹಸ ಮಾಡಿದರು. ಕೊನೆಗೆ ಅವರು ಆರಂಭಿಸಿದ್ದು ಕನ್ನಡ ನಾಡು ಎನ್ನುವ ಪ್ರಾದೇಶಿಕ ಪಕ್ಷ. ನಾಡು, ನುಡಿಗೆ ಸಂಬಂಧಿಸಿ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಪಕ್ಷ ರೂಪಿಸಿ ಗೆದ್ದು ಅಧಿಕಾರ ಹಿಡಿಯಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಇದನ್ನೇ ಉದ್ದೇಶವಾಗಿಟ್ಟುಕೊಂಡು ಅವರು ಎರಡು ದಶಕದ ಹಿಂದೆ ಪಕ್ಷ ಕಟ್ಟಿದರು.

ಈ ವೇಳೆ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವ ನಿರ್ಧಾರವನ್ನು ಅವರು ಮಾಡಿದರು. ತಾವೊಬ್ಬರೇ ಸ್ಪರ್ಧಿಸುವ ಬದಲು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹುಡುಕುತ್ತಿದ್ದರು. ಈ ವೇಳೆ ಚಿತ್ರರಂಗದಲ್ಲೂ ಸೋತು ಹೋಗಿದ್ದ ಕನ್ನಡದ ಕುಳ್ಳ ದ್ವಾರಕೀಶ್‌ ಅವರನ್ನು ತಮ್ಮ ಪಕ್ಷಕ್ಕೆ ವಿಜಯಸಂಕೇಶ್ವರ ಅವರು ಸೆಳೆದರುಕೊಂಡರು. ಆಗ ದ್ವಾರಕೀಶ್‌ ಆಪ್ತ ಮಿತ್ರ ಚಿತ್ರದ ಬ್ಯುಸಿ. ಅದರ ನಡುವೆಯೂ ರಾಜಕೀಯವನ್ನು ಸೇರಿಕೊಂಡರು. ಅನಂತನಾಗ್‌, ಅಂಬರೀಷ್‌ ಸಹಿತ ಹಲವರು ಚಿತ್ರರಂಗದ ಸಹಪಾಠಿಗಳು ಆಗಲೇ ಜನಪ್ರತಿನಿಧಿಗಳಾಗಿದ್ದರು. ಇದರಿಂದ ನಾನೂ ಒಮ್ಮೆ ನೋಡಿಬಿಡೋಣ ಎಂದು ಚುನಾವಣೆಗೂ ಧುಮುಕಿದರು.

ಕನ್ನಡ ನಾಡು ಪಕ್ಷ ಬಹುತೇಕ ಹೊಸಬರನ್ನೇ ಕಣಕ್ಕಿಳಿಸಿತ್ತು. ದ್ವಾರಕೀಶ್‌ ಕೂಡ ಆ ಪಟ್ಟಿಯಲ್ಲಿದ್ದರು. ಅವರಿಗೆ ಟಿಕೆಟ್‌ ದೊರೆತಿದ್ದು ಅವರ ಹುಟ್ಟೂರಾದ ಹುಣಸೂರಿನಲ್ಲಿ. ಹುಣಸೂರಿನಲ್ಲಿ ಹುಟ್ಟಿ ಬೆಳೆದರೂ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಆದರೂ ಹುಟ್ಟೂರಿನ ಮೋಹ ಬಿಟ್ಟಿರಲಿಲ್ಲ. ಹುಣಸೂರು ಕ್ಷೇತ್ರ ಎಲ್ಲಾ ವರ್ಗದವರಿಗೂ ಮಣೆ ಹಾಕಿದ ಕ್ಷೇತ್ರ. ಇಲ್ಲಿ ಒಕ್ಕಲಿಗರು, ಕುರುಬರು, ನಾಯಕರು, ಅತಿ ಸಣ್ಣ ಸಮುದಾಯದ ದೇವರಾಜ ಅರಸು ಅವರಗೆ ಮಣೆ ಹಾಕಿದ್ದರಿಂದ ನಾನು ಒಮ್ಮೆ ಗೆಲ್ಲಬಹುದು ಎನ್ನುವ ಬಯಕೆ ದ್ವಾರಕೀಶ್‌ ಅವರಲ್ಲಿ ಬಂದಿತ್ತು. ಕಣಕ್ಕೆ ಇಳಿದೇ ಬಿಟ್ಟರು. ಹಳ್ಳಿ ಹಳ್ಳಿ ಸುತ್ತಿದರು. ಆಪ್ತ ಮಿತ್ರ ಚಿತ್ರ ಶೂಟಿಂಗ್‌ ನಡುವೆಯೂ ಬಿಡುವು ಮಾಡಿಕೊಂಡು ಬಂದು ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡರು.

ದ್ವಾರಕೀಶ್‌ ಅವರಿಗೆ ಹೋದ ಕಡೆಯಲೆಲ್ಲಾ ಒಳ್ಳೆಯ ಬೆಂಬಲವೇ ದೊರೆಯಿತು. ಹಳ್ಳಿಗಳಲ್ಲಿ ನಮ್ಮೂರ ದ್ವಾರಕೀಶ್‌ ಎಂದೇ ಸ್ವಾಗತಿಸಿದರು. ಆರತಿ ಎತ್ತಿ ಬರ ಮಾಡಿಕೊಂಡರು. ಊರವರ ಅಭಿಮಾನ ಕಂಡು ದ್ವಾರಕೀಶ್‌ ಖುಷಿಕೊಂಡಿದ್ದರು.

ಮೈಸೂರು ಪತ್ರಕರ್ತರ ಸಂಘಕ್ಕೆ ಆಗಮಿಸಿ ಚುನಾವಣೆ ಪ್ರಚಾರ, ಜನರ ಪ್ರೀತಿಯ ಕುರಿತು ದ್ವಾರಕೀಶ್‌ ಮಾತನಾಡಿದ್ದರು. ಗೆಲ್ಲುವ ವಿಶ್ವಾಸವಿದೆ. ರಾಜಕೀಯ ನೇತಾರರ ನಂಟು ಇರಬಹುದು. ಆದರೆ ರಾಜಕೀಯ ನನಗೆ ಹೊಸದು. ನಾಡು, ನುಡಿಯ ಆಶಯದೊಂದಿಗೆ ಸಂಕೇಶ್ವರ ಅವರ ಕಟ್ಟಿದ ಈ ಪಕ್ಷ ಜನಹಿತದೊಂದಿಗೆ ಕೆಲಸ ಮಾಡಲಿದೆ ಎಂದು ದ್ವಾರಕೀಶ್‌ ಹೇಳಿಕೊಂಡಿದ್ದರು.

ಮತದಾನವೂ ಮುಗಿಯಿತು. ಫಲಿತಾಂಶ ಹೊರ ಬಂದಿತು. ಆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಜಿ.ಟಿ.ದೇವೇಗೌಡ ಗೆದ್ದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಚಿಕ್ಕಮಾದು, ಬಿಜೆಪಿಯ ಮರಿಲಿಂಗಯ್ಯ, ರೈತಸಂಘದ ಹೊಸೂರು ಕುಮಾರ್‌ ಸೋತಿದ್ದರು. ಭಾರೀ ಮತದ ನಿರೀಕ್ಷೆಯಲ್ಲಿದ್ದ ದ್ವಾರಕೀಶ್‌ ಅವರಿಗೆ ಬಂದಿದ್ದು 2265 ಮತ ಮಾತ್ರ. ಠೇವಣಿ ಕೂಡ ಉಳಿದಿರಲಿಲ್ಲ.

ಆ ಚುನಾವಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣದಿಂದ ಕಣಕ್ಕೆ ಇಳಿದಿದ್ದ ಸ್ವತಃ ವಿಜಯಸಂಕೇಶ್ವರ್‌ ಕೂಡ ಗೆದ್ದಿರಲಿಲ್ಲ. ಆ ಚುನಾವಣೆಯಲ್ಲಿ ಕನ್ನಡ ನಾಡು ಪಾರ್ಟಿಯಿಂದ ಗೆದ್ದವರು ಒಬ್ಬರೇ. ಅದು ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ನರಸಿಂಹನಾಯಕ್(‌ ರಾಜೂಗೌಡ) ಮಾತ್ರ.

ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು. ಆದರೆ ಅವರಿಗೆ ಆಪ್ತ ಮಿತ್ರ ಕೈ ಬಿಡಲಿಲ್ಲ. ಆ ಚಿತ್ರ ಭಾರೀ ಯಶಸ್ಸು ಗಳಿಸಿ ದ್ವಾರಕೀಶ್‌ ಅವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಮರುಜೀವವನ್ನೇ ನೀಡಿತು !

Whats_app_banner