Darshan: ದರ್ಶನ್ ಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದ ವ್ಯಕ್ತಿ ವಿಚಾರಣೆ, ಚಾಲೆಂಜಿಂಗ್‌ ಸ್ಟಾರ್‌ ಸಿಮ್‌ ಕೊಟ್ಟವರು ಯಾರು?-sandalwood news police interrogate person given sim card to challenging star darshan in renuka swamy murder case ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Darshan: ದರ್ಶನ್ ಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದ ವ್ಯಕ್ತಿ ವಿಚಾರಣೆ, ಚಾಲೆಂಜಿಂಗ್‌ ಸ್ಟಾರ್‌ ಸಿಮ್‌ ಕೊಟ್ಟವರು ಯಾರು?

Darshan: ದರ್ಶನ್ ಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದ ವ್ಯಕ್ತಿ ವಿಚಾರಣೆ, ಚಾಲೆಂಜಿಂಗ್‌ ಸ್ಟಾರ್‌ ಸಿಮ್‌ ಕೊಟ್ಟವರು ಯಾರು?

Sandalwood News ನಟ ದರ್ಶನ್‌ ತೂಗುದೀಪ( Darshan Thoogudeepa) ಅವರು ಬಳಕೆ ಮಾಡುತ್ತಿದ್ದ ಸಿಮ್‌ ನೀಡಿದ ವ್ಯಕ್ತಿಯಿಂದ ಪೊಲೀಸರು ಹಲವಾರು ಮಾಹಿತಿಯನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪಡೆದುಕೊಂಡಿದ್ದಾರೆ.ವರದಿ: ಎಚ್‌.ಮಾರುತಿ. ಬೆಂಗಳೂರು

ದರ್ಶನ್‌ ಬಳಕೆ ಮಾಡುತ್ತಿದ್ದ ಸಿಮ್‌ ವಿಚಾರವಾಗಿ ಪೊಲೀಸ್‌ ವಿಚಾರಣೆ ನಡೆದಿದೆ.
ದರ್ಶನ್‌ ಬಳಕೆ ಮಾಡುತ್ತಿದ್ದ ಸಿಮ್‌ ವಿಚಾರವಾಗಿ ಪೊಲೀಸ್‌ ವಿಚಾರಣೆ ನಡೆದಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್‌ ಗೆ ಸಿಮ್‌ ಕಾರ್ಡ್‌ ಖರೀದಿಸಿ ಕೊಟ್ಟಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದರ್ಶನ್‌ ಬೇರೊಬ್ಬರ ಹೆಸರಿನಲ್ಲಿರುವ ಸಿಮ್‌ ಬಳಕೆ ಮಾಡುತ್ತಿದ್ದರು ಎನ್ನುವುದು ತಿಳಿದು ಬಂದಿದ್ದು, ಸಿಮ್‌ ಯಾರ ಹೆಸರಿನಲ್ಲಿತ್ತೋ ಅವರನ್ನು ಕರೆ ತಂದು ವಿಚಾರಣೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅವರಿಂದ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕ್ಷ್ಯ ನಾಶಕ್ಕೆ ಜೈಲಿನಿಂದಲೇ ಪ್ರಯತ್ನಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಕೊಲೆ ಪ್ರಕರಣದಿಂದ ಪಾರಾಗಲು ದರ್ಶನ್‌ ಬೇರೊಬ್ಬರ ಹೆಸರಿನಲ್ಲಿರುವ ಸಿಮ್‌ ಬಳಕೆ ಮಾಡುತ್ತಿದ್ದರು. ಆರಂಭದಿಂದಲೂ ದರ್ಶನ್‌ ತಮ್ಮ ಹೆಸರಿನಲ್ಲಿ ಸಿಮ್‌ ಬಳಸುತ್ತಿರಲಿಲ್ಲ. ಬೇರೆಯವರ ಹೆಸರಿನಲ್ಲಿರುವ ಸಿಮ್‌ ಅನ್ನೇ ಬಳಸುತ್ತಿದ್ದರು ಎಂದೂ ಗೊತ್ತಾಗಿದೆ. ಅವರ ಈ ನಡೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

ತಮ್ಮ ಹೆಸರಿನ ಸಿಮ್‌ ಅನ್ನು ದರ್ಶನ್‌ ಅವರಿಗೆ ನೀಡಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ. ಹಲವಾರುಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆದುಕೊಳ್ಳಲಾಗಿದೆ.

ನಿಮ್ಮ ಹೆಸರಿನಲ್ಲಿ ಸಿಮ್‌ ಕಾರ್ಡ್‌ ತೆಗೆದುಕೊಂಡಿದ್ದು ಏಕೆ? ಅದನ್ನು ದರ್ಶನ್‌ ಅವರಿಗೆ ಕೊಟ್ಟಿದ್ದು ಏಕೆ? ಯಾವಉದ್ಧೇಶಕ್ಕಾಗಿ ನಿಮ್ಮ ಸಿಮ್‌ ಕಾರ್ಡ್‌ ಅನ್ನು ದರ್ಶನ್‌ ಬಳಸುತ್ತಿದ್ದರು? ದರ್ಶನ್‌ ಅವರಿಗೆ ಹತ್ತಾರು ಸ್ನೇಹಿತರಿದ್ದರೂ ನಿಮ್ಮದೇ ಸಿಮ್‌ ಬಳಸಲು ಕಾರಣವೇನು? ದರ್ಶನ್‌ಅವರೇ ನೇರವಾಗಿ ಸಿಮ್‌ ಕೊಡಲು ಕೇಳಿ ಕೊಂಡಿದ್ದರೇ ಅಥವಾ ಬೇರೆ ಯಾರಾದರೂ ದರ್ಶನ್‌ ಪರವಾಗಿ ಸಿಮ್‌ ಕೇಳಿದ್ದರೇ ಎಂಬ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ದರ್ಶನ್‌ ಅವರು ಸದಾ ಪಾರ್ಟಿಗಳನ್ನು ನಡೆಸುತ್ತಿದ್ದಸ್ಟೋನಿ ಬ್ರೂಕ್‌ ಹೋಟೆಲ್‌ ನ ಮೂವರು ಸಿಬ್ಬಂದಿಗಳ ವಿಚಾರಣೆ ನಡೆಸಲಾಗಿದೆ. ಹಾಗೆಯೇ ದರ್ಶನ್‌ ಗೆ ಸಿಮ್‌ ಕಾರ್ಡ್‌ ಕೊಟ್ಟಿದ್ದ ವ್ಯಕ್ತಿ ಸೇರಿದಂತೆ ಹಲವಾರು ಮಂದಿಯಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ವೇಳೆಗೆ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುವುದು ತನಿಖಾ ತಂಡದ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.

ದರ್ಶನ್‌ ಅವರ ರಾಜರಾಜೇಶ್ವರಿ ನಗರದ ನಿವಾಸದ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ ದತಾಂಶವನ್ನು ರೆಟ್ರೀವ್‌ ಮಾಡಲಾಗಿದೆ. ಈ ಸಿಸಿಟಿವಿಗಳಲ್ಲಿ ಕಂಡುಬರುವ ವ್ಯಕ್ತಿಗಳಚಹರೆಗೂ ಬಂಧಿಸಲ್ಪಟ್ಟಿರುವ ಆರೋಪಗಳಿಗೂ ಹೋಲಿಕೆಯಾಗುತ್ತಿದೆಯೇ ಎಂದು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

ದರ್ಶನ್‌ ಗೆ ಆಗಸ್ಟ್‌ 1ರಂದು ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದ್ದು, ಆಗಸ್ಟ್‌ 14ರವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ. ಮನೆಯೂಟಕ್ಕೆ ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇನೂ ಬಾಕಿ ಉಳಿದುಕೊಂಡಿದ್ದು ಜೈಲೂಟಕ್ಕೆ ಹೊಂದಿಕೊಳ್ಳುವುದು ದರ್ಶನ್‌ ಗೆ ಅನಿವಾರ್ಯವಾಗಿದೆ.

ಈ ಮಧ್ಯೆ ದರ್ಶನ್ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಡಾ.ರಾಜಕುಮಾರ್‌ ಅಭಿಮಾನಿಯೊಬ್ಬರು ಪಶ್ಚಿಮ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದರ್ಶನ್‌ ಅಭಿಮಾನಿಗಳು ಎಂದು ಹೇಳಿಕೊಂಡಿರುವ ರಂಗಾರೆಡ್ಡಿ ನಾಗರಾಜ್‌ ಮತ್ತು ದಚ್ಚು ವಿಶ್ವಾಸ್‌ ವಿರೇಶ್‌ ಎಂಬುವರು ಡಿ ಬಾಸ್‌ ಅಭಿಮಾನಿ ಮತ್ತು ಡಿ ಬಾಸ್‌ ಅಡ್ಡ ಎಂಬ ಫೇಸ್‌ ಬುಕ್‌ ಪೇಜ್‌ ಗಳ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಮೊಬೈಲ್‌ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

(ವರದಿ: ಎಚ್.ಮಾರುತಿ,ಬೆಂಗಳೂರು)