ಕನ್ನಡ ಸುದ್ದಿ  /  ಕರ್ನಾಟಕ  /  Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಪೊಲೀಸ್‌ ವಿಚಾರಣೆ ಅಂತ್ಯ, ಜೈಲು ಸೇರಿದ ನಟಿ ಪವಿತ್ರಾಗೌಡ

Pavithra Gowda: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಪೊಲೀಸ್‌ ವಿಚಾರಣೆ ಅಂತ್ಯ, ಜೈಲು ಸೇರಿದ ನಟಿ ಪವಿತ್ರಾಗೌಡ

Sandalwood News ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಪವಿತ್ರಾಗೌಡ ಅವರ ವಿಚಾರಣೆ ಮುಗಿದಿದ್ದರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಟಿ ಪವಿತ್ರಾಗೌಡ ಜೈಲು ಸೇರಿದ್ದಾರೆ.
ನಟಿ ಪವಿತ್ರಾಗೌಡ ಜೈಲು ಸೇರಿದ್ದಾರೆ.

ಬೆಂಗಳೂರು: ಕಳೆದ ಹತ್ತು ದಿನಗಳಿಂದ ಭಾರೀ ಕುತೂಹಲ ಕೆರಳಿಸಿರುವ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟಿ ಪವಿತ್ರಾಗೌಡ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಸತತವಾಗಿ ಹತ್ತು ದಿನದಿಂದ ವಿಚಾರಣೆ ನಡೆಸುತ್ತಿದ್ದ ಬೆಂಗಳೂರಿನ ಪೊಲೀಸರು ನಟ ದರ್ಶನ್‌, ನಟಿ ಪವಿತ್ರಾಗೌಡ ಸಹಿತ 13 ಮಂದಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇದರಲ್ಲಿ ಇಡೀ ಕೊಲೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ನಟಿ ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳ ವಿಚಾರಣಾ ಅವಧಿ ಮುಗಿದಿದ್ದರಿಂದ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆನಂತರ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಯಿತು.

ರೇಣುಕಾಸ್ವಾಮಿ ತನಗೆ ಅಶ್ಲೀಲ ಫೋಟೋ ಕಳುಹಿಸಿದ್ದಾನೆ ಎನ್ನುವ ಪವಿತ್ರಾಗೌಡ ಅವರ ಆರೋಪದಿಂದ ಆರಂಭಗೊಂಡ ಪ್ರಕರಣ ಆತನ ಭೀಕರ ಕೊಲೆಯೊಂದಿಗೆ ಅಂತ್ಯಗೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

ಆತನಿಗೆ ಪಾಠ ಕಲಿಸಲು ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಮೂರು ದಿನದಲ್ಲಿ ದರ್ಶನ್‌, ಪವಿತ್ರಾಗೌಡ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದರು.

ಇವರಲ್ಲಿ 13 ಮಂದಿಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ವಾಪಾಸ್‌ ಪಡೆದಿದ್ದರು. ಇದಾದ ನಂತರವೂ ದರ್ಶನ್‌, ಪವಿತ್ರಾಗೌಡ ವಿಚಾರಣೆ ನಡೆದಿತ್ತು. ಈ ನಡುವೆ ಅನಾರೋಗ್ಯದಿಂದ ಪವಿತ್ರಾ ಚಿಕಿತ್ಸೆ ಕೂಡ ಪಡೆದಿದ್ದರು.

ಪೊಲೀಸ್‌ ಕಸ್ಟಡಿ ಅವಧಿ ಮುಗಿದಿದ್ದರಿಂದ ಎಲ್ಲಾ 13 ಮಂದಿ ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.

ಇವರಲ್ಲಿ ದರ್ಶನ್‌, ಪವಿತ್ರಾಗೌಡ ಕೂಡ ಇದ್ದರು. ಇವರಲ್ಲಿ ನಟ ದರ್ಶನ್ , ಧನರಾಜ್, ವಿನಯ್, ಪ್ರದೋಶ್ ಸಹಿತ ನಾಲ್ವರನ್ನು ಇನ್ನಷ್ಟು ವಿಚಾರಣೆ ನಡೆಸಬೇಕಾಗಿರುವುದರಿಂದ ಅವರನ್ನು ನಮ್ಮ ವಶಕ್ಕೆ ನೀಡಬೇಕು ಎಂದು ಬೆಂಗಳೂರು ಪೊಲೀಸರ ಪರವಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್‌ ವಾದಿಸಿದ್ದರು.

ಆದರೆ ಎ1 ಪವಿತ್ರಾಗೌಡ,ಆಕೆಯ ಆಪ್ತ ಸಹಾಯಕ ಎ3 ಪವನ್, ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಎ4 ರಾಘವೇಂದ್ರ, ಎ 5 ನಂದೀಶ್, ಎ6 ಜಗದೀಶ್, ಎ7 ನಅನುಕುಮಾರ್, ಎ 8 ರವಿಶಂಕರ್ ಅವರ ವಿಚಾರಣೆ ಮುಗಿದಿದೆ ಎಂದು ತಿಳಿಸಿದ್ದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶ ವಿಶ್ವನಾಥ್‌ ಸಿ ಗೌಡ ಅವರು ದರ್ಶನ್‌ ಸಹಿತ ಆರು ಮಂದಿಯ ಪೊಲೀಸ್‌ ಕಸ್ಟಡಿ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದರು.

ಪವಿತ್ರಾಗೌಡ ಸಹಿತ ಏಳು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಹದಿನಾಲ್ಕು ದಿನ ನ್ಯಾಯಾಂಗ ಬಂಧನ ಜಾರಿಯಾಗಿದ್ದರಿಂದ ಪವಿತ್ರಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.

ದರ್ಶನ್‌ ಅವರ ಪೊಲೀಸ್‌ ವಿಚಾರಣೆ ಮುಂದುವರೆಯಲಿದೆ. ಅಗತ್ಯ ಬಿದ್ದರೆ ಪವಿತ್ರಾ ಹಾಗೂ ಇತರರನ್ನು ಬಾಡಿ ವಾರೆಂಟ್‌ ಜಾರಿ ಮಾಡಿ ಕರೆಯಿಸಿಕೊಳ್ಳುವ ಸಾಧ್ಯತೆಗಳಿವೆ. ಜೈಲು ಸೇರಿದ ಪವಿತ್ರಾ ಅವರಿಗೆ ಪ್ರತ್ಯೇಕ ಖೈದಿ ಸಂಖ್ಯೆಯನ್ನು ಜೈಲು ಸಿಬ್ಬಂದಿ ನೀಡಲಿದ್ದಾರೆ.