Sudhakar on Congress: ಹಗರಣ, ಭ್ರಷ್ಟಾಚಾರಗಳೇ ಕಾಂಗ್ರೆಸ್ ಆಡಳಿತದ ಸಾಧನೆ; ಕಾಂಗ್ರೆಸ್ ಪ್ರತಿಭಟನೆಗೆ ಸಚಿವ ಸುಧಾಕರ್ ಕಿಡಿ
ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸಾಧನೆ ಅಂದರೆ ಅದು ಭ್ರಷ್ಟಾಚಾರ ಮಾತ್ರ. ಭ್ರಷ್ಟಾಚಾರ ಅನ್ನುವ ಪದದ ಹುಟ್ಟಿಗೆ ಕಾರಣವಾಗಿರುವುದೇ ಕಾಂಗ್ರೆಸ್ ಎಂದು ಸಚಿವ ಸುಧಾಕರ್ ಕಿಡಿಕಾರಿದ್ದಾರೆ.
ಬೆಂಗಳೂರು: ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಒಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಕಾಂಗ್ರೆಸ್ ಬೆಂಗಳೂರಿನಾದ್ಯಂತ ಮೌನ ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ಸಿಎಂ ಬೊಮ್ಮಾಯಿ ಹಾದಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್, ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸಾಧನೆ ಅಂದರೆ ಅದು ಭ್ರಷ್ಟಾಚಾರ ಮಾತ್ರ. ಭ್ರಷ್ಟಾಚಾರ ಅನ್ನುವ ಪದದ ಹುಟ್ಟಿಗೆ ಕಾರಣವಾಗಿರುವುದೇ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.
60 ವರ್ಷ ದೇಶವಾಳಿದ ಕಾಂಗ್ರೆಸ್ ಯಾವುದೇ ಯೋಜನೆ ಮಾಡಿದರೂ ಅದರಲ್ಲಿ ಭ್ರಷ್ಟಾಚಾರ ಇರುತ್ತದೆ. ಅವರಿಗೆ ಅದು ರಕ್ತಗತವಾಗಿ ಬಂದಿದೆ. ಉಳಿದವರು ಕೂಡ ಹಾಗೆಯೇ ಎಂದು ಅಂದುಕೊಂಡು ಅತ್ಯುತ್ತಮ ಆಡಳಿತ ನೀಡುತ್ತಿರುವ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013-2018ರ ತನಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಈ ಸರ್ಕಾರ 5 ವರ್ಷ ಮಾಡಿದ್ದು ಭ್ರಷ್ಟಾಚಾರ ಮಾತ್ರ. ಆದರೆ, ಇವರು ಇವಾಗ ನಮ್ಮ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. 2013ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಬಗ್ಗೆ ನಾವು ಹೇಳಿದ್ದೆವು. ಅದೇ ರೀತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್ ಕೂಡ ಹೇಳಿತ್ತು. ಅವರ ಸರ್ಕಾರ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿತು.
ಹೈಕೋರ್ಟ್ ಛೀಮಾರಿ ಹಾಕಿತ್ತು
ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಲೋಕಾಯುಕ್ತದಂತಹ ಸಂಸ್ಥೆಗಳು ರಾಜ್ಯದಲ್ಲಿ ಇರಬೇಕು ಎಂದು ತಿಳಿಸಿತ್ತು. ಸಿಎಂ ಮೇಲೆ 50-60 ಕಂಪ್ಲೇಟ್ ಬಂದ ಮೇಲೆ ತನಿಖೆ ಆಗುತ್ತೆ ಎನ್ನುವ ಭಯಭೀತಿಯಿಂದ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ ಎಸಿಬಿ ಸ್ಥಾಪಿಸಿ ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ ಅದಾಗಿತ್ತು ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.
ಬಿಜೆಪಿ ಭ್ರಷ್ಟಾಚಾರ ಮಾಡಿರೋದೆ ಆಗಿದ್ದರೆ, ನಾವು ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಲು ಸ್ಟೇ ತರುತ್ತಿದ್ದೆವು. ಆದರೆ, ನಾವು ಬಂದು ಲೋಕಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇವೆ. ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂಬುದು ನಿಜವಾಗಿದ್ದರೆ ಇವತ್ತು ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡುತ್ತಿರಲಿಲ್ಲ. ಆದರೆ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿಗಳು ಯಾವ ರೀತಿ ಹೇಳಿದ್ದರೋ, ಹಾಗೆಯೇ ನಾವು ಅದಕ್ಕೆ ಕಾಯಕಲ್ಪ ಕೊಟ್ಟಿದ್ದೇವೆ ಎಂದರು.
ಲೋಕಾಯುಕ್ತವನ್ನು ಮುಚ್ಚಿದ್ದು ಯಾಕೆ?
2018ರಲ್ಲಿ ಫೈನಾನ್ಸಿಯಲ್ ಅಡಿ ಸಿಎಜಿ ವರದಿ ಪ್ರಕಾರ 2013- 2018 ರಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರನಡೆದಿದೆ. ಡಿ ನೊಟಿಫಿಕೇಷನ್ ಅನ್ನುವುದಕ್ಕೆ ರೀಡೂ ಅನ್ನುವ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನ ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದಲ್ಲವನ್ನು ಮುಚ್ಚಿಹಾಕಲು ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದಿದ್ದರು ಎಂದು ಆರೋಪಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಕಾಂಗ್ರೆಸ್‌ನ ಭ್ರಷ್ಟಾಚಾರಗಳಿಗೆ ನೆರವಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಅಂದಾಜು ಇತ್ತು, ಅದನ್ನ 374 ಕೋಟಿಗೆ ಹೆಚ್ಚಿಸಿದರು. ಯಾಕೆ ಶೇ.25 ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಿದ್ದರು? ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿರಿ? 9.47 ಕಿಮೀ ಟೆಂಡರ್‌ಶ್ಯೂರ್ ರಸ್ತೆ ನಿರ್ಮಿಸಲು ಖಾಸಗಿ ಸಂಸ್ಥೆಯೊಂದು 75 ಕೋಟಿ ರೂಪಾಯಿ ಎಷ್ಟಿಮೇಟ್ ಕೊಟ್ಟಿತ್ತು. ಆದರೆ ಅದನ್ನು 115 ಕೋಟಿ ರೂ.ಗೆ ಹೆಚ್ಚಿಸಿದರು. ಎಷ್ಟಿಮೇಟ್‌ಗಿಂತ ಶೇ.53 ಹೆಚ್ಚು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಟೆಂಡರ್ ಪ್ರೀಮಿಯಂ ಮೇಲೆ ಶೇ.5 ರಷ್ಟು ಹೆಚ್ಚು ಮಾಡಬಾರದು ಎಂದು ಆದೇಶ ಮಾಡಿದ್ದಾರೆ. ಶೇ.50 ರಷ್ಟು ಟೆಂಡರ್ ಪ್ರೀಮಿಯಂ ತೆಗೆದುಕೊಂಡ ಕಾಂಗ್ರೆಸ್ ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಆರೋಪ ಮಾಡುತ್ತಿದೆ ಎಂದು ಸುಧಾಕರ್ ಗುಡುಗಿದರು.
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನ 300 ಕಡೆಗಳಲ್ಲಿ ಇಂದು ಮೌನ ಪ್ರತಿಭಟನೆ ನಡೆಸಿದ್ದಾರೆ.