ಕನ್ನಡ ಸುದ್ದಿ  /  ಕರ್ನಾಟಕ  /  ಚಿತ್ರದುರ್ಗದಲ್ಲಿ ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್-03 ಮರುಬಳಕೆ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ; ಗಿರೀಶ್ ಲಿಂಗಣ್ಣ ಬರಹ

ಚಿತ್ರದುರ್ಗದಲ್ಲಿ ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್-03 ಮರುಬಳಕೆ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ; ಗಿರೀಶ್ ಲಿಂಗಣ್ಣ ಬರಹ

ಇಸ್ರೋದ 'ಪುಷ್ಪಕ್‌' ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ RLV LEX-03ದ 3ನೇ ಹಾಗೂ ಅಂತಿಮ ಪ್ರಯೋಗ ಯಶಸ್ವಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜೂನ್ 23ರ ಭಾನುವಾರ ಪ್ರಯೋಗ ಯಶಸ್ವಿಯಾಗಿದೆ. ಈ ಕುರಿತು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕಾರದ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.

ಚಿತ್ರದುರ್ಗದಲ್ಲಿ ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್-03 ಮರುಬಳಕೆ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ; ಗಿರೀಶ್ ಲಿಂಗಣ್ಣ ಬರಹ
ಚಿತ್ರದುರ್ಗದಲ್ಲಿ ಇಸ್ರೋದ ಆರ್‌ಎಲ್‌ವಿ ಎಲ್‌ಇಎಕ್ಸ್-03 ಮರುಬಳಕೆ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ; ಗಿರೀಶ್ ಲಿಂಗಣ್ಣ ಬರಹ

ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಯ ನಿರಂತರ ಸಾಧನೆಗಳು, ಜಾಗತಿಕ ವೇದಿಕೆಯಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿರುವುದು ಸಂತಸದ ಸಂಗತಿ. ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತದ ಇರುವಿಕೆಯನ್ನು ಖಚಿತಪಡಿಸುತ್ತಿರುವ ಇಸ್ರೋ, ಈ ಕ್ಷೇತ್ರದಲ್ಲಿ ಜಗತ್ತೇ ತಿರುಗಿ ನೋಡುವಂತಹ ಸಾಧನೆ ಮಾಡುತ್ತಿದೆ. ಇದೀಗ ಇಸ್ರೋ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇಸ್ರೋದ 'ಪುಷ್ಪಕ್‌' ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ RLV LEX-03ದ 3ನೇ ಹಾಗೂ ಅಂತಿಮ ಪ್ರಯೋಗ ಯಶಸ್ವಿಯಾಗಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಇಂದು(ಜೂ.23-ಭಾನುವಾರ) ಬೆಳಗ್ಗೆ 7.10ಕ್ಕೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ ಎಂದು ಇಸ್ರೋ ಮೂಲಗಳು ಖಚಿತಪಡಿಸಿವೆ.

'ಪುಷ್ಪಕ್' ಹೆಸರಿನ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪುಷ್ಪಕ್ ಲ್ಯಾಂಡಿಂಗ್ ಯಶಸ್ವಿ ಪ್ರಯೋಗದ ವಿಡಿಯೋವನ್ನು ಇಸ್ರೋ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ''ಇಂದು ಬೆಳಗ್ಗೆ ಪುಷ್ಪಕ್ ಲಾಂಚ್ ವಾಹನವನ್ನು ಭಾರತೀಯ ವಾಯುಸೇನೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಲಯಿತು. ಸುಮಾರು 4.5 ಕಿ.ಮೀ ಎತ್ತರದಲ್ಲಿ ಚಿನೂಕ್ ಹೆಲಿಕಾಪ್ಟರ್ ಮತ್ತು ಪುಷ್ಪಕ್ ಲಾಂಚ್ ವಾಹನ ಪರಸ್ಪರ ಬೇರ್ಪಟ್ಟಾಗ, ಲಾಂಚ್ ವಾಹನವು ಸ್ವಾಯತ್ತವಾಗಿ ಭೂಮಿಗೆ ಲ್ಯಾಂಡ್ ಆಯಿತು..'' ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಚಳ್ಳಕೆರೆಯಲ್ಲಿ ಸ್ಥಾಪಿಸಲಾಗಿರುವ ಇಸ್ರೋ ನಿಯಂತ್ರಣ ಕೇಂದ್ರವು, ಪುಷ್ಪಕ್ ಲಾಂಚ್ ವಾಹನದ ಸುರಕ್ಷಿತ ಲ್ಯಾಂಡಿಂಗ್ ಖಚಿತಪಡಿಸಿದೆ. ಚಳ್ಳಕೆರೆಯ ರನ್‌ ವೇ ಮೇಲೆ ಪುಷ್ಪಕ್ ಯಾವುದೇ ಅಡೆತಡೆಯಿಲ್ಲದೇ ಲ್ಯಾಂಡ್ ಆಗಿದೆ. ಅಲ್ಲದೇ ಲ್ಯಾಂಡಿಂಗ್ ಸಮಯದಲ್ಲಿ ಬ್ರೇಕ್‌ ಪ್ಯಾರಾಚೂಟ್‌, ಲ್ಯಾಂಡಿಂಗ್‌ ಗೇರ್‌ ಬ್ರೇಕ್‌ ಮತ್ತು ನೋಸ್‌ ವ್ಹೀಲ್‌ ಸ್ಟೀರಿಂಗ್ ವ್ಯವಸ್ಥೆಯು ಕರಾರುವಕ್ಕಾಗಿ ಕೆಲಸ ಮಾಡಿದೆ ಎಂದೂ ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ ಮೊದಲ, 2024ರ ಮಾರ್ಚ್‌ನಲ್ಲಿ 2ನೇ ಪ್ರಯೋಗ

ಈಗಾಗಲೇ ಎರಡು ಬಾರಿ ಪುಷ್ಪಕ್ ಲಾಂಚ್ ವೆಹಿಕಲ್ ಲ್ಯಾಂಡಿಂಗ್ ಪ್ರಯೋಗ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇಂದು ನಡೆಸಲಾದ 3ನೇ ಹಾಗೂ ಅಂತಿಮ ಹಂತದ ಪ್ರಯೋಗ ಕೂಡ ಯಶಸ್ವಿಯಾಗಿದೆ. 2023ರಲ್ಲಿ ಮೊದಲ ಪ್ರಯೋಗ ಮತ್ತು ಕಳೆದ ಮಾರ್ಚ್ ತಿಂಗಳಲ್ಲಿ 2ನೇ ಪ್ರಯೋಗ ಕಾರ್ಯಾಚರಣೆಯನ್ನು ಇಸ್ರೋ ನಡೆಸಿತ್ತು.

RLV LEX-01 ಮತ್ತು RLV LEX-02 ಪ್ರಯೋಗದಲ್ಲಿ ಪುಷ್ಪಕ್ ವಾಹನವನ್ನು ರನ್‌ ವೇಯ 150 ಮೀ. ಅಗಲದ ಪ್ರದೇಶದಲ್ಲಿ ಚಿನೂಕ್ ಹೆಲಿಕಾಪ್ಟರ್ ನಿಂದ ಬೇರ್ಪಡಿಸಲಾಗಿತ್ತು. ಆದರೆ RLV LEX-03 ಪ್ರಯೋಗದಲ್ಲಿ ಪುಷ್ಪಕ್ ವಾಹನವನ್ನು ರನ್‌ ವೇಯ 500 ಮೀ. ಕ್ರಾಸ್ ರೇಂಜ್ ಪ್ರದೇಶದಲ್ಲಿ ಚಿನೂಕ್ ಹೆಲಿಕಾಪ್ಟರ್ ನಿಂದ ಬೇರ್ಪಡಿಸಲಾಗಿದೆ.

ಇಷ್ಟೇ ಅಲ್ಲದೇ ಗಂಟೆಗೆ 320 ಕಿ.ಮೀ ವೇಗದಲ್ಲಿ RLV LEX-03 ಲ್ಯಾಂಡ್ ಆಗಿರುವುದು ಕೂಡ ಒಂದು ವಿನೂತನ ದಾಖಲೆಯಾಗಿದೆ. ವಾಣಿಜ್ಯ ವಿಮಾನಗಳು ಗಂಟೆಗೆ 260 ಕಿ.ಮೀ ಮತ್ತು ಯುದ್ಧ ವಿಮಾನಗಳು ಗಂಟೆಗೆ 280 ಕಿ.ಮೀ ವೇಗದಲ್ಲಿ ಲ್ಯಾಂಡ್ ಆಗುತ್ತವೆ. ಟಚ್‌ಡೌನ್ ಬಳಿಕ ಬ್ರೇಕ್ ಪ್ಯಾರಾಚೂಟ್ ಬಳಸಿ ಪುಷ್ಪಕ್ ಲಾಂಚಿಂಗ್ ವಾಹನದ ವೇಗವನ್ನು ಗಂಟೆಗೆ 100 ಕಿ.ಮೀಗೆ ಇಳಿಸಲಾಯಿತು.

ಆರ್‌ಎಲ್‌ವಿ-ಎಲ್‌ಇಎಕ್ಸ್ ಇನರ್ಷಿಯಲ್ ಸೆನ್ಸಾರ್, ರೆಡಾರ್ ಆಲ್ಟಿಮೀಟರ್, ಫ್ಲಶ್ ಏರ್ ಡೇಟಾ ಸಿಸ್ಟಮ್, ಸ್ಯೂಡೋಲೈಟ್ ಸಿಸ್ಟಮ್ ಮತ್ತು ನಾವಿಕ್‌ನಂತಹ ಬಹು-ಸಂವೇದಕ ವ್ಯವಸ್ಥೆಗಳನ್ನು ಬಳಸುತ್ತದೆ. ಬಹು ಕಾರ್ಯಾಚರಣೆಗಳಿಗಾಗಿ ಫ್ಲೈಟ್ ಸಿಸ್ಟಮ್‌ಗಳನ್ನು ಮರುಬಳಕೆ ಮಾಡುವ ವಿನ್ಯಾಸ ಹೆಚ್ಚಿನ ದೃಢತೆಯನ್ನು ಪ್ರದರ್ಶಿಸುತ್ತದೆ.

ಭೂ ಕಕ್ಷೆಯಲ್ಲಿ ಪುಷ್ಪಕ್ ವಾಹನದ ಕಾರ್ಯಕ್ಷಮತೆಯ ಬಗ್ಗೆ ಸಂಪೂರ್ಣ ವಿಶ್ವಾಸ

ಯಶಸ್ವಿ ಲ್ಯಾಂಡಿಂಗ್ ಬಳಿಕ ಮಾತನಾಡಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ''ಪುಷ್ಪಕ್ ಮರುಬಳಕೆ ಲಾಂಚಿಂಗ್ ವೆಹಿಕಲ್ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ. ಭೂ ಕಕ್ಷೆಯಲ್ಲಿ ಪುಷ್ಪಕ್ ವಾಹನದ ಕಾರ್ಯಕ್ಷಮತೆಯ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ..'' ಎಂದು ಹೇಳಿದ್ದಾರೆ.

''ಪುಷ್ಪಕ್ ಲಾಂಚಿಂಗ್ ವಾಹನವನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಸ್ವದೇಶಿ ನಿರ್ಮಿತ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಬಳಕೆ, ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಆತ್ಮನಿರ್ಭರತೆ ಸಾಧಿಸುವ ಇಸ್ರೋದ ಬದ್ಧತೆಯನ್ನು ಪುನರುಚ್ಛಿಸುತ್ತದೆ..'' ಎಂದು ಎಸ್. ಸೋಮನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ದ ನಿರ್ದೇಶಕ ಡಾ. ಎಸ್. ಉನ್ನಿಕೃಷ್ಣನ್ ನಾಯರ್ ಮಾತನಾಡಿ, ''ಪುಷ್ಪಕ್ ಲಾಂಚಿಂಗ್ ವಾಹನದ ಯಶಸ್ವಿ ಪ್ರಯೋಗವು ಭವಿಷ್ಯದ ಕಕ್ಷೆಯ ಮರು-ಪ್ರವೇಶ ಕಾರ್ಯಾಚರಣೆಗಳಿಗೆ ಅಗತ್ಯವಾದ ನಿರ್ಣಾಯಕ ತಂತ್ರಜ್ಞಾನದ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ..'' ಎಂದು ಹೇಳಿದ್ದಾರೆ.

ಪುಷ್ಪಕ್‌ ಲಾಂಚಿಂಗ್ ವಾಹನದ ಸೇರ್ಪಡೆಯಿಂದಾಗಿ ಇಸ್ರೋದ ಉಡಾವಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಇದು ಉಪಗ್ರಹಗಳನ್ನು ನಿಗದಿತ ಕಕ್ಷಗೆ ಸೇರಿಸಿ, ನೇರವಾಗಿ ಭೂಮಿಗೆ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಪುಷ್ಪಕ್ ಲಾಂಚಿಂಗ್ ವಾಹನವನ್ನು ಮರುಬಳಕೆ ಮಾಡಬಹುದಾಗಿದ್ದು, ಭವಿಷ್ಯದಲ್ಲಿ ಈ ವಾಹನವು ಮತ್ತೆ ಹೊಸ ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮಲಿದೆ.

ಒಟ್ಟಿನಲ್ಲಿ ಪುಷ್ಪಕ್ RLV LEX-03 ಯಶಸ್ವಿ ಪ್ರಯೋಗ ಇಸ್ರೋದ ಬಾಹ್ಯಾಕಾಶ ಯೋಜನೆಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಜಗತ್ತಿನ ಇತರ ಪ್ರಬಲ ದೇಶಗಳೊಂದಿಗೆ ಸರಿಸಮನಾಗಿ ನಿಲ್ಲುವ ಭಾರತದ ಪ್ರಯತ್ನಕ್ಕೆ ಹೊಸ ಚೈತನ್ಯ ನೀಡಿದೆ ಎಂದು ಹೇಳಬಹುದು.