ಕನ್ನಡ ಸುದ್ದಿ  /  Karnataka  /  Sdmc Members Convention: Let Child Development Be The Mission Of Sdmc; A Sense Of Consensus Was Expressed In The Svym Aided Conference

SDMC members convention: ಮಕ್ಕಳ ಅಭಿವೃದ್ಧಿ ಎಸ್‌ಡಿಎಂಸಿಯ ಧ್ಯೇಯವಾಗಲಿ; ಸಮಾವೇಶದಲ್ಲಿ ವ್ಯಕ್ತವಾಯಿತು ಒಮ್ಮತದ ಭಾವ

SDMC members convention: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಯೋಜನೆಯಲ್ಲಿ ಶಾಲಾ ಶಿಕ್ಷಣ ಕಾರ‍್ಯಕ್ರಮವು ಜಾರಿಯಿರುವ ಸರಕಾರಿ ಪ್ರಾಥಮಿಕ ‍ಹಾಗೂ ಪ್ರೌಢಶಾಲೆಗಳ ಶಾಲಾ ಮೇಲುಸ್ತುವಾರಿ ಸಮಿತಿ(SDMC)ಯನ್ನು ಸಂವರ್ಧನೆಗೊಳಿಸುವ ಮುಲಕ ಶಾಲಾ ಅಭಿವೃದ್ಧಿಕಾರ್ಯಗಳಿಗೆ ಚೇತನ ತುಂಬವ ಕೆಲಸಕ್ಕಾಗಿ ಈ ಸಮಾವೇಶವನ್ನು ಹಮ್ಮಿಕೊಂಡಿತ್ತು.

ಧಾರವಾಡದಲ್ಲಿ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರ ಸಮಾವೇಶ ನಡೆಯಿತು.
ಧಾರವಾಡದಲ್ಲಿ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರ ಸಮಾವೇಶ ನಡೆಯಿತು.

ಧಾರವಾಡ: ಮಕ್ಕಳ ಅಭಿವೃದ್ಧಿಯೇ ಮಾನವ ಅಭಿವೃದ್ಧಿ, ಶಾಲಾ ಅಭಿವೃದ್ಧಿ ಎಂದರೆ, ಮಕ್ಕಳ ಅಭಿವೃದ್ಧಿ ಎಂಬುದು ನಮ್ಮ ಧ್ಯೇಯವಾಗಬೇಕು , ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿರುವ ರಾಘವೇಂದ್ರ ಭಟ್‌ ಹೇಳಿದರು.

ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ ಆಯೋಜಿಸಿದ್ದ ಎಸ್‌ಡಿಎಂಸಿ ಸದಸ್ಯರ ಸಮಾವೇಶವನ್ನು ಉದ್ದೇಶಿಸಿ, ಎಸ್‌ಡಿಎಂಸಿ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ಮಾತನಾಡಿದರು. ಬಾಲಕಾರ್ಮಿಕತೆ ತಡೆಯುವುದರಿಂದ ಶಿಕ್ಷಣದ ಸವಿಯಿಂದ ದೂರ ಉಳಿಯುವ ಮಕ್ಕಳನ್ನು ಶಿಕ್ಷಣದೆಡೆಗೆ ಸೆಳೆಯುವುದು ಇಂದಿನ ಕಾರ‍್ಯವಾಗಬೇಕು. ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಕಾರ‍್ಯೋನ್ಮುಖವಾಗಬೇಕು ಎಂಬ ಕಿವಿ ಮಾತು ಹೇಳಿದರು.

ಮಕ್ಕಳಿಗೆ ವಿಶೇಷವಾಗಿ ಈ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕು ಅವುಗಳೆಂದರೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ, ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟರು. ಪ್ರತಿ ಶಾಲಾ ಮಟ್ಟದಲ್ಲಿ ಮಕ್ಕಳ ಸುರಕ್ಷತೆಗಾಗಿ ಇರುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಅವರು ವಿವರ ನೀಡಿದರು.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕುರಿತು ಅರಿವಿರಬೇಕು. ಅಧಿಕಾರ ಆಧಾರಿತ ಹಕ್ಕು ಸಾಧನೆಯ ಬದಲು, ಹಕ್ಕು ಆಧಾರಿತ ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸಬೇಕು. ಮಕ್ಕಳ ಸ್ನೇಹಿ ಶಾಲೆಯನ್ನಾಗಿಸುವತ್ತ ಎಲ್ಲರೂ ಶ್ರಮಿಸಬೇಕು. ಶಾಲೆ ಮತ್ತು ಪಂಚಾಯಿತಿ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಎಸ್. ಡಿ. ಎಮ್. ಸಿ ಕಾರ‍್ಯನಿರ‍್ವಹಿಸುವಂತಾಗಬೇಕು. ಕೇವಲ ಎಸ್. ಡಿ. ಎಮ್. ಸಿ ಯ ಸದಸ್ಯರಾಗಿರದೇ , ಶಾಲೆಯ ಎಲ್ಲ ಮಕ್ಕಳ ಪೋಷಕರ ಸ್ಥಾನವನ್ನು ತುಂಬುವಂತಹ ಚಿಂತನೆಗೆ ತೆರೆದುಕೊಳ್ಳಬೇಕು ಎಂದು ತಿಳಿಸಿದರು.

ದಾಖಲಾತಿ ಮತ್ತು ಹಾಜರಾತಿಯ ಜತೆಗೆ ಶಿಕ್ಷಣದ ಗುಣಮಟ್ಟ ಸುಧಾರಿಸುವ ಚಟುವಟಿಕೆಗಳನ್ನು ಸಂಘಟಿಸಬೇಕು. ಶಾಲಾ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲ ಹೊಂದಿಸುವ ಕೆಲಸವಾಗಬೇಕು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವ ಬದಲು ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬ ಧ್ಯೇಯ ನಮ್ಮದಾಗಬೇಕು ಎಂದು ಹೇಳಿದರು.

ಎಸ್‌ಡಿಎಂಸಿ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಿದವರು
ಎಸ್‌ಡಿಎಂಸಿ ಸದಸ್ಯರ ಸಮಾವೇಶದಲ್ಲಿ ಭಾಗವಹಿಸಿದವರು

ಅನುಷ್ಠಾನಕ್ಕೆ ಯೋಜನೆ ಬೇಕು

ಯಾವುದೇ ಕಾರ್ಯ ಪ್ರಾರಂಭಿಸುವಾಗ ಅಡೆತಡೆಗಳು ಬರುವುದು ಸಹಜ, ಅಡೆತಡೆಗಳನ್ನು ಮೀರಿ ಕಾರ‍್ಯ ನಿರ‍್ವಹಿಸುವ ಮನಸ್ಥಿತಿ ನಮ್ಮದಾಗಬೇಕು. ನಾವು ಮಾಡುವ ಕೆಲಸವನ್ನು ಭರವಸೆಯೊಂದಿಗೆ ಮಾಡುವುದು ನಮ್ಮೆಲ್ಲರ ಸಂಕಲ್ಪವಾಗಬೇಕು. ಸೂರಶೆಟ್ಟಿಕೊಪ್ಪದಲ್ಲಿ ಪ್ರಾರಂಭವಾದ ʻಗ್ರಾಮ ಚೇತನʼ ಸಂಸ್ಥೆಯನ್ನು ಉದಾಹರಿಸಿದ ಅವರು, ಪ್ರತಿಯೊಬ್ಬರಲ್ಲಿ ಆತ್ಮನಿರ್ಭರ ಭಾವ ಜಾಗೃತವಾದರೆ ಎಲ್ಲವೂ ಸಾಧ್ಯ. ಯಾವುದೇ ಕಾರ್ಯಾರಂಭಕ್ಕೂ ಏನು ಮಾಡುವುದು ಮತ್ತು ಹೇಗೆ ಮಾಡುವುದು ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುವುದರಿಂದ ಅನುಷ್ಠಾನ ಸುಲಭವಾಗುತ್ತದೆ ಎಂದು ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಪ್ರಕಾಶ ಭಟ್ ಕಿವಿಮಾತು ಹೇಳಿದರು.

ನೆಟರ್ವಾಲಾ ಗ್ರೂಪ್ ಆಫ್ ಕಂಪನೀಸ್ ಧಾರವಾಡದಲ್ಲಿ 2013ರಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಆರೋಗ್ಯ, ಪರಿಸರ ಮತ್ತು ಸಮುದಾಯದ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದು, ಈಗ ಎಸ್. ವಿ. ವೈ. ಎಮ್ ಕೂಡ ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಸಂತಸದ ವಿಷಯ ಎಂದು ಧಾರವಾಡದ ಯೂನಿ ಅಬೆಕ್ಸ್‌ ಅಲಾಯ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ನ ಸಿಎಫ್‌ಒ ಜಯಂತ್‌ ಡಿ.ದಿವೇಕರ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಉತ್ತರ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಜಯಂತ್ ಕೆ.ಎಸ್ ಮಾತನಾಡಿ, ಕಾರಣಾಂತರಗಳಿಂದ ಶಿಕ್ಷಣವನ್ನು ಮುಂದುವರಿಸಲಾಗದೆ ಇರುವಂತಹ ಯುವಕ ಯುವತಿಯರಿಗೆ ಸಹಕಾರಿಯಾಗಲು ಈ ವರ್ಷದಿಂದ ಫ್ಯಾಷನ್ ಡಿಸೈನಿಂಗ್, ಮೆಹೆಂದಿ ಹಚ್ಚುವ ತರಬೇತಿ ಮತ್ತು ಬ್ಯೂಟಿಷಿಯನ್ ತರಬೇತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಅಗತ್ಯ ಇರುವವರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ನಮ್ಮ ಸಂಸ್ಥೆಯ ಕಾರ‍್ಯ ಚಟುವಟಿಕೆಗಳು ಸುಗಮವಾಗಿ ಸಾಗಲು ಸಹಕರಿಸುತ್ತಿರುವ ಸಮುದಾಯದವರಿಗೆ ಮತ್ತು ಆಗಮಿಸಿದ ಎಲ್ಲರಿಗೂ ವಂದಿಸಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಯೋಜನೆಯಲ್ಲಿ ಶಾಲಾ ಶಿಕ್ಷಣ ಕಾರ‍್ಯಕ್ರಮವು ಜಾರಿಯಿರುವ ಸರಕಾರಿ ಪ್ರಾಥಮಿಕ ‍ಹಾಗೂ ಪ್ರೌಢಶಾಲೆಗಳ ಶಾಲಾ ಮೇಲುಸ್ತುವಾರಿ ಸಮಿತಿ(SDMC)ಯನ್ನು ಸಂವರ್ಧನೆಗೊಳಿಸುವ ಮುಲಕ ಶಾಲಾ ಅಭಿವೃದ್ಧಿಕಾರ್ಯಗಳಿಗೆ ಚೇತನ ತುಂಬವ ಕೆಲಸಕ್ಕಾಗಿ ಸರಕಾರಿ ಶಾಲೆಗಳ ಎಸ್. ಡಿ. ಎಮ್. ಸಿ ಸದಸ್ಯರ ಸಮಾವೇಶವನ್ನು ಹಮ್ಮಿಕೊಂಡಿತ್ತು. ಧಾರವಾಡ ಜಿಲ್ಲೆಯ ೫೦ ಶಾಲೆಗಳಿಂದ ೩೫೦ಕ್ಕೂ ಹೆಚ್ಚು ಎಸ್.ಡಿ.ಎಂ.ಸಿ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.