ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರು ಸ್ಕೆಚ್; ಭದ್ರತೆ ಬಿಗಿಗೊಳಿಸಿದ ರಾಜ್ಯ ಸರ್ಕಾರ, ಕಮಲ ಪಡೆ ಬೇಡಿಕೆ ಇಟ್ಟಿದ್ದೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರು ಸ್ಕೆಚ್; ಭದ್ರತೆ ಬಿಗಿಗೊಳಿಸಿದ ರಾಜ್ಯ ಸರ್ಕಾರ, ಕಮಲ ಪಡೆ ಬೇಡಿಕೆ ಇಟ್ಟಿದ್ದೇನು?

ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರು ಸ್ಕೆಚ್; ಭದ್ರತೆ ಬಿಗಿಗೊಳಿಸಿದ ರಾಜ್ಯ ಸರ್ಕಾರ, ಕಮಲ ಪಡೆ ಬೇಡಿಕೆ ಇಟ್ಟಿದ್ದೇನು?

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​​ಶೀಟ್​​ನಲ್ಲಿ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಬಗ್ಗೆಯೂ ಉಲ್ಲೇಖವಾಗಿರುವ ಕಾರಣ ಮಲ್ಲೇಶ್ವರಂನ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. (ವರದಿ-ಎಚ್. ಮಾರುತಿ)

ರಾಜ್ಯದ ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರು ಸ್ಕೆಚ್; ಭದ್ರತೆ ಬಿಗಿಗೊಳಿಸಿದ ರಾಜ್ಯ ಸರ್ಕಾರ
ರಾಜ್ಯದ ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರು ಸ್ಕೆಚ್; ಭದ್ರತೆ ಬಿಗಿಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿ ಜಗನ್ನಾಥ ಭವನಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕಚೇರಿಯ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಜೊತೆಗೆ ಒಬ್ಬರು ಸಹಾಯಕ ಪೊಲೀಸ್ ಸಬ್​ಇನ್‌ಸ್ಪೆಕ್ಟರ್, ಮೂವರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.

ವೈಟ್ ಫೀಲ್ಡ್​​​ನ ಬ್ರೂಕ್ ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಶಂಕಿತ ಉಗ್ರರು ಬಿಜೆಪಿ ರಾಜ್ಯ ಘಟಕದ ಕಚೇರಿಯನ್ನೂ ಸ್ಫೋಟಿಸುವ ಸಂಚು ರೂಪಿಸಿದ್ದರು ಎನ್ನುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಿದ್ದಾರೆ. ಮಲ್ಲೇಶ್ವರಂ ಪಿಎಸ್​​ಐ ಬಿಎಲ್​ ಜಗದೀಶ್ ಅವರು ಮಂಗಳವಾರ ಕಚೇರಿಯ ಭದ್ರತೆಯನ್ನು ಪರಿಶೀಲಿಸಿದರು. ಕಚೇರಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಿಯೇ ಕಳುಹಿಸುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾಮಾನ್ಯವಾಗಿ ಪಕ್ಷದ ಮುಖಂಡರು ಮತ್ತು ವಿವಿಧ ಶ್ರೇಣಿಯ ಭದ್ರತೆ ಹೊಂದಿರುವ ವರಿಷ್ಠರು ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತಿತ್ತು. ಈಗ ಶಾಶ್ವತವಾಗಿ ಅಳವಡಿಸಲಾಗಿದೆ. ಕಚೇರಿಗೆ ಆಗಮಿಸುವ ಎಲ್ಲರನ್ನೂ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಪ್ರವೇಶ ದ್ವಾರದಲ್ಲೇ ಪತ್ತೆ ಹಚ್ಚಲಾಗುತ್ತದೆ. ಈ ಉದ್ದೇಶಕ್ಕಾಗಿ ಒಬ್ಬರು ಸಹಾಯಕ ಪೊಲೀಸ್ ಸಬ್​ಇನ್‌ಸ್ಪೆಕ್ಟರ್, ಮೂವರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಗಂಟೆಗೊಮ್ಮೆ ಠಾಣಾಧಿಕಾರಿ ಭೇಟಿ ನೀಡುತ್ತಾರೆ ಎಂದು ಪಿಎಸ್‌ಐ ಜಗದೀಶ್ ಹೇಳಿದ್ದಾರೆ.

ಬಿಜೆಪಿ ಕಚೇರಿ ಮುಂಭಾಗದಲ್ಲಿ 20 ಮಂದಿ ಸಿಬ್ಬಂದಿ ಇರುವ ಕೆಎಸ್‌ಆರ್‌ಪಿ ವಾಹನವನ್ನು ನಿಯೋಜಿಸಲಾಗಿದೆ. ಪಕ್ಷದ ವತಿಯಿಂದ ಆರು ಮಂದಿ ಖಾಸಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಕಚೇರಿ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಕಚೇರಿಗೆ ಆಗಮಿಸುವವರಲ್ಲಿ ಕಾರ್ಯಕರ್ತರು ಯಾರು ಮತ್ತು ಮುಖಂಡರು ಯಾರು ಎಂದು ಗುರುತಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ವಿಶೇಷ ಟಾಸ್ಕ್ ಫೋರ್ಸ್ ರಚನೆಗೆ ಬಿಜೆಪಿ ಒತ್ತಾಯ

ಉಗ್ರರು ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುವ ಸಂಚು ಮಾಡಿರುವುದು ಬಯಲಾಗಿದೆ. ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸಲು ತ್ವರಿತವಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ ಒತ್ತಾಯಿಸಿದ್ದಾರೆ. 

ದೇಶದ ಐಟಿ, ಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ಆರ್ಥಿಕತೆಯನ್ನು ನಾಶ ಮಾಡಬೇಕೆಂದು ಭಯೋತ್ಪಾದಕರು ಯೋಜನೆ ರೂಪಿಸಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್​ನ ಶಾಸಕರೊಬ್ಬರು, ಬಾಂಗ್ಲಾ ಮಾದರಿ ಹಲ್ಲೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಅಶೋಕ ಆಪಾದಿಸಿದರು. ಬಾಂಗ್ಲಾದೇಶದಿಂದ ಬೆಂಗಳೂರಿಗೆ ಹಲವಾರು ಮಂದಿ ಆಧಾರ್ ಕಾರ್ಡ್ ಪಡೆದು ಬರುತ್ತಿದ್ದಾರೆ.

ಇದರಿಂದ ಭಯೋತ್ಪಾದನಾ ಚಟುವಟಿಕೆ ಹೆಚ್ಚುತ್ತಿದೆ. ರಾಜ್ಯ ಗೃಹ ಇಲಾಖೆ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ವಿಶೇಷ ಟಾಸ್ಕ್ ಫೋರ್ಸ್ ರಚನೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ರಾಜ್ಯದೊಳಗೆ ನುಸುಳುವ ಬಾಂಗ್ಲಾ ಪ್ರಜೆಗಳನ್ನು ಕೂಡಲೇ ಪತ್ತೆ ಮಾಡಿ ಅವರನ್ನು ಹೊರ ಹಾಕಬೇಕು. ಇಲ್ಲವಾದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಒದಗಿಬಂದ ಸ್ಥಿತಿಯೇ ರಾಜ್ಯಕ್ಕೂ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟವಾದಾಗ, ಇದು ವ್ಯಾಪಾರದ ಜಗಳ ಎಂದು ಸಚಿವರು ಹೇಳಿದ್ದರಿಂದ ಭಯೋತ್ಪಾದಕರಿಗೆ ಪ್ರೇರಣೆ ಸಿಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದಕರಿಗೆ ಭಯವೇ ಇಲ್ಲವಾಗಿದೆ ಎಂದರು. ಸರ್ಕಾರದ ಮೃದು ಧೋರಣೆ ತಾಳಿರುವುದರಿಂದ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಅಶೋಕ ಆಪಾದಿಸಿದರು.

Whats_app_banner