ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಜತೆ ಪ್ರವಾಸಿಗರ ಸೆಲ್ಫಿ, ಜನ ಬುದ್ದಿ ಕಲಿಯೋದು ಯಾವಾಗ?: ವಿಡಿಯೋ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಜತೆ ಪ್ರವಾಸಿಗರ ಸೆಲ್ಫಿ, ಜನ ಬುದ್ದಿ ಕಲಿಯೋದು ಯಾವಾಗ?: ವಿಡಿಯೋ ನೋಡಿ

ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಜತೆ ಪ್ರವಾಸಿಗರ ಸೆಲ್ಫಿ, ಜನ ಬುದ್ದಿ ಕಲಿಯೋದು ಯಾವಾಗ?: ವಿಡಿಯೋ ನೋಡಿ

ಅರಣ್ಯ ಪ್ರದೇಶ ರಸ್ತೆಗಳು, ಇಲ್ಲವೇ ವನ್ಯಜೀವಿಗಳು ನಿಂತಾಗ ಅವುಗಳ ಬಳಿ ಹೋಗಲೇಬೇಡಿ ಎಂದು ಕರ್ನಾಟಕ ಅರಣ್ಯ ಇಲಾಖೆ ಆಗಾಗ ಹೇಳುತ್ತಲೇ ಇದ್ದರೂ ಜನ ಮಾತ್ರ ಸೆಲ್ಫಿ ಹುಚ್ಚಿನಲ್ಲಿ ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇದ್ಧಾರೆ. ಇಂತಹದೇ ಘಟನೆ ನಡೆದಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು

ಹೀಗಿದೆ ನೋಡಿ ಕಾಡಾನೆ ಜತೆಗೆ ಸೆಲ್ಫಿ ಗೀಳು
ಹೀಗಿದೆ ನೋಡಿ ಕಾಡಾನೆ ಜತೆಗೆ ಸೆಲ್ಫಿ ಗೀಳು

ಮಂಗಳೂರು:ಜನರಿಗೆ ಎಷ್ಟು ಬುದ್ದಿ ಹೇಳಿದರೂ ಕೇಳೋದಿಲ್ಲ. ದಂಡ ವಿಧಿಸಿದರೂ ಜನರ ಮಾತ್ರ ತಪ್ಪು ಮಾಡೋದು ಬಿಡೋದಿಲ್ಲ.ವನ್ಯಜೀವಿಗಳು ಇರುವಾಗ ಹುಷಾರು. ಯಾವುದೇ ಕಾರಣಕ್ಕೂ ಅವುಗಳ ಬಳಿ ಹೋಗಬೇಡಿ. ಸೆಲ್ಫಿ ಹುಚ್ಚು ಸಾಹಸಕ್ಕೆ ಹೋಗಬೇಡಿ ಎಂದು ಹೇಳಿದರೂ ಹುಚ್ಚು ಸಾಹಸ ಮಾಡುತ್ತಲೇ ಇರುತ್ತಾರೆ. ಇಂತಹುದೇ ಘಟನೆ ಈಗ ಮಲೆನಾಡಿನ ಘಟ್ಟ ಪ್ರದೇಶದಲ್ಲಿ ನಡೆದಿದೆ.ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ನಾಲ್ಕನೇ ತಿರುವಿನಲ್ಲಿ ಹೆದ್ದಾರಿ ಮಧ್ಯೆ ಒಂಟಿ ಸಲಗ ಕಂಡು ಬಂದಿದೆ. ರಸ್ತೆಯಲ್ಲೇ ನಿಂತಿದ್ದ ಒಂಟಿ ಸಲಗವನ್ನು ನೋಡಿ, ಕೆಲ ಪ್ರವಾಸಿಗರು ಸೆಲ್ಫಿ ತೆಗೆಯುವ ಉದ್ದೇಶದಿಂದ ಅದರ ಸಮೀಪದವರೆಗೆ ತೆರಳಿದರು. ಈ ವೇಳೆ ಸಲಗ ರೋಷವನ್ನು ವ್ಯಕ್ತಪಡಿಸಿತು.

ಇದರಿಂದ ಅನೇಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳ ಸಂಚಾರ ಸ್ಥಗಿತಗೊಂಡಿತು.ಕಾಡಾನೆ ಯಾವುದೇ ರೀತಿಯ ಹಾನಿ ಉಂಟು ಮಾಡಿಲ್ಲ. ಪರಿಸರ ತಜ್ಞರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸಿಗರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ವನ್ಯಜೀವಿಗಳು ಮಾನವ ಸಂಪರ್ಕದಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತವೆ. ಈ ತರಹದ ವರ್ತನೆ ಮುಂದಿನ ದಿನಗಳಲ್ಲಿ ದುರಂತಗಳಿಗೆ ದಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ವನ್ಯಜೀವಿಗಳೊಂದಿಗೆ ಸೆಲ್ಫಿ ಬೇಡ: ಈಶ್ವರ ಖಂಡ್ರೆ ಮನವಿ

ಅರಣ್ಯ ಪ್ರದೇಶದೊಳಗಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ವಾಹನದಿಂದ ಇಳಿದು ವನ್ಯಜೀವಿಯ ಫೋಟೋ ತೆಗೆಯುವುದು, ಸೆಲ್ಫಿ ತೆಗೆಯುವ ಸಾಹಸ ಮಾಡುತ್ತಿದ್ದು, ಇಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಇಂದು ಬೆಳಗ್ಗೆ ಕೆಲವು ಪ್ರವಾಸಿಗರು ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವ ಸಚಿವರು, ಅರಣ್ಯ ಮಾರ್ಗದಲ್ಲಿ ಸಂಚರಿಸುವಾಗ ವಾಹನಗಳಿಂದ ಕೆಳಗೆ ಇಳಿಯುವುದು ಅಪರಾಧವಾಗಿದ್ದು, ಆ ವಾಹನದ ನೋಂದಣಿ ಸಂಖ್ಯೆ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದ್ದಾರೆ.

ರಾಜ್ಯ ಸರ್ಕಾರ, ಅರಣ್ಯ ಇಲಾಖೆ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಶ್ರಮಿಸುತ್ತಿದೆ. ಸಾರ್ವಜನಿಕರು ಈ ರೀತಿ ಸೆಲ್ಫಿ ತೆಗೆದುಕೊಳ್ಳುವ, ಫೋಟೋ ತೆಗೆಯುವಾಗ ಅನಾಹುತ ಸಂಭವಿಸುವ ಅಪಾಯ ಇರುತ್ತದೆ. ಯಾರೂ ತಮ್ಮ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಆಡಬಾರದು ಎಂದು ಮನವಿ ಮಾಡಿದ್ದಾರೆ.

ವರದಿ: ಹರೀಶ ಮಾಂಬಾಡಿ.ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.