ದಕ್ಷಿಣ ಕನ್ನಡ: ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಆರೋಗ್ಯ ಸ್ಥಿತಿ ಗಂಭೀರ; ಸ್ವಗೃಹದಲ್ಲಿ ಆರೈಕೆ
ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ಬಾಳೆಪುಣಿಯ ಸ್ವಗೃಹದಲ್ಲಿ ಆರೈಕೆಯಲ್ಲಿದ್ದಾರೆ.

ಮಂಗಳೂರು: ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿರುವ ಹಿರಿಯ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರು ಬಾಳೆಪುಣಿಯ ತಮ್ಮ ಸ್ವಗೃಹದಲ್ಲಿದ್ದು, ಅವರ ಚೇತರಿಕೆಗೆ ಪತ್ರಿಕೋದ್ಯಮ ವಲಯದಲ್ಲಿ ಕೋರಿಕೆ ವ್ಯಕ್ತವಾಗುತ್ತಿದೆ. ಗಂಭೀರ ಆರೋಗ್ಯ ಸ್ಥಿತಿಯ ನಡುವೆಯೂ ಅವರ ನಾಡಿಮಿಡಿತ ಸುಧಾರಿಸುತ್ತಿದೆ ಎಂದು ಕುಟುಂಬದ ಮೂಲಗಳಿಂದ ಎಚ್‌ಟಿ ಕನ್ನಡಕ್ಕೆ ಮಾಹಿತಿ ಲಭಿಸಿದೆ.
ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕರ್ನಾಟಕದ ಜನರಿಗೆ ಪರಿಚಯಿಸಿದ ಹಿರಿಮೆ ಗುರುವಪ್ಪ ಬಾಳೆಪುಣಿ ಅವರದ್ದು. ಕೆಲವು ದಶಕಗಳ ಕಾಲ ಪತ್ರಿಕೋದ್ಯಮ ವಲಯದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಹೊಸದಿಗಂತ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿದ್ದ ಅವರು, ಸುದೀರ್ಘ 26 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಪತ್ರಿಕಾರಂಗದಲ್ಲಿ ದಶಕಗಳ ಅನುಭವ ಇರುವ ಹಿರಿಯ ಪತ್ರಕರ್ತ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಹಲವು ಪ್ರಶಸ್ತಿಗಳು
ಪತ್ರಿಕೋದ್ಯಮದಲ್ಲಿ ಅಪಾರ ಅನುಭವ ಹೊಂದಿದ್ದ ಬಾಳೆಪುಣಿ ಅವರಿಗೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಸ್ವಗೃಹದಲ್ಲಿ ಆರೈಕೆ
ಸದ್ಯ ಹಿರಿಯ ಪತ್ರಿಕೋದ್ಯೋಗಿಯ ಚೇತರಿಕೆಗೆ ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ವಲಯದಲ್ಲಿ ಪ್ರಾರ್ಥನೆ ವ್ಯಕ್ತವಾಗುತ್ತಿದೆ. ಗುರುವಪ್ಪ ಬಾಳೆಪುಣಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ, ಬಾಳೆಪುಣಿ ಅವರ ಆರೋಗ್ಯ ಗಂಭೀರವಾಗಿದೆ. ನಾಡಿಮಿಡಿತ ತುಸು ಸುಧಾರಿಸುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
