ಮುರಳೀಧರ್ ಖಜಾನೆ ಲೇಖನ: ಕಣ್ಣು ಕಾಣದ ʻಗಾವಿಲʼರಿಂದ ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ
ಗೃಹ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ ಕೇವಲ 87 ಆರೋಪಿಗಳ ಬಂಧನವಾಗಿದೆ. ಆದರೆ ಶಿಕ್ಷೆಯಾಗಿರುವುದು ಕೇವಲ ಒಂಭತ್ತು ಮಂದಿಗೆ ಮಾತ್ರ. ಈ ಅಂಕಿ-ಅಂಶಗಳು ಮಹಿಳೆಯರ ಮೇಲಿನ ವಿಶೇಷವಾಗಿ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳೇನು? ಎಂಬ ಪ್ರಶ್ನೆ ಕಾಡುತ್ತದೆ

" ಹೆಣ್ಣಲ್ಲವೇ ನಮ್ಮನ್ನೆಲ್ಲಾ ಹಡೆದ ತಾಯಿ
ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು
ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು
ಕಾಣದ ಗಾವಿಲರು..!
ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು..? "
-ಸಂಚಿ ಹೊನ್ನಮ್ಮ
ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಹದಿನೇಳನೇ ಶತಮಾನದ ಸಂಚಿ ಹೊನ್ನಮ್ಮ ಬರೆದ ಸಾಲುಗಳು ನೆನಪಿಗೆ ಬರುತ್ತಿವೆ. ಈಕೆ ಈ ಸಾಲುಗಳನ್ನು ಬರೆದು ಶತಮಾನಗಳೇ ಕಳೆದಿದ್ದರೂ, ನಮ್ಮ ಸಮಾಜ ಇಂದಿಗೂ “ಕಣ್ಣು ಕಾಣದ ಗಾವಿಲ”ರಿಂದಲೇ ತುಂಬಿ ಹೋಗಿರುವಂತೆ ಕಾಣುತ್ತಿದೆ.
ಗೃಹ ಇಲಾಖೆಯ ಅಂಕಿ-ಅಂಶ ಇದಕ್ಕೆ ಸ್ಪಷ್ಟ ನಿದರ್ಶನ. ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದೆ. ಗೃಹ ಇಲಾಖೆ ನೀಡುವ ಅಂಕಿ- ಅಂಶಗಳ ಪ್ರಕಾರ ಫೆಬ್ರವರಿ 20 ನೇ ತಾರೀಕಿನವರೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 799 ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕೇವಲ 87 ಆರೋಪಿಗಳ ಬಂಧನವಾಗಿದೆ. ಇದು ಈ ವರ್ಷದ ಅಂಕಿ- ಅಂಶವಾದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ.
ಶೇ ಒಂಭತ್ತರಷ್ಟು ಪ್ರಕರಣ ಹೆಚ್ಚಳ
2023 ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ – 6492, ಈ ಪ್ರಕರಣಗಳಲ್ಲಿ ಬಂಧಿತರಾದವರ ಸಂಖ್ಯೆ - 96922024 ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ - 6326- ಈ ಪೈಕಿ ಬಂಧಿತರಾದವರ ಸಂಖ್ಯೆ – 6779. ಇನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವೂ ಕಡಿಮೆ ಆಗಿರುವುದು ಆತಂಕಕಾರಿ ಬೆಳವಣಿಗೆ. 2023 ರಲ್ಲಿ 19 ಪ್ರಕರಣಗಳಲ್ಲಿ ಶಿಕ್ಷೆಯಾದರೆ, 400 ಮಂದಿ ಖುಲಾಸೆಯಾಗಿದ್ದಾರೆ. 2024 ರಲ್ಲಿ 8 ಮಂದಿಗೆ ಶಿಕ್ಷೆಯಾದರೆ, 57 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಆಗಿದ್ದಾರೆ. ಇನ್ನು ಈ ವರ್ಷ ಅಂದರೆ 2025 ರಲ್ಲಿ ಯಾವುದೇ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ.ಅದೇ ರೀತಿಯಲ್ಲಿ 2023 ರಲ್ಲಿ ರಾಜ್ಯದಲ್ಲಿ 601 ಅತ್ಯಾಚಾರ ಪ್ರಕರಣಗಳು ನಡೆದಿವೆ. ಈ ಪೈಕಿ 773 ಮಂದಿಯನ್ನು ಬಂಧನ ಮಾಡಲಾಗಿದೆ. ಅದೇ ರೀತಿಯಲ್ಲಿ 2024 ರಲ್ಲಿ 736 ಅತ್ಯಾಚಾರ ಪ್ರಕರಣಗಳು ನಡೆದರೆ, 869 ಮಂದಿಯ ಬಂಧನ ಆಗಿದೆ. 2025 ರಲ್ಲಿ ಫೆಬ್ರವರಿ ತಿಂಗಳ ವರೆಗೆ 124 ಅತ್ಯಾಚಾರ ಪ್ರಕರಣಗಳು ನಡೆದಿವೆ. ಈ ಪೈಕಿ 20 ಆರೋಪಿಗಳ ಬಂಧನ ಆಗಿದೆ.
ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಪದೇ ಪದೇ ವರದಿ ಆಗುತ್ತಿವೆ. ಇತ್ತೀಚೆಗೆ ಹಂಪಿಯಲ್ಲಿ ವಿದೇಶಿ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೇ ಮಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಬೆಂಗಳೂರಿನಲ್ಲಿ ಕಿರಾತಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಪ್ರಕರಣಗಳ ಸರಾಸರಿ ಲೆಕ್ಕಾಚಾರ ತೆಗೆದರೆ, ಪ್ರತಿದಿನ ಕರ್ನಾಟಕದಲ್ಲಿ ಹದಿನೈದು ಲೈಂಗಿಕ ಕಿರುಕುಳದ ಪ್ರಕರಣಗಳು ವರದಿಯಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇಕಡಾ ಒಂಭತ್ತರಷ್ಟು ಪ್ರಕರಣ ಹೆಚ್ಚಿರುವುದು ಕಂಡು ಬರುತ್ತದೆ. ಆದರೆ, ನಮ್ಮ ಸಮಾಜ ಮತ್ತು ರಾಜಕಾರಣ ತನ್ನ ಎಲ್ಲ ಲಿಂಗಸೂಕ್ಷ್ಮಸಂವೇದನೆಗಳನ್ನು ಕಳೆದುಕೊಂಡಂತೆ ಕಾಣುತ್ತದೆ.
ಬೆಂಗಳೂರಿನಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಹಗುರವಾಗಿ ಮಾತನಾಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. "ಲೈಂಗಿಕ ದೌರ್ಜನ್ಯವನ್ನು ಸಹಜಗೊಳಿಸುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ.." ಎಂದು ಪರಮೇಶ್ವರ್ ಇದೀಗ ಸ್ಪಷ್ಟಪಡಿಸಿದ್ದಾರೆ.
"ನಿನ್ನೆ ನಾನು ನೀಡಿದ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ವ್ಯಕ್ತಿ. ಮಹಿಳೆಯರಿಗೆ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ.." ಎಂದು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ʻನಾವುʼ ಮತ್ತು ʻಅವರುʼ ರಾಜಕಾರಣಿಗಳ ಬೇಧ-ಭಾವ
“ಜಾತಿ ಎರಡೇ ಎರಡು ಅದು ಗಂಡು-ಹೆಣ್ಣ ಎಂದು….” ಎಂದು ಕನ್ನಡದ ಸಾರಸ್ವತ ಲೋಕ ನಂಬಿದ್ದರೂ, ಈ ಕಣ್ಣುಕಾಣದ ಗಾವಿಲರು, ʻನಾವುʼ (US) ಮತ್ತು ʻಅವರುʼ (THEM) ಎಂದು ಸಮಾಜವನ್ನು ಧರ್ಮ, ಜಾತಿ ಆಧಾರವಾಗಿ ವಿಭಜಿಸುತ್ತಾ. “ನಮ್ಮವರೇ ಏಕೆ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಅವರಲ್ಲಿ ಏಕೆ ಆಗುತ್ತಿಲ್ಲ? ಎಂದು ಪ್ರಶ್ನಿಸಿ, ಹಿರಿಯ ರಾಜಕಾರಣಿಯೊಬ್ಬರು ತಮ್ಮ ಪಾಂಡಿತ್ಯ ಮೆರೆದಿದ್ದಾರೆ. ಇಂಥ ಸಾಮಾಜಿಕ ಪಿಡುಗನ್ನು ರಾಜಕೀಕರಣ, ಧಾರ್ಮೀಕರಣಗೊಳಿಸುವ ಪ್ರಯತ್ನ ನಡೆಸುತ್ತಿರುವುದನ್ನು ಖಂಡಿಸಬೇಕೆಂದು ಯಾರಿಗೂ ಅನ್ನಿಸದಿರುವುದು ಕಾಲದ ದುರಂತ. ಈ ವರದಿಯನ್ನು ಆಧರಿಸಿ, ಬಿಜೆಪಿ ಮತ್ತು ಜನತಾದಳ ಸರ್ಕಾರದ ಮೇಲೆ ಮುಗಿಬಿದ್ದಿದೆ. ಅದರಲ್ಲಿ ತಪ್ಪೇನೂ ಇಲ್ಲ. ಇಂಥ ಬೆಳವಣಿಗಳನ್ನು ವಿರೋಧ ಪಕ್ಷಗಳು ಪ್ರಶ್ನಿಸಲೇಬೇಕು. ಆದರೆ, ಅವರ ಉದ್ದೇಶ ರಾಜಕೀಯವನ್ನು ಮೀರಿದ ಮತ್ತು ಧರ್ಮ ನಿರಪೇಕ್ಷ ಭಾವದಿಂದ ಕೂಡಿರಬೇಕು ಅಷ್ಟೆ.
ಭ್ರೂಣ ಹತ್ಯೆ-ಬಾಣಂತಿಯರ ಸಾವು
ಕಳೆದ ವರ್ಷ ಕರ್ನಾಟವನ್ನು ನಡುಗಿಸಿದ ಸಂಗತಿಯೆಂದರೆ ಹೆಣ್ಣು ಭ್ರೂಣ ಹತ್ಯೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಒಪ್ಪಿಕೊಂಡಿರುವಂತೆ ಕಳೆದ ವರ್ಷ ಎಂಟು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಲವತ್ತಾರು ಮಂದಿಯನ್ನು ಬಂಧಿಸಲಾಗಿದೆ. ಹಾಗೆಯೇ ಕಳೆದ ವರ್ಷ ಆಗಸ್ಟ್ ಯಿಂದ ನವೆಂಬರ್ ವರೆಗೂ ಕೇವಲ ನಾಲ್ಕು ತಿಂಗಳಲ್ಲಿ 217 ಪ್ರಕರಣಗಳೊಂದಿಗೆ ಈ ವರ್ಷದ ನವೆಂಬರ್ ವರೆಗೂ ರಾಜ್ಯದಲ್ಲಿ 348 ಬಾಣಂತಿಯರ ಸಾವು ದಾಖಲಾಗಿದೆ. ಈ ಪೈಕಿ 179 ಮಂದಿ ಸರ್ಕಾರಿ ಆಸ್ಪತ್ರೆಗಳು ಹಾಗೂ 38 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್ ಮತ್ತು ನವೆಂಬರ್ ನಡುವೆ ರಾಜ್ಯದಲ್ಲಿ ಪ್ರತಿ ತಿಂಗಳು 50 ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ವರದಿಯಾಗಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಹೇಮಾ ಸಮಿತಿ-ಕನ್ನಡ ಚಿತ್ರೋದ್ಯಮ
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರು ಹಾಗು ತಂತ್ರಜ್ಞರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಸದ್ದು ಮಾಡಿತು. ಏಳು ವರ್ಷಗಳ ಹಿಂದೆ ಶೃತಿ ಹರಿಹರನ್ ಮೇಲೆ ನಡೆಯಿತೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಸಾಕಷ್ಟು ಸುದ್ದಿಯಾಗಿ ತಣ್ಣಗಾಯಿತು. ಇತ್ತೀಚೆಗೆ ಕೇರಳದ ಹೇಮಾ ಸಮಿತಿ ವರದಿ ಸದ್ದು ಮಾಡಿದ್ದು ಕರ್ನಾಟಕದಲ್ಲೇ. ಆಗ ರಾಜ್ಯದಲ್ಲಿ ಅಂಥ ಸಮಿತಿಯೊಂದು ರಚನೆಯಾಗಬೇಕೆಂದು ಚಿತ್ರರಂಗದ ಮಹಿಳೆಯರಿಂದಲೇ ಒತ್ತಾಯ ಕೇಳಿ ಬಂತು. ಮಹಿಳಾ ಆಯೋಗ ಮಧ್ಯ ಪ್ರವೇಶ ಮಾಡಿ ಸಮಿತಿಯೊಂದು ರೂಪಗೊಂಡಿತು. ಆ ಸಮಿತಿಯನ್ನು ವಿರೋಧಿಸಿ, ಇಡೀ ಚಿತ್ರರಂಗವೇ ಮುಗಿಬಿತ್ತು. ಅಂತಿಮವಾಗಿ ಚಿತ್ರರಂಗಕ್ಕೆ ಅನುಕೂಲಕರವಾದ ಪುರುಷ ಪ್ರಾಧಾನ್ಯ ಸಮಿತಿಯೊಂದು ರಚನೆಯಾಗಿದೆ. ಆದರೆ ಅದೇನು ಮಾಡುತ್ತಿದೆ ಎಂದು ಮಹಿಳಾ ಆಯೋಗ ತಲೆಕಡಿಸಿಕೊಂಡಂತೆ ಕಾಣುತ್ತಿಲ್ಲ.
ಮಧು-ಜಾಲ
ತೀರಾ ಇತ್ತೀಚೆಗೆ ನಡೆದ ʻಮಧುಜಾಲʼ ಅಥವಾ Honey Trap ಪ್ರಕರಣವನ್ನೇ ಗಮನಿಸಿದರೆ, ಪುರುಷ ಪ್ರಧಾನ ರಾಜಕಾರಣ ಯಾವ ರೀತಿ ಮಹಿಳೆಯರನ್ನು ಶೋಷಿಸುತ್ತಿದೆ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಸುಮಾರು ಹದಿಮೂರು ವರ್ಷಗಳ ಹಿಂದೆ ಆಗಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ ಸಿ. ಪಾಟೀಲ್ ಮೊಬೈಲ್ ನಲ್ಲಿ ಆಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರೆನ್ನಲಾದ ಸಂಗತಿ ಕೋಲಾಹಲವನ್ನೇ ಉಂಟು ಮಾಡಿತು. ಈ ಮೊಬೈಲ್ ಬಿಜೆಪಿಯ ಕೃಷ್ಣ ಪಾಲೇಮಾರ್ ಅವರಿಗೆ ಸೇರಿದ್ದು ಎನ್ನಲಾಗಿತ್ತು. ಈ ಪ್ರಕರಣ ವಿಧಾನ ಸಭಾ ಅಧಿವೇಶನದ ಅವಧಿಯಲ್ಲೇ ನಡೆದ ಕಾರಣ, ಈ ಪ್ರಕರಣವನ್ನು ತನಿಖೆ ಮಾಡಲು ಸದನ ಸಮಿತಿಗೆ ಒಪ್ಪಿಸಲಾಯಿತು. ತನಿಖೆ ನಡೆಸಿದ ಸದನ ಸಮಿತಿ, ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಯಾರದೂ ತಪ್ಪೇ ಇಲ್ಲ ಎನ್ನುವಂಥ ವರದಿ ಸಲ್ಲಿಸಿತು. ಅಲ್ಲಿಗೆ ಆ ಪ್ರಕರಣ ಮುಗಿಯಿತು. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಲೈಂಗಿಕ ಕರ್ಮಕಾಂಡದಲ್ಲಿ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರ ಹೆಸರು ಕೇಳಿಬಂತು. ಜೊತೆಯಲ್ಲಿಯೇ. ಕಾಂಗ್ರೆಸ್ ನಾಯಕ ಎಚ್ ವೈ ಮೇಟಿ ಅವರ ಹೆಸರೂ ಕೇಳಿ ಬಂತು.
“ಪಾಪ ರೇವಣ್ಣ” ಎಂದ ರಾಜಣ್ಣ
ಇತ್ತೀಚಿನ ವಿಧಾನ ಸಭಾ ಅಧಿವೇಶನದಲ್ಲಿ ʻಮಧುಜಾಲʼ ಬಗ್ಗೆ ಪ್ರಸ್ತಾಪಿಸಿ ದೇಶಾದ್ಯಂತ ತಲ್ಲಣ ಉಂಟುಮಾಡಿದವರು ಸಹಕಾರಿ ಸಚಿವ ರಾಜಣ್ಣ. ಇದಕ್ಕೆ ಕುಮ್ಮಕ್ಕು ನೀಡಿದವರು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್. ರಾಜ್ಯದಲ್ಲಿ ಒಟ್ಟು ನಲವತ್ತೆಂಟು ರಾಜಕೀಯ ನಾಯಕರ ಮೇಲೆ ಈ ಮಧುಜಾಲ ಬೀಸಲಾಗಿತ್ತು ಎಂದು ರಾಜಣ್ಣ ಸಾರ್ವಜನಿಕವಾಗಿಯೇ ಹೇಳಿದ್ದರಿಂದ ಇಂದು ದೇಶ ಮತ್ತು ರಾಜ್ಯದಲ್ಲಿ ಬಹುಚರ್ಚಿತ ಸಂಗತಿಯಾಗಿಬಿಟ್ಟಿದೆ. ರಾಜ್ಯದಲ್ಲಿ ಸಿಡಿ ಮತ್ತು ಪೆನ್ ಡ್ರೈವ್ ಕಾರ್ಖಾನೆ ಚಾಲನೆಯಲ್ಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಕುರಿತು ತನಿಖೆಯೊಂದು ನಡೆಯುತ್ತಿದೆ. ಮೇಲಿನ ಘಟನೆಗಳನ್ನು ನೋಡಿದರೆ, ರಾಜಕಾರಣಿಗಳು ಏಕೆ ಇದಕ್ಕೆಲ್ಲ ಪಕ್ಕಾಗುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿಯೇ ಮೂಡುತ್ತದೆ.
ಪೋಸ್ಕೋ ಪ್ರಕರಣ ಮತ್ತು ಯಡಿಯೂರಪ್ಪ
ಪೋಸ್ಕೋ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಬಿಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣದಲ್ಲಿ ನ್ಯಾಯಾಲಯ, “ಹಿರಿಯ ಹಾಗು ಮುತ್ಸದಿ ರಾಜಕಾರಣಿಯಾಗಿರುವವರು ಎಚ್ಚರದಿಂದಿರಬೇಕಿತ್ತಲ್ಲವೇ? ಎಂದು ಕೇಳಿಯೂ ಆಯಿತು. “ನಾನೇನು ಶ್ರೀರಾಮಚಂದ್ರನೂ ಅಲ್ಲ. ಸತ್ಯ ಹರಿಶ್ಚಂದ್ರನೂ ಅಲ್ಲ” ಎಂದು ರಾಜಣ್ಣ ಹೇಳಿರುವುದು ಕೇಳಿದರೆ, ಯಾರು ಯಾರ ಮುಂದೆ ತಲೆ ತಗ್ಗಿಸಬೇಕು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅಷ್ಟೇ ಅಲ್ಲ. ಇದೇ ರಾಜಣ್ಣ ಅವರು, ಸದನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಜೆಡಿಎಸ್ ನ ರೇವಣ್ಣ ಅವರನ್ನು ಕುರಿತು. "ಪಾಪ ರೇವಣ್ಣ” ಎಂದಿರುವುದು ಮತ್ತಷ್ಟು ಆಶ್ಚರ್ಯ ಹುಟ್ಟಿಸುವುದರೊಂದಿಗೆ ನಮ್ಮ ಸಾಮಾಜಿಕ ಅಧಃಪತನವನ್ನು ಸೂಚಿಸುತ್ತದೆ.
ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಇವಲ್ಲ ಸಹಜ ಎನ್ನುವಂತೆ ಎಲ್ಲರೂ ನಡೆದುಕೊಳ್ಳುತ್ತಿರುವುದರಿಂದ ಲೈಂಗಿಕವಾಗಿ ದೌರ್ಜನ್ಯ ಎಸಗುವವರಿಗೆ ಒಂದು ರೀತಿಯ ಪರವಾನಗಿ ಸಿಕ್ಕಂತಾಗಿ ಅವರು ʻನಿರ್ಭಯʼ ರಾಗಿದ್ದಾರೆ. “ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಹೆಚ್ಚು ನಿರ್ಭಯಾ ನಿಧಿಯನ್ನು ಖರ್ಚು ಮಾಡಿದ್ದೇವೆ ಮತ್ತು ಕೇಂದ್ರ ಸರ್ಕಾರದೊಂದಿಗೆ ಅದನ್ನು ಜಾರಿಗೆ ತಂದಿದ್ದೇವೆ” ಎನ್ನುತ್ತಿದ್ದಾರೆ ಗೃಹ ಸಚಿವ ಪರಮೇಶ್ವರ್.

ವಿಭಾಗ