ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ಸಂಗ್ರಹ ಬಂದ್; ದೆಹಲಿ ಹೈಕೋರ್ಟ್ ತೀರ್ಪಿಗೆ ಮಾಲೀಕರು, ಕಾರ್ಮಿಕರು ಹೇಳುವುದೇನು?
ಹೋಟೆಲ್‌ಗಳಲ್ಲಿ ಬಿಲ್‌ನ ಜತೆ ಸೇವಾ ಶುಲ್ಕವನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಇತ್ತೀಚೆಗೆ ದೆಹಲಿ ಹೈಕೋರ್ಟ್ ಈ ಸೇವಾ ಶುಲ್ಕ ಕಡ್ಡಾಯ ಅಲ್ಲ ಎಂದು ತೀರ್ಪು ನೀಡಿದೆ. ಜತೆಗೆ ಸೇವಾ ಶುಲ್ಕವನ್ನು ಸಂಗ್ರಹಿಸುವುದು ಕಾನೂನುಬಾಹಿರ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬೆಂಗಳೂರು: ಊಟ ತಿಂಡಿ ಪದಾರ್ಥಗಳ ಸೇವನೆ ನಂತರ ಹೋಟೆಲ್‌ಗಳಲ್ಲಿ ಬಿಲ್‌ನ ಜತೆ ಸೇವಾ ಶುಲ್ಕವನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಈ ಸೇವಾ ಶುಲ್ಕ ಕಡ್ಡಾಯ ಅಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಜತೆಗೆ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಗ್ರಾಹಕರು ಇಚ್ಚಿಸಿದಲ್ಲಿ ಸ್ವಯಂ ಪ್ರೇರಣೆಯಿಂದ ಟಿಪ್ಸ್ ನೀಡಬಹುದೇ ಹೊರತು ಹೋಟೆಲ್‌ಗಳು ಸೇವಾ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸೇವಾ ಶುಲ್ಕ ಎಂದರೆ ಸರ್ಕಾರಕ್ಕೆ ಕಟ್ಟುವ ತೆರಿಗೆ ಎಂದೂ ಕೆಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಈ ಹಣ ಸರ್ಕಾರಕ್ಕೆ ಹೋಗುವುದೇ ಇಲ್ಲ. ಬದಲಾಗಿ ಹೋಟೆಲ್‌ನವರಿಗೆ ಉಳಿದುಕೊಳ್ಳುತ್ತದೆ. ಕೆಲವು ಹೋಟೆಲ್‌ಗಳಲ್ಲಿ ಈ ಹಣವನ್ನು ನೌಕರರ ನಡುವೆ ಸಮಾನವಾಗಿ ಹಂಚಿದರೆ ಇನ್ನೂ ಕೆಲವು ಹೋಟೆಲ್ ಮಾಲೀಕರು ಹೋಟೆಲ್ ವೆಚ್ಚಕ್ಕೆ ಉಳಿಸಿಕೊಂಡು ಉಳಿದ ಹಣವನ್ನು ನೌಕರರಿಗೆ ವಿತರಣೆ ಮಾಡುತ್ತಾರೆ.
ಸೇವಾ ಶುಲ್ಕ ಕುರಿತು ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮಾತನಾಡಿಸಿದಾಗ ಸೇವಾ ಶುಲ್ಕದಿಂದ ಸಹಾಯವಾಗುತ್ತಿದೆ ಎಂದು ಹೇಳುತ್ತಾರೆ. ನನಗೆ ತಿಂಗಳಿಗೆ 16 ಸಾವಿರ ರೂ. ಸಂಬಳ ನೀಡುತ್ತಾರೆ. ಸೇವಾ ಶುಲ್ಕದಿಂದ ಬರುವ ಅದಾಯದಲ್ಲಿ ತಿಂಗಳಿಗೆ 2ರಿಂದ 3 ಸಾವಿರ ರೂ ಹೆಚ್ಚುವರಿ ಸಂಪಾದನೆ ಸಿಕ್ಕಂತಾಗುತ್ತದೆ. ಇದು ನನ್ನ ಕುಟುಂಬದ ನಿರ್ವಹಣೆಗೆ ಸಹಾಯವಾಗಿದೆ. ಪೋಷಕರ ಆಸ್ಪತ್ರೆ ಔಷಧಿ ಖರ್ಚು ಮತ್ತು ಸಹೋದರ ಸಹೋದರಿಯರ ವಿದ್ಯಾಭ್ಯಾಸಕ್ಕೆ ಸಹಾಯವಾಗಿದೆ ಎನ್ನುತ್ತಾರೆ.
ಸೇವಾಶುಲ್ಕವನ್ನು ಕೇವಲ ಊಟ ತಿಂಡಿ ಪೂರೈಕೆ ಮಾಡುವವರಿಗೆ ಮಾತ್ರ ವಿತರಣೆ ಮಾಡುವುದಿಲ್ಲ. ಭದ್ರತಾ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಸೇರಿದಂತೆ ಎಲ್ಲರಿಗೂ ಹಂಚುತ್ತೇವೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳುತ್ತಾರೆ. ಹಾಗೆಂದು ಎಲ್ಲ ಹೋಟೆಲ್‌ನವರೂ ಇದೇ ನಿಯಮವನ್ನು ಅನಸುರಿಸುತ್ತಾರೆ ಎಂದು ಹೇಳುವಂತಿಲ್ಲ. ಕೆಲವು ಕಡೆ ಹೋಟೆಲ್‌ನ ನಿರ್ವಹಣಾ ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತದೆ. ಸೇವಾ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಒಂದಿಷ್ಟು ಭಾಗವನ್ನು ಕಾರ್ಮಿಕರಿಗೆ ಹಂಚಿಕೆ ಮಾಡಿ ಉಳಿದ ಹಣವನ್ನು ಕೈ ತಪ್ಪಿ ಒಡೆದ ಕಪ್ ಸಾಸರ್ ಪ್ಲೇಟ್ ಇತ್ಯಾದಿ ನಷ್ಟದ ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತದೆ ಎನ್ನುತ್ತಾರೆ.
ಹೊಟೇಲ್ ಮಾಲೀಕರ ಸಂಘ ಹೇಳುವುದೇನು?
ಡಿಜಿಟಲ್ ಪೇಮೆಂಟ್ ಹೆಚ್ಚಳವಾದ ನಂತರ ಟಿಪ್ಸ್ ಕೊಡುವುದು ಕಡಿಮೆಯಾಗಿದೆ. ನಗದು ಪಾವತಿ ಮಾಡುವಾಗ ರೂ. 10 ರಿಂದ 50 ರೂ.ವರೆಗೆ ಟಿಪ್ಸ್ ಸಂಗ್ರಹವಾಗುತ್ತಿತ್ತು. ಹಾಗಾಗಿ ಸೇವಾ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಎಲ್ಲ ನೌಕರರಿಗೂ ಸಮಾನವಾಗಿ ಹಂಚುತ್ತಿದ್ದೆವು. ಈಗ ಅದಕ್ಕೂ ಹೊಡೆತ ಬಿದ್ದಿದೆ. ಸಂಬಳದ ಜತೆಗೆ ಸೇವಾ ಶುಲ್ಕವನ್ನು ಹಂಚಿಕೆ ಮಾಡಿದರೆ ಕಾರ್ಮಿಕರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಡುತ್ತಾರೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ. ಕೆಲವೊಂದು ಹೋಟೆಲ್‌ಗಳಲ್ಲಿ ಇನ್ನೂ ಬುದ್ದಿವಂತಿಕೆಯನ್ನು ತೋರಿಸಲಾಗುತ್ತಿದೆ. ಊಟ ತಿಂಡಿಯ ಬಿಲ್‌ನೊಳಗೇ ಸೇವಾ ಶುಲ್ಕವನ್ನು ಸೇರಿಸಿರುತ್ತಾರೆ. ಇದು ಗ್ರಾಹಕರ ಅರಿವಿಗೆ ಬರುವುದೇ ಇಲ್ಲ.
ಮಾಲೀಕರಿಗೇಕೆ ಸೇವಾ ಶುಲ್ಕ
ಇನ್ನು ದರ್ಶಿನಿ, ಸಣ್ಣ ಸಣ್ಣ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ಸೇರ್ಪಡೆ ಮಾಡಿದರೆ ಗ್ರಾಹಕರಿಗೆ ವಿವರಣೆ ನೀಡುತ್ತಾ ಕೂರಲಾಗುವುದಿಲ್ಲ. ಕಷ್ಟಸಾಧ್ಯವಾಗುತ್ತದೆ. ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಆಗಮಿಸುವ ಗ್ರಾಹಕರು ಸೇವಾ ಶುಲ್ಕ ಎಂದರೆ ಏನೆಂದು ಅರ್ಥ ಮಾಡಿಕೊಳ್ಳುತ್ತಾರೆ. ಶೇ.1 ಅಥವಾ 2ರಷ್ಟು ಶುಲ್ಕ ವಿಧಿಸಿದರೆ ಚಿಂತೆ ಇಲ್ಲ. ಆದರೆ ಶೇ.5 ರಷ್ಟು ನಿಜಕ್ಕೂ ಹೊರೆಯಾಗುತ್ತದೆ ಎಂದು ಗ್ರಾಹಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೊಬ್ಬರು ಹೋಟೆಲ್‌ಗಳಲ್ಲಿ ಕೆಲಸ ಮಾಡುವ ನೌಕರರು ಮತ್ತು ಕಾರ್ಮಿಕರ ನಡುವೆ ವಿತರಣೆ ಮಾಡಿದರೆ ಅಡ್ಡಿಯಿಲ್ಲ. ಆದರೆ ಮಾಲೀಕರೇ ಇಟ್ಟುಕೊಳ್ಳುವ ಹಾಗಿದ್ದರೆ ಏಕೆ ನೀಡಬೇಕು ಎಂದು ಪ್ರಶ್ನಿಸುತ್ತಾರೆ.
ಸೇವಾ ಶುಲ್ಕ ಕೇಳಿದರೆ ಏನು ಮಾಡಬೇಕು?
ಸೇವಾ ಶುಲ್ಕವನ್ನು ನೀಡಲೇಬೇಕು ಎಂದು ಇನ್ನು ಮುಂದೆ ಹೋಟೆಲ್ ಗಳಲ್ಲಿ ಬಲವಂತ ಮಾಡಿದರೆ ಗ್ರಾಹಕರು ತಮ್ಮ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ರಲ್ಲಿ ನೋಂದಾಯಿಸಬಹುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ: ಮಾರುತಿ ಎಚ್