ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿರೋದು ಗೊತ್ತೇ ಇಲ್ಲ; ಮಾಜಿ ಸಚಿವ ಹೆಚ್‌ಡಿ ರೇವಣ್ಣ
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪ್ರಜ್ವಲ್‌ಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪತ್ರ ಬರೆದಿರೋದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Sexaul Assault Case) ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡ ಒಂದು ತಿಂಗಳ ಬಳಿಕ ಮೇ 31ಕ್ಕೆ ಭಾರತಕ್ಕೆ ವಾಪಸ್ ಆಗಿ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ. ಎಸ್‌ಐಟಿ ಕೂಡ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಿದ್ಧತೆಗಳನ್ನು ನಡೆಸಿದೆ. ಇತ್ತ ಪ್ರಜ್ವಲ್ ತಂದೆ ಹೆಚ್‌ಡಿ ರೇವಣ್ಣ (HD Revanna) ಟೆಂಪಲ್ ರನ್ ಮುಂದುವರಿಸಿದ್ದಾರೆ. ಸೋಮವಾರ (ಮೇ 27) ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರೇವಣ್ಣ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Deve Gowda) ಪ್ರಜ್ವಲ್‌ಗೆ ಪತ್ರ ಬರೆದಿರೋದು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
ನಾನು 4 ದಶಕಗಳಿಂದ ರಾಜಕೀಯದಲ್ಲಿ ಇದ್ದೇನೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದೇನೆ. ಈ ನೆಲದ ಕಾನೂನಿನ ಮೇಲೆ ನಂಬಿದೆ. ಧರ್ಮಸ್ಥಳದ ಮಂಜುನಾಥನ ಮೇಲೂ ನಂಬಿಕೆಯಿದೆ ಎಂದು ಹೇಳಿದ್ದಾರೆ. ನ್ಯಾಯಾಂಗದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮೊಮ್ಮಗ ಪ್ರಜ್ವಲ್‌ಗೆ ಪತ್ರ ಬರೆದು ಖಡಕ್ ಎಚ್ಚರಿಕೆ ಕೊಟ್ಟಿದ್ದ ಮಾಜಿ ಪ್ರಧಾನಿ ದೇವೇಗೌಡರು
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದು ವಿಶೇಷ ತನಿಖಾ ತಂಡದ ಎದುರು ಹಾಜರಾಗಬೇಕು. ನನ್ನ ಮೇಲೆ ಗೌರವ ಇದ್ದರೆ ತಕ್ಷಣವೇ ವಾಪಸ್ ಮರಳಿ ಬಾ ಎಂದು ಸಂಸದ ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡರು ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದರು.
ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ದಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು. ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಕರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದರರು.
ನಾನು ಈಚಿನ ದಿನಗಳಲ್ಲಿ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ಪ್ರೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ ಮತ್ತು ತಾವು ಎಸಗಿದ ಕೃತ್ಯಗಳಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ನಂಬಿದ್ದೇನೆ. ಈ ಸಂದರ್ಭದಲ್ಲಿ ನಾನು ಈಗ ಒಂದು ಕೆಲಸವನ್ನಷ್ಟೆ ಮಾಡಬಲ್ಲೆ. ಅದೇನೆಂದರೆ, ಪ್ರಜ್ವಲನು ಎಲ್ಲಿದ್ದರೂ ಬಂದು, ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು.
ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತೆ
ಪ್ರಜ್ವಲ್ ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು ಎಂದು ಪತ್ರದ ಮೂಲಕ ಹೇಳಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)