ಕನ್ನಡ ಸುದ್ದಿ  /  Karnataka  /  Shamanur Shivashankarappa Upset With Cm Siddaramaiah Karnataka Govt Over Posting Of Veerashaiva Lingayats Officials Mgb

ಬಿಕೆ ಹರಿಪ್ರಸಾದ್ ಬಳಿಕ ಸಿದ್ದರಾಮಯ್ಯ ರಾಶಿ ಪ್ರವೇಶಿಸಿದ ಶಾಮನೂರು ಅಜ್ಜ; ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಎಂಬ ಆಕ್ರೋಶ

Shamanur Shivashankarappa: ಇತ್ತೀಚೆಗಷ್ಟೇ ಬಿ.ಕೆ.ಹರಿಪ್ರಸಾದ್ ಅವರನ್ನು ಸಂಬಾಳಿಸಿಕೊಂಡು ನಿಟ್ಟುಸಿರು ಬಿಡುವ ಹೊತ್ತಿಗೆ ಶಾಮನೂರು ಅಜ್ಜ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಶಿ ಹೊಕ್ಕಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತಸ್ಥಾನ ಮಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಸಿಟ್ಟು ಹೊರ ಹಾಕಿದ್ದಾರೆ.

ಶಾಮನೂರು ಶಿವಶಂಕರಪ್ಪ - ಸಿದ್ದರಾಮಯ್ಯ
ಶಾಮನೂರು ಶಿವಶಂಕರಪ್ಪ - ಸಿದ್ದರಾಮಯ್ಯ

ತಮ್ಮದೇ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಅನ್ಯಾಯಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ವೀರಶೈವ ಸಮುದಾಯದ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗಷ್ಟೇ ಬಿ.ಕೆ.ಹರಿಪ್ರಸಾದ್ ಅವರನ್ನು ಸಂಬಾಳಿಸಿಕೊಂಡು ನಿಟ್ಟುಸಿರು ಬಿಡುವ ಹೊತ್ತಿಗೆ ಶಾಮನೂರು ಅಜ್ಜ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಶಿ ಹೊಕ್ಕಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತಸ್ಥಾನ ಮಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿಯೇ ಸಿಟ್ಟು ಹೊರ ಹಾಕಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಹೊಗೆಯಾಡುತ್ತಿದ್ದ ಆಕ್ರೋಶ ಇದೀಗ ಬಹಿರಂಗವಾಗಿದೆ. ಹೌದಲ್ಲ! ಎಂದು ಕೇವಲ ವೀರಶೈವರು ಮಾತ್ರವಲ್ಲ, ಎಲ್ಲ ಸಮುದಾಯಗಳೂ ತಮ್ಮ ತಮ್ಮವರು ಆಯಕಟ್ಟಿನ ಜಾಗಗಳಲ್ಲಿ ಕುಳಿತಿದ್ದಾರೆಯೇ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, 7 ಮಂದಿ ಲಿಂಗಾಯತ ಸಚಿವರಿದ್ದಾರೆ ಎಂದು ಲೆಕ್ಕ ತೋರಿಸಿದ್ದು, ಉಳಿದ ಸಚಿವರು ಗೋಣು ಆಡಿಸಿದ್ದಾರೆ. ನಿಜ, ಲಿಂಗಾಯತರು ಕಾಂಗ್ರೆಸ್ ಪಕ್ಷದಿಂದ ದೂರ ಸರಿದು ದಶಕಗಳೇ ಕಳೆದಿವೆ. 1990 ರಲ್ಲಿ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಪಟ್ಟದಿಂದ ಕೆಳಗಿಳಿಸಿದ್ದೇವೆ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದಂದಿನಿಂದಲೇ ವೀರಶೈವರು ದೂರವಾಗುತ್ತಾ ಬಂದರು.

ಮುಂದೆ ಲಿಂಗಾಯತರು ಆಗೊಮ್ಮೆ ಈಗೊಮ್ಮೆ ಜನತಾ ಪರಿವಾರದ ಕೈ ಹಿಡಿಯುತ್ತಾ ಬಂದರು. ರಾಮಕೃಷ್ಣ ಹೆಗಡೆ ಅವರನ್ನು ನಾಯಕನನ್ನಾಗಿ ಸ್ವೀಕರಿಸಿದ್ದು, ದೇವೇಗೌಡ -ಪಟೇಲ್ ಅವರ ನಾಯಕತ್ವವನ್ನು ಒಪ್ಪಿಕೊಂಡದ್ದು ಇತಿಹಾಸ.

ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡದ ಕಾರಣಕ್ಕೆ ಯಡಿಯೂರಪ್ಪ ವೀರಶೈವ ಸಮುದಾಯದ ಅದ್ವಿತೀಯ ನಾಯಕರಾಗಿ ಹೊರ ಹೊಮ್ಮಿದರು. ಅವರನ್ನು ಬಿಜೆಪಿ ಬಲವಂತವಾಗಿ ಸಿಎಂ ಹುದ್ದೆಯಿಂದ ಕೆಳಗಿಳಿಸುವವರೆಗೆ ಸಮಸ್ಯೆ ಉದ್ಭವವಾಗಿರಲಿಲ್ಲ.

'ಕೈ' ಹಿಡಿದರೂ ಕೃತಜ್ಞತೆ ತೋರದ ಸಿಎಂ:

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 46 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, 37 ಶಾಸಕರು ಆಯ್ಕೆಯಾಗಿದ್ದಾರೆ. ಬಿಜೆಪಿ 69 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, 15 ಮಂದಿ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ.

ಈ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರೂ ಸಿಎಂ ಸಿದ್ದರಾಮಯ್ಯ ನಮ್ಮ ಜತೆ ನಿಲ್ಲಲಿಲ್ಲ ಎಂಬ ಆಕ್ರೋಶ ಅವರದ್ದು. ಮೇಲಾಗಿ ಮೇಲ್ವರ್ಗದ ಸಮುದಾಯಗಳನ್ನು ತುಳಿಯುತ್ತಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಜಾತಿ ಸಮುದಾಯಗಳನ್ನು ಮುನ್ನೆಲೆಗೆ ತರಬಾರದು. ಆದರೂ ಸಿಎಂ ಸುತ್ತಮುತ್ತ ಯಾರು ಯಾರು ಇದ್ದಾರೆ ಮತ್ತು ಬೆಂಗಳೂರಿನ ಆಯಕಟ್ಟಿನ ಹುದ್ದೆಗಳಲ್ಲಿ ಯಾರನ್ನು ಕೂರಿಸಿದ್ದಾರೆ ಎನ್ನುವುದನ್ನು ಅವಲೋಕಿಸಿದಾಗ ಏಕೆ ಅಜ್ಜ ಸಿಟ್ಟು ಮಾಡಿಕೊಂಡಿದ್ದಾರೆ ಎಂದು ಅರ್ಥವಾದೀತು.

ಸಮುದಾಯದ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಕೋಪ ವೀರಶೈವರಲ್ಲಿ ಎದ್ದು ಕಾಣುತ್ತಿದೆ. ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಗುಪ್ತವಾಗಿ ಶಾಮನೂರು ಅವರ ಅಭಿಪ್ರಾಯವನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಸೇರಿದ ಐಎಎಸ್, ಐಪಿಎಸ್, ಐಆರ್​​ಎಸ್ ಮತ್ತು ಕೆಎಎಸ್ ನ 107 ಅಧಿಕಾರಿಗಳಿದ್ದಾರೆ. ಇವರಲ್ಲಿ ಬಹುತೇಕ ಅಧಿಕಾರಿಗಳಿಗೆ ಅರ್ಹತೆ ಇದ್ದರೂ ಅಷ್ಟೇನೂ ಪ್ರಮುಖವಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಬಿಡಿಎ, ಬಿಬಿಎಂಪಿ ಬೆಂಗಳೂರು ಪೊಲೀಸ್ ವಿಭಾಗದಲ್ಲಿ ನಮ್ಮವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ದಕ್ಷ ಐಪಿಎಸ್ ಅಧಿಕಾರಿ ಡಾ. ಶರಣಪ್ಪ ಅವರು ಹಿಂದೆ ಸಿಸಿಬಿಯಲ್ಲಿ ಇದ್ದರೂ ಈಗ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ರೈಲ್ವೇ ಡಿಐಜಿ ಹುದ್ದೆ ನೀಡಲಾಗಿದೆ. ಇದು ನ್ಯಾಯವೇ ಎಂದು ಕೇಳುತ್ತಿದ್ದಾರೆ.

ಮುಂದಿನ ನಡೆ ಎತ್ತ?

ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಯಲ್ಲಿ ಸಭೆಯೊಂದನ್ನು ಏರ್ಪಡಿಸಿ ಕೋಪವನ್ನು ತಣ್ಣಗಾಗಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಂತೂ ಬಿಜೆಪಿಗೆ ಲಿಂಗಾಯತರು ಬೇಡ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಒಕ್ಕಲಿಗರನ್ನು ನೆಚ್ಚಿಕೊಂಡಿದೆ. ಹಾಗಾದರೆ ಲಿಂಗಾಯತರ ಮುಂದಿನ ನಡೆ ಏನಾಗಿರಬೇಕು ಎಂಬುದನ್ನು ಕುರಿತು ವೀರಶೈವ ಮಹಾಸಭಾ ಚಿಂತನೆ ನಡೆಸುತ್ತಿದೆ.

ಮುಖ್ಯಮಂತ್ರಿ ಪಟ್ಟದ ಮೇಲೆ ಗಂಭೀರವಾಗಿ ಕಣ್ಣಿಟ್ಟಿದೆ. ರಾಜಕೀಯ ಪಲ್ಲಟಗಳು ಸಂಭವಿಸಿದರೆ ಸಿಎಂ ಹುದ್ದೆಯನ್ನು ಕೇಳಬೇಕು ಎನ್ನುವ ಗಟ್ಟಿ ನಿರ್ಧಾರ ಮಾಡಲಾಗಿದೆ ಎಂಬ ಮಾತುಗಳು ವ್ಯಕ್ತವಾಗಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಟಿಕೆಟ್ ನೀಡುವುದು, ನಿಗಮ ಮಂಡಳಿಗಳಿಗೆ ಪರಿಗಣಿಸಬೇಕು. ಇಲ್ಲವಾದಲ್ಲಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಹಿನ್ನೆಡೆ ಆದೀತು ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಲಾಗಿದೆ. ಮುಂದಿನ ನಿರ್ಧಾರ ಹೈ ಕಮಾಂಡ್​​​ಗೆ ಬಿಟ್ಟದ್ದು.

ವರದಿ: ಎಚ್​ ಮಾರುತಿ