ಕನ್ನಡ ಸುದ್ದಿ  /  Karnataka  /  Shettar Vs Santhosh Former Chief Minister Jagadish Shettar Blames B L Santosh For Denying Him Bjp Ticket Uks

Shettar‌ vs Santhosh: ನಂಗೆ ಟಿಕೆಟ್‌ ತಪ್ಪಿಸಿದ್ದು ಬಿಎಲ್ ಸಂತೋಷ್‌- ಜಗದೀಶ್ ಶೆಟ್ಟರ್‌ ಆರೋಪ, ತೀವ್ರ ಆಕ್ರೋಶ, ಅಸಮಾಧಾನ

Shettar‌ vs Santhosh: “ಗರಿಷ್ಠ ಮತಗಳಿಂದ ಗೆಲ್ಲುವ ಸಾಧ್ಯತೆ ಇದ್ದಾಗ ನನಗೆ ಟಿಕೆಟ್ ನಿರಾಕರಿಸಿದ್ದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಹಿನ್ನೆಲೆ ಗಮನಿಸಿದಾಗ, ಜನರು ʻಸಂತೋಷ್ ಜೀʼ ಎಂದು ಗೌರವಿಸುವ ಮತ್ತು ಕರೆಯುವ ವ್ಯಕ್ತಿ ಬಿಎಲ್ ಸಂತೋಷ್, ಇದಕ್ಕೆಲ್ಲ ಮೂಲ ಕಾರಣ ಎಂಬುದು ಮನವರಿಕೆ ಆಯಿತು" ಎಂದು ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿ.ಎಲ್.ಸಂತೋಷ್‌ ವರ್ಸಸ್‌ ಜಗದೀಶ್‌ ಶೆಟ್ಟರ್
ಬಿ.ಎಲ್.ಸಂತೋಷ್‌ ವರ್ಸಸ್‌ ಜಗದೀಶ್‌ ಶೆಟ್ಟರ್

ಹುಬ್ಬಳ್ಳಿ: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತನಗೆ ಟಿಕೆಟ್‌ ನಿರಾಕರಿಸುವಲ್ಲಿ ಬಿ.ಎಲ್‌. ಸಂತೋಷ್‌ ಪ್ರಮುಖ ಪಾತ್ರವಹಿಸಿದ್ದರು ಎಂದು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಆರು ಬಾರಿ ಶಾಸಕರಾಗಿದ್ದ ಶೆಟ್ಟರ್ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿ ಕಾಂಗ್ರೆಸ್ ಗೌರವಿಸಿದರೆ, ಅದೇ ಸ್ಥಾನಕ್ಕೆ ಬಿಜೆಪಿ ತನ್ನ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಆಯ್ಕೆ ಮಾಡಿದೆ.

“ಗರಿಷ್ಠ ಮತಗಳಿಂದ ಗೆಲ್ಲುವ ಸಾಧ್ಯತೆ ಇದ್ದಾಗ ನನಗೆ ಟಿಕೆಟ್ ನಿರಾಕರಿಸಿದ್ದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಹಿನ್ನೆಲೆ ಗಮನಿಸಿದಾಗ, ಜನರು ʻಸಂತೋಷ್ ಜೀʼ ಎಂದು ಗೌರವಿಸುವ ಮತ್ತು ಕರೆಯುವ ವ್ಯಕ್ತಿ ಬಿಎಲ್ ಸಂತೋಷ್, ಇದಕ್ಕೆಲ್ಲ ಮೂಲ ಕಾರಣ ಎಂಬುದು ಮನವರಿಕೆ ಆಯಿತು" ಎಂದು ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ನನಗೆ ಟಿಕೆಟ್‌ ಘೋಷಣೆ ಆಗಿತ್ತು. ಆದರೆ ನಂತರ ಅದನ್ನು ಹಿಂಪಡೆಯಲಾಯಿತು. ಅವರು ನನ್ನ ವಿರುದ್ಧ ಆಡಿದ ಆಟಕ್ಕೆ ನಾನು ಬಲಿಯಾದೆ ಎಂದು ಶೆಟ್ಟರ್ ಆರೋಪಿಸಿದರು.

ಪಕ್ಷ ಸಂಘಟನೆಗಾಗಿ ದುಡಿದ ಟೆಂಗಿನಕಾಯಿಗೆ ಬಿಜೆಪಿ ಟಿಕೆಟ್ ನೀಡಿದೆ. ಪಕ್ಷವು ಅವರನ್ನು ಗೌರವಿಸಲು ಬಯಸಿದರೆ, ಅದು ಅವರನ್ನು ಎಂಎಲ್ಸಿಯನ್ನಾಗಿ ಮಾಡಬಹುದಿತ್ತು ಅಥವಾ ಕೆಲವು ಪ್ರಮುಖ ಸ್ಥಾನವನ್ನು ನೀಡಬಹುದಿತ್ತು ಎಂದು ‌ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಚನ್ನಪ್ಪ ನಿಂಬಣ್ಣನವರ್ ಪ್ರಬಲ ಆಕಾಂಕ್ಷಿಯಾಗಿದ್ದರೂ ಸ್ಥಳೀಯ ಮುಖಂಡರು ಬಂಡಾಯವೆದ್ದರು. ನಿಂಬಣ್ಣನವರ್ ಅವರನ್ನು ಕಣಕ್ಕಿಳಿಸಬೇಕು ಎಂದು ಪಕ್ಷ ಒತ್ತಾಯಿಸಿತ್ತು. ಆದರೆ, ಕಳೆದ ಆರರಿಂದ ಏಳು ತಿಂಗಳಿಂದ ಅವರ ವಿರುದ್ಧ ಅಪಪ್ರಚಾರ ಮಾಡುವ ಕೆಲಸದಲ್ಲಿ ಟೆಂಗಿನಕಾಯಿ ತೊಡಗಿದ್ದರು ಎಂದು ಶೆಟ್ಟರ್‌ ಆರೋಪಿಸಿದರು.

ಸಂತೋಷ್‌ ಅವರಿಗೆ ಅನೇಕ 'ಮಾನಸ ಪುತ್ರರು' ಇದ್ದಾರೆ ಎಂದು ಹೇಳಿದ ಶೆಟ್ಟರ್, ಈ ಮಾನಸ ಪುತ್ರ (ಮಹೇಶ್ ಟೆಂಗಿನಕಾಯಿ) ಕಳೆದ ಆರರಿಂದ ಏಳು ತಿಂಗಳಿಂದ ನನ್ನ ವಿರುದ್ಧ ಶಿಷ್ಯರ ಜತೆಗೂಡಿ ಅಪಪ್ರಚಾರ ಮಾಡುತ್ತಿದ್ದರು ಎಂದು ಶೆಟ್ಟರ್‌ ಗಂಭೀರ ಆರೋಪ ಮಾಡಿದರು.

ಕಟ್ಟಾ ಆರೆಸ್ಸೆಸ್ ವ್ಯಕ್ತಿಯಾಗಿದ್ದ ಶೆಟ್ಟರ್, ಕಳೆದ ಹಲವು ದಶಕಗಳಿಂದ ಜನಸಂಘ ಮತ್ತು ಬಿಜೆಪಿಯ ಭಾಗವಾಗಿದ್ದರು. ತನ್ನನ್ನು ಕಡೆಗಣಿಸಿ, ಟಿಕೆಟ್‌ ನಿರಾಕರಿಸಿದ ಕಾರಣ ಬಿಜೆಪಿ ಜತೆಗಿನ ಸಂಬಂಧವನ್ನು ಕಡಿದುಕೊಂಡು ಸೋಮವಾರ ಕಾಂಗ್ರೆಸ್ ಸೇರಿದರು.

ಅವರು ಪಕ್ಷ ಬಿಟ್ಟು ಹೊರಗೆ ಹೋಗದಂತೆ ತಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಲ್ಹಾದ್ ಜೋಶಿ ಅವರ ಮನವೊಲಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವ ಹಠದಿಂದ ಹಿಂದೆ ಸರಿದಿರಲಿಲ್ಲ.

ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.

IPL_Entry_Point