Shikaripur Constituency: ಶಿಕಾರಿಪುರದಲ್ಲಿ ವಿಜಯೇಂದ್ರ ಪರ ಒಳ ಒಪ್ಪಂದ ಆರೋಪ: ಸಿದ್ದರಾಮಯ್ಯ ಮನೆ ಮುಂದೆ ಕೈ ಕಾರ್ಯಕರ್ತರ ಗದ್ದಲ!
ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿರುವ ಬಿವೈ ವಿಜಯೇಂದ್ರ ಅವರನ್ನು ಗೆಲ್ಲಿಸಲು, ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಮಾಡಿದ್ದು, ಸಿದ್ದರಾಮಯ್ಯ ಮನೆ ಮುಂದೆ ಗದ್ದಲ ನಡೆಸಿದ ಘಟನೆ ನಡೆದಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಮುಖ ಕ್ಷೇತ್ರಗಳತ್ತ ಇಡೀ ರಾಜ್ಯದ ಗಮನ ಚಿತ್ತಹರಿಸಿದ್ದು, ಈ ಕ್ಷೇತ್ರಗಳಲ್ಲಿ ಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಬಗ್ಗೆಯೇ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ನಿರ್ದಿಷ್ಟ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಥವಾ ರಾಜಕೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಸ್ವತಃ ಸಿದ್ದರಾಮಯ್ಯ ಅವರೇ ನನ್ನನ್ನು ಹಣಿಯಲು ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದ್ದರು.
ಇದೀಗ ಶಿಕಾರಿಪುರ ಕ್ಷೇತ್ರದಲ್ಲಿ ಇಂತದ್ದೇ ಮಾತುಗಳು ಕೇಳಿಬರುತ್ತಿದ್ದು, ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಬಿವೈ ವಿಜಯೇಂದ್ರ ಅವರನ್ನು ಗೆಲ್ಲಿಸಲು, ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಹೌದು, ನೀವು ಕೇಳುತ್ತಿರುವುದು ಅಚ್ಚರಿಯಾದರೂ- ಸತ್ಯ.
ಶಿಕಾರಿಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಬಿವೈ ವಿಜಯೇಂದ್ರ ಅವರನ್ನು ಗೆಲ್ಲಿಸಲು ಸ್ವಃ ಕಾಂಗ್ರೆಸ್ ತಂತ್ರ ರೂಪಿಸಿದೆ ಎಂಬ ಆರೋಪ ಹೊರಿಸಲಾಗಿದೆ. ಇಂತಹ ಆರೋಪ ಮಾಡುತ್ತಿರುವವರು ಬೇರಾರೂ ಅಲ್ಲ, ಸ್ವತಃ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ವಿಶೇಷ.
ಶಿಕಾರಿಪುರ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ನಾಯಕತ್ವ ಸೂಕ್ತ ಅಭ್ಯರ್ಥಿಗೆ ಮಣೆ ಹಾಕುತ್ತಿಲ್ಲ ಎಂಬುದು, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಗಂಭೀರ ಆರೋಪವಾಗಿದೆ. ವಿಜಯೇಂದ್ರ ಅವರ ಗೆಲುವು ಸುಲಭವಾಗಲಿ ಎಂಬ ಉದ್ದೇಶದಿಂದಲೇ, ಪಕ್ಷ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಸುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದೆದುರು ಗದ್ದಲ ನಡೆಸಿದ ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರು, ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ರೀತಿಯ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಈ ವೇಳೆ ಆಕ್ರೋಶ ಹೊರೆಹಾಕಿದರು.
ಶಿಕಾರಿಪುರ ಕ್ಷೇತ್ರಕ್ಕೆ ನಾಗರಾಜ್ ಗೌಡ ಪ್ರಬಲ ಅಭ್ಯರ್ಥಿ. ಆದರೆ ವಿಜಯೇಂದ್ರ ಅವರಿಗೆ ಅನುಕೂಲ ಕಲ್ಪಿಸಲು ಗೋಣಿ ಮಹಾಂತೇಶ್‌ಗೆ ಟಿಕೆಟ್ ಕೊಡುವ ಹುನ್ನಾರ ನಡೆಸಲಾಗುತ್ತಿದೆ. ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಪಕ್ಷದ ಸೋಲು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಸಿದರು.
ಸಿದ್ದರಾಮಯ್ಯ ಅವರ ಮನೆ ಮುಂದೆ ಗದ್ದಲ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಸಮಾಧಾನಪಡಿಸಲು ಮುಂದಾದಾಗ, ಆಕ್ರೋಶಭರಿತ ಕೈ ಕಾರ್ಯಕರ್ತರು ಪೊಲೀಸರೊಂದಿಗೂ ವಾಗ್ವಾದ ನಡೆಸಿದ ಘಟನೆ ನಡೆಯಿತು. ಕೊನೆಯಲ್ಲಿ ಸಿದ್ದರಾಮಯ್ಯ ಮನೆ ಮುಂದೆ ಜಮಾಯಿಸಿದ್ದ ಸುಮಾರು ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಹೊರಕಳಿಸುವಲ್ಲಿ ಯಶಸ್ವಿಯಾದರು.
ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಏನು ರಣತಂತ್ರ ಹೆಣೆಯುತ್ತವೆ ಎಂಬುದು ಬಿಡಿಸಲಾಗದ ಕಗ್ಗಂಟಾಗಿದ್ದು, ಇದಕ್ಕೆ ಒಳಒಪ್ಪಂದದ ಆರೋಪ ಹೊರಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಮನೆ ಮುಂದೆ ಗದ್ದಲ ನಡೆಸಿರುವುದೇ ಸಾಕ್ಷಿ.
ಇಂದಿನ ಪ್ರಮುಖ ಸುದ್ದಿ
Fact Check: SSC ಅಧಿಕೃತ ಟ್ವಿಟ್ಟರ್ ಅಕೌಂಟ್ ಇಲ್ಲ: ಅಭ್ಯರ್ಥಿಗಳೇ ಅರ್ಜಿ ಹಾಕುವ ಮುನ್ನ ಇರಲಿ ಎಚ್ಚರ..
ಇತ್ತೀಚೆಗೆ ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗವು ಪರೀಕ್ಷಾ ಅಧಿಸೂಚನೆಗಳನ್ನು ಹೊರಡಿಸಿದ ಬಗ್ಗೆ, ಅದರ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿತ್ತು. ಆದರೆ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB)ದ ಸತ್ಯ ತಪಾಸಣೆ ಘಟಕವಾದ PIB ಫ್ಯಾಕ್ಟ್ ಚೆಕ್, ಇಂತಹ ಯಾವುದೇ ಅಧಿಕೃತ ಅಕೌಂಟ್ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.