ಕನ್ನಡ ಸುದ್ದಿ  /  ಕರ್ನಾಟಕ  /  Shimoga Result: ತ್ರಿಕೋನ ಪೈಪೋಟಿ ನಡುವೆ ಶಿವಮೊಗ್ಗದಲ್ಲಿ ಗೆದ್ದು ಬೀಗಿದ ಬಿಜೆಪಿಯ ಬಿವೈ ರಾಘವೇಂದ್ರ

Shimoga Result: ತ್ರಿಕೋನ ಪೈಪೋಟಿ ನಡುವೆ ಶಿವಮೊಗ್ಗದಲ್ಲಿ ಗೆದ್ದು ಬೀಗಿದ ಬಿಜೆಪಿಯ ಬಿವೈ ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪ್ರತಿಷ್ಠೆಯ ಕ್ಷೇತ್ರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯ ಬಿವೈ ರಾಘವೇಂದ್ರ ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್‌ ಹಾಗೂ ಕೆಎಸ್‌ ಈಶ್ವರಪ್ಪ ವಿರುದ್ಧ ರೋಚಕ ಜಯಭೇರಿ ಬಾರಿಸಿದ್ದಾರೆ. Shimoga Lok Sabha Elections Result.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024
ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024

ಲೋಕಸಭಾ ಚುನಾವಣೆ 2024ರ ಮತಎಣಿಕೆ ಪೂರ್ಣಗೊಂಡಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Shimoga Lok Sabha MP Election 2024 Result) ಹೊರಬಿದ್ದಿದೆ. ತ್ರಿಕೋನ ಪೈಪೋಟಿ ಏರ್ಪಟ್ಟಿದ್ದ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಗೆಲುವು ಸಾಧಿಸಿದೆ. ಯಡಿಯೂರಪ್ಪ ಪುತ್ರ ಹಾಗೂ ಹಾಲಿ ಸಂಸದ ಬಿವೈ ರಾಘವೇಂದ್ರ (BY Raghavendra) ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬರೋಬ್ಬರಿ 243715 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶಿವಮೊಗ್ಗ ಲೋಕಸಭಾ ಚುನಾವಣೆ ಎಂದರೆ ಅದು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಎಸ್ ಬಂಗಾರಪ್ಪ ಕುಟುಂಬದ ನಡುವಿನ ಜಿದ್ದಿನ ಕದನವೆಂದು ಗುರುತಿಸಿಕೊಂಡಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮಲೆನಾಡಿನ ಪ್ರಮುಖ ಕ್ಷೇತ್ರದ ರಾಜಕೀಯ ಚಿತ್ರಣವೇ ಭಿನ್ನವಾಗಿತ್ತು. ‘ಬಿಜೆಪಿ ನನ್ನ ತಾಯಿ ಇದ್ದಂತೆ’ ಎನ್ನುತ್ತಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ತಮ್ಮ ಮಗನಿಗೆ ಟಿಕೆಟ್‌ ಕೈತಪ್ಪಿತು ಎಂಬ ಆಕ್ರೋಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದಲೇ ಕಣಕ್ಕಿಳಿದರು. ಹಾಲಿ ಸಂಸದ ಬಿವೈ ರಾಘವೇಂದ್ರ (BY Raghavendra) ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಸ್ಪರ್ಧಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಕೆಎಸ್ ಈಶ್ವರಪ್ಪ (KS Eshwarappa)ಕಣದಲ್ಲಿದ್ದರು.

ಮಾಜಿ ಸಿಎಂ ಬಿಎಸ್‌ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಚಿಸಿದ ನಂತರ ಮತ್ತು ವಿಜಯೇಂದ್ರ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಲೋಕಸಭೆ ಚುನಾವಣೆ ಇದು. ಹೀಗಾಗಿ ಬಿಜೆಪಿ ಪಾಲಿಗೆ ಇದು ಪ್ರತಿಷ್ಠೆಯ ಕಣವಾಗಿತ್ತು. 2009ರಿಂದಲೂ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವೆ ಇಲ್ಲಿ ಹೋರಾಟ ನಡೆಯುತ್ತಿದೆ. ಆದರೆ, ಪ್ರತಿ ಬಾರಿಯೂ ಬಂಗಾರಪ್ಪ ಕುಟುಂಬಕ್ಕೆ ಗೆಲುವು ದೂರದ ಬೆಟ್ಟವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಫಲಿತಾಂಶದ ಏನಾಯ್ತು?

ಲೋಕಸಭಾ ಕ್ಷೇತ್ರದ ಹೆಸರು: ಶಿವಮೊಗ್ಗ ಲೋಕಸಭಾ ಕ್ಷೇತ್ರ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

  • ಬಿವೈ ರಾಘವೇಂದ್ರ (ಬಿಜೆಪಿ): 778721 ಮತಗಳು
  • ಗೀತಾ ಶಿವರಾಜ್‌ಕುಮಾರ್‌ (ಕಾಂಗ್ರೆಸ್‌): 535006 ಮತಗಳು
  • ಕೆಎಸ್‌ ಈಶ್ವರಪ್ಪ (ಪಕ್ಷೇತರ): 30050 ಮತಗಳು
  • ಗೆಲುವಿನ ಅಂತರ: 243715
  • ನೋಟಾ : 4332 ಮತಗಳು

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಬಿವೈ ರಾಘವೇಂದ್ರ ಪರಿಚಯ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರು, ಸತತ ಎರಡು ಬಾರಿ (2018ರ ಉಪ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ) ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಸಚಿವ ಮಧು ಬಂಗಾರಪ್ಪ ವಿರುದ್ಧ ಗೆದ್ದಿದ್ದಾರೆ. ಅದಕ್ಕೂ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ಗೆದ್ದಿದ್ದರು. ಹೀಗಾಗಿ ಶಿವಮೊಗ್ಗ ಕ್ಷೇತ್ರದಿಂದ ಮೂರು ಬಾರಿ ಗೆದ್ದ ದಾಖಲೆ ರಾಘವೇಂದ್ರ ಅವರದ್ದು. 2009ರಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದ ರಾಘವೇಂದ್ರ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಂಗಾರಪ್ಪ ವಿರುದ್ಧ 482,783 ಮತಗಳನ್ನು ಪಡೆದು ಗೆದ್ದಿದ್ದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಶಾಸಕರಾಗಿಯೂ ಚುನಾಯಿತರಾಗಿದ್ದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದೇ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ಕೂಡಾ ಸೇರುತ್ತದೆ. ಉಳಿದಂತೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿ, ಶಿಕಾರಿಪುರ ಕ್ಷೇತ್ರಗಳು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿದೆ. ಲಿಂಗಾಯತ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಈಡಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 1952ರಿಂದ ಇಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿತ್ತು. 1998ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಆಯನೂರ್‌ ಮಂಜುನಾಥ್‌ ಗೆದ್ದರು. ಆ ಬಳಿಕ ಎಸ್‌ ಬಂಗಾರಪ್ಪ ಅವರು ಸತತ ಮೂರು ಬಾರಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದರು.

2009ರಲ್ಲಿ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ಚುನಾವಣಾ ಕಾಳಗಕ್ಕೆ ಶಿವಮೊಗ್ಗ ಸಾಕ್ಷಿಯಾಯ್ತು. ಮೊದಲ ಚುನಾವಣೆಯಲ್ಲೇ ಬಿಎಸ್‌ವೈ ಪುತ್ರ ಬಿವೈ ರಾಘವೇಂದ್ರ ಬಂಗಾರಪ್ಪ ವಿರುದ್ಧ ಗೆದ್ದರು. 2014ರಲ್ಲಿ ಯಡಿಯೂರಪ್ಪ ಅವರೇ ಕಣಕ್ಕಿಳಿದರು. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್, ಜೆಡಿಎಸ್‌ನಿಂದ ಕಣಕ್ಕಿಳಿದು ಸೋತರು. ಬರೋಬ್ಬರಿ 606,216 ಮತಗಳನ್ನು ಪಡೆದ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಕಾಂಗ್ರೆಸ್‌ನ ಮಂಜುನಾಥ್‌ ಬಂಡಾರಿ ಅವರನ್ನು ಮಣಿಸಿದರು. ಆ ಬಳಿಕ 2018ರ ಉಪಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಅವರೇ ಜಯಭೇರಿ ಬಾರಿಸಿದ್ದಾರೆ.

ಲೋಕಸಭಾ ಚುನಾವಣೆ 2024ರ ಇನ್ನಿತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಟಿ20 ವರ್ಲ್ಡ್‌ಕಪ್ 2024