Obituary: ಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ, ಗ್ರಾಮ ಲೆಕ್ಕಿಗರಿಂದ ಪತ್ರಾಗಾರ ಇಲಾಖೆವರೆಗೂ ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ, ಗ್ರಾಮ ಲೆಕ್ಕಿಗರಿಂದ ಪತ್ರಾಗಾರ ಇಲಾಖೆವರೆಗೂ ಸೇವೆ

Obituary: ಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ, ಗ್ರಾಮ ಲೆಕ್ಕಿಗರಿಂದ ಪತ್ರಾಗಾರ ಇಲಾಖೆವರೆಗೂ ಸೇವೆ

True Historian ಶಿವಮೊಗ್ಗ ಜಿಲ್ಲೆ ಸಾಗರದ ನಿವಾಸಿಯಾಗಿದ್ದ ಖ್ಯಾತ ಇತಿಹಾಸಜ್ಞ ಕೆಳದಿ ಗುಂಡಾ ಜೋಯಿಸ್‌ ಅವರು ಭಾನುವಾರ ನಿಧನರಾಗಿದ್ದಾರೆ. ಅವರ ಬದುಕಿನ ಯಾನದ ನೋಟ ಇಲ್ಲಿದೆ.

ಕರ್ನಾಟಕ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌
ಕರ್ನಾಟಕ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ (Book Brahma)

ಶಿವಮೊಗ್ಗ: ಕರ್ನಾಟಕ ಖ್ಯಾತ ಇತಿಹಾಸತಜ್ಞ, ಕೆಳದಿ ಸಂಸ್ಥಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ನಿಖರವಾಗಿ ಮಾತನಾಡುತ್ತಿದ್ದ ಕೆಳದಿ ಗುಂಡಾಜೋಯಿಸ್‌( Keladi Gunda Jois) ಭಾನುವಾರ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನೆಲೆಸಿದ್ದ ಅವರು ಅನಾರೋಗ್ಯದ ಕಾರಣದಿಂದ ಕೊನೆಯುಸಿರೆಳೆದರು. ಇತಿಹಾಸ ಸಂಶೋಧಕ, ಕೈ ಬರಹಗಳ ತಜ್ಞ, ಉತ್ಸಾಹದ 94 ವರ್ಷದ ಡಾ. ಕೆಳದಿ ಗುಂಡಾ ಜೋಯಿಸ್‌ ಸ್ವರ್ಗಸ್ತರಾಗಿದ್ದಾರೆಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರ ಕೊಂಡಾರೆಡ್ಡಿ ತಿಳಿಸಿದ್ದಾರೆ. ಗುಂಡಾ ಜೋಯಿಸ್‌ ಅಂತಿಮ ದರ್ಶನಕ್ಕಾಗಿ ದೇಹವನ್ನು ಅವರ ಪುತ್ರರಾದ ಕೆಳದಿ ಡಾ. ವೆಂಕಟೇಶ್ ಜೋಯ್ಸ್ ಅವರ ಸಾಗರದ ಅಣಲೇ ಕೊಪ್ಪ ಬಡಾವಣೆ ಮನೆಯಲ್ಲಿ ಇರಿಸಲಾಗಿದೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ (2024ರ ಜೂನ್‌ 3) ಸೋಮವಾರ 10 ಗಂಟೆಗೆ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಕೆಳದಿ ಗುಂಡಾ ಜೋಯಿಸ್ ಎಂದೇ ಖ್ಯಾತಿಯ ಇತಿಹಾಸತಜ್ಞರು. ಕೆಳದಿ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರು. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಒಬ್ಬರು.

ಮಲೆನಾಡ ಪ್ರತಿಭೆ

ಗುಂಡಾಜೋಯಿಸರು 1931 ರ ಸೆಪ್ಟೆಂಬರ್ 27ರಂದು ಕೆಳದಿಯಲ್ಲಿ ನಂಜುಂಡ ಜೋಯಿಸರು ಹಾಗೂ ಮೂಕಾಂಬಿಕಾ ದಂಪತಿ ಮೂರನೇ ಪುತ್ರರಾಗಿ ಜನಿಸಿದರು. ಇವರ ಮೂಲ ಹೆಸರು ಲಕ್ಷ್ಮೀನಾರಾಯಣ. ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಅವರ ಅಜ್ಜಿ ಅವರಿಗೆ ’ಗುಂಡ’ ಎಂದು ಕರೆದಿದ್ದರಂತೆ. ಹೀಗಾಗಿ ಇವರು ಗುಂಡಾ ಜೋಯಿಸರಾಗಿಯೇ ಗುರುತಿಸಿಕೊಂಡು ಜನಪ್ರಿಯರೂ ಆದರು.

ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗೂ ಸಾಗರದಲ್ಲಿ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ನಂತರ ಜೋಯಿಸರು ವಿದ್ಯಾಭ್ಯಾಸವನ್ನು ನಿಲ್ಲಿಸಿ ಉದ್ಯೋಗವನ್ನು ಅರಸಬೇಕಾಯಿತು. ಆದರೆ ಓದುವ ಆಕಾಂಕ್ಷೆ ಕಡಿಮೆಯಾಗಿರಲಿಲ್ಲ. ತಮ್ಮ 50ನೇ ವಯಸ್ಸಿನಲ್ಲಿ ಜೋಯಿಸರು ಮೈಸೂರು ವಿಶ್ವವಿದ್ಯಾನಿಲದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಂ.ಎ. (ಇತಿಹಾಸ) ಪದವಿ ಪಡೆದರು. ಬೆಂಗಳೂರಿನ ಕರಣಿಕರ ವೇದಶಾಲೆಯಲ್ಲಿ ವೇದಾಭ್ಯಾಸ ಮಾಡಿದರು. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವುದು ಅವರ ಜ್ಞಾನ ಹಸಿವನ್ನು ತೋರುತ್ತದೆ.

ಗುಂಡಾ ಜೋಯಿಸರು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗರಾಗಿ, ಪೋಸ್ಟ್ ಮಾಸ್ತರ ಆಗಿ, ವಿದ್ಯುತ್ ಇಲಾಖೆಯಲ್ಲಿ, ಆಕಾಶವಾಣಿಯಲ್ಲಿ, ವಯಸ್ಕರ ಶಿಕ್ಷಣ ಸಮಿತಿಯಲ್ಲಿ, ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗದ ಸರಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಯಿಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಚಾಧಿಕಾರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಓದುವ ಆಸಕ್ತಿ

1962 ರಿಂದ1975ರವರೆಗೆ ಮೈಸೂರು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದರು. 1980ರಿಂದ 1985ರವರೆಗೆ ಕರ್ನಾಟಕ ಇತಿಹಾಸ ದಾಖಲೆ ಸಂಶೋಧನಾ ಸಮಿತಿಯ ಸದಸ್ಯರು ಆಗಿದ್ದರು.

ಸಂಶೋಧನಾ ಕ್ಷೇತ್ರ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು- ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ, ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್, ಇತಿಹಾಸ ವೈಭವ, ಕೆಳದಿಯ ಸಂಕ್ಷಿಪ್ತ ಇತಿಹಾಸ,ಇಕ್ಕೇರಿ ಅರಸರು,ಬಿದನೂರಿನ ಕೆಳದಿ ನಾಯಕರು,ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಕೆಳದಿ ಅರಸರು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯ ಮಹತ್ವದ ಸಾಧನೆ ಗುರುತಿಸಿ ಹಲವು ಗೌರವ, ಪ್ರಶಸ್ತಿಗಳು ಗುಂಡಾಜೋಯಿಸರಿಗೆ ಸಂದಿರುವುದು ವಿಶೇಷ.

ವಿಭಿನ್ನ ಸಂಶೋಧಕ

ಕನ್ನಡ ನಾಡಿನ ಶ್ರೇಷ್ಠ ಇತಿಹಾಸ ವಿದ್ವಾಂಸರಾದ ಡಾ. ಕೆಳದಿ ಗುಂಡಾ ಜೋಯಿಸರು ಕೆಳದಿ ಇತಿಹಾಸವನ್ನು ವಿಶ್ವಪ್ರಸಿದ್ಧ ಮಾಡುವಲ್ಲಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇತಿಹಾಸ ಮತ್ತು ಲಿಪಿ ಕ್ಷೇತ್ರದಲ್ಲಿ ಅವರ ಸಾಧನೆಗಳು ಹಿರಿಯವು. ಶ್ರೀಯುತರು 2004 ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 18ನೇ ವಾರ್ಷಿಕ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ಬಾದಾಮಿಯಲ್ಲಿ 2014 ರಲ್ಲಿ ನಡೆದ 32ನೇ ವಾರ್ಷಿಕ ಸಮ್ಮೇಳನದಲ್ಲಿ 'ಇತಿಹಾಸ ಸಂಸ್ಕೃತಿ ಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು. ನಿರಂತರ ಅಧ್ಯಯನ ಅಧ್ಯಾಪನ ಇತಿಹಾಸ ಸಂರಕ್ಷಣೆ ಹಾಗೂ ಹಲವು ಸಮಾಜಮುಖಿ ಕಾರ್ಯಗಳನ್ನು ತಮ್ಮ ಜೀವನದುದ್ದಕ್ಕೂ ನಡೆಸಿದ್ದಾರೆ. ಹಿರಿಯರ ಅಗಲಿಕೆ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

( ಪೂರಕ ಮಾಹಿತಿ: ಬುಕ್‌ ಬ್ರಹ್ಮ ಡಾಟ್‌ಕಾಮ್‌)

Whats_app_banner