Linganamakki Reservoir:ತುಂಬುವ ಹಂತಕ್ಕೆ ಲಿಂಗನಮಕ್ಕಿ ಜಲಾಶಯ, ಇಂದಿನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ, ಜೋಗದ ಸಿರಿ ವೈಭವಕ್ಕೆ ಅಣಿಯಾಗಿ
ಕನ್ನಡ ಸುದ್ದಿ  /  ಕರ್ನಾಟಕ  /  Linganamakki Reservoir:ತುಂಬುವ ಹಂತಕ್ಕೆ ಲಿಂಗನಮಕ್ಕಿ ಜಲಾಶಯ, ಇಂದಿನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ, ಜೋಗದ ಸಿರಿ ವೈಭವಕ್ಕೆ ಅಣಿಯಾಗಿ

Linganamakki Reservoir:ತುಂಬುವ ಹಂತಕ್ಕೆ ಲಿಂಗನಮಕ್ಕಿ ಜಲಾಶಯ, ಇಂದಿನಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ, ಜೋಗದ ಸಿರಿ ವೈಭವಕ್ಕೆ ಅಣಿಯಾಗಿ

Malnad Rains ಮಲೆನಾಡಿನ ಮಳೆಯಿಂದ ಲಿಂಗನಮಕ್ಕಿ ಜಲಾಶಯ ಈ ಬಾರಿ ತುಂಬುವ ಹಂತದಲ್ಲಿದ್ದು ಗುರುವಾರದಿಂದಲೇ ಜಲಾಶಯದಿಂದ ಶರಾವತಿ ನದಿಗೆ ನೀರು ಹರಿಸಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಲು ಸಿದ್ದತೆಗಳು ಆಗಿವೆ.
ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಲು ಸಿದ್ದತೆಗಳು ಆಗಿವೆ.

ಶಿವಮೊಗ್ಗ: ಮಲೆನಾಡಿನಲ್ಲಿ ಒಂದು ವಾರದಿಂದಲೂ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯ(Sharavathi River) ಲಿಂಗನಮಕ್ಕಿ ಜಲಾಶಯವೂ( Linganamakki Dam) ಬಹುತೇಕ ತುಂಬುವ ಹಂತಕ್ಕೆ ಬಂದಿದೆ. ಕಳೆದ ವರ್ಷ ಮಲೆನಾಡು ಭಾಗದಲ್ಲಿಯೇ ಮಳೆಯ ಕೊರತೆ ಉಂಟಾಗಿದ್ದರಿಂದ ಲಿಂಗನಮಕ್ಕಿ ಪೂರ್ಣ ತುಂಬಲು ಆಗಲೇ ಇಲ್ಲ. ಕರ್ನಾಟಕದಲ್ಲಿ ಅತಿ ಹೆಚ್ಚು ನೀರು ಸಂಗ್ರಹಿಸಬಲ್ಲ ಸಾಮರ್ಥ್ಯ ಇರುವ ಜಲಾಶಯ ಲಿಂಗನಮಕ್ಕಿ. ಈ ಬಾರಿ ಉತ್ತಮ ಮಳೆಯಿಂದ ಜಲಾಶಯ ಜುಲೈ ಅಂತ್ಯಕ್ಕೆ ತುಂಬುವ ಹಂತಕ್ಕೆ ಬಂದಿದೆ.ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್‌ 1ರ ಗುರುವಾರದಿಂದಲೇ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಶರಾವತಿ ನದಿ ಮೂಲಕ ನೀರು ಹರಿದು ಹೋಗಲಿದ್ದು, ಈಗಾಗಲೇ ಮುನ್ಸೂಚನೆಯನ್ನೂ ನೀಡಲಾಗಿದೆ. ನೀರಿನ ಪ್ರಮಾಣ ಹೆಚ್ಚುವುದರಿಂದ ಜೋಗ ಜಲಪಾತದ ವೈಭವವೂ ಹೆಚ್ಚಾಗಲಿದೆ.

ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಸಾಗರ ತಾಲ್ಲೂಕಿನ ಕಾರ್ಗಲ್‌ ಬಳಿ ಇರುವ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಮಂಗಳವಾರ ಸಂಜೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟವು 1811.25 ಅಡಿಗಳನ್ನು ತಲುಪಿತ್ತು. ಬುಧವಾರ ಈ ಪ್ರಮಾಣ ಇನ್ನೂ ಹೆಚ್ಚಾಯಿತು. ಕಳೆದ 24 ಗಂಟೆಯಲ್ಲಿ ಡ್ಯಾಂನ ನೀರಿನ ಮಟ್ಟ 2.15 ಅಡಿಯಷ್ಟು ಏರಿಕೆಯಾಗಿದೆ. ನೀರಿನ ಮಟ್ಟ 1812.65 ಅಡಿಗೆ ತಲುಪಿತು. ಗುರುವಾರ ಬೆಳಿಗ್ಗೆ ಹೊತ್ತಿಗೆ 1814 ಅಡಿಗಳನ್ನು ತಲುಪಿದೆ.ಜಲಾಶಯದ ನೀರಿನ ಮಟ್ಟವು ಪ್ರಸ್ತುತ ಜಲಾಶಯವು ಶೇ.90ರಷ್ಟು ಭರ್ತಿಯಾಗಿದೆ.ಜಲಾಶಯದ ನೀರಿನ ಮಟ್ಟ ಗರಿಷ್ಠ 1819 ಅಡಿಗಳಾಗಿದೆ.

ಅಣೆಕಟ್ಟೆಯ ಒಳಹರಿವು 89500 ಕ್ಯೂಸೆಕ್‌ ನಂತೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಭಾರತೀಯ ಹವಾಮಾನ ಇಲಾಖೆ( IMD) ಮುನ್ಸೂಚನೆಯಂತೆ ಇನ್ನೂ 3 ದಿನಗಳ ವರೆಗೆ ರೆಡ್ಅಲರ್ಟ್ ನೀಡಲಾಗಿದೆದೆ. ಹೀಗಾಗಿ ಪ್ರತಿ ದಿನಕ್ಕೆ ಸುಮಾರು 80000 ದಿಂದ 90000 ಕ್ಯೂಸೆಕ್ಸ್ ಒಳಹರಿವು ಬರುವ ಸಾಧ್ಯತೆ ಇದೆ. ಈ ಪರಿಸ್ಥಿತಿಯು ಮುಂದುವರೆದಲ್ಲಿ, ಅಣೆಕಟ್ಟು ಮಟ್ಟವು ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಭಾರೀ ಮಳೆ ಹಾಗೂ ಒಳಹರಿವಿನ ಕಾರಣದಿಂದ ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್‌ ಗಳನ್ನು ಕಾರ್ಯಾಚರಣೆ ವಿಧಾನದ ಪ್ರಕಾರ 2024 ಆಗಸ್ಟ್‌ 01ರ ಬೆಳಿಗ್ಗೆ 10ಕ್ಕೆ ಗಂಟೆಗೆ ಪ್ರಾರಂಭಿಕವಾಗಿ 10000 ಕ್ಯೂಸೆಕ್‌ಗಳೊಂದಿಗೆ ನೀರನ್ನು ಹೊರಬಿಡಲು ಯೋಜಿಸಲಾಗಿದೆ. ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆಯನ್ನು ಹೆಚ್ಚಿಸಲಾಗುವುದು ಎಂದು ಲಿಂಗನಮಕ್ಕಿ ಜಲಾಶಯದ ಉಸ್ತುವಾರಿ ಹೊತ್ತಿರುವ ಕರ್ನಾಟಕ ವಿದ್ಯುತ್‌ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿ ವಿದ್ಯುತ್ ಉತ್ಪಾದಿಸುವ ಜಲಾಶಯವಾದ್ದರಿಂದ ಹಾಗೂ ಸಂಗ್ರಹಣಾ ಸಾಮರ್ಥ್ಯವು ಕಡಿಮೆಯಿರುವುದರಿಂದ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸಲು ಅವಕಾಶವಿರುವುದಿಲ್ಲ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಶರಾವತಿ ನದಿಯ ಮೂಲಕ ಹೊರಬಿಡಲಾಗುವುದು. ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರು ಸಹಕರಿಸಬೇಕು ಎಂದು ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

ಶರಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು (Inflow) ಏರಿಕೆಯಾಗಿದೆ. ಇದರಿಂದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಈ ನೀರು ಶರಾವತಿ ನದಿ ಮೂಲಕ ಜೋಗದ ಜಲಪಾತವನ್ನು ತಲುಪಲಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಜೋಗದ ಸಿರಿ ಹೆಚ್ಚಲಿದ್ದು, ಪ್ರವಾಸಿಗರನ್ನು ರಾಜ, ರಾಣಿ, ರೋರಲ್‌ ,ರಾಕೆಟ್‌ ಜಲಪಾತಗಳು ಸೆಳೆಯಲಿವೆ.

Whats_app_banner