ಕನ್ನಡ ಸುದ್ದಿ  /  ಕರ್ನಾಟಕ  /  Dengue: ಶಿವಮೊಗ್ಗದ ಸಾಗರದಲ್ಲಿ ಡೆಂಗ್ಯೂಗೆ ಆರೋಗ್ಯ ಇಲಾಖೆ ಸಿಬ್ಬಂದಿಯೇ ಬಲಿ

Dengue: ಶಿವಮೊಗ್ಗದ ಸಾಗರದಲ್ಲಿ ಡೆಂಗ್ಯೂಗೆ ಆರೋಗ್ಯ ಇಲಾಖೆ ಸಿಬ್ಬಂದಿಯೇ ಬಲಿ

Shimoga News ಡೆಂಗ್ಯೂ ಸೋಂಕಿಗೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಇಲಾಖೆ( Health Department) ಸಿಬ್ಬಂದಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಸಾಗರದಲ್ಲಿ ವರದಿಯಾಗಿದೆ.

ಡೆಂಗ್ಯೂಗೆ ಬಲಿಯಾದ ನಾಗರಾಜ್‌
ಡೆಂಗ್ಯೂಗೆ ಬಲಿಯಾದ ನಾಗರಾಜ್‌

ಶಿವಮೊಗ್ಗ:ಮಳೆಗಾಲ ಶುರುವಾಗುತ್ತಿದ್ದಂತೆ ಕರ್ನಾಟಕದ ಹಲವು ಕಡೆ ಡೆಂಗ್ಯೂ ಪ್ರಕರಣಗಳೂ ವರದಿಯಾಗುತ್ತಿವೆ. ಮಳೆ ನೀರು ನಿಂತು ಸೊಳ್ಳೆಗಳ ಪ್ರಮಾಣವೂ ಅಧಿಕವಾಗುತ್ತಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಅಧಿಕವಾಗಿದ್ದು. ರೋಗಗಳೂ ಕೂಡ ಶುರುವಾಗಿವೆ. ಇದಕ್ಕೆ ಜನರೂ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶಗಳೂ ಹೆಚ್ಚಾಗಿವೆ. ಮಳೆಗಾಲದ ಪ್ರಮುಖ ಕಾಯಿಲೆಯಾದ ಡೆಂಗ್ಯೂಗೆ ಸಿಲುಕಿರುವ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಡೆಂಗ್ಯೂಗೆ ಬಲಿಗೆ ಬಲಿಯಾದ ಘಟನೆ ನಡೆದಿದೆ. ಸಾಗರ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಬ್ಬಂದಿ ನಾಗರಾಜ್(35) ಡೆಂಗ್ಯೂನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯೇ ದೃಢಪಡಿಸಿದೆ.

ಕೆಲವು ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ನಾಗರಾಜ್‌ ಅವರು ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದರು. ಕೆಲವು ದಿನಗಳಿಂದ ಚಳಿ, ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸಾಗರದಲ್ಲಿ ಚಿಕಿತ್ಸೆ ಪಡೆದು ಜ್ವರ ಕಡಿಮೆ ಆಗದೇ ಇದ್ದುದರಿಂದ ಆನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಮುಂದುವರೆದಿತ್ತು. ಎರಡು ದಿನದಿಂದ ಜ್ವರದ ಪ್ರಮಾಣ ಏರಿಕೆಯಾಗಿ ಕೋಮಾಕ್ಕೂ ಹೋಗಿದ್ದರು. ಚೇತರಿಸಿಕೊಳ್ಳುವ ಹಂತದಲ್ಲಿದ್ದಾಗ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.

ನಮ್ಮ ಇಲಾಖೆಯ ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆನಂತರ ತಪಾಸಣೆ ನಡೆಸಿದಾಗ ಡೆಂಗ್ಯೂ ಇರುವುದು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಮಧುಮೇಹ ಕೂಡ ಇತ್ತು. ಅಲ್ಲದೇ ಪ್ಲೇಟ್‌ ಲೆಟ್‌ ಪ್ರಮಾಣ ತೀವ್ರವಾಗಿ ಕುಸಿತ ಕಂಡಿತ್ತು. 26,000 ಕ್ಕೆ ಕುಸಿದಿದ್ದ ಪ್ಲೇಟ್‌ ಲೆಟ್ಸ್‌ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ನಾಗರಾಜ್‌ ಮೃತಪಟ್ಟಿದ್ದಾರೆ ಎಂದು ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪರಪ್ಪ ಖಚಿತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೃತ ನಾಗರಾಜ್‌ ಅವರ ದೇಹವನ್ನು ಈಗಾಗಲೇ ಸಾಗರ ತಾಲೂಕಿನ ತಾಳಗುಪ್ಪ ಕುಟುಂಬದವರಿಗೆ ನೀಡಲಾಗಿದೆ.ಈ ಬಾರಿ ಮಳೆಗಾಲ ಶುರುವಾದ ನಂತರ ರಾಜ್ಯದಲ್ಲಿ ಡೆಂಗ್ಯೂಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸಾಗರ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಡೆಂಗ್ಯೂ ಜಾಗೃತಿಯನ್ನು ಮೂಡಿಸುವ ಕೆಲಸವೂ ಶುರುವಾಗಿದೆ.

ಧಾರವಾಡ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಡೆಂಗ್ಯೂ ಕಂಡು ಬಂದ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ.