ಕನ್ನಡ ಸುದ್ದಿ  /  ಕರ್ನಾಟಕ  /  Shimoga News: ಮಲೆನಾಡಿನ ಹಸಿರ ನಡುವೆ ಹಿರೇ ಭಾಸ್ಕರ ಜಲಾಶಯ ದರ್ಶನ, ಏನಿದರ ವಿಶೇಷ, ಹೇಗೆ ಹೋಗಬೇಕು

Shimoga News: ಮಲೆನಾಡಿನ ಹಸಿರ ನಡುವೆ ಹಿರೇ ಭಾಸ್ಕರ ಜಲಾಶಯ ದರ್ಶನ, ಏನಿದರ ವಿಶೇಷ, ಹೇಗೆ ಹೋಗಬೇಕು

ಮಳೆ ಬಂದರೆ ಜಲಾಶಯ ತುಂಬಲಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಲ್ಲದೇ ಜಲಾಶಯ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯ ಹಿರೇ ಭಾಸ್ಕರ ಜಲಾಶಯ.
ಶಿವಮೊಗ್ಗ ಜಿಲ್ಲೆಯ ಹಿರೇ ಭಾಸ್ಕರ ಜಲಾಶಯ.

ಶಿವಮೊಗ್ಗ: ಅದು ಸ್ವಾತಂತ್ರ್ಯಪೂರ್ವದಲ್ಲಿಯೇ ಆರಂಭಿಸಿದ ಜಲಾಶಯ. ಸ್ವಾತಂತ್ರ್ಯ ಬಂದ ನಂತರ ಕೆಲಸ ಮುಗಿದು ಬಳಕೆ ಶುರು ಮಾಡಲಾಯಿತು. ಆದರೆ ಶರಾವತಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಿದರೂ ಜಲಾಶಯ ಈಗಲೂ ಇದೆ. ಬೇಸಿಗೆ ಬಂದಾಗ ಹಿನ್ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ದರ್ಶನವಾಗುತ್ತದೆ. ಅದನ್ನು ನೋಡಲು ಈಗಲೂ ನಿತ್ಯ ಪ್ರವಾಸಿಗರು ಬರುತ್ತಾರೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ಈ ಬಾರಿಯಂತೂ ಜಲಾಶಯದ ಕಟ್ಟಡ ಪೂರ್ತಿ ದರ್ಶನವಾಗುತ್ತಿರುವುದರಿಂದ ಪ್ರವಾಸಿಗರು ಬಂದು ಇಲ್ಲಿ ಹೆಚ್ಚಿನ ಸಮಯ ಕಳೆದು ಹೋಗುತ್ತಿದ್ದಾರೆ. ಇದು ಸಾಗರ ತಾಲ್ಲೂಕಿನ ಮಡೇನೂರಿನಲ್ಲಿರುವ ಹಿರೇ ಭಾಸ್ಕರ ಜಲಾಶಯ. ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೂ ಇದು ಹತ್ತಿರ.

ಟ್ರೆಂಡಿಂಗ್​ ಸುದ್ದಿ

ವಿದ್ಯುತ್‌ ಉತ್ಪಾದನಾ ಘಟಕ

ಶರಾವತಿ ನದಿಯ ಅತ್ಯಂತ ಹಳೆಯ ಅಣೆಕಟ್ಟೆ ಹಿರೇಭಾಸ್ಕರ ಮಡೆನೂರು ಜಲಾಶಯ.ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಜಲಾಶಯ ಎನ್ನುವುದು ಇದರ ಹಿರಿಮೆ.

ಜಲವಿದ್ಯುತ್ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆಗೆ ಕಾರಣವಾದ ಮೊಟ್ಟಮೊದಲ ಅಣೆಕಟ್ಟೆಂದರೆ ಅದು ಹಿರೇಭಾಸ್ಕರ ಜಲಾಶಯ. ಮಲೆನಾಡಿನ ಮೊಟ್ಟಮೊದಲ ಜಲವಿದ್ಯುತ್ ಯೋಜನೆ ಇದಾಗಿದ್ದು,ಈಗ ನೆನಪಾಗಿ ಉಳಿದುಕೊಂಡಿದೆ.

ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಹಿರೇಭಾಸ್ಕರ ಜಲಾಶಯ ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಮೈದಡವಿ ನಿಂತಿದೆ. ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾದಾಗ ಹಿರೇಬಾಸ್ಕರ ಜಲಾಶಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು .ಅಂದು ಅಣೆಕಟ್ಟು ಹೇಗಿತ್ತೋ ನೀರಿನಲ್ಲಿ ಮುಳುಗಿ 55 ವರ್ಷಗಳಾದ ನಂತರವೂ ಅದೇ ಗಟ್ಟಿತನವನ್ನು ಈಗಲೂ ಉಳಿಸಿಕೊಂಡಿದೆ.

ಮೈಸೂರು ಮಹಾರಾಜರ ಕನಸು

ಹಿರೇಭಾಸ್ಕರ ಅಣೆಕಟ್ಟು ಎಂದೂ ಕರೆಯಲ್ಪಡುವ ಮಡೆನೂರು ಅಣೆಕಟ್ಟನ್ನು ಶರಾವತಿ ನದಿಗೆ ಅಡ್ಡಲಾಗಿ 1939 ಮತ್ತು 1948 ರ ನಡುವೆ ನಿರ್ಮಿಸಲಾಯಿತು. ಅಣೆಕಟ್ಟನ್ನು 1949 ರಲ್ಲಿ ಉದ್ಘಾಟಿಸಲಾಯಿತು ಮತ್ತು 1960 ರ ದಶಕದ ಮಧ್ಯಭಾಗದಲ್ಲಿ ಹೆಚ್ಚು ದೊಡ್ಡದಾದ ಲಿಂಗನಮಕ್ಕಿ ಅಣೆಕಟ್ಟು ಅಸ್ತಿತ್ವಕ್ಕೆ ಬರುವವರೆಗೂ ಕಾರ್ಯನಿರ್ವಹಿಸುತ್ತಿತ್ತು. ಈಗ ಮಡೆನೂರು ಅಣೆಕಟ್ಟು ಲಿಂಗನಮಕ್ಕಿ ಜಲಾಶಯದ ನೀರಿನಲ್ಲಿ ಮುಳುಗಿ ಉಳಿದಿದೆ. ಮೇ ತಿಂಗಳ ಗರಿಷ್ಠ ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಮೇಲ್ಮೈಗೆ ಬರುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ನಿರ್ಮಾಣವಾದ ಅಣೆಕಟ್ಟು.ನಂತರ ಶರಾವತಿ ನದಿಯಲ್ಲಿ ಮುಳುಗಡೆಯಾದ ಅಣೆಕಟ್ಟು.ಹಿರೇಭಾಸ್ಕರ ಜಲಾಶಯದ ಕಟ್ಟಡ ಇಂದಿಗೂ ನೀರಿನಲ್ಲಿ ಮುಳುಗಡೆಯಾಗಿದ್ದರೂ ಗಟ್ಟಿಮುಟ್ಟಾಗಿರುವುದು ನಿರ್ಮಾಣದಲ್ಲಿನ ಗಟ್ಟಿತನವನ್ನು ತೋರುತ್ತದೆ.

ವಿಶೇಷತೆಯೇನು

ಬೆಲ್ಲ ಸುಣ್ಣದ ಮಿಶ್ರಣದ ಸುರ್ಕಿಯಿಂದ ಇದು ನಿರ್ಮಾಣ ಮಾಡಲಾಯಿತು. ಸುಮಾರು 4000 ಅಡಿ ಉದ್ದದ ಹಿರೇಭಾಸ್ಕರ ಜಲಾಶಯದ ನ ಪ್ರಧಾನ ಭಾಗವನ್ನು ಕಲ್ಲು ಮತ್ತು ಸುರ್ಕಿ ಗಾರೆಯಿಂದ ಕಟ್ಟಲಾಗಿದೆ. ಬೆಲ್ಲ ಸುಣ್ಣದ ಮಿಶ್ರಣದ ಕಾಂಕ್ರೀಟ್ ಇದಾಗಿದ್ದು,ಈ ಸುರ್ಕಿಯ ಭಾಗವೇ ಸುಮಾರು 1150 ಅಡಿ ಉದ್ದವಿದೆ. ಇದರ ಗಟ್ಟಿತನದಿಂದಾಗಿಯೇ ಜಲಾಶಯ ಇಂದಿಗೂ ನೀರಿನಲ್ಲಿ ಮುಳುಗಿದ್ದರೂ ಜೀವಂತಿಕೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಮಡೆನೂರು ಅಣೆಕಟ್ಟಿನ ನಿರ್ಮಾಣವನ್ನು ಹಳೆಯ ಮೈಸೂರು ಪ್ರದೇಶದ ಸಿವಿಲ್ ಇಂಜಿನಿಯರ್ ಗಣೇಶ್ ಅಯ್ಯರ್ ಅವರು ಮೇಲ್ವಿಚಾರಣೆ ಮಾಡಿದರು. ಸೈಫನ್ ವ್ಯವಸ್ಥೆಯನ್ನು ಆಧರಿಸಿದ ರಚನೆಗಳ ನಿರ್ಮಾಣದಲ್ಲಿ ಅವರು ಪರಿಣತರಾಗಿದ್ದರು. 350 ಮೀಟರ್ ಅಣೆಕಟ್ಟು 11 ಸೈಫನ್‌ಗಳನ್ನು ಹೊಂದಿದೆ. ಪ್ರತಿಯೊಂದೂ 18 ಅಡಿ ಅಗಲ x 58 ಅಡಿ ಎತ್ತರವಿದೆ. ಸೈಫನ್ ವ್ಯವಸ್ಥೆಯ ಕಾರ್ಯವಿಧಾನವು ಗರಿಷ್ಠ ಮಟ್ಟವನ್ನು ತಲುಪಿದಾಗ ಸ್ವಯಂಚಾಲಿತವಾಗಿ ಜಲಾಶಯದಿಂದ ನೀರು ಹರಿಯುವಂತೆ ಮಾಡುತ್ತದೆ. ಸೈಫನ್‌ಗಳ ಜೊತೆಗೆ, 3 ಕ್ರೆಸ್ಟ್ ಗೇಟ್‌ಗಳಿವೆ ಎಂದು ಜಲಾಶಯದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ.

ಹೇಗೆ ಹೋಗಬೇಕು

ಹಿರೇ ಭಾಸ್ಕರ ಜಲಾಶಯ ವೀಕ್ಷಣೆಗೆ ಹೋಗುವ ದಾರಿ: ಸಿಗಂದೂರು ರಸ್ತೆ ಲಾಂಚ್ ಕಾಮಗಾರಿ ಸೈಟ್ ಹತ್ತಿರ ಶರಾವತಿ ಅಭಯಾರಣ್ಯ ಗೇಟ್ ಅಲ್ಲಿಂದ ಕಾಡಿನ ದಾರಿ 4 ಕಿ.ಮೀ ಸಾಗಬೇಕು. ಕನಿಷ್ಠ ಎರಡು ಕಿ.ಮಿ ದೂರವಾದರೂ ಹಸಿರ ಬನಸಿರಿ ನಡುವೆ ನಡೆದು ಹೋಗುವ ಖುಷಿಯೇ ಬೇರೆ.

ಹಿರೇ ಭಾಸ್ಕರ ಜಲಾಶಯವನ್ನು ಎಲ್ಲರೂ ಬಂದು ನೋಡಬಹುದು. ಯಾರೇ ಬಂದರೂ ಪ್ಲಾಸ್ಟಿಕ್, ಎಣ್ಣೆ ಬಾಟಲಿ ಕಂಡು ಕಂಡಲ್ಲಿ ಹಾಕಿ ಅಲ್ಲಿರುವ ಪ್ರಕೃತಿಯನ್ನು ಹಾಳು ಮಾಡಬೇಡಿ. ಪರಿಸರ ಸ್ನೇಹಿಯಾಗಿ ಬಂದು ನೋಡಿ ಎನ್ನುವುದು ಸ್ಥಳೀಯರಾಗಿರುವ ಪ್ರಸನ್ನಕೆರೆಕೈ ಅವರ ಮನವಿ.

IPL_Entry_Point