Malnad Farming: ಮಲೆನಾಡ ರೈತರ ಸ್ವಾವಲಂಬೀ ಜೀವನ, ರಾಘವೇಂದ್ರ ರಾಯರ ಮಾದರಿ-shimoga news sagar taluku golikoppa raghavendra rao model farmer works in fields at the age 79 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Malnad Farming: ಮಲೆನಾಡ ರೈತರ ಸ್ವಾವಲಂಬೀ ಜೀವನ, ರಾಘವೇಂದ್ರ ರಾಯರ ಮಾದರಿ

Malnad Farming: ಮಲೆನಾಡ ರೈತರ ಸ್ವಾವಲಂಬೀ ಜೀವನ, ರಾಘವೇಂದ್ರ ರಾಯರ ಮಾದರಿ

Agriculture ಮಲೆನಾಡಿನ ರಾಘವೇಂದ್ರರಾವ್‌ ಅವರ ಕೃಷಿ ಜೀವನದ ಕುರಿತು ನಾಗೇಂದ್ರ ಸಾಗರ್‌ ಬರೆದ ಲೇಖನವನ್ನು ಲೇಖಕ ರಂಗಸ್ವಾಮಿ ಮೂಕನಹಳ್ಳಿ ಹಂಚಿಕೊಂಡಿದ್ದಾರೆ.

ಮಲೆನಾಡಿನ ಕೃಷಿಯಲ್ಲಿ ರಾಘವೇಂದ್ರ ರಾಯರು ಈಗಲೂ ಉತ್ಸಾಹಿ.
ಮಲೆನಾಡಿನ ಕೃಷಿಯಲ್ಲಿ ರಾಘವೇಂದ್ರ ರಾಯರು ಈಗಲೂ ಉತ್ಸಾಹಿ.

ಮಲೆನಾಡಿಗರು ಕೃಷಿ ಕೆಲಸದಲ್ಲಿ ಗಟ್ಟಿಗರು. ಅದಕ್ಕೆ ಅವರಿಗೆ ವಯಸ್ಸಿನ ಮಿತಿಯೇ ಇರುವುದಿಲ್ಲ. ಅವರಿಗೆ ವಯಸ್ಸು ಹೆಚ್ಚಿದಂತೆಲ್ಲಾ ಕೃಷಿಯಲ್ಲಿ ತೊಡಗುವ ಉಮೇದು ಹೆಚ್ಚುತ್ತದೆ. ಈ ಕಾರಣದಿಂದಲೇ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ. ಹಾಸನ ಜಿಲ್ಲೆಯಲ್ಲಿ ಈಗಲೂ ಕೃಷಿ ಗಟ್ಟಿ ಕಾಯಕ. ಹಾಗೂ ನಿತ್ಯದ ಕಾಯಕವೂ ಹೌದು. ಬೇರೆ ಭಾಗದಲ್ಲಿ ಹೀಗೆ ಇಲ್ಲವೇ ಎಂದು ನೀವು ಕೇಳಬಹುದು. ಆದರೆ ಮಲೆನಾಡು ಭಾಗದಲ್ಲಿ ತೋಟದ ಕೃಷಿ ನಿಯಮಿತ ಕೆಲಸ ಬೇಡುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಲೇಬೇಕು. ಹಿರಿಯರು ಅದನ್ನು ಶ್ರದ್ದೆಯಿಂದ ಈಗಲೂ ಮಾಡುತ್ತಾರೆ. ಇಂತಹವರ ಸಾಲಿನಲ್ಲಿ ಗೋಳಿಕೊಪ್ಪ ರಾಘವೇಂದ್ರ ರಾವ್‌ ಅವರೂ ಸೇರುತ್ತಾರೆ.

ಗೋಳಿಕೊಪ್ಪ ರಾಘವೇಂದ್ರ ರಾಯರಿಗೀಗ ವಯಸ್ಸು ಎಪ್ಪತ್ತೊಂಬತ್ತು.. ಆದರೆ ಅವರ ಉಮೇದು ಮಾತ್ರ ಇಪ್ಪತ್ತರ ಹರೆಯದ್ದೇ ಸರಿ.

ಅವರಿಗಿರೋದು ಕೇವಲ ಒಂದೇ ಎಕರೆ ಅಡಿಕೆ ತೋಟ.. ಅದರಲ್ಲೇ ಅಚ್ಚುಕಟ್ಟು ಜೀವನ.. ಅಡಿಕೆಯೊಳಗೆ ವೀಳ್ಯದೆಲೆ, ಕಾಳುಮೆಣಸು ಅದೂ ಇದೂ ಎಡೆ ಬೆಳೆ.. ದೈನಂದಿನ ಖರ್ಚು ವೆಚ್ಚಗಳನ್ನು ಉಪ ಬೆಳೆಯಿಂದಲೇ ನಿಭಾವಣೆ.. ಮುಖ್ಯ ಬೆಳೆ ಅಡಿಕೆಯಿಂದ ಬರುವ ಆದಾಯ ದೊಡ್ಡ ಖರ್ಚಿಗೆ...

ರಾಘವೇಂದ್ರರಾಯರಂತೆ ಅವರ ಮಡದಿ ಕೂಡ ಸುಮ್ಮನೆ ಕೂರುವ ಜನವಲ್ಲ.. ಮನೆಯಲ್ಲಿ ಸಣ್ಣ ಹಿಟ್ಟಿನ ಮಿಲ್ಲು ಮತ್ತು ಎಲೆಕ್ಟ್ರಿಕಲ್ ಡ್ರೈಯರ್ ಇದೆ.. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಚಿಪ್ಸು ಅಂತ ಮೌಲ್ಯವರ್ಧನೆ ಉತ್ಪನ್ನಗಳನ್ನು ಮಾಡುತ್ತಲೇ ಇರುತ್ತಾರೆ...

ಎಲ್ಲಕಿಂತ ಹೆಚ್ಚಿನದಾಗಿ ನನಗೆ ಅವರ ಬಗ್ಗೆ ಖುಷಿಯಾಗುವ ವಿಚಾರವೆಂದರೆ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವ ಪರಿ.. ನಮ್ಮ ಮಲೆನಾಡಿನ ಮಳೆಯ ನಡುವೆ ಬರುವ ಕೊಳೆ ರೋಗದಿಂದ ಅಡಿಕೆ ಉಳಿಸಿಕೊಳ್ಳುವುದೇ ಹರಸಾಹಸದ ಕೆಲಸ..

ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಣೆಯೊಂದೇ ಮದ್ದು.. ಅದನ್ನು ಸಕಾಲದಲ್ಲಿ ಸಿಂಪಡಿಸುವುದು ಬಲು ಕಷ್ಟದ ಕೆಲಸ.. ನೆಲೆಯಿಂದಲೇ ಸಿಂಪಡಿಸಲು ಫೈಬರ್ ದೋಣಿಗಳು ಚಾಲ್ತಿಯಲ್ಲಿ ಇದೆಯಾದರೂ ರಾಘವೇಂದ್ರ ರಾಯರಂತಹ ಸಣ್ಣ ಬೆಳೆಗಾರರಿಗೆ ಇದು ಕೈಗೆಟಕದು.. ಮತ್ತು ಸಣ್ಣ ಪುಟ್ಟ ಕೊನೆಗಾರರಿಗೂ ಆಗದು..

ರಾಘವೇಂದ್ರ ರಾಯರು ತಮ್ಮ ಕೈಗೆ ಎಟಕುವ ಅಡಿಕೆ ಮರ ಏರುವ ಸಾಧನ ಮತ್ತು ಮೋಟಾರ್ ಚಾಲಿತ ಸ್ಪ್ರೇಯರ್ ಮಿಷನ್ ಹೊಂದಿದ್ದಾರೆ.. ಕೊನೆಗಾರ ಬಾರದೇ ಹೋದರೂ ತಾನೇ ಮರವೇರಿ ಔಷಧಿ ಸಿಂಪಡಿಸಲೂ ಸೈ ಎನ್ನುವ ಜನ ಇವರು...

ಹಾಗೆ ನೋಡಿದರೆ ಈ ಬಾರಿಯ ನಿರಂತರ ಮಳೆಗೆ ಕೊಳೆ ರೋಗ ಬಂದು ಸಾಧಾರಣ ಎಲ್ಲ ತೋಟಗಳಲ್ಲೂ ಅಡಿಕೆ ಉದುರಿ ಹಾಸಿ ಹೋಗಿದೆ.. ಇವರಲ್ಲೂ ಆ ಬಾಧೆ ಬಂದಿಲ್ಲ ಅಂತಲ್ಲ.. ಆದರೆ ತೀರಾ ಕೈ ಮೀರಿ ಹೋಗಿಲ್ಲ..

ಕಾರ್ಯ ನಿಮಿತ್ತ ನಿನ್ನೆ ಅವರಲ್ಲಿಗೆ ಹೋಗಿದ್ದೆ. ಸಕಾಲದಲ್ಲಿ ಔಷಧಿ ಸಿಂಪಡಿಸಿ ಇರುವ ಅಡಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಘವೇಂದ್ರ ರಾಯರು ಇದ್ದರು.. ಕಲಸದವರ ನಡುವೆ ಕೈ ಸೇರಿಸಿ ಎಲ್ಲದಕ್ಕೂ ಸೈ ಅನ್ನುವ ಅವರ ಮನೋಭಾವ ನನಗೆ ಇಷ್ಟವಾಯಿತು..

ಉಮೇದು, ಉತ್ಸಾಹ ಎಲ್ಲಾ ಸರಿ.. ಆದರೆ ಮರವೇರಿ ಕೆಲಸ ಮಾಡುವಾಗ ಜಾಗ್ರತೆಯೂ ಇರಲಿ ಮಾರಾಯರೆ ಎಂದಿದ್ದೇನೆ..

-ನಾಗೇಂದ್ರ ಸಾಗರ್.