Viral News: ಮಾಲೀಕ ತೀರಿಕೊಂಡ 15 ನಂತರವೂ ಆಸ್ಪತ್ರೆಯಿಂದ ಕದಲದ ಶ್ವಾನ, ಮನಮಿಡಿಯುವ ನಾಯಿಯ ನಿಷ್ಠೆ-shimoga viral news dog waited for owner after admitted to hospital in holehonnur of shimoga district kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಮಾಲೀಕ ತೀರಿಕೊಂಡ 15 ನಂತರವೂ ಆಸ್ಪತ್ರೆಯಿಂದ ಕದಲದ ಶ್ವಾನ, ಮನಮಿಡಿಯುವ ನಾಯಿಯ ನಿಷ್ಠೆ

Viral News: ಮಾಲೀಕ ತೀರಿಕೊಂಡ 15 ನಂತರವೂ ಆಸ್ಪತ್ರೆಯಿಂದ ಕದಲದ ಶ್ವಾನ, ಮನಮಿಡಿಯುವ ನಾಯಿಯ ನಿಷ್ಠೆ

Shimoga News ಆಸ್ಪತ್ರೆಗೆ ದಾಖಲಾದ ಮಾಲೀಕನನ್ನು ಹಿಂಬಾಲಿಸಿಕೊಂಡು ಬಂದಿದ್ದ ನಾಯಿ ಮಾಲೀಕ ತೀರಿಕೊಂಡರೂ ಆಸ್ಪತ್ರೆಯಲ್ಲೇ ಇರಬೇಕು ಎಂದು ಹದಿನೈದು ದಿನದಿಂದ ಕಾಯುತ್ತಿದ್ದ ಮನಮಿಡಿಯುವ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆ ಹೊನ್ನೂರಿನಲ್ಲಿ ನಡೆದಿದೆ.

Dog Story ಮಾಲೀಕ ಬರಬಹುದು ಎಂದು ಕಾದಿರುವ ನಾಯಿ
Dog Story ಮಾಲೀಕ ಬರಬಹುದು ಎಂದು ಕಾದಿರುವ ನಾಯಿ (prajavani)

ಶಿವಮೊಗ್ಗ: ನೀವು ಶಾಲಾ ದಿನಗಳಲ್ಲಿ ಸೋಮೇಗೌಡರ ನಾಯಿಯ ಕಥೆ ಓದಿರಬಹುದು. ಸ್ವಾಮಿ ನಿಷ್ಠೆಗೆ ಹೆಸರಾದ ನಾಯಿ ಕಥಾನಕ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಇಂತಹದೇ ಕಥಾನಕಗಳು ನಿಮ್ಮ ಅಕ್ಕಪಕ್ಕದಲ್ಲೂ ನಡೆದಿರಬಹುದು. ಏಕೆಂದರೆ ಜನ ಬದಲಾಗಬಹುದು. ಮಾಲೀಕನ ಪ್ರೀತಿ ಹಾಗೂ ನಾಯಿಯ ಸ್ವಾಮಿ ನಿಷ್ಠೆ ಬದಲಾಗಲು ಸಾಧ್ಯವೇ ಇಲ್ಲ. ಆ ಸಂಬಂಧ ಎಂದಿಗೂ ಅಬಾಧಿತ. ಇಂತಹದೇ ಸ್ವಾಮಿ ನಿಷ್ಠೆ ಮೆರೆದ ಅಭಿಮಾನದ ನಾಯಿಯೊಂದ ಆ ಪ್ರೀತಿಯ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಭದ್ರಾವತಿ ತಾಲ್ಲೂಕಿನ ಹೊಳೆ ಹೊನ್ನೂರು ಪಟ್ಟಣದಲ್ಲಿ ಈ ಶ್ವಾನದ ಮನಮಿಡಿಯುವ ಪ್ರಸಂಗ ಕಂಡು ಅಲ್ಲಿನ ಜನರೂ ಮರುಗಿದ್ದಾರೆ.

ನಡೆದದ್ದು ಇಷ್ಟು. ತನ್ನ ಮಾಲೀಕ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಹೊಳೆಹೊನ್ನೂರಿನ ಸರ್ಕಾರಿ ಸಮುದಾಯಕ್ಕೆ ಚಿಕಿತ್ಸೆಗೆಂದು ಸೇರಿಸಲಾಗಿತ್ತು. ಅಲ್ಲಿಂದ ಅವರನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರು ಅಸು ನೀಗಿದರು. ಆದರೆ ಮಾಲೀಕ ಆಸ್ಪತ್ರೆಯಲ್ಲಿಯೇ ಇರಬೇಕು ಎಂದುಕೊಂಡ ಶ್ವಾನ ಅಲ್ಲಿಯೇ ಕಾಯುತ್ತಲೇ ಇತ್ತು. ಅದು ಹದಿನೈದು ದಿನ. ಆ ನಾಯಿಯನ್ನು ಮೊದಲು ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಿದ್ದರು. ಈಗ ಮಾಲೀಕರ ಕುಟುಂದವರಿಗೆ ಒಪ್ಪಿಸಲಾಗಿದೆ.

ಅವರ ಹೆಸರು ಪಾಲಾಕ್ಷಪ್ಪ. ಹೊಳೆಹೊನ್ನೂರು ಸಮೀಪದ ಕನ್ನೆಕೊಪ್ಪ ಗ್ರಾಮದವರು. ಕೃಷಿಕರಾದ ಪಾಲಾಕ್ಷಪ್ಪ ಅವರಿಗೆ ಮೊದಲಿನಿಂದಲೂ ನಾಯಿ ಸಾಕುವ ಅಭ್ಯಾಸ. ತಮ್ಮೊಂದಿಗೆ ರಾಸುಗಳು ಇದ್ದ ಹಾಗೆ ನಾಯಿಯೂ ಇರಬೇಕು ಎನ್ನುವುದು ಅವರ ಬಯಕೆ ಅದರಂತೆ ನಾಲ್ಕೈದು ನಾಯಿಗಳನ್ನು ಈ ಹಿಂದಿನಿಂದಲೂ ಸಾಕಿದ್ದರು. ಈಗಲೂ ಒಂದು ನಾಯಿಯನ್ನು ಮರಿ ಇದ್ದಾಗಿನಿಂದಲೂ ಸಾಕಿ ಸಲಹಿದ್ದರು. ಅದು ಅವರ ಒಡನಾಡಿಯೇ ಆಗಿ ಹೋಗಿತ್ತು. 

ಆದರೆ ಕೆಲ ದಿನಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಈಡಾದ ಪಾಲಾಕ್ಷಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನ ಇಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಈ ವೇಳೆ ನಾಯಿಯೂ ಅವರನ್ನು ಹಿಂಬಾಲಿಸಿಕೊಂಡು ಆಸ್ಪತ್ರೆವರೆಗೂ ಬಂದಿತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ಒಳಗೆ ಬಂದು ಮಾಲೀಕನನ್ನು ನೋಡಿಕೊಂಡು ಹೋಗುತ್ತಿತ್ತು. ಪಾಲಾಕ್ಷಪ್ಪ ಅವರಿಗೆ ಎದೆ ನೋವು ಹೆಚ್ಚಿದ್ದರಿಂದ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದರೂ ಅವರು ಹೃದಯಾಘಾತದಿಂದ ಅಸುನೀಗಿದರು. 

ಆದರೆ ನಾಯಿ ಮಾತ್ರ ಹೊಳೆ ಹೊನ್ನೂರು ಆಸ್ಪತ್ರೆಯಲ್ಲಿಯೇ ಇತ್ತು. ಒಳಗೆ ಮಾಲೀಕ ಇರಬಹುದು ಎಂದುಕೊಂಡು ಒಳಕ್ಕೆ ಹೋಗಿ ಬರುವುದು ಮಾಡುತ್ತಿತ್ತು. ಕೋಣೆಗಳಲ್ಲೂ ಹುಡುಕಾಟ ನಡೆಸುತ್ತಿತ್ತು. ಎತ್ತರದ ನಾಯಿ ನೋಡಿದ ಕೆಲವು ರೋಗಿಗಳು ಹಾಗೂ ಅವರ ಕಡೆಯವರು ಹೆದರಿದ್ದರು. ಸಿಬ್ಬಂದಿ ಹಾಗೂ ರೋಗಿಯ ಕಡೆಯವರು ಅದನ್ನು ಓಡಿಸಲು ಪ್ರಯತ್ನಿಸಿದರೆ ಬೊಗಳಿ ತಪ್ಪಿಸಿಕೊಳ್ಳುತ್ತಿತ್ತು. ಕೆಲ ಹೊತ್ತಿನಲ್ಲಿ ಮತ್ತೆ ಬರುತ್ತಿತ್ತು. 

ಪಾಲಾಕ್ಷಪ್ಪ ಅವರೊಂದಿಗೆ ಈ ನಾಯಿ ಬಂದಿದ್ದನ್ನು ಸಿಬ್ಬಂದಿ ಗಮನಿಸಿದ್ದರು. ಕೊನೆಗೆ ನಾಯಿಯನ್ನು ಹಿಡಿದುಕೊಡು ಹೋಗುವಂತೆ ಪಟ್ಟಣ ಪಂಚಾಯಿತಿ ಅವರಿಗೆ ಕೋರಲಾಗಿತ್ತು. ಪಟ್ಟಣ ಪಂಚಾಯಿತಿ ಸಿಬ್ಬಂದಿ ನಾಯಿಯನ್ನು ಹಿಡಿದುಕೊಂಡು ವಿಲೇವಾರಿ ಘಟಕದಲ್ಲಿ ಬಿಟ್ಟಿದ್ದರು. ಆನಂತರ ಊರಿನವರನ್ನು ಸಂಪರ್ಕಿಸಿ ಕನ್ನೆಕೊಪ್ಪಕ್ಕೆ ಕಳುಹಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ರೀತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲೂ ನಾಯಿಯೊಂದು ಆಸ್ಪತ್ರೆಗೆ ದಾಖಲಾಗಿದ್ದ ಮಾಲೀಕರನ್ನು ಕಾಯ್ದುಕೊಂಡು ನಿಂತಿದ್ದ ಸುದ್ದಿ ವೈರಲ್‌ ಆಗಿತ್ತು.

ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಟ್ಟಣದ ಕಿರಣ್ ಆಸ್ಪತ್ರೆಯಲ್ಲಿ ನಾಗರತ್ನ ಶಾಸ್ತ್ರಿಯವರಿಗೆ ಚಿಕಿತ್ಸೆ ನಡೆಯುತ್ತಿತ್ತು. ನಾಗರತ್ನ ಶಾಸ್ತ್ರಿಯವರು ಆಸ್ಪತ್ರೆಗೆ ದಾಖಲಾದಾಗಿನಿಂದ ಪುಪ್ಪಿ, ಕಿರಣ್ ಆಸ್ಪತ್ರೆ ಬಾಗಿಲಲ್ಲಿ ಮೊಕ್ಕಾಂ ಹೂಡಿತ್ತು. ಆಸ್ಪತ್ರೆ ಸಿಬ್ಬಂದಿ ಮತ್ತು ಬಂದು ಹೋಗುವ ಸಾರ್ವಜನಿಕರಿಗೆ ಪುಪ್ಪಿ ತೊಂದರೆ ಕೊಟ್ಟಿಲ್ಲ. ಆದರೆ ಹೆಚ್ಚು ಹೊತ್ತು ಆಸ್ಪತ್ರೆ ಬಾಗಿಲಲ್ಲೆ ಕಾದು ಕುಳಿತಿರುತ್ತಿತ್ತು.