ಕನ್ನಡ ಸುದ್ದಿ  /  ಕರ್ನಾಟಕ  /  Shivamogga News: ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಸಜೀವ ದಹನ: ಶಿವಮೊಗ್ಗದಲ್ಲಿ ನಡೆಯಿತು ಹೇಯ ಕೃತ್ಯ

Shivamogga News: ಯುವತಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಸಜೀವ ದಹನ: ಶಿವಮೊಗ್ಗದಲ್ಲಿ ನಡೆಯಿತು ಹೇಯ ಕೃತ್ಯ

Shivamogga Crime News: ಯುವತಿಯನ್ನ ಪ್ರೀತಿಸುತ್ತಿದ್ದ ಏಕೈಕ ಕಾರಣಕ್ಕಾಗಿ 27 ವರ್ಷದ ಯುವಕನನ್ನ ಯುವತಿಯ ಕುಟುಂಬದವರು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 8 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ಇತ್ತೀಚೆಗೆ ಅಂತರ್ಜಾತಿಯ ವಿವಾಹಗಳು ಹೆಚ್ಚುತ್ತಿದೆ. ಬೇರೆ-ಬೇರೆ ಜಾತಿಯ ಯುವಕ-ಯುವತಿಯರು ಪರಸ್ಪರ ಪ್ರೀತಿಸಿ ಕುಟುಂಬವನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಇನ್ನೂ ಕೆಲವರು ಕುಟುಂಬದ ವಿರೋಧವಿದ್ದರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ, ಕೆಲವೆಡೆ ಮರ್ಯಾದಾ ಹತ್ಯೆಗಳಂತಹ ಆಘಾತಕಾರಿ ಘಟನೆಗಳು ನಡೆಯುತ್ತಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ವಿಭಿನ್ನ ಘಟನೆ ನಡೆದಿದೆ. ಹುಡುಗ-ಹುಡುಗಿ ಒಂದೇ ಸಮುದಾಯದವರಾಗಿದ್ದರೂ ಯುವತಿಯ ಕುಟುಂಬದ ವಿರೋಧಕ್ಕೆ ಯುವಕ ಬಲಿಯಾಗಿದ್ದಾನೆ.

27 ವರ್ಷದ ಯುವಕನೊಬ್ಬ ಆತ ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದಲೇ ಕೊಲೆಯಾಗಿದ್ದಾನೆ. ಯುವಕನನ್ನು ಯುವತಿಯ ಸಂಬಂಧಿಕರು ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತೊಗರ್ಸಿಯಲ್ಲಿ ಶುಕ್ರವಾರ (ಮಾರ್ಚ್ 15) ರಾತ್ರಿ ಘಟನೆ ನಡೆದಿದೆ.

ಯುವತಿಯನ್ನು ಪ್ರೀತಿಸಿದ್ದ ತಪ್ಪಿಗೆ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಯುವಕನನ್ನು ಗಾಡಿಕೊಪ್ಪ ನಿವಾಸಿ 27 ವರ್ಷದ ವೀರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಕ್ಯಾಬ್ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಎಂಟು ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೃತ ವೀರೇಶ್ ತಾಯಿ ಮಾದವಿ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅವರ ಮಗ ಹಾಗೂ ದೂರದ ಸಂಬಂಧಿ 20 ವರ್ಷದ ಅಂಕಿತಾ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಗೆ ಅಂಕಿತಾ ಕುಟುಂಬಸ್ಥರು ವಿರೋಧಿಸಿದ್ದರು. ಒಂದೇ ಜಾತಿಗೆ ಸೇರಿದ್ದರೂ ವೀರೇಶ್ ಹಾಗೂ ಅಂಕಿತಾ ಪ್ರೀತಿಗೆ ಆಕೆಯ ಮನೆಯವರೇ ವಿರೋಧ ವ್ಯಕ್ತಪಡಿಸಿದ್ದರು. ಅಂಕಿತಾ ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದರು. ತಾವು ಮದುವೆಯಾದ ಬಳಿಕ ಕುಟುಂಬಸ್ಥರು ಒಪ್ಪುತ್ತಾರೆ ಎಂದು ಅವರು ಭಾವಿಸಿದ್ದರು.

ಗುರುವಾರದಂದು ಅಂಕಿತಾ ಅವರ ಸಹೋದರ ಪ್ರವೀಣ್ ಮತ್ತು ಆತನ ಸಹಚರರು ವೀರೇಶ್ ಅವರ ಗಾಡಿಕೊಪ್ಪದ ನಿವಾಸಕ್ಕೆ ಹೋಗಿದ್ದರು. ಮೊಬೈಲ್ ಫೋನ್‌ನಿಂದ ಜೋಡಿಯ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ಅಳಿಸಿಹಾಕುವಂತೆ ಸೂಚಿಸಿದ್ದರು ಎಂದು ವೀರೇಶ್ ಅವರ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಾತನಾಡಲು ಮನೆಗೆ ಕರೆಸಿ ಕೊಂದೇ ಬಿಟ್ರು ಪಾಪಿಗಳು

ಅದೇ ದಿನ ಸಂಜೆ, ವೀರೇಶ್‌ಗೆ ಅಂಕಿತಾ ಕುಟುಂಬದಿಂದ ಕರೆ ಬಂದಿದೆ. ತೊಗರ್ಸಿಯಲ್ಲಿರುವ ತಮ್ಮ ಮನೆಗೆ ತುರ್ತಾಗಿ ಬರುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಕೂಡಲೇ ತೊಗರ್ಸಿಗೆ ವೀರೇಶ್ ತೆರಳಿದ್ದಾರೆ. ಆತ ಬಂದ ಕೂಡಲೇ ವೀರೇಶ್ ನನ್ನು ತಡೆಹಿಡಿದ ಅಂಕಿತಾ ಕುಟುಂಬಸ್ಥರು, ಆತನ ಇನ್ನೋವಾ ಕಾರಿನೊಳಗೆ ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಶುಕ್ರವಾರವಾದರೂ ವೀರೇಶ್ ಮನೆಗೆ ಹಿಂತಿರುಗದ ಕಾರಣ, ತಾಯಿ ಮಾದವಿ ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಾರೆ. ಶನಿವಾರ ಬೆಳಗ್ಗೆ ತೊಗರ್ಸಿ ಬಳಿ ಸುಟ್ಟ ಕಾರಿನೊಳಗೆ ವೀರೇಶ್ ಅವರ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿರಾಳಕೊಪ್ಪ ಪೊಲೀಸರು ಪ್ರವೀಣ್ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 504 (ಅವಮಾನ) 506 (ಕ್ರಿಮಿನಲ್ ಬೆದರಿಕೆ), 302 (ಕೊಲೆ), ಮತ್ತು 201 (ಅಪರಾಧದ ಸಾಕ್ಷ್ಯ ನಾಶ) ಅಡಿಯಲ್ಲಿ ಎಂಟು ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪ್ರಕರಣದ ಎಲ್ಲಾ ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರನ್ನು ಶೀಘ್ರವೇ ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಎನ್. ರಮೇಶ್ ಮಾಹಿತಿ ನೀಡಿದ್ದಾರೆ.