Bhadravati Crime: ಹನಿಟ್ರ್ಯಾಪ್ ಮಾಡಿ ದುಡ್ಡಿಗೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಭದ್ರಾವತಿ ಪೊಲೀಸರ ಬಲೆಗೆ
Crime news in Kannada: ಐವರ ಪೈಕಿ ಯುವತಿ ಮೈಸೂರು ಮೂಲದವಳಾದರೆ, ಆರೋಪಿಗಳು ಹುಬ್ಬಳ್ಳಿ ಹಾಗೂ ರಾಯಚೂರು ಮೂಲದವರಾಗಿದ್ದಾರೆ.
ಶಿವಮೊಗ್ಗ: ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭದ್ರಾವತಿಯ ವ್ಯಕ್ತಿಯೊಬ್ಬನಿಂದ ಹಣ ಪೀಕಲು ಮುಂದಾಗಿದ್ದ ಮೈಸೂರು, ಹುಬ್ಬಳ್ಳಿ ಹಾಗೂ ರಾಯಚೂರುನವರಿದ್ದ ಐವರ ತಂಡವನ್ನು ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಠಾಣೆಯ ಪೊಲೀಸರು ತಮ್ಮ ಖೆಡ್ಡಾಗೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ನಾಲ್ವರು ಪುರುಷರು ಹಾಗೂ ಓರ್ವ ಯುವತಿಯನ್ನು ಬಂಧಿಸಿದ್ದಾರೆ. ಐವರ ಪೈಕಿ ಯುವತಿ ಮೈಸೂರು ಮೂಲದವಳಾದರೆ, ಆರೋಪಿಗಳು ಹುಬ್ಬಳ್ಳಿ ಹಾಗೂ ರಾಯಚೂರು ಮೂಲದವರಾಗಿದ್ದಾರೆ.
ಭದ್ರಾವತಿ ಮೂಲದ ಸಂತ್ರಸ್ತ ವ್ಯಕ್ತಿ ಹಿಂದೆ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಯುವತಿಯ ಪರಿಚಯವಾಗಿದೆ. ನಂತರ ಯುವತಿ ವಾಟ್ಸ್ಯಾಪ್ ನಲ್ಲಿ ಚಾಟಿಂಗ್ ಮುಂದುವರಿಸಿದ್ದಾಳೆ. ಈ ಸಂತ್ರಸ್ತ ವ್ಯಕ್ತಿ ಆಕೆಯ ಬೆತ್ತಲೆ ದೇಹದ ವಿಡಿಯೋ ಕಾಲ್‌ಗಳನ್ನ ಅನುಮಾನವಿಲ್ಲದೆ ನೋಡಿದ್ದರು. ಹೀಗೆ ತನ್ನೆದೆಲ್ಲವನ್ನು ತೋರಿಸಿದ ಯುವತಿ 15 ದಿನ ಬಿಟ್ಟು ಸಂತ್ರಸ್ತರಿಗೆ ಒಂದು ಸ್ಕ್ರೀನ್ ರೇಕಾರ್ಡೆಡ್ ವಿಡಿಯೋವನ್ನು ಕಳುಹಿಸಿದ್ದಳು. ನಂತರ ವಾಟ್ಸ್ಯಾಪ್ ಕಾಲ್ ಮಾಡಿ ಬೆದರಿಕೆ ಹಾಕಿದ್ದಾಳೆ. ಹಣ ಕೊಡಬೇಕು ಸಲೀಸಾಗಿ ಬೇಡಿಕೆ ಇಟ್ಟಿದ್ದಾಳೆ. ವೀಡಿಯೋ ವೈರಲ್ ಮಾಡುವ ಬ್ಲಾಕ್‌ಮೇಲ್ ಮಾಡಿದ್ದಾಳೆ. ಬಳಿಕ ಎಚ್ಚೆತ್ತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಭದ್ರಾವತಿ ಪೊಲೀಸರು ಹನಿಟ್ರ್ಯಾಪ್ ತಂಡದ ವಿರುದ್ದ ಕಾರ್ಯಾಚರಣೆ ಶುರು ಮಾಡಿದ್ಧಾರೆ.
ಈ ವ್ಯಕ್ತಿ ಯುವತಿ ಅಕೌಂಟ್‌ಗೆ ಆಕೆ ಕೇಳಿದಾಗೆಲ್ಲಾ ದುಡ್ಡು ಹಾಕಿದ್ದಾನೆ. ಹೀಗೆ 25 ಸಾವಿರ ರೂಪಾಯಿ ಹುಡುಗಿಯ ಪಾಲಾಗಿದೆ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎನ್ನುತ್ತಿದ್ದ ಯುವತಿ ಮತ್ತೊಂದು ವ್ಯೂಹ ಹೂಡಿದ್ದಾಳೆ. ಅಲ್ಲಿಯವರೆಗೂ ಮೈಸೂರಿನಿಂದಲೇ ಆಟವಾಡುತ್ತಿದ್ದ ಯುವತಿ ಕಳೆದ ನ 17 ರಂದು ಶಿವಮೊಗ್ಗಕ್ಕೆ ಬಂದು, ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದು ಸಂತ್ರಸ್ತರನ್ನ ಕರೆಸಿಕೊಂಡಳು.
ಶಿವಮೊಗ್ಗದ ಪ್ರತಿಷ್ಟಿತ ಹೋಟೆಲ್ ಒಂದಕ್ಕೆ ಆತನನ್ನು ಕರೆದೊಯ್ದ ಯುವತಿ ಅಲ್ಲಿಂದ ಸಂತ್ರಸ್ತನನ್ನು ಸಹಚರರ ನೆರವಿನೊಂದಿಗೆ ಕಿಡ್ನ್ಯಾಪ್ ಮಾಡಿದಳು. ರೂಂನಲ್ಲಿದ್ದ ಇಬ್ಬರನ್ನು ದಿಢೀರ್ ಎಂಬಂತೆ ಬಂದ ನಾಲ್ವರು ಆರೋಪಿಗಳು ಡಸ್ಟರ್ ಕಾರಿನಲ್ಲಿ ತುಂಬಿಕೊಂಡು ಮೈಸೂರಿಗೆ ಕರೆದೊಯ್ದರು. ಅಲ್ಲಿ ಮತ್ತೆ ಹನಿಟ್ರ್ಯಾಪ್ ಹುಡುಗಿಯ ಜೊತೆ ರೂಮೊಂದರಲ್ಲಿ ಕೂರಿಸಿ, ಇಬ್ಬರಿಂದಲೂ ವಿಡಿಯೋ ಹೇಳಿಕೆ ಮಾಡಿಕೊಂಡಿದ್ದಾರೆ. ತಮಗೆ ಬೇಕಾದ ಹಾಗೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಆರೋಪಿಗಳು 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಹೆದರಿದ ದೂರುದಾರರು ಹಾಗೂ ಅವರ ಸ್ನೇಹಿತರಿಂದ 20 ಸಾವಿರ ವಸೂಲಿ ಮಾಡಿದ್ದಾರೆ. ಬಳಿಕ 25 ಲಕ್ಷ ಸಾಲ ಪಡೆದಿದ್ದು, 25 ಕ್ಕೆ ವಾಪಸ್ ಕೊಡುತ್ತೇನೆ ಎಂದು ಅಗ್ರಿಮೆಂಟ್ ಕೂಡ ರೆಡಿ ಮಾಡಿಸಿ ಅದಕ್ಕೆ ಸಹಿಯನ್ನು ಹಾಕಿಸಿಕೊಂಡಿದ್ದರು.
ಆರೋಪಿಗಳಿಂದ ತಪ್ಪಿಸಿಕೊಂಡ ಇಬ್ಬರು ಸ್ನೇಹಿತರ ಪೈಕಿ ದೂರುದಾರರು ಭದ್ರಾವತಿ ಪೊಲೀಸರ ಮೊರೆಹೋಗಿ ನಡೆದ ಎಲ್ಲ ವಿಚಾರ ತಿಳಿಸಿದ್ದಾರೆ. ಭದ್ರಾವತಿ ಶಿವಾಜಿ ಸರ್ಕಲ್ ಪೊಲೀಸ್ ಸ್ಟೇಷನ್‌ನ ಪೊಲೀಸರು ಕಲಂ 323, 342, 386, 388, 504, 506 , 149 ಅಡಿಯಲ್ಲಿ ಕೇಸ್ ದಾಖಲಿಸಿ, ಹನಿಟ್ರ್ಯಾಪ್ ಆರೋಪಿಗಳ ಹುಡುಕಾಟ ಆರಂಭಿಸಿದರು. ಹಣಕ್ಕಾಗಿ ಭದ್ರಾವತಿ ವ್ಯಕ್ತಿಗೆ ವಂಚನೆ ಮಾಡಲು ಮುಂದಾಗಿದ್ದ ಹನಿಟ್ರ್ಪಾಪ್ ಗ್ಯಾಂಗ್ ಇದೀಗ ಶಿವಮೊಗ್ಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಂಧಿತರು
ಶ್ವೇತಾ, 26 ವರ್ಷ, ಇಟ್ಟಿಗೆ ಗೂಡು, ಮೈಸೂರು. ವಿನಾಯಕ ಅಲಿಯಾಸ್ ವಿನಯ್ 26 ವರ್ಷ, ಹುಬ್ಬಳ್ಳಿ ನಗರ. ಮಹೇಶ, 27 ವರ್ಷ, ಹುಬ್ಬಳ್ಳಿ ನಗರ. ಅರುಣ್ ಕುಮಾರ 28 ವರ್ಷ, ಹುಬ್ಬಳ್ಳಿ. ಹೇಮಂತ ಸಾಯಿ, 24 ವರ್ಷ, ಸಿಂದನೂರು.