ಕನ್ನಡ ಸುದ್ದಿ  /  ಕರ್ನಾಟಕ  /  ಶಿವಮೊಗ್ಗ: ಮಾಜಿ ಎಂಎಲ್‌ಸಿ, ಬಿಜೆಪಿ ನಾಯಕ ಭಾನುಪ್ರಕಾಶ್‌ ನಿಧನ, ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ಹೃದಯಾಘಾತ

ಶಿವಮೊಗ್ಗ: ಮಾಜಿ ಎಂಎಲ್‌ಸಿ, ಬಿಜೆಪಿ ನಾಯಕ ಭಾನುಪ್ರಕಾಶ್‌ ನಿಧನ, ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ಹೃದಯಾಘಾತ

ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಇಂದು (ಜೂನ್ 17) ಬೆಳಗ್ಗೆ ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮಾಜಿ ಎಂಎಲ್‌ಸಿ, ಬಿಜೆಪಿ ನಾಯಕ ಭಾನುಪ್ರಕಾಶ್‌ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರವು ಸ್ವಗ್ರಾಮವಾಗಿರುವ ಮತ್ತೂರಿನಲ್ಲಿ ನಡೆದಿದೆ.

ಶಿವಮೊಗ್ಗ: ಮಾಜಿ ಎಂಎಲ್‌ಸಿ, ಬಿಜೆಪಿ ನಾಯಕ ಭಾನುಪ್ರಕಾಶ್‌ ಸೋಮವಾರ ನಿಧನರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ಹೃದಯಾಘಾತವಾಗಿ ವಿಧಿವಶರಾದರು.
ಶಿವಮೊಗ್ಗ: ಮಾಜಿ ಎಂಎಲ್‌ಸಿ, ಬಿಜೆಪಿ ನಾಯಕ ಭಾನುಪ್ರಕಾಶ್‌ ಸೋಮವಾರ ನಿಧನರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ ವೇಳೆ ಹೃದಯಾಘಾತವಾಗಿ ವಿಧಿವಶರಾದರು.

ಶಿವಮೊಗ್ಗ: ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಬಿಜೆಪಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಧಾನಪರಿಷತ್‌ನ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ದಿಢೀರ್ ಕುಸಿದುಬಿದ್ದು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಪ್ರತಿಭಟನೆಯ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಅವರು ಕುದುರೆ ಏರಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಎಸ್‌ ಎನ್ ಚನ್ನಬಸಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ಅಣಕು ಶವಯಾತ್ರೆ ಕೂಡ ನಡೆಸಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಎಲ್ಲರೂ ರಘುಪತಿ ರಾಘವ ರಾಜಾರಾಮ್ ಭಜನೆ ಮಾಡಿದ್ದರು. ಹೀಗೆ ಭಜನೆ ಮಾಡುವಾಗ ಎಂ.ಬಿ. ಭಾನುಪ್ರಕಾಶ್‌ ಅವರು ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕುಳ್ಳಿರಿಸಿ ನೀರು ಕುಡಿಸಿ ಉಪಚರಿಸಿ ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು. ತೀವ್ರ ಹೃದಯಾಘಾತಕ್ಕೆ ಒಳಗಾಗಿ ಭಾನುಪ್ರಕಾಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ಮೂಲಗಳು ಹೇಳಿವೆ. ಭಾನು ಪ್ರಕಾಶ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ಸಂಜೆ ಅವರ ಸ್ವಗ್ರಾಮ ಮತ್ತೂರಿನಲ್ಲಿ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಎಂ ಬಿ ಭಾನುಪ್ರಕಾಶ್ ಯಾರು; ಅವರ ಕಿರುಪರಿಚಯ

ಎಂ ಬಿ ಭಾನುಪ್ರಕಾಶ್ ಅವರು ಮೂಲತಃ ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಕ್ತಿಕೇಂದ್ರವಾಗಿರುವ ಮತ್ತೂರು ಗ್ರಾಮದವರು. ಇದು ಸಂಸ್ಕೃತ ಗ್ರಾಮವೂ ಹೌದು. ಭಾನುಪ್ರಕಾಶ್ ಅವರು ಇಲ್ಲಿಯವರು. ಸಮಾಜಮುಖೀ ವ್ಯಕ್ತಿತ್ವದ ಭಾನುಪ್ರಕಾಶ್ ಬಾಲ್ಯದಿಂದಲೂ ಸಂಘದ ನಂಟಿನಲ್ಲೇ ಬೆಳೆದವರು. ಜನಸಂಘದಲ್ಲೂ ಸಕ್ರಿಯರಾಗಿದ್ದರು.

ಹೀಗಾಗಿ ಅವರಿಗೆ ಸಂಘಕಾರ್ಯವೂ ಹೊಸದಲ್ಲ. ಅಂತೆಯೇ ರಾಜಕೀಯ ಹೊಸದಲ್ಲ. ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2001ರಲ್ಲಿ ಆಯ್ಕೆಯಾದ ಅವರು ಅಂದು ಸಕ್ರಿಯ ರಾಜಕಾರಣಕ್ಕೆ ಬಂದವರು. ಮುಂದೆ 2004ರಲ್ಲಿ ಎಸ್ ಬಂಗಾರಪ್ಪ ಅವರು ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದಾಗ ಇದೇ ಭಾನುಪ್ರಕಾಶ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು.

ಜಂಟಲ್‌ಮನ್ ವ್ಯಕಿತ್ವ ಹೊಂದಿದ್ದ ಭಾನುಪ್ರಕಾಶ್ ಅವರು ಯಾರ ಜತೆಗೂ ವೈರತ್ವ ಕಟ್ಟಿಕೊಂಡ ಉದಾಹರಣೆ ಇಲ್ಲ. 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಎದುರಾದ ಎಸ್ ಬಂಗಾರಪ್ಪ ಅವರು, "ಭಾನುಜಿ, ನೀವು ಜಂಟಲ್‌ಮನ್‌. ಅಕಸ್ಮಾತ್‌ ನಾನು ಗೆಲ್ಲದೇ ಹೋದರೆ, ಈ ಚುನಾವಣೆಯ ಗೆಲುವು ನಿಮ್ಮದಾಗಲಿ' ಎಂದು ಅವರು ಹಾರೈಸಿದ್ದನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

ಶಿವಮೊಗ್ಗದ ಪ್ರಭಾವಿ ರಾಜಕಾರಣಿ, ರಾಜ್ಯದ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಅವರನ್ನು ಮತ್ತೆ ಬಿಜೆಪಿಗೆ ಕರೆತರುವಲ್ಲಿ ಭಾನುಪ್ರಕಾಶ್ ಪ್ರಮುಖ ಪಾತ್ರವಹಿಸಿದ್ದರು. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಕೆಲವರು ಹೇಳಿದ್ದಾರೆ.

ಎಲ್ಲರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದರು ಭಾನುಪ್ರಕಾಶ್

ಕಿಮ್ಮನೆ ರತ್ನಾಕರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಅದು. ಆಗ, ಅವರನ್ನು ಭೇಟಿ ಮಾಡುತ್ತಿದ್ದ ಭಾನುಪ್ರಕಾಶ್ ಅವರು, ಸರ್ ನಾನು ನಿಮ್ಮ ಕ್ಷೇತ್ರದ ಮತದಾರ. ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಸ್ವಗ್ರಾಮ ಮತ್ತೂರು ಇದೆ. ನನ್ನೂರಿನ ಕೆಲಸವನ್ನು ಆದ್ಯತೆ ಮೇರೆಗೆ ಮಾಡಿಕೊಡಿ ಎಂದು ಮಾಡುತ್ತಿದ್ದ ಮನವಿಗಳನ್ನು ಕಿಮ್ಮನೆಯವರೂ ನಸುನಗುತ್ತಲೇ ಮಾಡಿಕೊಡುತ್ತಿದ್ದರು ಎಂಬುದನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

ಅದೇ ರೀತಿ ಜೆಡಿಎಸ್‌ನ ಅಪ್ಪಾಜಿ ಗೌಡರ ಜೊತೆಗೂ ಉತ್ತಮ ಸಂಪರ್ಕ ಇತ್ತು. ಜೆಡಿಎಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ ಮಧು ಬಂಗಾರಪ್ಪ ಕೂಡ ಭಾನುಪ್ರಕಾಶ್ ಅವರ ವಿಚಾರಗಳನ್ನು ಬೆಂಬಲಿಸಿಯೇ ಮಾತನಾಡುತ್ತಿದ್ದರು. ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರಂತೂ ಭಾನು ಭಟ್ರೇ ಎಂದೇ ಕರೆಯುತ್ತಿದ್ದರು.

ಪಕ್ಷದಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದ ಭಾನುಪ್ರಕಾಶ್‌

ಎಂಬಿ ಭಾನುಪ್ರಕಾಶ್‌ ಅವರು ವಿಧಾನಪರಿಷತ್ ಸದಸ್ಯರಾಗಿದ್ದಷ್ಟೇ ಅಲ್ಲ, ಪಕ್ಷದಲ್ಲೂ ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದಾರೆ. ಪಕ್ಷ ಸಂಘಟಿಸುವ ಕೆಲಸದಲ್ಲೂ ಭಾಗಿಯಾದವರು. ಶಿವಮೊಗ್ಗದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಎಂ.ಬಿ.ಭಾನುಪ್ರಕಾಶ್, 2013ರಿಂದ 19ರವರೆಗೆ ವಿಧಾನಪರಿಷತ್ ಸದಸ್ಯ ಆಗಿದ್ದರು. ಅವರು ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ವೇಳೆ, ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಉತ್ತಮ ಸಮನ್ವಯ ಹೊಂದಿದ್ದರು. ಇದು ಮಲೆನಾಡಿನಲ್ಲಿ ಪಕ್ಷ ಸಂಘಟನೆ ಬಲಗೊಳ್ಳುವಂತೆ ಮಾಡಿತು ಎಂಬುದನ್ನು ಹಿರಿಯ ನಾಯಕರೊಬ್ಬರು ನೆನಪಿಸಿಕೊಂಡಿದ್ದಾರೆ.