ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ; ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ; ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ಹೀಗಿದೆ

ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ; ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ಹೀಗಿದೆ

ದಕ್ಷಿಣ ಕನ್ನಡ ಭಾಗದ ಕಂಬಳದ ಕ್ರೇಜ್ ಈಗ ನಾಡಿನಾದ್ಯಂತ ಪಸರಿಸಲಾರಂಭಿಸಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ, ಅಲ್ಲೇ ಸಂಪನ್ನಗೊಳ್ಳಲಿದೆ. ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ಹೀಗಿದೆ.

ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ; ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ವಿವರ.
ಶಿವಮೊಗ್ಗಕ್ಕೂ ಕಾಲಿಟ್ಟ ಕಂಬಳ; ಈ ಸಲದ ಸೀಸನ್ ಶುರುವಾಗೋದು ಬೆಂಗಳೂರಲ್ಲಿ, ಕಂಬಳ ವೇಳಾಪಟ್ಟಿ ವಿವರ.

ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಕಂಬಳ ಈ ಬಾರಿ ಶಿವಮೊಗ್ಗಕ್ಕೂ ಕಾಲಿಟ್ಟಿದ್ದು, ಈ ಸೀಸನ್‌ನ ಫೈನಲ್ ಅಲ್ಲಿ ನಡೆಯಲಿದೆ. ಪ್ರಸಕ್ತ ಸೀಸನ್‌ನ ಕಂಬಳದ ಮೊದಲ ಸ್ಪರ್ಧೆ ಬೆಂಗಳೂರಿನಲ್ಲಿ ಆಯೋಜನೆಯಾಗಲಿದೆ. 2024ರ ಅಕ್ಟೋಬರ್ 26 ರಿಂದ 2025ರ ಏಪ್ರಿಲ್ 19ರ ತನಕ ಕಂಬಳ ಸ್ಪರ್ಧೆಗಳು ನಡೆಯಲಿದ್ದು, ವೇಳಾಪಟ್ಟಿ ಬಿಡುಗಡೆಯಾಗಿದೆ.

ಮೂಡಬಿದಿರೆಯಲ್ಲಿ ಶನಿವಾರ (ಆಗಸ್ಟ್ 10) ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಕಂಬಳ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ 024-25 ನೇ ಸಾಲಿನ ಕಂಬಳ ವೇಳಾಪಟ್ಟಿ (ಕಂಬಳ ವೇಳಾಪಟ್ಟಿ 2024 25) ಅಂತಿಮಗೊಳಿಸಲಾಯಿತು. ಪ್ರಸಕ್ತ ಸೀಸನ್‌ನಲ್ಲಿ ಒಟ್ಟು 25 ಕಂಬಳ ಸ್ಪರ್ಧೆಗಳು ನಡೆಯಲಿವೆ.

ಕಳೆದ ವರ್ಷ ಬೆಂಗಳೂರಿಗೆ ಕಂಬಳದ ಪರಿಚಯ, ಈ ಬಾರಿ ಶಿವಮೊಗ್ಗಕ್ಕೆ

“ಕಳೆದ ವರ್ಷ ಬೆಂಗಳೂರಿನಲ್ಲಿ ಕಂಬಳವನ್ನು ಪರಿಚಯಿಸಲಾಯಿತು. ಈ ವರ್ಷ ಶಿವಮೊಗ್ಗದಲ್ಲಿ ನಡೆಯಲಿದೆ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಕಂಬಳ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬೇಡಿಕೆ ಇತ್ತು. ಸ್ಥಳ ಅಂತಿಮಗೊಳಿಸಲು ಸಮಿತಿ ಸದಸ್ಯರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಮೊದಲ ಕಂಬಳ ಸ್ಪರ್ಧೆ ಬೆಂಗಳೂರಿನಲ್ಲಿ 2024ರ ಅಕ್ಟೋಬರ್ 26 ಮತ್ತು 27 ರಂದು ನಡೆಯಲಿದೆ. ಕೊನೆಯ ಕಂಬಳವನ್ನು ಶಿವಮೊಗ್ಗದಲ್ಲಿ 2025ರ ಏಪ್ರಿಲ್ 19 ಮತ್ತು 20 ರಂದು ನಡೆಯಲಿದೆ" ಎಂದು ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಕಂಬಳ ಕಾರ್ಯಕ್ರಮವನ್ನು ವಿಳಂಬವಿಲ್ಲದೆ 24 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ಕಂಬಳದ ಜಾಕಿಯೊಬ್ಬ ಮೂರು ಕುಟುಂಬಗಳ ಜೋಡಿ ಕೋಣಗಳನ್ನು ಓಡಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಆರು ವಿಭಾಗಗಳಲ್ಲಿ ನಡೆಯುವ ಕಂಬಳ ಸ್ಪರ್ಧೆಯ ಫಲಿತಾಂಶ ನಿರ್ಣಯಿಸುವಲ್ಲಿ ಸಂವೇದಕಗಳು (ಸೆನ್ಸರ್‌), ಸೈರನ್ ಮತ್ತು ಹೈ ರೆಸಲ್ಯೂಶನ್ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳನ್ನು ಬಳಸಲು ಸಮಿತಿಯು ನಿರ್ಧರಿಸಿದೆ ಎಂದು ದೇವಿಪ್ರಸಾದ್ ಶೆಟ್ಟಿ ವಿವರಿಸಿದ್ದಾರೆ.

2024-25 ನೇ ಸಾಲಿನ ಕಂಬಳ ವೇಳಾಪಟ್ಟಿ

2024

ಅಕ್ಟೋಬರ್ 26: ಬೆಂಗಳೂರು

ನವೆಂಬರ್ 3 - ದೀಪಾವಳಿ ವಿರಾಮ

ನವೆಂಬರ್ 9 - ಪಿಲಿಕುಳ ಕಂಬಳ

ನವೆಂಬರ್ 16- ಕಕ್ಯೆಪದವು ಕಂಬಳ

ನವೆಂಬರ್ 23 - ಕೊಡಂಗೆ ಕಂಬಳ

ನವೆಂಬರ್ 30 - ಬಳ್ಕುಂಜೆ ಕಂಬಳ

ಡಿಸೆಂಬರ್ 7- ಹೊಕ್ಕಾಡಿಗೋಳಿ ಕಂಬಳ

ಡಿಸೆಂಬರ್ 14 - ಬಾರಾಡಿಬೀಡು ಕಂಬಳ

ಡಿಸೆಂಬರ್ 21 - ಮುಲ್ಕಿ ಕಂಬಳ

ಡಿಸೆಂಬರ್‌ 28 - ಮಂಗಳೂರು ಕಂಬಳ

2025

ಜನವರಿ 4 - ಅಡ್ವೆ ಕಂಬಳ

ಜನವರಿ 11 - ನರಿಂಗಾಣ ಕಂಬಳ

ಜನವರಿ 18 - ಮೂಡಬಿದ್ರೆ ಕಂಬಳ

ಜನವರಿ 25 - ಐಕಳ ಕಂಬಳ

ಫೆಬ್ರವರಿ 1 - ಪುತ್ತೂರು ಕಂಬಳ

ಫೆಬ್ರವರಿ 8 - ಜೆಪ್ಪು ಕಂಬಳ

ಫೆಬ್ರವರಿ 15 - ವಾಮಂಜೂರು ಕಂಬಳ

ಫೆಬ್ರವರಿ 22 - ಕಟಪಾಡಿ ಕಂಬಳ

ಮಾರ್ಚ್‌ 1 - ಬಂಗಾಡಿ ಕಂಬಳ

ಮಾರ್ಚ್‌ 8 - ಬಂಟ್ವಾಳ ಕಂಬಳ

ಮಾರ್ಚ್‌ 15 - ಮಿಯ್ಯಾರು ಕಂಬಳ

ಮಾರ್ಚ್‌ 22 - ಉಪ್ಪಿನಂಗಡಿ ಕಂಬಳ

ಮಾರ್ಚ್ 29 - ವೇಣೂರು ಕಂಬಳ

ಏಪ್ರಿಲ್ 5 - ಪಣಪಿಲ ಕಂಬಳ

ಏಪ್ರಿಲ್ 12 - ಗುರುಪುರ ಕಂಬಳ

ಏಪ್ರಿಲ್ 19 - ಶಿವಮೊಗ್ಗ ಕಂಬಳ

ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯಲಿದೆ ಕಂಬಳ: ದಕ್ಷಿಣ ಕನ್ನಡದ ಶಕ್ತಿಕೇಂದ್ರವಾಗಿರುವ ಮಂಗಳೂರು ಸಮೀಪದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಪಿಲಿಕುಳದಲ್ಲಿ ಆಯೋಜಿಸುವ ಕಂಬಳವನ್ನು ನವೆಂಬರ್‌ನಲ್ಲಿ ಮುಂದುವರಿಸಲು ಸಭೆ ನಿರ್ಧರಿಸಿತು.

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಪ್ರವರ್ಧಮಾನಕ್ಕೆ ಬಂದ ಪಿಲಿಕುಳ ಕಂಬಳ ಸುಮಾರು ಒಂದು ದಶಕದಿಂದ ನಿಂತು ಹೋಗಿದೆ. ಕಂಬಳವನ್ನು ಈ ಹಿಂದೆ 2014ರ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗಿತ್ತು. ತದನಂತರದಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA), ಭಾರತವು ಪ್ರಾಣಿ ಹಿಂಸೆಯನ್ನು ಉಲ್ಲೇಖಿಸಿ ಕಂಬಳ ಕಾರ್ಯಕ್ರಮ ನಡೆಸುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸಿತು. ಇದು ಕೋರ್ಟ್‌ ಕೇಸ್ ಆದ ನಂತರದಲ್ಲಿ ಪಿಲಿಕುಳ ಕಂಬಳ ಕಾರ್ಯಕ್ರಮ ನಿಂತು ಹೋಯಿತು.

ಈ ಬಾರಿ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ತೆ ಕಂಬಳ ಸದ್ದುಮಾಡಲಿದೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಪಿಲಿಕುಳ ಕಂಬಳದ ಅಧ್ಯಕ್ಷತೆ ವಹಿಸುವರು. ಕಂಬಳ ಕಾರ್ಯಕ್ರಮಕ್ಕೆ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

Whats_app_banner