ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ನಾಗೇಂದ್ರಗೆ ಡಬಲ್ ಶಾಕ್; ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ
ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಂದು ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಅವರ ಹೆಸರು ಕೇಳಿ ಬಂದಿತ್ತು. ಈ ಆರೋಪ ಕೇಳಿ ಬಂದ ನಂತರ ನಾಗೇಂದ್ರ 2024ರ ಜೂನ್ 6 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. (ವರದಿ: ಎಚ್ ಮಾರುತಿ, ಬೆಂಗಳೂರು)

ಬೆಂಗಳೂರು: ಬಳ್ಳಾರಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಇಂದು (ಏಪ್ರಿಲ್ 9) ಬ್ಯಾಡ್ ಬುಧವಾರ. ಅವರಿಗೆ ಶಾಕ್ ಮೇಲೆ ಶಾಕ್ ನೀಡಲಾಗಿದೆ. ಮತ್ತೆ ಸಚಿವರಾಗಲು ಪ್ರಯತ್ನಗಳನ್ನು ನಡೆಸುತ್ತಿದ್ದ ಅವರ ಆಸೆಗೆ ಭಗ್ನ ಉಂಟಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಪ್ರಕರಣ ಕುರಿತು ತನಿಖೆ ನಡೆಸಲು ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿತ್ತು. ಅದರನ್ವಯ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣ
ಇದರಿಂದ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಂದು ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಅವರ ಹೆಸರು ಕೇಳಿ ಬಂದಿತ್ತು. ಈ ಆರೋಪ ಕೇಳಿ ಬಂದ ನಂತರ ನಾಗೇಂದ್ರ 2024ರ ಜೂನ್ 6 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾಗೇಂದ್ರ ಅವರನ್ನು ಶೀಘ್ರವೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ನಾಗೇಂದ್ರ ಅವರೂ ಮತ್ತೆ ಸಚಿವರಾಗಲು ಕಸರತ್ತು ನಡೆಸುತ್ತಲೇ ಇದ್ದರು. ಈ ಮಧ್ಯೆ ರಾಜ್ಯಪಾಲರು ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯ ಖರ್ಚು ವೆಚ್ಚಗಳನ್ನು ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಹಣದಲ್ಲಿ ನಿಭಾಯಿಸಲಾಗಿದೆ. ಬಿ.ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕೂ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ನಾಗೇಂದ್ರ ಅವರ ಸೂಚನೆಯಂತೆ ವಿಜಯ್ ಕುಮಾರ್ ಗೌಡ ಎಂಬುವರು ವ್ಯವಹಾರವನ್ನು ನಿರ್ವಹಿಸುತ್ತಿದ್ದರು.
ಅವರ ಮೊಬೈಲ್ ಫೋನ್ ನಿಂದ ಚುನಾವಣಾ ವೆಚ್ಚದ ವಿವರಗಳನ್ನು ಸಂಗ್ರಹಿಸಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರು ತಮ್ಮ ಮೊಬೈಲ್ ಫೋನ್ ಗಳನ್ನು ನಾಶಪಡಿಸಿದ್ದರು. ಮತ್ತೊಂದು ಕಡೆ ಬಿ.ನಾಗೇಂದ್ರ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಬಿ.ನಾಗೇಂದ್ರ ಸೇರಿದಂತೆ ಮೂವರು ಆರೋಪಿಗಳು 1 ಕೋಟಿ 25 ಲಕ್ಷ ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ ಒಂದು ವರ್ಷ ಸೆರೆವಾಸ ಅನುಭವಿಸಬೇಕೆಂದು 42ನೇ ಎಸಿಜೆಎಂ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ವಿ ಎಸ್ ಎಲ್ ಸ್ಟೀಲ್ಸ್ ಲಿಮಿಟೆಡ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಅನಿಲ್ ರಾಜಶೇಖರ್ ಚುಂಡೂರು ಭಾಸ್ಕರ್ ಪಾಲುದಾರಿಕೆಯ ಬಿ.ಸಿ. ಇನ್ಫ್ರಾಸ್ಟ್ರಕ್ಚರ್ ಅಂಡ್ ರಿಸೋರ್ಸ್ ಕಂಪನಿ ನಡುವೆ 2013 ರಿಂದಲೂ ಹಣಕಾಸು ವಿವಾದವಿತ್ತು. ವಿ ಎಸ್ ಎಲ್ ಸ್ಟೀಲ್ಸ್ ಕಂಪನಿಗೆ ನಾಗೇಂದ್ರ ಪಾಲುದಾರಿಕೆಯ ಕಂಪನಿ ಒಟ್ಟು 2.53 ಕೋಟಿ ರೂ. ಪಾವತಿಸಬೇಕಿತ್ತು. ನಾಗೇಂದ್ರ ಪಾಲುದಾರಿಕೆ ಕಂಪನಿ 1 ಕೋಟಿ ರೂ.ಗಳ ಚೆಕ್ ಅನ್ನು ನೀಡಿತ್ತು. ಚೆಕ್ ಬೌನ್ಸ್ ಆದ ಕಾರಣ ವಿ ಎಸ್ ಎಲ್ ಕಂಪನಿ 2022 ರಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ಈ ತೀರ್ಪು ನೀಡಿದೆ.
(ವರದಿ: ಎಚ್. ಮಾರುತಿ, ಬೆಂಗಳೂರು)
