ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು; ಘತ್ತರಗಿ ಭಾಗ್ಯವಂತಿ ದೇವಿಗೆ ಸೊಸೆಯ ಹರಕೆ, 20 ರೂಪಾಯಿ ನೋಟು ಕಾಣಿಕೆ
Ghattaragi Bhagyawanti Devi: ಅಫಜಲಪುರದ ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾದ ನೋಟು ಈಗ ಎಲ್ಲೆಡೆ ವೈರಲ್ ಆಗಿದೆ. ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಘತ್ತರಗಿ ಭಾಗ್ಯವಂತಿ ದೇವಿಗೆ ಹರಕೆ ಹೊತ್ತ ಸೊಸೆ 20 ರೂಪಾಯಿ ನೋಟು ಕಾಣಿಕೆ ಹಾಕಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
Ghattaragi Bhagyawanti Devi: ಕಾಲ ಬದಲಾದರೂ ಜನರ ಮನಸ್ಥಿತಿ ಬದಲಾಗಿಲ್ಲವೇನೋ. ಬದುಕಿನ ಗುಣಮಟ್ಟ ಸುಧಾರಿಸಿದಂತೆ ಆಲೋಚನಾ ಕ್ರಮ ಬದಲಾಗುತ್ತದೆ. ದಶಕಗಳ ಹಿಂದೆ ಇದ್ದಂತಹ ಪರಿಸ್ಥಿತಿ ಈಗಿಲ್ಲ. ಬಹುತೇಕರು ವಿದ್ಯಾವಂತರಾಗಿದ್ದು, ಸುಶಿಕ್ಷಿತರೂ ಆಗಿದ್ದಾರೆ. ತಿಳಿವಳಿಕೆ ಹೊಂದಿದವರಾಗಿದ್ದು ಹೊಂದಾಣಿಕೆಯ ಬದುಕು ಸಾಗಿಸುತ್ತಿದ್ದಾರೆ. ಆದರೂ ಅತ್ತೆ-ಸೊಸೆ ಹೊಂದಾಣಿಕೆ ವಿಚಾರ ಪದೇಪದೆ ಗಮನಸೆಳೆಯುವಂಥದ್ದು. ಈ ವಿಷಯ ಯಾಕೆ ಈಗ ಅಂತೀರಾ, ಏನಿಲ್ಲ ಕಲಬರುಗಿ ಜಿಲ್ಲೆಯ ಅಫಜಲಪುರ ತಾಲೂಕು ಘತ್ತರಗಿಯ ಶ್ರೀ ಭಾಗ್ಯವಂತಿ ದೇವಿಗೆ ಸೊಸೆಯೊಬ್ಬಳು ಹರಕೆ ಹೊತ್ತ ವಿಚಾರ ನಾಡಿನ ಉದ್ದಗಲಕ್ಕೂ ಚರ್ಚೆ ಗ್ರಾಸವಾಗಿದೆ. 20 ರೂಪಾಯಿ ನೋಟಿನ ಮೇಲೆ ಹರಕೆ ಬರೆದು ಕಾಣಿಕೆ ಹಾಕಿದ್ದು, ಆ ನೋಟು ಈಗ ಬಹಿರಂಗವಾಗಿರುವುದು ಇದಕ್ಕೆ ಕಾರಣ.
ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು; ಘತ್ತರಗಿ ಭಾಗ್ಯವಂತಿ ದೇವಿಗೆ ಸೊಸೆಯ ಹರಕೆ
ಅಫಜಲಪುರ ತಾಲೂಕು ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ತೆರೆದು ಹಣವನ್ನು ಲೆಕ್ಕಹಾಕಲಾಗಿದೆ. ಆಗ ಹತ್ತಾರು ನೋಟುಗಳ ನಡುವೆ 20 ರೂಪಾಯಿ ನೋಟು ಅಲ್ಲಿ ನೋಟು ಎಣಿಸುತ್ತಿದ್ದವರ ಗಮನಸೆಳೆದಿದೆ. ಆ 20 ರೂಪಾಯಿ ನೋಟಿನ ಹಿಂಬದಿಯಲ್ಲಿ “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು, ತಾಯಿ” ಎಂದು ಬರೆಯಲಾಗಿದೆ.
ಸೊಸೆಯೊಬ್ಬಳು ತನ್ನ ಅತ್ತೆಯ ಸಾವು ಬೇಗ ಸಂಭವಿಸಲಿ ಎಂದು ಹಾರೈಸಿ ಶ್ರೀ ಭಾಗ್ಯವಂತಿ ದೇವಿಗೆ ಹರಕೆ ಹೊತ್ತು ಕಾಣಿಕೆ ಹಾಕಿದ್ದಾಳೆ. ಭಾಗ್ಯವಂತಿ ದೇವಿ ಅತ್ಯಂತ ಶಕ್ತಿಶಾಲಿ ದೇವತೆ. ಶತಮಾನಗಳ ಇತಿಹಾಸ ಇರುವಂತ ದೇವಿ ದೇವಸ್ಥಾನ ಇದಾಗಿದ್ದು, ಭಾಗ್ಯಮ್ಮ, ಭಾಗಮ್ಮ ಎಂಬಿತ್ಯಾದಿ ಹೆಸರುಗಳಿಂದಲೂ ಆರಾಧಿಸಲ್ಪಡುತ್ತಿದ್ದಾಳೆ. ಹಾವಿನ ನೆರಳು ಹೊಂದಿರುವ ದೇವಿಯಾದ ಕಾರಣ ಗ್ರಾಮದಲ್ಲೂ ಹಲವು ವಿಶೇಷ ನಂಬಿಕೆ ಆಚರಣೆಗಳೂ ಚಾಲ್ತಿಯಲ್ಲಿವೆ. ಗ್ರಾಮಸ್ಥರ ಅಭೀಷ್ಟಗಳನ್ನು ಈಡೇರಿಸುತ್ತಿರುವ ಕಾರಣ ಭಾಗ್ಯವಂತಿ ದೇವಿಯು ಭಕ್ತರ ಪಾಲಿಗೆ ಕಾಮಧೇನು ಮತ್ತು ಕಲ್ಪತರು ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಏನೇ ಇರಲಿ, ಭಾಗ್ಯವಂತಿ ದೇವಿಯು ಸಂಕಷ್ಟದಲ್ಲಿರುವವರಿಗೆ ಬಹುಬೇಗ ಸ್ಪಂದಿಸುತ್ತಾಳೆ. ಮನನೊಂದವರು ಹೃದಯ ತುಂಬಿ ಪ್ರಾರ್ಥಿಸಿದರೆ ಅಂತಹ ಬೇಡಿಕೆಯನ್ನು ದೇವಿಯು ಬೇಗ ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆ. ಹೀಗಾಗಿ ಅತ್ತೆಯ ಕಾಟ ತಡೆಯಲಾರದೇ ಬೇಸತ್ತ ಸೊಸೆ ಈ ಕೃತ್ಯವೆಸಗಿರಬಹುದು ಊರ ಮಂದಿ ಹೇಳತೊಡಗಿದ್ದಾರೆ. ಯಾರ ಮನೆ ಕಥೆಯೋ ಏನೋ ಎಂದು ಎಲ್ಲರೂ ಆಡಿಕೊಳ್ಳತೊಡಗಿದ್ದಾರೆ. ಹರಕೆ ಹೊರೋದು ಹೊತ್ತುಕೊಂಡಿದ್ದಾಳೆ, ಅತ್ತೆಗೆ ಒಳ್ಳೆಯ ಬುದ್ಧಿ ಕೊಟ್ಟು ಸಂಕಷ್ಟದಿಂದ ಪಾರು ಮಾಡು ಎಂದು ಒಳ್ಳೆಯದನ್ನಾದರೂ ಕೋರಬಾರದಿತ್ತೇ ಎಂದೂ ಹೇಳುತ್ತಿದ್ದಾರೆ. ಘತ್ತರಗಿ ಗ್ರಾಮದವರಾ ಅಥವಾ ಅನ್ಯ ಗ್ರಾಮದವರಾ ಯಾರು ಈ ಹರಕೆ ಕಾಣಿಕೆ ಹಾಕಿರಬಹುದು ಎಂಬ ಊಹಾಪೋಹ ಹೆಚ್ಚಾಗಿದೆ. ಸೊಸೆಗೆ ಕಾಟ ಕೊಡುತ್ತಿರುವ ಅತ್ತೆಯರ ಮನದಲ್ಲಿ ಆತಂಕ, ಕಳವಳ ಶುರುವಾಗಲಿದೆ ಎಂದು ಊರ ಜನ ಆಡಿಕೊಳ್ಳುತ್ತಿದ್ದಾರೆ. 20 ರೂಪಾಯಿ ನೋಟಿನ ಫೋಟೋ ಈಗ ವೈರಲ್ ಆಗಿದೆ.
ವರ್ಷಕ್ಕೊಮ್ಮೆ ಕಾಣಿಕೆ ಹುಂಡಿ ಲೆಕ್ಕ
ಮಾಧ್ಯಮ ವರದಿಗಳ ಪ್ರಕಾರ, ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಕಾಣಿಕೆ ಹುಂಡಿ ಲೆಕ್ಕ ಮಾಡುತ್ತಾರೆ. ಹಾಗೆ ಈ ವರ್ಷ ಕಾಣಿಕೆ ಹುಂಡಿ ಲೆಕ್ಕಾಚಾರ ಇತ್ತೀಚೆಗಷ್ಟೆ ನಡೆದಿದೆ. ಆಗ 60 ಲಕ್ಷ ರೂಪಾಯಿ ನಗದು, 200 ಚಿನ್ನಾಭರಣ, ಒಂದು ಕಿಲೋ ಬೆಳ್ಳಿ ಹುಂಡಿಯಲ್ಲಿದ್ದವು. ನಗದು ಹಣದಲ್ಲಿ ಸೊಸೆ ಹರಕೆ ಹೊತ್ತುಕೊಂಡು ಹಾಕಿದ 20 ರೂಪಾಯಿ ನೋಟು ಕೂಡಾ ಇತ್ತು.
ಗಮನಿಸಿ: ಕೆಟ್ಟದ್ದನ್ನು ಕೋರಿ ದೇವರಿಗೆ ಹರಕೆ ಹೊರುವುದು ಒಳ್ಳೆಯ ನಡವಳಿಕೆ ಅಲ್ಲ. ಇಂತಹ ವಿಚಾರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರೋತ್ಸಾಹಿಸುವುದೂ ಇಲ್ಲ. ಮಾಹಿತಿ ಮತ್ತು ತಿಳಿವಳಿಕೆಗಾಗಿ ಈ ಸುದ್ದಿಯನ್ನು ಇಲ್ಲಿ ಕೊಡಲಾಗಿದೆ. ಎಲ್ಲರಿಗೂ ಒಳಿತಾಗಲಿ ಎಂದೇ ಬಯಸುವುದು ಉತ್ತಮ.