Siddaramaiah: ʼನರೇಂದ್ರ ಮೋದಿ ಭಾರತ್ ಜೋಡೋ ಯಾತ್ರೆʼ: ಮತ್ತೆ ಸ್ಲಿಪ್‌ ಆಯ್ತು ಸಿದ್ದರಾಮಯ್ಯ ನಾಲಿಗೆ!
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: ʼನರೇಂದ್ರ ಮೋದಿ ಭಾರತ್ ಜೋಡೋ ಯಾತ್ರೆʼ: ಮತ್ತೆ ಸ್ಲಿಪ್‌ ಆಯ್ತು ಸಿದ್ದರಾಮಯ್ಯ ನಾಲಿಗೆ!

Siddaramaiah: ʼನರೇಂದ್ರ ಮೋದಿ ಭಾರತ್ ಜೋಡೋ ಯಾತ್ರೆʼ: ಮತ್ತೆ ಸ್ಲಿಪ್‌ ಆಯ್ತು ಸಿದ್ದರಾಮಯ್ಯ ನಾಲಿಗೆ!

ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ʼಭಾರತ್‌ ಜೋಡೋʼ ಯಾತ್ರೆಯ ಸಿದ್ಧತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 'ನರೇಂದ್ರ ಮೋದಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಜೊತೆ ಕೈ ಜೋಡಿಸಬೇಕು..ʼಎಂದು ನುಡಿದರು. ಸಿದ್ದರಾಮಯ್ಯ ಅವರ ಮಾತುಗಳನ್ನು ಕೇಳಿದ ಜನ ಕೂಗಲು ಆರಂಭಿಸಿದರು. ಕೂಡಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, 'ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ..' ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಂಡರು.

<p>ಮೈಸೂರಿನಲ್ಲಿ ಸಿದ್ದರಾಮಯ್ಯ ಭಾಷಣ</p>
ಮೈಸೂರಿನಲ್ಲಿ ಸಿದ್ದರಾಮಯ್ಯ ಭಾಷಣ (Verified Twitter)

ಮೈಸೂರು: ಸಾರ್ವಜನಿಕ ಭಾಷಣಗಳಲ್ಲಿ ಆಗಾಗ ಬಾಯಿತಪ್ಪಿನಿಂದ ಎಡವಟ್ಟು ಮಾಡಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದೂ(ಸೆ,೧೮-ಭಾನುವಾರ) ಕೂಡ ಬಾಯಿತಪ್ಪಿನಿಂದ ಆಡಿದ ಒಂದು ಮಾತು ನಗೆಪಾಟಲಿಗೆ ಗುರಿಯಾಗಿದೆ. ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ʼಭಾರತ್‌ ಜೋಡೋʼ ಯಾತ್ರೆಯ ಸಿದ್ಧತಾ ಸಮಾವೇಶದಲ್ಲಿ, ʼಭಾರತ್‌ ಜೋಡೋʼ ಯಾತ್ರೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ.

ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ʼಭಾರತ್‌ ಜೋಡೋʼ ಯಾತ್ರೆಯ ಸಿದ್ಧತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, 'ನರೇಂದ್ರ ಮೋದಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಜೊತೆ ಕೈ ಜೋಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು..' ಎಂದು ನುಡಿದರು. ಸಿದ್ದರಾಮಯ್ಯ ಅವರ ಮಾತುಗಳನ್ನು ಕೇಳಿದ ಜನ ಕೂಗಲು ಆರಂಭಿಸಿದರು. ಕೂಡಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, 'ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ..' ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಂಡರು.

ಬಳಿಕ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲೆಂದೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಲಜ್ಜೆಗೆಟ್ಟ ಬಿಜೆಪಿಯ ದುರಾಡಳಿತದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ. ನಾನು ಚೌಕಿದಾರ ಎಂದು ಹೇಳುವ ಪ್ರಧಾನಿ, ಕರ್ನಾಟಕದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮೌನವಾಗಿದ್ದಾರೆ ಎಂದು ಕಿಡಿಕಾರಿದರು.

ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಆದರೆ ಬಿಜೆಪಿ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಿಸಿದ್ದು, ಇದೇ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಡಿಕೆಶಿ ಗುಡುಗು:

ಇನ್ನು ʼಭಾರತ್‌ ಜೋಡೋʼ ಯಾತ್ರೆಯ ಸಿದ್ಧತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ದೇಶದಲ್ಲಿ ಇದುವರೆಗೂ ಯಾವುದೇ ಉನ್ನತ ನಾಯಕ ಇಂತಹ ಐತಿಹಾಸಿಕ ಪಾದಯಾತ್ರೆ ಮಾಡಿರಲಿಲ್ಲ. ಆದರೆ ರಾಹುಲ್‌ ಗಾಂಧಿ ದೇಶದ ಜನರ ಸಮಸ್ಯೆ ಆಲಿಸಲು ಸುದೀರ್ಘ ಯಾತ್ರೆ ಕೈಗೊಂಡಿದ್ದಾರೆ. ರಾಹುಲ್‌ ಗಾಂಧಿ ಕೈಗೊಂಡಿರುವ ʼಭಾರತ್‌ ಜೋಡೋʼ ಯಾತ್ರೆಯನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಕರ್ತವ್ಯ ಎಂದು ಹೇಳಿದರು.

ರಾಹುಲ್ ಗಾಂಧಿ ಪಾದಯಾತ್ರೆ ಉದ್ದೇಶವನ್ನು ನಾವು ಜನರಿಗೆ ತಿಳಿಸಬೇಕಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಇದೊಂದು ದೊಡ್ಡ ಅವಕಾಶವಾಗಿದ್ದು, ಮೇಕೆದಾಟು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದಂತೆಯೇ ʼಭಾರತ್ಇ‌ ಜೋಡೋʼ ಯಾತ್ರೆಯನ್ನೂ ಯಶಸ್ವಿಗೊಳಿಸಬೇಕು ಎಂದು ಡಿಕೆ ಶಿವಕುಮಾರ್‌ ಇದೇ ವೇಳೆ ಕರೆ ನೀಡಿದರು.

ಭ್ರಷ್ಟ ಬಿಜೆಪಿ ಸರ್ಕಾರವನ್ನು ಎಲ್ಲರೂ ಸೇರಿ ಕಿತ್ತೊಗೆಯಬೇಕು. ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ʼಭಾರತ್‌ ಜೋಡೋʼ ಯಾತ್ರೆ ಇಡೀ ದೇಶವನ್ನು ಒಗ್ಗೂಡಿಸಲಿದೆ ಎಂದು ಡಿಕೆ ಶಿವಕುಮಾರ್‌ ಭರವಸೆ ವ್ಯಕ್ತಪಡಿಸಿದರು. ರಾಜ್ಯದ ಜನತೆ ಭ್ರಷ್ಟ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದು, ಜನತೆ ಕಾಂಗ್ರೆಸ್‌ ಪಕ್ಷದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವಂತ ಕೆಲಸವನ್ನು ನಾವು ಮಾಡಬೇಕಿದೆ. ಕಾಂಗ್ರೆಸ್‌ ಕಾರ್ಯಕರ್ತರು ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಡಿಕೆಶಿ ಸಲಹೆ ನೀಡಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಪಾದಯಾತ್ರೆಗೆ ಮೈಸೂರಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಭಾರತ್‌ ಜೋಡೋ ಸಿದ್ಧತಾ ಸಭೆಯಲ್ಲಿ, ರಾಹುಲ್ ಗಾಂಧಿಯವರ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಾಯಿತು.

Whats_app_banner