ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

Siddaramaiah Arogya Marga: ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಈಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಯಾರು ಏನು ಹೇಳಿದ್ರು ಮತ್ತು ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು ಎಂಬ ವಿವರ ಇಲ್ಲಿದೆ.

ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

Siddaramaiah Arogya Marga: ಮೈಸೂರು ಮಹಾನಗರ ಪಾಲಿಕೆ ನಗರದ ಪ್ರಮುಖ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದು ವ್ಯಾಪಕ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪಕ್ಷಾತೀತವಾಗಿ ಈ ಬಗ್ಗೆ ಹೇಳಿಕೆಗಳು ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕ ಪ್ರತಾಪ ಸಿಂಹ ಅವರು ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಮುಡಾ ಸೈಟು ಹಂಚಿಕೆ ಅಕ್ರಮದ ಕೇಸ್‌ನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೆಸರು ನಗರದ ಪ್ರಮುಖ ರಸ್ತೆಗೆ ಇರಿಸಬಾರದು ಎಂದು ಹಲವರು ಹೇಳಿದ್ದು, ಕಾಂಗ್ರೆಸ್ ನಾಯಕರು ಮತ್ತು ಸಿದ್ದರಾಮಯ್ಯ ಬೆಂಬಲಿಗರು ನಾಮಕರಣಕ್ಕೆ ಬೆಂಬಲ ಸೂಚಿಸಿದ್ದಾರೆ.

ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣಕ್ಕೆ ಪ್ರಸ್ತಾವನೆ

ಮೈಸೂರು ನಗರದ ಕೆಆರ್‌ಎಸ್‌‍ ರಸ್ತೆಯ ಲಕ್ಷೀ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಹೊರವರ್ತುಲ ರಸ್ತೆ ಜಂಕ್ಷನ್‌ವರೆಗಿನ ರಸ್ತೆಯನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಪಾಲಿಕೆಯಲ್ಲಿ ಸಲ್ಲಿಸಲಾಗಿದೆ. ಇದಕ್ಕೆ ಆಕ್ಷೇಪಣೆ, ಸಲಹೆ ಸೂಚನೆ ಸಲ್ಲಿಸುವುದಕ್ಕೆ ಪಾಲಿಕೆ ಅವಕಾಶ ನೀಡಿದೆ. ಪ್ರಮುಖ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ಮೈಸೂರು ನಗರ ಪಾಲಿಕೆಯ ಈ ಪ್ರಸ್ತಾವನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಚಾಮರಾಜ ಕ್ಷೇತ್ರದ ಶಾಸಕ, ಕಾಂಗ್ರೆಸ್‌‍ ನಾಯಕ ಹರೀಶ್‌ ಗೌಡ ಅವರ ಸಲಹೆಯನ್ನು ಆಧರಿಸಿ, ನವೆಂಬರ್‌ 22 ರಂದು ನಡೆದ ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕೌನ್ಸಿಲ್‌ ಸಭೆಯಲ್ಲಿ ಮಂಡನೆಯಾಗುವ ಮೊದಲು ಮೈಸೂರು ಜಿಲ್ಲಾಧಿಕಾರಿ ಎದುರು ಈ ಪ್ರಸ್ತಾವನೆ ಮಂಡನೆಯಾಗಿತ್ತು. ಇದಾಗಿ, ಪಾಲಿಕೆಯು 30 ದಿನಗಳಲ್ಲಿ ಪ್ರಸ್ತಾವನೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸುವ ಪತ್ರಿಕೆಯ ಸೂಚನೆಯನ್ನು ಡಿಸೆಂಬರ್‌ 13 ರಂದು ನೀಡಿತು.

ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು. ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಗೌರವಿಸಲು ಮೈಸೂರು ನಗರದ ರಸ್ತೆಗೆ ಅವರ ಹೆಸರು ಇಡಬೇಕು ಎಂಬುದು ಪ್ರಸ್ತಾವನೆಯ ಸಾರಾಂಶ.

ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ; ಯಾರು ಏನು ಹೇಳಿದ್ರು?

1) ಪ್ರತಾಪ ಸಿಂಹ: ಸಿದ್ದರಾಮಯ್ಯನವರನ್ನು ನಾನು ಸೈದ್ಧಾಂತಿಕವಾಗಿ ಈಗಲೂ ಮತ್ತು ಮುಂದೆಯೂ ವಿರೋಧಿಸುತ್ತೇನೆ. ಆದರೆ ರಸ್ತೆಗೆ ಅವರ ಹೆಸರು ಇಡುವ ವಿಚಾರದಲ್ಲಿ ಸಣ್ಣತನ ಬೇಡ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

2) ಜೆಡಿಎಸ್: ಐತಿಹಾಸಿಕ ಮೈಸೂರು ನಗರದ ಕೆಆರ್‌ಎಸ್‌ ರಸ್ತೆಗೆ "ಸಿದ್ದರಾಮಯ್ಯ ಆರೋಗ್ಯ ಮಾರ್ಗ" ಎಂದು ಹೆಸರಿಡಲು ಹೊರಟಿರುವ ಮೈಸೂರು ಮಹಾನಗರ ಪಾಲಿಕೆಯ ತೀರ್ಮಾನ ಖಂಡನೀಯ. ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದು ವಂಚಿಸಿರುವ A1 ಆರೋಪಿ, 420 ಸಿದ್ದರಾಮಯ್ಯ ನ್ಯಾಯಾಲಯ ಹಾಗೂ ಲೋಕಾಯುಕ್ತದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಮಂಡಳಿ ಅಸ್ತಿತ್ವದಲ್ಲಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಸಿದ್ದರಾಮಯ್ಯನ ಋಣ ತೀರಿಸಲು ಅವರ ಹೆಸರಿಡಲು ನಿರ್ಣಯ ಕೈಗೊಂಡಿದ್ದಾರೆ. ಮುಡಾವನ್ನು ಮುಕ್ಕಿ ತಿಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನ ಹೆಸರನ್ನು ರಸ್ತೆಗೆ ನಾಮಕರಣ ಮಾಡುವುದು, ಐತಿಹಾಸಿಕ ನಗರಿ ಮೈಸೂರಿಗಷ್ಟೆ ಅಲ್ಲ ಇಡೀ ರಾಜ್ಯಕ್ಕೆ ಎಸಗುವ ದ್ರೋಹ ಮತ್ತು ಅಪಮಾನ ಎಂದು ಜೆಡಿಎಸ್ ಹೇಳಿದೆ.

3) ಬಿ ವೈ ವಿಜಯೇಂದ್ರ: ಮುಖ್ಯಮಂತ್ರಿಯಾಗಿ ಆಡಳಿತ ಚುಕ್ಕಾಣಿ ಹಿಡಿದು ಅಧಿಕಾರದಲ್ಲಿದ್ದುಕೊಂಡು ತಮ್ಮ ಹೆಸರಿಡಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ? ತುಘಲಕ್ ಆಡಳಿತವನ್ನು ನೆನಪಿಸುವ ಆಡಳಿತದಲ್ಲಿ ಮಾತ್ರ ಇಂತಹ ನಡವಳಿಕೆಗಳನ್ನು ಕಾಣಬಹುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

4) ಯದುವೀರ್ ಒಡೆಯರ್‌: ಹಳೇ ಮೈಸೂರು ಪ್ರದೇಶ ಅರಸರ ಕಾಲದಲ್ಲೇ ಅಭಿವೃದ್ಧಿಯಾಗಿದೆ. ಆದರೆ ಈಗ ಆಧುನಿಕ ಜನಪ್ರತಿನಿಧಿಗಳಾದ ನಾವು ನಮ್ಮಗಳ ಹೆಸರನ್ನು ಪ್ರದೇಶಗಳಿಗೆ, ರಸ್ತೆಗಳಿಗೆ ಇಡುವುದು ಸರಿಯಲ್ಲ. ಪ್ರಿನ್ಸಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡುವುದು ಸರಿಯಲ್ಲ. ಬೇರೆ ಬೇಕಾದಷ್ಟು ರಸ್ತೆಗಳಿವೆ. ಅಲ್ಲಿ ಅವರ ಹೆಸರು ನಾಮಕರಣ ಮಾಡಲಿ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಅವರು ಬಿವೈ ವಿಜಯೇಂದ್ರ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ.

5) ಸ್ನೇಹಮಯಿ ಕೃಷ್ಣ: ಲೋಕಾಯುಕ್ತ ಪ್ರಕರಣದಲ್ಲಿ ಎ1 ಆರೋಪಿಯಾಗಿರುವವರ ಹೆಸರನ್ನು ರಸ್ತೆಗೆ ಮರುನಾಮಕರಣ ಮಾಡಬಾರದು ಎಂದು ಸ್ನೇಹಮಯಿ ಕೃಷ್ಣ ಆಕ್ಷೇಪ ಸಲ್ಲಿಸಿದ್ದಾರೆ. ಮತ್ತೊಂದೆಡೆ ಮೈಸೂರಿನ ಪರಿಸರ ಹೋರಾಟಗಾರ್ತಿ‌ ಭಾನು ಮೋಹನ್ ಕೂಡ ಪಾಲಿಕೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪಾರ ಪ್ರಮಾಣದ ಭೂಮಿಯನ್ನು ದಾನ ಮಾಡಿ ಕ್ಷಯರೋಗ ಆಸ್ಪತ್ರೆ ಸ್ಥಾಪಿಸಿದ್ದರು. ಕ್ಷಯ ರೋಗಕ್ಕೆ ಬಲಿಯಾದ ರಾಜಕುಮಾರಿ ಕೃಷ್ಣಜಮ್ಮಣ್ಣಿ ಮತ್ತು ಅವರ ಮಕ್ಕಳ ನೆನಪಿಗಾಗಿ ಅಲ್ಲಿ ಆಸ್ಪತ್ರೆ ಸ್ಥಾಪಿಸಲಾಗಿದೆ. ಈ ಆಸ್ಪತ್ರೆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈಗ ಇದೇ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಮರುನಾಮಕರಣ ಮಾಡಲು ಮೈಸೂರು ಪಾಲಿಕೆ ಪ್ರಸ್ತಾವನೆ ಮುಂದಿಟ್ಟಿರುವುದು.

Whats_app_banner