ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಜಾತಿಗಣತಿಗೆ ಕೇವಲ ಶೇ. 26 ರಷ್ಟು ಮಾತ್ರ ಬೆಂಬಲ; ಸಮೀಕ್ಷೆಯ ವರದಿ ಬಹಿರಂಗ
ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಬಿಜೆಪಿ ಎರಡರಲ್ಲೂ ಗುಂಪುಗಾರಿಕೆ ಉಂಟಾಗುತ್ತಿದೆ. ಜಾತಿಗಣತಿ ಸಮೀಕ್ಷೆಯ ವರದಿ ಕೂಡ ಬಹಿರಂಗವಾಗಿದ್ದು, ನಿರೀಕ್ಷಿತ ಬೆಂಬಲ ದೊರೆತಿಲ್ಲ. (ವರದಿ: ಎಚ್.ಮಾರುತಿ)

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾದ ಜಾತಿಗಣತಿ ಕುರಿತು ರಾಜ್ಯ ಜನತೆಯಲ್ಲಿ ಸರ್ಕಾರದ ಬಗ್ಗೆ ಅಪನಂಬಿಕೆ ಉಂಟಾಗುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಹೈದರಾಬಾದ್ ಮೂಲದ ಸಂಸ್ಥೆಯೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆಸಿತ್ತು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಶೇ. 48.4ರಷ್ಟು ಜನರು ಉತ್ತಮ ಎಂದಿದ್ದರೆ ಶೇ.32ರಷ್ಟು ಜನರು ದುರ್ಬಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26.3 ಮತದಾರರು ಜಾತಿ ಗಣತಿಯನ್ನು ಒಪ್ಪಿಕೊಂಡಿದ್ದರೆ ಶೇ.35 ರಷ್ಟು ಜನತೆ ಒಪ್ಪಿಕೊಂಡಿಲ್ಲ. ಶೇ.16 ರಷ್ಟು ಜನ ಸಂಶಯ ವ್ಯಕ್ತಪಡಿಸಿದ್ದಾರೆ.
ಪೀಪಲ್ಸ್ ಪಲ್ಸ್ ಪೊಲಿಟಿಕಲ್ ರೀಸರ್ಚ್ ಆರ್ಗನೈಸೇಷನ್ ಮತ್ತು ಕೊಡೆಮೊ ಟೆಕ್ನಾಲಜೀಸ್ ಜಂಟಿಯಾಗಿ ಏಪ್ರಿಲ್ 17 ರಿಂದ ಮೇ 18 ರವರೆಗೆ ಸಮೀಕ್ಷೆ ನಡೆಸಿತ್ತು. ಗ್ರಾಮೀಣ ನಗರ ಎರಡೂ ಭಾಗದ 10,481 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಗುಂಪುಗಾರಿಕೆ ಪಕ್ಷಕ್ಕೆ ಹೊಡೆತ ನೀಡಿದೆ ಮತ್ತು ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಹಿನ್ನೆಡೆಯಾಗಿದೆ. ಹಾಗೆಯೇ ಬಿಜೆಪಿಯೂ ಸಹ ಗುಂಪುಗಾರಿಕೆಯಿಂದ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೂ ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೂ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ (ಶೇ.29.2) ಮೊದಲ ಹಾಗೂ ಶಿವಕುಮಾರ್ (ಶೇ.10.7) ಎರಡನೇ ಸ್ಥಾನದಲ್ಲಿದ್ದಾರೆ.
ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲದಿರುವುದೂ ಸಿದ್ದರಾಮಯ್ಯ ಅವರ ಜನಪ್ರಿಯತೆ ಮುಂದುವರೆಯಲು ಅನುಕೂಲಕರವಾಗಿದೆ. ಕಾಂಗ್ರೆಸ್ ಮತದಾರರ ಪೈಕಿ ಶೇ.34.6ರಷ್ಟು ಜನರು ಜಾತಿಗಣತಿಯ ಮೇಲೆ ನಂಬಿಕೆ ಇಟ್ಟಿದ್ದರೆ ಶೇ. 21.7 ರಷ್ಟು ಮತದಾರರಿಗೆ ನಂಬಿಕೆ ಇಲ್ಲ ಎನ್ನುವುದು ತಿಳಿದು ಬಂದಿದೆ. ಜಾತಿಗಣತಿಯನ್ನು ಶೇ.43.3ರಷ್ಟು ಬಿಜೆಪಿ ಮತದಾರರು ಮತ್ತು ಶೇ ಜಾತಿ ಆಧಾರದಲ್ಲಿ ಶೇ. 50ರಷ್ಟು ಲಿಂಗಾಯತ ಮತ್ತು ಒಕ್ಕಲಿಗ ಮತದಾರರು ಜಾತಿ ಗಣತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶೇ. 30ರಷ್ಟು ಕುರುಬ ಮತ್ತು ಶೇ.45.1ರಷ್ಟು ಮಾದಿಗ ಮತದಾರರು ಜಾತಿಗಣಿತಿಗೆ ಸಹಮತ ತೋರಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶೇ. 55 ರಷ್ಟು ಮತದಾರರು ಹೇಳಿದ್ದಾರೆ. ಬಿಜೆಪಿಗೆ ಆಪರೇಷನ್ ಸಿಂಧೂರದಿಂದ ಮತ್ತೆ ಶೇ.1–1.5ರಷ್ಟು ಮತ ಹೆಚ್ಚಳವಾಗಿದೆ.
ಭೌಗೋಳಿಕವಾಗಿ ಹೇಳಬೇಕೆಂದರೆ ಬಿಜೆಪಿ ಶೇ.58.5 ರಷ್ಟು ಮತ ಗಳಿಸಲಿದೆ. ಲಿಂಗಾಯತ (ಶೇ.78.9),ಕೃಷಿಕರು (ಶೇ.53.9) ಬಿಜೆಪಿಗೆ ಮತ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಶೇ. 78.9ರಷ್ಟು ಮುಸಲ್ಮಾನ ಮತ್ತು ಶೇ.54.6ರಷ್ಟು ಕುರುಬರ ಮತ ಗಳಿಸಲಿದೆ. ಅಚ್ಚರಿಯ ಸಂಗತಿ ಎಂದರೆ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಿ 2000 ರೂ ಜಮಾ ಮಾಡುತ್ತಿದ್ದರೂ ಮಹಿಳೆಯರು ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾರೆ.ಶೇ.45.4 ರಷ್ಟು ಮಹಿಳೆಯರು ಬಿಜೆಪಿ ಮತ್ತು ಶೇ.42 ರಷ್ಟು ಮಹಿಳೆಯರು ಕಾಂಗ್ರೆಸ್ ಗೆ ಮತ ಹಾಕುವುದಾಗಿ ಹೇಳಿದ್ದಾರೆ.
ಶೇ.97.ರಷ್ಟು ಫಲಾನುಭವಿಗಳಿಗೆ ಐದೂ ಗ್ಯಾರಂಟಿಗಳ ಬಗ್ಗೆ ಅರಿವಿದ್ದರೂ ಸಕಾಲಕ್ಕೆ ತಲುಪುತ್ತಿಲ್ಲ ಎಂಬ ಅಸಮಾಧಾನವಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 48.4 ರಷ್ಟು ಜನ ಸಿದ್ದರಾಮಯ್ಯ ಸರಕಾರದ ಸಾಧನೆಯನ್ನು ಉತ್ತಮ ಎಂದಿದ್ದರೆ ಶೇ.32ರಷ್ಟು ಜನರು ದುರ್ಬಲ ಮತ್ತು ಶೇ. 20 ರಷ್ಟು ಜನರು ಸಾಧಾರಣ ಎಂದು ಹೇಳಿದ್ದಾರೆ. ಒಟ್ಟಾರೆ ಶೇ.48ರಷ್ಟು ಜನತೆ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಸರ್ಕಾರಕಿಂತ ಉತ್ತಮ ಎಂದು ಹೇಳಿದ್ದಾರೆ.