ಸಿಎಂ ವಿರುದ್ಧ ಎಫ್ಐಆರ್ ದಾಖಲಾದರೂ ತೃಪ್ತಿಯಾಗದ ಸ್ನೇಹಮಯಿ ಕೃಷ್ಣ; ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ
Siddaramaiah Muda Case: ತನ್ನ ವಿರುದ್ಧ ಮೈಸೂರು ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಪ್ರಕರಣವನ್ನು ಹೈಕೋರ್ಟ್ಗೆ ವಹಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (MUDA Case)ದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶದಂತೆ ತನ್ನ ವಿರುದ್ಧ ಮೈಸೂರು ಲೋಕಾಯುಕ್ತ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆಮತ್ತೊಂದು ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಬದಲಿಗೆ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನನಗೆ ಲೋಕಾಯುಕ್ತ ಮೇಲಿಲ್ಲ ನಂಬಿಕೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಲೋಕಾಯುಕ್ತ ಮೇಲೆ ನಂಬಿಕೆ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಮತ್ತು ಉಳಿದವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ದೂರುದಾರ ಸ್ನೇಹಮಯಿ ಕೃಷ್ಣ ಅವರಿನ್ನೂ ತೃಪ್ತಿಯಾಗಿಲ್ಲ. ಮುಡಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವರ್ಗಾವಣೆ ಮಾಡುವಂತೆ ಇಂದು (ಸೆಪ್ಟೆಂಬರ್ 27) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ ಅವರು ನನಗೆ ಲೋಕಾಯುಕ್ತ ಮೇಲೆ ನಂಬಿಕೆ ಇಲ್ಲ. ಏಕೆಂದರೆ, ಇದು ಸ್ವತಂತ್ರ ತನಿಖೆ ನಡೆಸುವ ಸಂಸ್ಥೆ ಅಲ್ಲ. ಲೋಕಾಯುಕ್ತ ರಾಜ್ಯದ ಗೃಹ ಇಲಾಖೆಯ ಅಡಿಯಲ್ಲೇ ಕೆಲಸ ಮಾಡುತ್ತದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ನ್ಯಾಯಾಲಯ ಆದೇಶ ನೀಡಿದ್ದರೂ ಅಲ್ಲಿನ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ತುಂಬಾ ನಾಟಕ ಮಾಡಿದರು. ನಾನು ಮಾಧ್ಯಮದವರೊಂದಿಗೆ ಮಾತನಾಡಿದ್ದ ನಂತರ ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗಿರುವ ಸಾಧ್ಯತೆ ಇದ್ದು, ಇದೀಗ ದೂರು ದಾಖಲಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ. ಆದರೆ, ಲೋಕಾಯುಕ್ತ ನಿಷ್ಪಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಕಡಿಮೆ ಇದೆ. ಸಿದ್ದರಾಮಯ್ಯ ತನ್ನ ಪ್ರಭಾವ ಬಳಸಿಕೊಂಡು ತನಿಖೆ ಹಳಿ ತಪ್ಪುವಂತೆ ಮಾಡಿದರೂ ಅಚ್ಚರಿ ಇಲ್ಲ. ಸಿಬಿಐ ತನಿಖೆಗೆ ಆದೇಶ ಬರುವ ತನಕ ಹೋರಾಟ ಮಾಡುವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ದಾಖಲಾದ ಸೆಕ್ಷನ್ಗಳು ಯಾವುವು?
ಪ್ರಸ್ತುತ ದಾಖಲಾಗಿರುದ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ವಿಚಾರಣೆ ನಡೆಸಲಿದೆ. ಮೂರು ತಿಂಗಳೊಳಗೆ ವರದಿ ನೀಡುವಂತೆ ಕೋರ್ಟ್ ಸೂಚಿಸಿರುವ ಕಾರಣ ನಿರಂತರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಸಹಕಾರ ನೀಡುವ ಅಗತ್ಯ ಇದೆ. ವಿಚಾರಣೆಗೆ ಅಗತ್ಯ ಇದ್ದರೆ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಶಕ್ಕೆ ಪಡೆದರೂ ಅಚ್ಚರಿ ಇಲ್ಲ. ಮುಖ್ಯಮಂತ್ರಿ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 166, 403, 420, 426, 465, 468, 340, 351 ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಇದರ ಜೊತೆಗೆ, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣವೂ ದಾಖಲಿಸಲಾಗಿದೆ.
ಏನಿದು ಮುಡಾ ಪ್ರಕರಣ?
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಅಕ್ರಮ ನಡೆಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ದೂರುದಾರ ರಾಜ್ಯಪಾಲರ ಮೊರೆಹೋಗಿದ್ದರು. ಗವರ್ನರ್ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದರು. ಆದರೆ, ತನಿಖೆ ರದ್ದುಪಡಿಸುವಂತೆ ಸಿಎಂ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್, ರಾಜ್ಯಪಾಲರ ಆದೇಶ ಎತ್ತಿ ಹಿಡಿದಿತ್ತು. ಅಲ್ಲದೆ, ಸ್ನೇಹಮಯಿ ಕೃಷ್ಣ, ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲೂ ಸಿದ್ದರಾಮಯ್ಯಗೆ ಹಿನ್ನಡೆಯಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿತ್ತು. ಅದರಂತೆ ಈಗ ಪ್ರಕರಣ ದಾಖಲಾಗಿದೆ.
ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿಗೆ ದಾನ ಪತ್ರದ ಮೂಲಕ ಆಕೆಯ ಸಹೋದರ ಅಂದರೆ ಸಿದ್ದರಾಮಯ್ಯ ಬಾಮೈದ ಸಹೋದರ ಕೊಟ್ಟಿದ್ದರು. ಇದು 1,48,104 ಚದರಡಿ ಜಾಗ ಇತ್ತು. ಆದರೆ ಈ ಜಾಗವನ್ನು ಕಾನೂನು ಪ್ರಕಾರವೇ ವಶಕ್ಕೆ ಪಡೆದುಕೊಂಡಿದ್ದ ಪ್ರಾಧಿಕಾರ, 1998ರಲ್ಲಿ ನೋಟಿಫೈ ಮಾಡಿತ್ತು. ವಶಪಡಿಸಿಕೊಂಡ ಜಮೀನು ಬದಲಿ ಭೂಮಿಯನ್ನು ಪ್ರಾಧಿಕಾರ ನೀಡಬೇಕಿತ್ತು. ವಶಕ್ಕೆ ಪಡೆದ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿಪಡಿಸಿದೆ ಮುಡಾ.
ವಶಪಡಿಸಿಕೊಂಡು ಹಲವು ವರ್ಷಗಳೇ ಕಳೆದರೂ ಬದಲಿ ಜಮೀನು ನೀಡದ ಕಾರಣ ಪಾರ್ವತಿ ಅವರು ಅರ್ಜಿ ಸಲ್ಲಿಸಿದ್ದರು. 2017ರಲ್ಲಿ ನಡೆದಿದ್ದ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿ ನೀಡಲು ತೀರ್ಮಾನ ತೆಗೆದುಕೊಂಡಿತ್ತು. ಆದರೆ, ಇದಕ್ಕೆ ಸಿಎಂ ಪತ್ನಿ ಒಪ್ಪಿರಲಿಲ್ಲ. ಅಲ್ಲದೆ, ಪಾರ್ವತಿ ಅವರು 2021ರಲ್ಲಿ 50:50ರ ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಹಾಕಿದ್ದರು. ಪಾರ್ವತಿ ಅವರ ಮನವಿಯಂತೆ 2021ರಲ್ಲಿ 50:50ರ ಅನುಪಾತದಲ್ಲಿ ಭೂಮಿ ನೀಡಲಾಗಿದೆ. ಮೈಸೂರಿನ ವಿಜಯನಗರ ಲೇಔಟ್ನಲ್ಲಿ 38,284 ಚದರಡಿ ಜಾಗ ಕೊಟ್ಟಿದೆ.