ಕನ್ನಡ ಸುದ್ದಿ  /  Karnataka  /  Siddaramaiah Oath Ceremony As The New Chief Minister Of Karnataka What Leaders Said In Program Rmy

Congress Leaders: ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾವ ನಾಯಕರು ಏನು ಹೇಳಿದ್ರು

ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ.

ಬೆಂಗಳೂರು: ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ (Guarantee Scheme) ಜಾರಿ ಬಗ್ಗೆ ವಾಗ್ದಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರೆ ಭರವಸೆಗಳನ್ನು ಜಾರಿ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah), ನೂತನ ಡಿಸಿಎಂ ಆಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಸರ್ಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೊಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ಈಗ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್ ಗೆ ತೆರಳಿದಾಗಲೆಲ್ಲಾ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್‌ಗೆ ತೆರಳಿದಾಗ ಒಂದು ಸಾವಿರ ರೂ. ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸ ದೇಶದ ಜನರಿಗೆ ತೊಂದರೆ ಆಗುತ್ತಿದೆ ಎಂದು ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ ಅಂತ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಜನರಿಗೆ ಕೊಟ್ಟಿರುವ ಭರವಸೆ, ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಜಾರಿ

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಜನ ಬದಲಾವಣೆ ಬಯಸಿದ್ದು, ನಾವು ಜನರಿಗೆ ಕೊಟ್ಟಿರುವ ಭರವಸೆ, ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಆದೇಶ ಹೊರಡಿಸಿ ಜಾರಿಗೆ ತರುತ್ತೇವೆ. ಇದು ಕನ್ನಡನಾಡಿನ ಜನತೆಗೆ ನೂತನ ಸರ್ಕಾರದ ಕೊಡುಗೆಯಾಗಿದೆ. ನಮ್ಮ ಪ್ರಮಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಬಹುಮತ ನೀಡಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಎದುರಾದ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟು ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡಿದ್ದೀರಿ. ಅನೇಕರು ಅನೇಕ ಬಗೆಯ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಗೆಲವು ಸಿಗಲು ಕಾರಣ ಎಂದರೆ ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ರೈತರು, ಕಾರ್ಮಿಕರು, ಶೋಷಿತರು, ದಲಿತರ ಬೆನ್ನಿಗೆ ನಿಂತಿರುವುದು ಎಂದು ಹೇಳಿದ್ದಾರೆ.

ನಮ್ಮ ಬಳಿ ಸತ್ಯ ಹಾಗೂ ಬಡ ಜನರಿದ್ದರು. ಬಿಜೆಪಿ ಬಳಿ ಹಣ, ಅಧಿಕಾರ, ಪೊಲೀಸ್ ಅಧಿಕಾರಿಗಳು ಎಲ್ಲವೂ ಇತ್ತು. ಅವರ ಈ ಎಲ್ಲಾ ಶಕ್ತಿಗಳನ್ನು ಕರ್ನಾಟಕದ ಜನ ಮಣಿಸಿದ್ದಾರೆ. ಜನ ಅವರ ಭ್ರಷ್ಟಾಚಾರ, ದ್ವೇಷವನ್ನು ಮಣಿಸಿದ್ದಾರೆ. ಈ ಚುನಾವಣೆಯಲ್ಲಿ ರಾಜ್ಯದ ಜನ ದ್ವೇಷವನ್ನು ಒಡೆದೋಡಿಸಿ ಪ್ರೀತಿ ಸಾಮರಸ್ಯಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಕರ್ನಾಟಕದ ಜನ ಪ್ರೀತಿ ಸಾಮರಸ್ಯದ ಅಂಗಡಿ ತೆರೆದಿದ್ದಾರೆ. ಕಳೆದ ಐದು ವರ್ಷಗಳಿಂದ ನೀವು ಭ್ರಷ್ಟಾಚಾರ ನೋಡಿದ್ದೀರಿ ಎಂದಿದ್ದಾರೆ.

ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಪ್ರತಿ ತಿಂಗಳು ಉಚಿತ, ಯುವನಿಧಿ ಮೂಲಕ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ. ನಂತರ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ.

ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನುಡಿದಂತೆ ನಡೆಯುತ್ತೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳು ಕಾನೂನು ರೂಪಪಡೆದು ಜಾರಿಗೆ ಬರಲಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಸರ್ಕಾರದ ಆದ್ಯತೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವಕರ ಹಿತ ಕಾಪಾಡಿ ಅವರ ಭವಿಷ್ಯ ಭದ್ರಗೊಳಿಸುವುದಾಗಿದೆ.

IPL_Entry_Point