ಎಲ್ಲಾ ಎಸ್​ಟಿ ವಸತಿ ಶಾಲೆಗಳಿಗೆ, ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು; ಸಿಎಂ ಸಿದ್ದರಾಮಯ್ಯ ಘೋಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಎಲ್ಲಾ ಎಸ್​ಟಿ ವಸತಿ ಶಾಲೆಗಳಿಗೆ, ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು; ಸಿಎಂ ಸಿದ್ದರಾಮಯ್ಯ ಘೋಷಣೆ

ಎಲ್ಲಾ ಎಸ್​ಟಿ ವಸತಿ ಶಾಲೆಗಳಿಗೆ, ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು; ಸಿಎಂ ಸಿದ್ದರಾಮಯ್ಯ ಘೋಷಣೆ

Siddaramaiah: ಕರ್ನಾಟಕದ ಎಲ್ಲಾ ಎಸ್​ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ.
ಮಹರ್ಷಿ ವಾಲ್ಮೀಕಿ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಎಲ್ಲಾ ಎಸ್​ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಶಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಾ ಹೊತ್ತಲ್ಲೇ ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ಜಗತ್ಪ್ರಸಿದ್ದ ರಾಮಾಯಣ ಮಹಾಕಾವ್ಯ ಬರೆದರಲ್ಲಾ, ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ ಎಂದು ಹೇಳಿದ್ದಾರೆ.

ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಆರಂಭಿಸಿದ್ದು ನಾನು!

ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು. ಬರೆದರು. ಜಗತ್ತಿಗೇ ಪ್ರೇರಣೆ ಆದರು. ವಾಲ್ಮೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ. ರಾಮನ‌ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದು ಹೇಳಿದ್ದಾರೆ. ಎಸ್​ಎಸ್​ಪಿ/ಟಿಎಸ್​ಪಿ ಮೂಲಕ ಎಸ್​ಸಿ/ಎಸ್​ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡ್ತೀನಿ ಎಂದು ಇದೇ ಸಂದರ್ಭದಲ್ಲಿ ಸಿಎಂ ಪುನರುಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸಿಎಂ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾಗಲೀ ಎಸ್​ಎಸ್​ಪಿ/ಟಿಎಸ್​ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಏಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ. ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಬಿಜೆಪಿ ಬಂಡವಾಳವನ್ನು ಬಿಚ್ಚಿಟ್ಟರು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದ ಹೊರತು ಸಮಾನತೆ ಬರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ ಎಂದರು.

ನಮ್ಮ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಇದನ್ನು ವಿರೋಧಿಸಿದವರು ಬಿಜೆಪಿಯವರು. ಆದ್ದರಿಂದ ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು ನಾಡಿನ‌ ಜನತೆ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ನಾನು ಹೇಳಿದ್ದೀನಿ ಎನ್ನುವ ಕಾರಣಕ್ಕೆ ನೀವು ಇದನ್ನೆಲ್ಲಾ ನಂಬಬೇಡಿ. ಸತ್ಯ, ಸುಳ್ಳನ್ನು ಪರಾಮರ್ಷಿಸಿ, ವಿವೇಚಿಸಿ. ಸತ್ಯವನ್ನು ಧೈರ್ಯವಾಗಿ-ಬಹಿರಂಗವಾಗಿ ಮಾತಾಡುವ ಧೈರ್ಯವನ್ನು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಬೆಳೆಸಿಕೊಳ್ಳಬೇಕು. ಇದೇ ಮಹರ್ಷಿ ವಾಲ್ಮೀಕಿ ಅವರಿಗೆ ನಾವು-ನೀವು ಸಲ್ಲಿಸುವ ಗೌರವ ಎಂದರು. ರಾಜನಹಳ್ಳಿ ವಾಲ್ಮೀಕಿ ಸಮುದಾಯದ ಮಠದ ಜಗದ್ಗುರು ಪ್ರಸನ್ನಾ ನಂದಪುರಿ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ, ಹೆಚ್​ಕೆ ಪಾಟೀಲ್, ಮಾಜಿ ಸಂಸದ ವಿಎಸ್ ಉಗ್ರಪ್ಪ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವನಗೌಡ ದದ್ದಲ್ ಸೇರಿದಂತೆ ಹಲವರಿದ್ದರು.

Whats_app_banner