ಅತಿ ವೇಗದ ಟಿ20ಐ ಶತಕ ಸಿಡಿಸಿದ ಪಂಜಾಬ್ ಕಿಂಗ್ಸ್ ಸ್ಟಾರ್; ಗರಿಷ್ಠ ಸ್ಕೋರ್, ಸಿಕ್ಸರ್, ಬೌಂಡರಿ, ಒಂದೇ ಪಂದ್ಯದಲ್ಲಿ ಹಲವು ವಿಶ್ವದಾಖಲೆ
Sikandar Raza: ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಅವರು ವಿಶ್ವ ಟಿ20ಐ ಕ್ರಿಕೆಟ್ನಲ್ಲಿ ಅತಿ ವೇಗದ ಶತಕವನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾ, ಡೇವಿಡ್ ಮಿಲ್ಲರ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಜಿಂಬಾಬ್ವೆ ಮತ್ತು ಗ್ಯಾಂಬಿಯಾ ನಡುವಿನ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳು ದಾಖಲಾಗಿವೆ.
ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಅವರು ಟಿ20ಐ ಕ್ರಿಕೆಟ್ನಲ್ಲಿ ನೂತನ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಡೆದ ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಸಿಕಂದರ್, ಟೀಮ್ ಇಂಡಿಯಾ ನಾಯಜ ರೋಹಿತ್ ಶರ್ಮಾ, ಸೌತ್ ಆಫ್ರಿಕಾ ಡೇವಿಡ್ ಮಿಲ್ಲರ್ ಅವರ ವೇಗದ ಶತಕದ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 33 ಎಸೆತಗಳಲ್ಲೇ ಸೆಂಚುರಿ ಗೆರೆ ದಾಟಿ ಹಲವು ದಾಖಲೆ ಧೂಳೀಪಟಗೊಳಿಸಿದ್ದಾರೆ.
ಗ್ಯಾಂಬಿಯಾ ಎದುರಿನ 12ನೇ ಪಂದ್ಯದಲ್ಲಿ ಬರೋಬ್ಬರಿ 309.30ರ ಬೊಂಬಾಟ್ ಸ್ಟ್ರೈಕ್ರೇಟ್ನಲ್ಲಿ ಬೀಸಿರುವ ಸಿಕಂದರ್, 43 ಎಸೆತಗಳಲ್ಲಿ 15 ಸಿಕ್ಸರ್, 7 ಬೌಂಡರಿ ಸಹಿತ ಅಜೇಯ 133 ರನ್ ಕಲೆ ಹಾಕಿದ್ದಾರೆ. ಐಸಿಸಿಯ ಪೂರ್ಣ ಸದಸ್ಯ ತಂಡಗಳಲ್ಲಿ ಅತಿ ವೇಗದ ಟಿ20ಐ ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ತಲಾ 35 ಎಸೆತಗಳಲ್ಲಿ ಟಿ20ಐ ಶತಕ ಸಿಡಿಸಿದ್ದರು.
ಇದೀಗ 33 ಎಸೆತಗಳಲ್ಲಿ ಶತಕ ಸಿಡಿಸಿರುವ ರಾಜಾ, ಈ ಇಬ್ಬರು ದಿಗ್ಗಜ ಆಟಗಾರರನ್ನು ಹಿಂದಿಕ್ಕಿ ನೂತನ ವಿಶ್ವ ದಾಖಲೆ ಬರೆದಿದ್ದಾರೆ. ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳಲ್ಲದ ತಂಡಗಳ ಪೈಕಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಅವರ ಹೆಸರಿನಲ್ಲಿದೆ. ಈತ 27 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ ಈಟನ್ ಸಹ 33 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಸಿಕಂದರ್ ಶತಕ ಮಾತ್ರವಲ್ಲ, ಜಿಂಬಾಬ್ವೆ ಹಲವು ವಿಶ್ವ ದಾಖಲೆಗಳನ್ನು ಬರೆದಿದೆ.
344 ರನ್, ಇದು ಅತಿ ದೊಡ್ಡ ಸ್ಕೋರ್
ಗ್ಯಾಂಬಿಯಾ ವಿರುದ್ಧ ಜಿಂಬಾಬ್ವೆ ಅತಿ ದೊಡ್ಡ ಸ್ಕೋರ್ ಮಾಡುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಿಸಿತು. ತನ್ನ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿತು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಐಸಿಸಿ ಪೂರ್ಣ ಸದಸ್ಯ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿತು. 2ನೇ ಸ್ಥಾನದಲ್ಲಿರುವ ನೇಪಾಳ, 314 ರನ್ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಗಳಿಸಿದ್ದು, 3ನೇ ಸ್ಥಾನದಲ್ಲಿದೆ.
ಬೌಂಡರಿಗಳಿಂದಲೇ 282 ರನ್
ಜಿಂಬಾಬ್ವೆ ಗಳಿಸಿದ 344 ರನ್ಗಳ ಪೈಕಿ 282 ರನ್ಗಳು ಬೌಂಡರಿ-ಸಿಕ್ಸರ್ಗಳ ಮೂಲಕವೇ ಬಂದಿವೆ. 27 ಸಿಕ್ಸರ್, 30 ಬೌಂಡರಿಗಳಿವೆ. ಈ ಹಿಂದೆ ಭಾರತ 297 ರನ್ ಸಿಡಿಸಿದ ವೇಳೆ ಬೌಂಡರಿ, ಸಿಕ್ಸರ್ಗಳಿಂದಲೇ 232 ರನ್ ಗಳಿಸಿತ್ತು. ಇದೀಗ ಭಾರತದ ದಾಖಲೆ ಉಡೀಸ್ ಆಗಿದೆ.
ಇನ್ನಿಂಗ್ಸ್ನಲ್ಲಿ ಅತ್ಯಧಿಕ ಬೌಂಡರಿ
ಗ್ಯಾಂಬಿಯಾ ದೇಶದ ವಿರುದ್ಧ 57 ಬೌಂಡರಿಗಳನ್ನು (ಬೌಂಡರಿ 27, ಸಿಕ್ಸರ್ 30) ಬಾರಿಸಿದ ಜಿಂಬಾಬ್ವೆ, ಟಿ20ಐ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಈ ದಾಖಲೆ ಭಾರತದ ಹೆಸರಿನಲ್ಲಿತ್ತು. ಬಾಂಗ್ಲಾದೇಶ ವಿರುದ್ಧ 47 ಬೌಂಡರಿ ಬಾರಿಸಿ ದಾಖಲೆ ಬರೆದಿತ್ತು.
ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್
ಗ್ಯಾಂಬಿಯಾ ವಿರುದ್ಧ 27 ಸಿಕ್ಸರ್ ಚಚ್ಚಿರುವ ಜಿಂಬಾಬ್ವೆ, ಟಿ20ಐ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ನೇಪಾಳ 26 ಸಿಕ್ಸರ್ ಬಾರಿಸಿ ದಾಖಲೆ ಬರೆದಿತ್ತು. ಇದೀಗ ಈ ದಾಖಲೆ ಬ್ರೇಕ್ ಆಗಿದೆ.
ವೇಗದ 200 ರನ್
ಟಿ20ಐ ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದು ವೇಗದ 200 ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಜಿಂಬಾಬ್ವೆ ಪಾತ್ರವಾಗಿದೆ. ಕೇವಲ 12.5 ಓವರ್ಗಳಲ್ಲಿ (77 ಎಸೆತ) 200 ರನ್ ಪೂರೈಸಿತು. ಈ ಹಿಂದೆ 13.5 ಓವರ್ಗಳಲ್ಲಿ (83) ದಕ್ಷಿಣ ಆಫ್ರಿಕಾ ವೇಗದ 200 ರನ್ ಗಳಿಸಿತ್ತು.